ಫೋರ್ಜರಿ ಜಾತಿ ಪ್ರಮಾಣ ಪತ್ರವನ್ನು ಜಿಲ್ಲಾಧಿಕಾರಿಗಳ ಆದೇಶದನ್ವಯ ವಜಾ ಮಾಡದೆ ಕುಶಾಲನಗರ ತಹಸೀಲ್ದಾರ್ ಸತಾಯಿಸುತ್ತಿದ್ದಾರೆ ಎಂದು ಆರೋಪಿಸಿ ಆದಿವಾಸಿ ಸಮುದಾಯ ಸಂಘಟನೆಗಳ ಒಕ್ಕೂಟದಿಂದ ತಾಲೂಕು ಕಚೇರಿ ಎದುರು ಪ್ರತಿಭಟನೆ ನಡೆಯಿತು.
ಕನ್ನಡಪ್ರಭ ವಾರ್ತೆ ಕುಶಾಲನಗರ
ಫೋರ್ಜರಿ ಜಾತಿ ಪ್ರಮಾಣ ಪತ್ರವನ್ನು ಜಿಲ್ಲಾಧಿಕಾರಿಗಳ ಆದೇಶದನ್ವಯ ವಜಾ ಮಾಡದೆ ಕುಶಾಲನಗರ ತಹಸೀಲ್ದಾರ್ ಸತಾಯಿಸುತ್ತಿದ್ದಾರೆ ಎಂದು ಆರೋಪಿಸಿ ಆದಿವಾಸಿ ಸಮುದಾಯ ಸಂಘಟನೆಗಳ ಒಕ್ಕೂಟದಿಂದ ತಾಲೂಕು ಕಚೇರಿ ಎದುರು ಪ್ರತಿಭಟನೆ ನಡೆಯಿತು.ಧರಣಿ ನಡೆಸಿದ ಆದಿವಾಸಿ ಜನಾಂಗದವರು ನ್ಯಾಯಕ್ಕಾಗಿ ಒತ್ತಾಯಿಸಿ ಘೋಷಣೆ ಕೂಗಿದರು. ಈ ಸಂದರ್ಭ ಮಾತನಾಡಿದ ಕರ್ನಾಟಕ ಆದಿವಾಸಿ ರಕ್ಷಣಾ ಪರಿಷತ್ ರಾಜ್ಯಾಧ್ಯಕ್ಷ ಎಂ. ಕೃಷ್ಣಯ್ಯ, ಜಿಪಂ ಹಿಂದಿನ ಅಧ್ಯಕ್ಷರಾಗಿದ್ದವರ ಮಕ್ಕಳು ಫೋರ್ಜರಿ ಮಾಡಿ ಪರಿಶಿಷ್ಟ ಪಂಗಡದ ಪ್ರಮಾಣಪತ್ರ ಪಡೆದಿದ್ದಾರೆ. ಇದನ್ನು ರದ್ದುಗೊಳಿಸುವ ಬಗ್ಗೆ ಜಿಲ್ಲಾಧಿಕಾರಿ ಹೊರಡಿಸಿದ ಆದೇಶವನ್ನು ತಹಸೀಲ್ದಾರ್ ಉಲ್ಲಂಘಿಸಿದ್ದಾರೆ. ವಿಚಾರಿಸಿದರೆ ನ್ಯಾಯಾಲಯದಿಂದ ತಡೆ ಇದೆ ಎನ್ನುವ ಸಬೂಬು ನೀಡುತ್ತಿದ್ದಾರೆ. ಅಧಿಕಾರಿಗಳು ಇದಕ್ಕೆ ಸೂಕ್ತ ದಾಖಲೆಗಳನ್ನು ಇದುವರೆಗೆ ಒದಗಿಸಿಲ್ಲ. ಸರಕಾರದ ವಕೀಲರು ಅಥವಾ ಹೈಕೋರ್ಟ್ ವಕೀಲರ ಅಭಿಪ್ರಾಯ, ಕಾನೂನು ಸಲಹೆ ಪಡೆಯದೆ ತಹಸೀಲ್ದಾರ್ ಅವರು ಖಾಸಗಿ ವಕೀಲರ ಅಭಿಪ್ರಾಯ ಬಳಸುವುದು ಪಕ್ಷಪಾತ ಧೋರಣೆ, ಆಡಳಿತಾತ್ಮಕ ನಿಯಮ ಉಲ್ಲಂಘನೆ ಮತ್ತು ನ್ಯಾಯದ ಅವಹೇಳನವಾಗಿದೆ ಎಂದು ಆರೋಪಿಸಿದರು.ನಕಲಿ ಜಾತಿ ಪ್ರಮಾಣಪತ್ರ ಪಡೆಯುವ ಮೂಲಕ ತಮ್ಮ ಸಮುದಾಯಕ್ಕೆ ದೊರೆಯಬೇಕಾದ ಉನ್ನತ ಹುದ್ದೆ ಅವಕಾಶವನ್ನು ಅಕ್ರಮವಾಗಿ ಕಬಳಿಸಿರುವುದು ನಮಗೆ ಮಾಡಿದ ಅನ್ಯಾಯವಾಗಿದೆ ಎಂದು ಆರೋಪಿಸಿದರು. ನ್ಯಾಯಾಲಯದ ತಡೆ ಇದ್ದಲ್ಲಿ ಆದೇಶ ಪ್ರತಿ ನಮಗೆ ಒದಗಿಸಿದರೆ ಈಗಲೇ ಧರಣಿ ಕೈಬಿಡುತ್ತೇವೆ ಎಂದ ಅವರು, ನಮ್ಮ ಬೇಡಿಕೆ ಈಡೇರುವ ತನಕ ಅಮರಣಾಂತ ಉಪವಾಸ ಹೋರಾಟ ಮುಂದುವರಿಸುವುದಾಗಿ ಹಾಗೂ ಅಧಿಕಾರಿ ವಿರುದ್ದ ಎಸ್ ಟಿ ಆಯೋಗಕ್ಕೆ ದೂರು ಸಲ್ಲಿಸುವುದಾಗಿ ಹೇಳಿದರು.ಈ ಸಂದರ್ಭ ತಾಲೂಕು ತಹಸಿಲ್ದಾರ್ ಕಿರಣ್ ಜಿ. ಗೌರಯ್ಯ ಅವರು ಅಗತ್ಯ ದಾಖಲೆಗಳನ್ನು ನಿಗದಿತ ಅವಧಿಯಲ್ಲಿ ನೀಡುವ ಭರವಸೆ ನೀಡಿದ ಮೇರೆಗೆ ಪ್ರತಿಭಟನೆಯನ್ನು ಹಿಂತೆಗೆದುಕೊಳ್ಳಲಾಯಿತು. ಸ್ಥಳಕ್ಕೆ ಕುಶಾಲನಗರ ಪೊಲೀಸ್ ವೃತ್ತ ನಿರೀಕ್ಷಕ ಪ್ರದೀಪ್ ಕುಮಾರ್ ಆಗಮಿಸಿ ಪ್ರತಿಭಟನಾಕಾರರನ್ನು ಸಮಾಧಾನಪಡಿಸಿದರು.ಈ ಸಂದರ್ಭ ಆದಿವಾಸಿ ಮುಖಂಡರಾದ ಆರ್.ಕೆ. ಚಂದ್ರು, ಜೆ.ಟಿ. ಕಾಳಿಂಗ, ಬಿ.ಬಿ. ಮಹೇಶ, ನಂಜಯ್ಯ, ಬಸವಣ್ಣ, ವಿಶ್ವ, ಡಿ.ಆರ್. ಪ್ರಭಾಕರ್ ಮತ್ತಿತರರು ಇದ್ದರು.