ತುಂಗಾ, ಭದ್ರಾ, ಕುಮದ್ವತಿ, ಧರ್ಮಾ, ವರದಾ ಸೇರಿ ಪಂಚ ನದಿಗಳು ಸುತ್ತುವರೆದ ಹಚ್ಚ ಹಸುರಿನ ತಾಣ.
ಚಂದ್ರು ಕೊಂಚಿಗೇರಿ
ಹೂವಿನಹಡಗಲಿ: ತುಂಗಭದ್ರಾ ನದಿ ತೀರದ ಹೂವಿನಹಡಗಲಿ ತಾಲೂಕಿನ ಅಂಗೂರು ಮತ್ತು ಶಿರಹಟ್ಟಿ ತಾಲೂಕಿನ ಸಾಸಲವಾಡದ ನಡುಗಡ್ಡೆ, ಬೇಸಿಗೆಯ ಬಿಸಿಲಿನ ತಾಪ ತಣಿಸಲು ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಿದೆ. ಆದರೆ ಪ್ರಚಾರವೂ ಇಲ್ಲ, ಅಭಿವೃದ್ಧಿಯೂ ಇಲ್ಲವಾಗಿದೆ.
ತುಂಗಾ, ಭದ್ರಾ, ಕುಮದ್ವತಿ, ಧರ್ಮಾ, ವರದಾ ಸೇರಿ ಪಂಚ ನದಿಗಳು ಸುತ್ತುವರೆದ ಹಚ್ಚ ಹಸುರಿನ ತಾಣ. ಕಲ್ಯಾಣಿ ಚಾಲುಕ್ಯರ ಆಳ್ವಿಕೆಗೆ ಒಳಪಟ್ಟಿದ್ದ ಈ ಪ್ರದೇಶದಲ್ಲಿ ಸುಂದರ ಕಲಾಕೃತಿ ಹೊಂದಿರುವ, ಕಲ್ಲೇಶ್ವರ ದೇವಸ್ಥಾನದಲ್ಲಿ ಈಶ್ವರ ಲಿಂಗು, ಬಸವಣ್ಣ ಮೂರ್ತಿಗಳಿವೆ. ಜತೆಗೆ ನಡುಗಡ್ಡೆಯಲ್ಲೇ ವೀರಭದ್ರೇಶ್ವರ ಸ್ವಾಮಿ ದೇವಸ್ಥಾನವಿರುವ ಪುಣ್ಯ ಭೂಮಿಯಾಗಿದೆ.
ಈ ತಾಣದ ಸುತ್ತಲೂ ನೀರಿನಿಂದ ಆವೃತ್ತವಾಗಿದೆ. ಶಿರಹಟ್ಟಿ ತಾಲೂಕಿನ ಸಾಸಲವಾಡದ ಈ ನಡುಗಡ್ಡೆ ಕಾಯ್ದಿಟ್ಟ ಅರಣ್ಯ ಪ್ರದೇಶವಾಗಿದೆ. ಪ್ರವಾಸಿಗರಿಗೆ ಸ್ವರ್ಗದಂತಿರುವ ಈ ನಡುಗಡ್ಡೆಗೆ ಪ್ರವಾಸಿಗರನ್ನು ಆಕರ್ಷಿಸಲು, ಪ್ರವಾಸೋದ್ಯಮ ಇಲಾಖೆ ಕ್ರಮ ಕೈಗೊಳ್ಳುವ ಅಗತ್ಯವಿದೆ.
ಈ ತಂಪಾದ ತೋಪು ಅರಣ್ಯ ಇಲಾಖೆಯ ಶಿರಹಟ್ಟಿ ವಲಯ ಗದಗ ಜಿಲ್ಲೆ ವಿಭಾಗಕ್ಕೆ ಒಳಪಟ್ಟಿದೆ. ಒಟ್ಟು 61.39 ಎಕರೆ ಪ್ರದೇಶದಲ್ಲಿ 58 ಜಾತಿಯ ಸಸ್ಯ ಪ್ರಭೇದಗಳಿದ್ದು, ಜತೆಗೆ ಔಷಧಿ ಗಿಡಮೂಲಿಕೆಗಳಿಂದ ಕೂಡಿರುವ ಪ್ರದೇಶದಲ್ಲಿ 150 ಜಾತಿಯ ಪಕ್ಷಿಗಳ ಚಿಲಿಪಿಲಿ ನಿನಾದ, 36 ಜಾತಿಯ ಬಣ್ಣ ಬಣ್ಣದ ಸುಂದರ ಚಿಟ್ಟೆಗಳ ಹಾರಾಟ, 14 ಜಾತಿಯ ಸರಿಸೃಪಗಳನ್ನು ಹೊಂದಿರುವ ಸುಂದರ ಪ್ರಕೃತಿ ತಾಣವಾಗಿದೆ.
ಇದು ಪುರಾಣಗಳ ಕಾಲದಿಂದಲ್ಲೂ ಶರಣ, ಸಂತರ ಆಕರ್ಷಣೆಯ ತಾಣವಾಗಿದೆ. ಶರಣರು, ಸಂತರು, ಮಠಾಧೀಶರು, ಸ್ವಾಮೀಜಿಗಳು ಲೋಕ ಕಲ್ಯಾಣಕ್ಕಾಗಿ ತಪಸ್ಸು ಮಾಡಿದ ಪುಣ್ಯ ತಪೋಭೂಮಿಯಾಗಿದೆ. ಇಂದಿಗೂ ಇಲ್ಲಿ ಸಂತರ ಎರಡು ಸಮಾಧಿಗಳಿವೆ.
ಇಂತಹ ನಡುಗಡ್ಡೆಗೆ ಪ್ರವಾಸಿಗರು ಅಂಗೂರಿನ ಮೀನುಗಾರರ ತೆಪ್ಪಗಳಲ್ಲಿ ಹೋಗುತ್ತಾರೆ. ಶಿರಹಟ್ಟಿ ತಾಲೂಕಿನ ಸಾಸಲವಾಡದಿಂದ ನಡುಗಡ್ಡೆಗೆ ಹೋಗಲು ಸೇತುವೆ ನಿರ್ಮಿಸಿ ಸಂಪರ್ಕ ಕಲ್ಪಿಸಿದ್ದಾರೆ. ಆದರೆ, ಹೂವಿನಹಡಗಲಿ ತಾಲೂಕಿನ ಅಂಗೂರು ಗ್ರಾಮದಿಂದ ನಡುಗಡ್ಡೆಗೆ ಸಂಪರ್ಕ ಕಲ್ಪಿಸಲು ತುಂಗಭದ್ರಾ ನದಿಗೆ, ಪ್ರವಾಸೋದ್ಯಮ ಇಲಾಖೆಯಿಂದ ಸೇತುವೆ ನಿರ್ಮಾಣ ಮಾಡಬೇಕು. ಇಲ್ಲವೇ ಯಾಂತ್ರೀಕೃತ ಬೋಟಿನ ವ್ಯವಸ್ಥೆ ಮಾಡಬೇಕೆಂಬ ಒತ್ತಾಯ ಪ್ರವಾಸಿಗರಿಂದ ಕೇಳಿ ಬರುತ್ತಿದೆ.
ಪ್ರತಿವರ್ಷ ನಡುಗಡ್ಡೆಯಲ್ಲಿರುವ ಗಡ್ಡಿ ಬಸವೇಶ್ವರ ಮತ್ತು ವೀರಭದ್ರೇಶ್ವರ ಸ್ವಾಮಿ ಜಾತ್ರೆ ಸಡಗರ ಸಂಭ್ರಮದಿಂದ ಜರುಗುತ್ತದೆ. ಹೂವಿನಹಡಗಲಿ ತಾಲೂಕಿನ ಭಕ್ತರು ಜಾತ್ರೆಗೆ ಹೋಗಲು ಮಾಗಳ ಗ್ರಾಮದಲ್ಲಿರುವ ಯಾಂತ್ರಿಕೃತ ಬೋಟ್ ಬಳಸುತ್ತಾರೆ.
ಪ್ರವಾಸೋದ್ಯಮ ಇಲಾಖೆಯ ಸಚಿವ ಎಚ್.ಕೆ. ಪಾಟೀಲರ ತವರೂರಿನಲ್ಲೇ ಇರುವ ಈ ನಡುಗಡ್ಡೆಗೆ ಪ್ರವಾಸಿಗರನ್ನು ಆಕರ್ಷಿಸಲು ಯೋಜನೆಯೊಂದನ್ನು ರೂಪಿಸಿ ಪ್ರಕೃತಿ ಸೌಂದರ್ಯವನ್ನು ಪ್ರವಾಸಿಗರು ಸವಿಯಲು ಅನುಕೂಲ ಮಾಡಬೇಕೆಂಬ ಒತ್ತಾಯ ಕೇಳಿ ಬರುತ್ತಿದೆ.
ನಡುಗಡ್ಡೆಗೆ ಬಂದ ಪ್ರವಾಸಿಗರಿಗೆ ಕುಳಿತುಕೊಳ್ಳಲು ನಾಲ್ಕಾರು ಕಡೆಗಳಲ್ಲಿ ಸಿಮೆಂಟ್‌ನ ಆಸನಗಳನ್ನು ಮಾಡಿದ್ದಾರೆ. ಉಳಿದಂತೆ ಕೆಲವು ಕಡೆಗೆ ತಗಡುಗಳಿಂದ ಚೆಪ್ಪರ ಆಕೃತಿಯಲ್ಲಿ ನೆರಳು ಮಾಡಿ ಕಟ್ಟೆಯ ಮೇಲೆ ಆಸನಗಳನ್ನು ಮಾಡಲಾಗಿದೆ. ಒಂದು ಕಡೆ ಅರಣ್ಯ ಪ್ರದೇಶ ನೋಡಲು ವಾಚಿಂಗ್ ಟವರ್ ಕೂಡಾ ಮಾಡಲಾಗಿದೆ.
ಬಸವಣ್ಣನ ಹೋಲುವ ಆಕೃತಿ:
ನಡುಗಡ್ಡೆಯ ಹುಣಿಸೆ ಮರದಲ್ಲಿ ಬಸವಣ್ಣನ ಹೋಲುವ ರೀತಿ ಆಕೃತಿ ಮೂಡಿದೆ. ಇದನ್ನು ನೋಡಿದ ಪ್ರವಾಸಿಗರು ಆಶ್ಚರ್ಯ ವ್ಯಕ್ತಪಡಿಸುತ್ತ, ಗಡ್ಡಿ ಬಸವಣ್ಣ ಮೂಡಿದ್ದಾನೆ ಎಂದು ಭಕ್ತರು ಪೂಜೆ ಮಾಡುತ್ತಾರೆ. ಈ ಗಡ್ಡಿ ಬಸವೇಶ್ವರ ದೇವಸ್ಥಾನಕ್ಕೆ ಗದಗ ವೀರೇಶ್ವರ ಪುಣ್ಯಾಶ್ರಮದ ಕಲ್ಲಯ್ಯಜ್ಜನವರು ಭೇಟಿ ನೀಡಿದ್ದಾರೆ.
ಸೇತುವೆ ನಿರ್ಮಿಸಿ
ಶಿರಹಟ್ಟಿ ತಾಲೂಕಿನ ಸಾಸಲವಾಡದಿಂದ ನಡುಗಡ್ಡೆಗೆ ಸಂಪರ್ಕ ಕಲ್ಪಿಸಲು ಸೇತುವೆ ನಿರ್ಮಿಸಿದ್ದಾರೆ. ಅದರಂತೆ ಅಂಗೂರಿನಿಂದ ನಡುಗಡ್ಡೆಗೆ ಪ್ರವಾಸಿಗರು ಹೋಗಲು ಸರ್ಕಾರದಿಂದ ಸೇತುವೆ ನಿರ್ಮಿಸಬೇಕು, ಇಲ್ಲವೇ ಯಾಂತ್ರಿಕೃತ ಬೋಟ್ ವ್ಯವಸ್ಥೆ ಮಾಡಿದರೇ ಪ್ರವಾಸಿಗರಿಗೆ ಮತ್ತು ಭಕ್ತರಿಗೆ ಬಹಳ ಅನುಕೂಲವಾಗುತ್ತದೆ ಎನ್ನುತ್ತಾರೆ ಅಂಗೂರು ಗ್ರಾಮಸ್ಥರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.