ಕೋಪವೇ ಮನುಷ್ಯನ ಮೊದಲ ಶತ್ರು: ಕೋಡಿಶ್ರೀ

KannadaprabhaNewsNetwork |  
Published : Jan 07, 2026, 02:00 AM IST
6ಎಚ್ಎಸ್ಎನ್8 :  ಕತ್ತರಿಘಟ್ಟದ ಶ್ರೀ ಮೆಳಿಯಮ್ಮ ಆಧ್ಯಾತ್ಮಿಕ ಕೇಂದ್ರದಲ್ಲಿ ಲೋಕಕಲ್ಯಾಣಕ್ಕಾಗಿ ಹಮ್ಮಿಕೊಂಡಿದ್ದ ೨೨ ನೇ ಮಹಾ ಚಂಡಿಕಾ ಯಾಗ ದಲ್ಲಿ ಪಾಲ್ಗೊಂಡು ಹವಿಸ್ಸು ಅರ್ಪಿಸಿದ ಕೋಡಿ ಮಠದ ಶ್ರೀಗಳು. | Kannada Prabha

ಸಾರಾಂಶ

ಮನುಷ್ಯನು ಕೋಪದ ಕೈಗೆ ಬುದ್ಧಿ ಕೊಟ್ಟಲ್ಲಿ ಮಾನವೀಯತೆಯ ಮೌಲ್ಯ ಕಳೆದುಕೊಳ್ಳುತ್ತಾನೆ ಎಂದು ಸುಕ್ಷೇತ್ರ ಕೋಡಿಮಠದ ಶ್ರೀ ಶಿವಾನಂದ ರಾಜೇಂದ್ರ ಸ್ವಾಮೀಜಿ ಹೇಳಿದರು.

ಕನ್ನಡಪ್ರಭವಾರ್ತೆ ಚನ್ನರಾಯಪಟ್ಟಣ

ಮನುಷ್ಯನು ಕೋಪದ ಕೈಗೆ ಬುದ್ಧಿ ಕೊಟ್ಟಲ್ಲಿ ಮಾನವೀಯತೆಯ ಮೌಲ್ಯ ಕಳೆದುಕೊಳ್ಳುತ್ತಾನೆ ಎಂದು ಸುಕ್ಷೇತ್ರ ಕೋಡಿಮಠದ ಶ್ರೀ ಶಿವಾನಂದ ರಾಜೇಂದ್ರ ಸ್ವಾಮೀಜಿ ಹೇಳಿದರು. ತಾಲೂಕಿನ ಕತ್ತರಿಘಟ್ಟದ ಶ್ರೀ ಮೆಳಿಯಮ್ಮ ಆಧ್ಯಾತ್ಮಿಕ ಕೇಂದ್ರದಲ್ಲಿ ಲೋಕಕಲ್ಯಾಣಕ್ಕಾಗಿ ಹಮ್ಮಿಕೊಂಡಿದ್ದ ೨೨ನೇ ಮಹಾ ಚಂಡಿಕಾಯಾಗ ಕಾರ್ಯಕ್ರಮ ನೆರವೇರಿಸಿ ಮಾತನಾಡಿ, ಕೋಪ ಎಂಬುದೇ ಮನುಷ್ಯನ ಮೊದಲ ಶತ್ರು ಎಂದು ಆಶೀರ್ವಚನ ನೀಡಿದರು. ಕೋಪಿಷ್ಟ ವ್ಯಕ್ತಿಗೆ ಎಂದಿಗೂ ಸುಖವಿಲ್ಲ. ಸಂಸಾರ ಸುಖಕರವಾಗಿರುವುದಿಲ್ಲ. ಸ್ನೇಹ ಹಾಗೂ ಬಾಂಧವ್ಯದ ಬಂಧನ ಹಳಸಿ ಹೋಗಲಿದೆ. ಕೋಪ ಎಂಬುದು ಅಜ್ಞಾನದ ಕೋಪ. ಕೋಪವನ್ನು ಗೆಲ್ಲಬೇಕು. ಇಲ್ಲವಾದಲ್ಲಿ ಬದುಕಿಗೆ ಮುಕ್ತಿ ದೊರೆಯುವುದಿಲ್ಲ ಎಂದರು.

ಕೋಪ, ಅತಿಆಸೆ ಹಾಗೂ ದುಶ್ಚಟಗಳು ಮನುಕುಲದ ಅಂತ್ಯಕ್ಕೆ ಕಾರಣವಾಗುತ್ತಿವೆ. ಮಾನವೀಯ ಮೌಲ್ಯಗಳು ಮನುಷ್ಯನ ತಿದ್ದುವಂತಹ ದಾರಿದೀಪಗಳು. ಮಾನವೀಯತೆ ಮರೆತರೆ ಮೃಗಗಳಿಗೂ ಮನುಷ್ಯನಿಗೂ ಏನೂ ಸಹ ವ್ಯತ್ಯಾಸ ಇರುವುದಿಲ್ಲ ಎಂದು ತಿಳಿಸಿದರು. ದಣಿದು ಬಂದ ದೇಹಗಳಿಗೆ ವಿಶ್ರಾಂತಿ, ಹಸಿದು ಬಂದವರಿಗೆ ಪ್ರಸಾದ ಹಾಗೂ ಜ್ಞಾನ ಅರಸಿ ಬಂದವರಿಗೆ ವಿದ್ಯೆ ನೀಡುವುದೇ ಮಠ-ಮಾನ್ಯಗಳ ಪರಂಪರೆ ಹಾಗೂ ಸಂಸ್ಕೃತಿಯಾಗಿ ಬೆಳೆದು ಬಂದಿದೆ ಎಂದರು.

ದೇವರನ್ನು ಪೂಜಿಸಿದರೆ ಮನಸ್ಸಿಗೆ ನೆಮ್ಮದಿ ಸಿಗುತ್ತದೆ. ಗುರು ಹಿರಿಯರಿಗೆ ಗೌರವ ನೀಡಿದರೆ ಮಾನವೀಯತೆ ಮೌಲ್ಯ ಬೆಳೆಯುತ್ತದೆ. ಧಾರ್ಮಿಕ ಕಾರ್ಯಗಳಲ್ಲಿ ತೊಡಗಿದರೆ ಬದುಕಿಗೆ ಮುಕ್ತಿ ದೊರೆಯಲಿದೆ ಎಂದು ಸಲಹೆ ನೀಡಿದರು. ಹೆಣ್ಣನ್ನು ತಾಯಿಯಾಗಿ ನೋಡುವುದು ನಮ್ಮ ಸಂಸ್ಕೃತಿ. ಭಾರತೀಯ ಸಂಸ್ಕೃತಿಯಲ್ಲಿ ಶೀಲಕ್ಕೆ ಗೌರವವಿದೆ. ಸೀರೆಯು ರಕ್ಷಣಾ ಕವಚವಾಗಿದೆ. ಹೆಣ್ಣು ಮಕ್ಕಳು ಸೀರೆಯನ್ನುಟ್ಟರೆ ನಮ್ಮ ಸಂಸ್ಕೃತಿಗೆ ಹೆಚ್ಚು ಗೌರವ ಸಿಗುತ್ತದೆ ಎಂದು ಮಹಿಳೆಯರಿಗೆ ಕಿವಿಮಾತು ಹೇಳಿದರು.

ಶ್ರೀ ಚಂದ್ರಶೇಖರ ಗುರೂಜಿ ಮಾತನಾಡಿ, ಮನುಷ್ಯನು ತನ್ನ ದುರಾಸೆಯಿಂದ ಪ್ರಕೃತಿಯ ಮೇಲೆ ದಾಳಿ ಮಾಡುತ್ತಿದ್ದಾನೆ. ಪ್ರಾಣಿ, ಪಕ್ಷಿಗಳು ಹಾಗೂ ಮರಗಳಿಗೆ ಇರುವ ಜ್ಞಾನ ಮನುಕುಲಕ್ಕೆ ಇಲ್ಲ ಎಂದು ಅಸಮಾಧಾನ ಹೊರಹಾಕಿದರು. ಭೂಮಿಯ ಮೇಲೆ, ನೀರು ಹಾಗೂ ಗಾಳಿಯಲ್ಲಿ ಸೇರಿದಂತೆ ೮೪ ಲಕ್ಷ ಜೀವಿಗಳಲ್ಲಿ ಮನುಷ್ಯ ಜನ್ಮವೇ ಶ್ರೇಷ್ಠ ಹಾಗೂ ಕೊನೆಯ ಜನ್ಮವಾಗಿರುತ್ತದೆ. ಆದರೆ ಮನುಷ್ಯನು ಮಾನವೀಯತೆ ಮರೆತು ನಾನು, ನನ್ನದು, ಎಲ್ಲವೂ ನನಗೆ ಬೇಕು ಎಂಬ ದುರಾಸೆಗೆ ಸಿಲುಕಿ ನಗುತ್ತಿದ್ದಾನೆ. ಅದರಿಂದ ಹೊರ ಬರದೆ ಬದುಕಿನಲ್ಲಿ ಸಾರ್ಥಕತೆ ಪಡೆಯಲು ಸಾಧ್ಯವಿಲ್ಲ ಎಂದರು.

ಮಹಾ ಚಂಡಿಕಾ ಯಾಗದ ಪ್ರಯುಕ್ತ ಶ್ರೀ ಮೆಳಿಯಮ್ಮ ದೇವಿಗೆ ವಿಶೇಷ ಪೂಜಾ ಕೈಂಕರ್ಯಗಳು ನೆರವೇರಿದವು. ಮಹಾಗಣಪತಿ ಹೋಮ, ಪುಣ್ಯಹಾವಾಚನ, ಅಂಕುರಾರ್ಪಣೆ, ದುರ್ಗಾಮಂಡಲ ಆರಾಧನೆ, ದುರ್ಗಾಸಪ್ತಶತಿ ಪಾರಾಯಣ, ಪೂರ್ಣಾವತಿಯೊಂದಿಗೆ ಮಹಾಮಂಗಳಾರತಿ ಬೆಳಗಿಸಲಾಯಿತು. ಮಹಿಳೆಯರಿಗೆ ಬಾಗಿನ ಅರ್ಪಿಸಲಾಯಿತು. ಕಲಾ ಪರಿವಾರದಿಂದ ಭಜನಾ ಕಾರ್ಯಕ್ರಮ ನಡೆಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹುಬ್ಬಳ್ಳಿ ವಿವಸ್ತ್ರ ಕೇಸ್‌ನಲ್ಲಿ ತಲೆದಂಡಕ್ಕೆ ಬಿಜೆಪಿ ಗಡುವು
ಶೀಘ್ರ ‘ಬಾಕಿ ಲಕ್ಷ್ಮಿ’ ಬಿಡುಗಡೆ - ಬಿಪಿಎಲ್‌ ರದ್ದಾದವರಿಗೆ ಇಲ್ಲ ಗೃಹಲಕ್ಷ್ಮಿ ಹಣ