ಮನುಷ್ಯರ ಜೀವದಷ್ಟೇ ಪ್ರಾಣಿಗಳ ಜೀವವೂ ಮುಖ್ಯ

KannadaprabhaNewsNetwork |  
Published : Sep 18, 2026, 02:45 AM IST
(ಫೋಟೊಬಿಕೆಟಿ2, ಜಿ.ಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಗಜಾನನ ಬಾಲೆ  ಅವರು ಜಿಲ್ಲಾ ಪಂಚಾಯತ ಸಭಾಭವನದಲ್ಲಿ ಜರುಗಿದ ಪಶು ಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು) | Kannada Prabha

ಸಾರಾಂಶ

ಕನ್ನಡಪ್ರಭ ವಾರ್ತೆ ಬಾಗಲಕೋಟೆ ಜಿಲ್ಲೆಯ ಜಾನುವಾರುಗಳ ಆರೋಗ್ಯ ಸಂರಕ್ಷಣೆ ಹಾಗೂ ರೈತರಿಗೆ ಗುಣಮಟ್ಟದ ಪಶುವೈದ್ಯಕೀಯ ಸೇವೆ ಒದಗಿಸುವಲ್ಲಿ ಅಧಿಕಾರಿ ಹಾಗೂ ಸಿಬ್ಬಂದಿ ಹೆಚ್ಚಿನ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಬೇಕು ಎಂದು ಜಿಪಂ ಸಿಇಒ ಗಜಾನನ ಬಾಲೆ ಸೂಚಿಸಿದರು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಜಿಲ್ಲೆಯ ಜಾನುವಾರುಗಳ ಆರೋಗ್ಯ ಸಂರಕ್ಷಣೆ ಹಾಗೂ ರೈತರಿಗೆ ಗುಣಮಟ್ಟದ ಪಶುವೈದ್ಯಕೀಯ ಸೇವೆ ಒದಗಿಸುವಲ್ಲಿ ಅಧಿಕಾರಿ ಹಾಗೂ ಸಿಬ್ಬಂದಿ ಹೆಚ್ಚಿನ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಬೇಕು ಎಂದು ಜಿಪಂ ಸಿಇಒ ಗಜಾನನ ಬಾಲೆ ಸೂಚಿಸಿದರು.ಜಿಲ್ಲಾ ಪಂಚಾಯತಿ ಸಭಾಭವನದಲ್ಲಿ ಜರುಗಿದ ಪಶು ಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಪಶುಪಾಲನೆ ಗ್ರಾಮೀಣ ಆರ್ಥಿಕತೆಯ ಪ್ರಮುಖ ಆಧಾರವಾಗಿದ್ದು, ರೈತರು ಹಾಗೂ ಪಶು ಪಾಲಕರ ಆದಾಯ ಹೆಚ್ಚಳಕ್ಕೆ ಪೂರಕವಾಗುವ ಯೋಜನೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ಕಾರ್ಯವಾಗಬೇಕು. ಯೋಜನೆಗಳು ಫಲಾನುಭವಿಗಳಿಗೆ ಸಕಾಲದಲ್ಲಿ ದೊರೆಯುವಂತೆ ಕ್ರಮಕೈಗೊಳ್ಳಲು ತಿಳಿಸಿದರು.ಪಶುಗಳಿಗೆ ಚರ್ಮಗಂಟು ರೋಗ, ಕಾಲು ಮತ್ತು ಬಾಯಿ ರೋಗ, ಕರಳು ಬೇನೆ ಸೇರಿದಂತೆ ವಿವಿಧ ಕಾಯಿಲೆಗಳ ನಿಯಂತ್ರಣಕ್ಕೆ ಕೈಗೊಂಡಿರುವ ಕ್ರಮಗಳ ಬಗ್ಗೆ ಸಿಇಒ ಪರಿಶೀಲಿಸಿದರು. ಜಿಲ್ಲೆಯ ಯಾವ ಪ್ರದೇಶದಲ್ಲಿ ಯಾವ ರೀತಿಯ ರೋಗಗಳು ಹೆಚ್ಚಾಗಿ ಕಂಡುಬರುತ್ತಿವೆ ಎಂಬುದರ ಕುರಿತು ತಾಲೂಕು ಹಾಗೂ ಪ್ರದೇಶವಾರು ಸಮಗ್ರ ಪಟ್ಟಿಯನ್ನು ಸಿದ್ಧಪಡಿಸಬೇಕು. ರೋಗಗಳ ಸ್ಥಿತಿಗತಿ ಕುರಿತು ಅಧಿಕಾರಿಗಳಿಂದ ವರದಿ ಪಡೆದು, ಅಗತ್ಯವಿರುವ ಕಡೆಗಳಲ್ಲಿ ರ್‍ಯಾಂಡಮ್ ಆಗಿ ಪರಿಶೀಲನೆ ನಡೆಸಲಾಗುವುದು ಎಂದು ಸಿಇಒ ತಿಳಿಸಿದರು.ಪಶು ಆಸ್ಪತ್ರೆಗಳಿಗೆ ಜಾನುವಾರುಗಳನ್ನು ಕರೆದುಕೊಂಡು ಬರುವ ರೈತರಿಗೆ ಉತ್ತಮ ಸ್ಪಂದನೆ ದೊರೆಯಬೇಕು. ಮನುಷ್ಯರ ಜೀವ ಎಷ್ಟು ಮುಖ್ಯವೋ, ಪ್ರಾಣಿಗಳ ಜೀವವೂ ಅಷ್ಟೇ ಮುಖ್ಯ. ಇತ್ತೀಚೆಗೆ ಇದ್ದಲಗಿ ಗ್ರಾಮದಲ್ಲಿ ಅಗ್ನಿ ಅವಘಡದಿಂದ ಕರುಗಳು ಮೃತಪಟ್ಟಿರುವ ಘಟನೆ ನೋವು ತಂದಿದೆ. ಪ್ರಾಣಿಗಳನ್ನು ಯಾವುದೇ ಕಾರಣಕ್ಕೂ ಹಗುರವಾಗಿ ಪರಿಗಣಿಸಬಾರದು ಎಂದು ಅಧಿಕಾರಿಗಳಿಗೆ ಕಿವಿಮಾತು ಹೇಳಿದರು.ಪಶು ಆಸ್ಪತ್ರೆಗಳಲ್ಲಿ ಅಗತ್ಯ ಔಷಧಿಗಳನ್ನು ಸಮರ್ಪಕವಾಗಿ ದಾಸ್ತಾನು ಮಾಡಿಕೊಂಡು, ಅವುಗಳ ಲಭ್ಯತೆಯನ್ನು ನಿರಂತರವಾಗಿ ಪರಿಶೀಲಿಸಬೇಕು. ಆಸ್ಪತ್ರೆ ಆವರಣ ಹಾಗೂ ಚಿಕಿತ್ಸಾ ಸ್ಥಳಗಳನ್ನು ಸ್ವಚ್ಛವಾಗಿ ಇಟ್ಟುಕೊಳ್ಳಬೇಕು. ಔಷಧಿ ಕೊರತೆಯಿದೆ ಎಂಬ ಕಾರಣಕ್ಕೆ ಸೇವೆ ನೀಡುವಲ್ಲಿ ಸಿಬ್ಬಂದಿ ನಿರ್ಲಕ್ಷ್ಯ ತೋರಬಾರದು. ಲಭ್ಯವಿರುವ ಸಂಪನ್ಮೂಲಗಳೊಂದಿಗೆ ತಕ್ಷಣ ಸ್ಪಂದಿಸುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಸೂಚಿಸಿದರು. ಪಶು ಸಖಿಯರ ಕರ್ತವ್ಯ ಹಾಗೂ ಜವಾಬ್ದಾರಿಗಳ ಕುರಿತು ಮಾಹಿತಿ ಪಡೆದ ಸಿಇಒ, ಮುಂದಿನ ತಿಂಗಳಲ್ಲಿ ಪಶು ಸಖಿಯರಿಗೆ ಅಗತ್ಯ ತರಬೇತಿ ಆಯೋಜಿಸಲು ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ತಿಳಿಸಿದರು. ಗ್ರಾಮೀಣ ಪ್ರದೇಶಗಳಲ್ಲಿ ಜಾನುವಾರುಗಳ ಆರೋಗ್ಯದ ಕುರಿತು ರೈತರಿಗೆ ಅರಿವು ಮೂಡಿಸುವಲ್ಲಿ ಪಶು ಸಖಿಯರು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಬೇಕು ಎಂದು ಹೇಳಿದರು. ಅಲ್ಲದೇ, ತಾಲೂಕುವಾರು ಅಧಿಕಾರಿಗಳ ಸಮಸ್ಯೆಗಳನ್ನು ಆಲಿಸಿದ ಸಿಇಒ, ಜಿಲ್ಲೆಯ ಹಲವು ಕಡೆಗಳಲ್ಲಿ ಸಿಬ್ಬಂದಿ ಕೊರತೆ ಇರುವುದನ್ನು ಗಮನಿಸಿದರು. ಬೀಳಗಿ ತಾಲೂಕಿನಲ್ಲಿ ಸಿಬ್ಬಂದಿ ಕೊರತೆ ಹೆಚ್ಚಿನ ಪ್ರಮಾಣದಲ್ಲಿರುವುದರಿಂದ, ಕೊರತೆ ನೀಗಿಸಲು ಕೇಂದ್ರ ಕಚೇರಿಗೆ ಪ್ರಸ್ತಾವನೆ ಸಲ್ಲಿಸುವಂತೆ ಸೂಚಿಸಿದರು. ಸಭೆಯಲ್ಲಿ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಉಪ ನಿರ್ದೇಶಕ ಎಸ್.ಎಚ್.ಕರಡಿಗುಡ್ಡ, ಪಾಲಿಕ್ಲಿನಿಕ್ ಉಪ ನಿರ್ದೇಶಕ ಶಿವಕುಮಾರ ಹೊಳೆಪ್ಪಗೋಳ ಸೇರಿದಂತೆ ಆಯಾ ತಾಲೂಕಿನ ಪಶು ವೈದ್ಯಾಧಿಕಾರಿಗಳು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಮಾಜದ ಸಮಸ್ಯೆಗಳ ಪರಿಹಾರಕ್ಕೆ ಸಂಘಟನೆಗಳು ಮುಂದಾಗಬೇಕು
ಬರದ ಸುಳಿಯಲ್ಲಿ ಬೆಳಗಾವಿಯ 9 ತಾಲೂಕುಗಳು