ರಾಜ್ಯಾದ್ಯಂತ ತೀವ್ರ ಸಂಚಲನ ಮೂಡಿಸಿದ್ದ ನಗರದ ವೀರಾಪುರ ಓಣಿಯ ಅಂಜಲಿ ಅಂಬಿಗೇರ (20) ಕೊಲೆ ಪ್ರಕರಣದಲ್ಲಿ ಆರೋಪಿ ಗಿರೀಶ್ ಅಲಿಯಾಸ್ ವಿಶ್ವನಾಥ ಎಸ್. ಸಾವಂತ ಅಪರಾಧಿ ಎಂದು ನಗರದ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಘೋಷಿಸಿದೆ.
ಹುಬ್ಬಳ್ಳಿ:
ರಾಜ್ಯಾದ್ಯಂತ ತೀವ್ರ ಸಂಚಲನ ಮೂಡಿಸಿದ್ದ ನಗರದ ವೀರಾಪುರ ಓಣಿಯ ಅಂಜಲಿ ಅಂಬಿಗೇರ (20) ಕೊಲೆ ಪ್ರಕರಣದಲ್ಲಿ ಆರೋಪಿ ಗಿರೀಶ್ ಅಲಿಯಾಸ್ ವಿಶ್ವನಾಥ ಎಸ್. ಸಾವಂತ ಅಪರಾಧಿ ಎಂದು ನಗರದ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಘೋಷಿಸಿದೆ. ಪ್ರಕರಣದ ಸುದೀರ್ಘ ವಿಚಾರಣೆ ಪೂರ್ಣಗೊಳಿಸಿರುವ ನ್ಯಾಯಾಲಯ, ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಶಿಕ್ಷೆಯ ಪ್ರಮಾಣ ಪ್ರಕಟಿಸಲು ನ. 25ರಂದು ದಿನಾಂಕ ನಿಗದಿಪಡಿಸಿದೆ.
ಶನಿವಾರ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶೆ ಪಲ್ಲವಿ ಅವರು, ಹುಬ್ಬಳ್ಳಿ ಉಪಕಾರಾಗೃಹದಿಂದ ವಿಡಿಯೋ ಕಾನ್ಫರೆನ್ಸ್ ಮೂಲಕ ಹಾಜರಾದ ಆರೋಪಿ ಗಿರೀಶ್ ಸಾವಂತನನ್ನು ಭಾರತೀಯ ದಂಡ ಸಂಹಿತೆ (ಐಪಿಸಿ) ಸೆಕ್ಷನ್ 451, 302 ಹಾಗೂ 201ರ ಅಡಿ ಅಪರಾಧಿ ಎಂದು ಘೋಷಿಸಿ ಆದೇಶಿಸಿದರು. ಶಿಕ್ಷೆಯ ಪ್ರಮಾಣದ ಕುರಿತು ನ. 25ರಂದು ವಾದ-ಪ್ರತಿವಾದ ಆಲಿಸಿ ತೀರ್ಪು ಪ್ರಕಟಿಸಲಿದ್ದಾರೆ. ಸಿಐಡಿ ಪರ ವಿಶೇಷ ಸರ್ಕಾರಿ ಅಭಿಯೋಜಕ ಆರ್.ಕೆ. ಕಾಳೆ ವಾದ ಮಂಡಿಸಿದ್ದರು.
435 ಪುಟಗಳ ದೋಷಾರೋಪ ಪಟ್ಟಿ:
ಪ್ರಕರಣದ ಗಂಭೀರತೆ ಪರಿಗಣಿಸಿ ಅಂದಿನ ಡಿಜಿಪಿ ಮತ್ತು ಐಜಿಪಿ ಡಾ. ಎಂ.ಎ. ಸಲೀಂ ಹಾಗೂ ಎಡಿಜಿಪಿ ಬಿ.ಕೆ. ಸಿಂಗ್ ಅವರ ನಿರ್ದೇಶನದಂತೆ ಎಸ್‌ಪಿ ಎನ್. ವೆಂಕಟೇಶ ಅವರ ಮೇಲ್ವಿಚಾರಣೆಯಲ್ಲಿ ಡಿವೈಎಸ್‌ಪಿ ಎಂ.ಎಚ್. ಉಮೇಶ ತನಿಖೆ ನಡೆಸಿದ್ದರು. ತನಿಖೆ ಪೂರ್ಣಗೊಳಿಸಿದ ಸಿಐಡಿ ಅಧಿಕಾರಿಗಳು 435 ಪುಟಗಳ ದೋಷಾರೋಪ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ಇದರಲ್ಲಿ 85 ಸಾಕ್ಷಿಗಳ ಹೇಳಿಕೆಗಳನ್ನು ದಾಖಲಿಸಿ ಸಲ್ಲಿಸಲಾಗಿತ್ತು.
ಸರ್ಕಾರವು ವಿಶೇಷ ಸರ್ಕಾರಿ ಅಭಿಯೋಜಕರಾಗಿ ಆರ್.ಕೆ. ಕಾಳೆ ಅವರನ್ನು ನೇಮಕ ಮಾಡಿತ್ತು. 2026ರ ಮಾರ್ಚ್‌ನಲ್ಲಿ ವಿಚಾರಣೆ ಆರಂಭವಾಗಿದ್ದು, ನ್ಯಾಯಾಲಯದಲ್ಲಿ ಒಟ್ಟು 46 ಸಾಕ್ಷಿಗಳ ವಿಚಾರಣೆ ನಡೆಸಲಾಗಿದೆ. ಅಭಿಯೋಜನೆ ಪರವಾಗಿ 179 ದಾಖಲೆಗಳು ಹಾಗೂ 18 ಮುದ್ದೆಮಾಲು (ಸಂಗ್ರಹಿಸಿದ ವಸ್ತು)ಗಳನ್ನು ಗುರುತಿಸಿ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿತ್ತು. ವಿಚಾರಣೆ ಪೂರ್ಣಗೊಂಡ ಬಳಿಕ ಇದೀಗ ನ್ಯಾಯಾಲಯ ಆರೋಪಿಯನ್ನು ಅಪರಾಧಿ ಎಂದು ಘೋಷಿಸಿದೆ.
ಪ್ರೀತಿ ನಿರಾಕರಿಸಿದ್ದಕ್ಕೆ ಬರ್ಬರ ಹತ್ಯೆ:
ನಗರದ ಯಲ್ಲಾಪುರ ಓಣಿಯ ನಿವಾಸಿಯಾಗಿದ್ದ ಗಿರೀಶ್ ಅಲಿಯಾಸ್ ವಿಶ್ವನಾಥ ಸಾವಂತ, ಅಂಜಲಿ ಅಂಬಿಗೇರಳನ್ನು ಪ್ರೀತಿಸುವಂತೆ ನಿರಂತರವಾಗಿ ಪೀಡಿಸುತ್ತಿದ್ದನು. ಆದರೆ, ಆತನ ಪ್ರೀತಿಯ ಪ್ರಸ್ತಾಪವನ್ನು ಅಂಜಲಿ ನಿರಾಕರಿಸಿದ್ದಳು. ಇದರಿಂದ ಕುಪಿತಗೊಂಡಿದ್ದ ಆರೋಪಿ, 2024ರ ಮೇ 15ರಂದು ಬೆಳಗಿನ ಜಾವ 5ರಿಂದ 5.30ರ ನಡುವಿನ ಅವಧಿಯಲ್ಲಿ ವೀರಾಪುರ ಓಣಿಯಲ್ಲಿರುವ ಅಂಜಲಿ ಮನೆಗೆ ನುಗ್ಗಿ ಚಾಕುವಿನಿಂದ ಇರಿದು ಹತ್ಯೆಗೈದಿದ್ದನು. ಬಳಿಕ ಸ್ಥಳದಿಂದ ಪರಾರಿಯಾಗಿದ್ದನು.
ಈ ಘಟನೆ ಹುಬ್ಬಳ್ಳಿ ಮಾತ್ರವಲ್ಲದೆ ರಾಜ್ಯಾದ್ಯಂತ ತೀವ್ರ ಆಕ್ರೋಶಕ್ಕೆ ಕಾರಣವಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಡಿಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಬಳಿಕ ಪ್ರಕರಣವನ್ನು ಸಿಐಡಿಗೆ ವರ್ಗಾಯಿಸಲಾಗಿತ್ತು. ತನಿಖೆ ಕೈಗೆತ್ತಿಕೊಂಡ ಸಿಐಡಿ ಅಧಿಕಾರಿಗಳು ಆರೋಪಿಯನ್ನು ಬಂಧಿಸಿ, ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.
ಯುವತಿಯ ಕೊಲೆ ಪ್ರಕರಣದಲ್ಲಿ ಆರೋಪ ಸಾಬೀತಾಗಿದ್ದು, ಇದೀಗ ಶಿಕ್ಷೆಯ ಪ್ರಮಾಣದ ಕುರಿತು ಕುತೂಹಲ ಮೂಡಿದೆ. ನ. 25ರಂದು ನ್ಯಾಯಾಲಯ ಪ್ರಕಟಿಸಲಿರುವ ತೀರ್ಪಿನತ್ತ ಸಾರ್ವಜನಿಕರ ಗಮನ ನೆಟ್ಟಿದೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.