ಬರ ನಿರ್ವಹಣೆಯಲ್ಲಿನ ವೈಫಲ್ಯ, ಭ್ರಷ್ಟಾಚಾರ, ಬೆಲೆ ಏರಿಕೆ ಹಾಗೂ ಪರಿಶಿಷ್ಟ ಜಾತಿ-ಪಂಗಡಗಳ ಅನುದಾನ ದುರ್ಬಳಕೆ ಖಂಡಿಸಿ ನ. 23ರಿಂದ 25ರ ವರೆಗೆ ರಾಜ್ಯಾದ್ಯಂತ ಬಿಜೆಪಿ ಮೂರು ದಿನ ಹೋರಾಟ ನಡೆಸಲಿದೆ.
ಹುಬ್ಬಳ್ಳಿ:
ಬರ ನಿರ್ವಹಣೆಯಲ್ಲಿನ ವೈಫಲ್ಯ, ಭ್ರಷ್ಟಾಚಾರ, ಬೆಲೆ ಏರಿಕೆ ಹಾಗೂ ಪರಿಶಿಷ್ಟ ಜಾತಿ-ಪಂಗಡಗಳ ಅನುದಾನ ದುರ್ಬಳಕೆ ಖಂಡಿಸಿ ನ. 23ರಿಂದ 25ರ ವರೆಗೆ ರಾಜ್ಯಾದ್ಯಂತ ಬಿಜೆಪಿ ಮೂರು ದಿನ ಹೋರಾಟ ನಡೆಸಲಿದೆ ಎಂದು ಸಂಸದ, ಮಾಜಿ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಬರದಿಂದ ಕುಡಿಯುವ ನೀರು, ಮೇವು ಮತ್ತು ಉದ್ಯೋಗದ ಸಮಸ್ಯೆ ತೀವ್ರಗೊಂಡಿದೆ. 3,500ಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಚಿತ್ರದುರ್ಗ ಜಿಲ್ಲೆಯಲ್ಲಿ 17 ಲಕ್ಷಕ್ಕೂ ಅಧಿಕ ಕುರಿಗಳಿದ್ದು, ಮೇವು-ನೀರಿನ ಕೊರತೆಯಿಂದ ಕುರಿಗಾಹಿಗಳು ವಲಸೆ ಹೋಗುವ ಹಾಗೂ ಜಾನುವಾರು ಮಾರುವ ಸ್ಥಿತಿ ಎದುರಾಗಿದೆ. ಈ ವರೆಗೂ ರೈತರಿಗೆ ನಯಾಪೈಸ ಬರ ಪರಿಹಾರ ವಿತರಿಸಿಲ್ಲ. ಸರ್ಕಾರದ ಖಜಾನೆ ಸಂಪೂರ್ಣ ಖಾಲಿಯಾಗಿದೆ ಎಂದು ಆರೋಪಿಸಿದರು.
ಬರ ಪರಿಹಾರ ಕೈಗೊಳ್ಳುವಲ್ಲಿ ವಿಫಲ:
1972ರ ಬರಗಾಲದಲ್ಲಿ ದೇವರಾಜ ಅರಸು ಸರ್ಕಾರ ಟ್ಯಾಂಕರ್ ಮೂಲಕ ನೀರು, ಹೊರರಾಜ್ಯಗಳಿಂದ ಮೇವು ಪೂರೈಕೆ ಹಾಗೂ ಉದ್ಯೋಗ ಸೃಷ್ಟಿ ಕಾಮಗಾರಿ ಕೈಗೊಂಡು ಬರ ಸಮಸ್ಯೆ ಪರಿಹರಿಸಿದ್ದರು. ಈಗಿನ ಸರ್ಕಾರ ಅದೇ ರೀತಿಯ ಪರಿಹಾರ ಕ್ರಮಕೈಗೊಳ್ಳುವಲ್ಲಿ ವಿಫಲವಾಗಿದೆ ಎಂದು ಟೀಕಿಸಿದರು.
ಕಳೆದ ನಾಲ್ಕು ವರ್ಷಗಳಲ್ಲಿ ಎಸ್ಸಿ-ಎಸ್ಟಿ ಸಮುದಾಯಗಳ ಅಭಿವೃದ್ಧಿಗೆ ಮೀಸಲಿಟ್ಟಿದ್ದ ಅನುದಾನವನ್ನು ಬೇರೆ ಉದ್ದೇಶಗಳಿಗೆ ಬಳಸಲಾಗಿದೆ ಎಂದು ಆರೋಪಿಸಿದ ಅವರು, ಈ ಹಣವನ್ನು ಸಂಬಂಧಿಸಿದ ಇಲಾಖೆಗಳು ಮತ್ತು ನಿಗಮಗಳಿಗೆ ಮರಳಿಸಿ ಶಿಕ್ಷಣ, ಉದ್ಯೋಗ, ಭೂಮಿ ಹಾಗೂ ನೀರಾವರಿ ಯೋಜನೆಗಳಿಗೆ ಬಳಸಬೇಕು ಎಂದು ಆಗ್ರಹಿಸಿದರು.
ಮೀಸಲಾತಿಯಲ್ಲಿ ಅನ್ಯಾಯ:
ಬಸವರಾಜ ಬೊಮ್ಮಾಯಿ ಸರ್ಕಾರ ಪರಿಶಿಷ್ಟ ಜಾತಿ ಮೀಸಲಾತಿಯನ್ನು ಶೇ. 15ರಿಂದ 17ಕ್ಕೆ, ಪರಿಶಿಷ್ಟ ಪಂಗಡದ ಮೀಸಲಾತಿಯನ್ನು ಶೇ. 3ರಿಂದ 7ಕ್ಕೆ ಹೆಚ್ಚಿಸಿತ್ತು. ಆದರೆ, ಕಾಂಗ್ರೆಸ್ ಸರ್ಕಾರ ನ್ಯಾಯಾಲಯದಲ್ಲಿ ಸಮರ್ಥವಾಗಿ ವಾದ ಮಂಡಿಸದ ಕಾರಣ ಮೀಸಲಾತಿಗೆ ಹಿನ್ನಡೆಯಾಗಿದೆ ಎಂದು ದೂರಿದರು.
ಎಲ್ಲ ರಂಗದಲ್ಲೂ ಬೆಲೆ ಹೆಚ್ಚಳ:
ಹಾಲಿನ ದರವನ್ನು ₹17, ಕೆಎಸ್ಆರ್ಟಿಸಿ ಬಸ್ ದರವನ್ನು ಶೇ. 42 ಹಾಗೂ ಬಿಎಂಟಿಸಿ ದರವನ್ನು ಶೇ. 67ರಷ್ಟು ಹೆಚ್ಚಿಸಲಾಗಿದೆ. ಆಸ್ಪತ್ರೆ ಮತ್ತು ಜನನ-ಮರಣ ಸೇರಿದಂತೆ ವಿವಿಧ ಪ್ರಮಾಣಪತ್ರಗಳ ಶುಲ್ಕವೂ ಏರಿಕೆಯಾಗಿದೆ. ರಾಜ್ಯದಲ್ಲಿ 34 ಸಾವಿರ ಮೆಗಾವಾಟ್ ವಿದ್ಯುತ್ ಉತ್ಪಾದನಾ ಸಾಮರ್ಥ್ಯವಿದ್ದರೂ ರೈತರಿಗೆ ಸಮರ್ಪಕ ವಿದ್ಯುತ್ ನೀಡುತ್ತಿಲ್ಲ ಎಂದು ಆರೋಪಿಸಿದರು.
ಪೆಟ್ರೋಲ್ನಲ್ಲಿ ಎಥನಾಲ್ ಮಿಶ್ರಣದ ಕುರಿತು ಹರಡುತ್ತಿರುವ ಆರೋಪಗಳಿಗೂ ಆಧಾರವಿಲ್ಲ, ಮಿಶ್ರಣವನ್ನು ತೈಲ ಕಂಪನಿಗಳ ಮಟ್ಟದಲ್ಲೇ ಮಾಡಲಾಗುತ್ತದೆ ಎಂದು ಸ್ಪಷ್ಟಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ವಿಪ ಸದಸ್ಯರಾದ ಪ್ರದೀಪ ಶೆಟ್ಟರ್, ಎಸ್.ವಿ. ಸಂಕನೂರ, ಲಿಂಗರಾಜ ಪಾಟೀಲ, ಮಾಜಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ, ಮೇಯರ್ ದುರ್ಗಮ್ಮ ಬಿಜವಾಡ, ಬಿಜೆಪಿ ಗ್ರಾಮೀಣ ಜಿಲ್ಲಾಧ್ಯಕ್ಷ ನಿಂಗಪ್ಪ ಸುತಗಟ್ಟಿ ಹಾಗೂ ವಿಭಾಗ ಉಸ್ತುವಾರಿ ಜಯತೀರ್ಥ ಕಟ್ಟಿ ಸೇರಿದಂತೆ ಹಲವರಿದ್ದರು.
ರಾಹುಲ್ ಗಾಂಧಿಗೆ ಹುಚ್ಚು ಹಿಡಿದಿದೆ...
ಸಂವಿಧಾನದ ಬಗ್ಗೆ ಮಾತನಾಡುವ ರಾಹುಲ್ ಗಾಂಧಿಗೆ ಹುಚ್ಚು ಹಿಡಿದಿದೆ. ಸಂವಿಧಾನ ಪುಸ್ತಕವನ್ನು ಪಾಕೆಟ್ ಡೈರಿಯಾಗಿಟ್ಟುಕೊಂಡು ತಮ್ಮ ರಾಜಕೀಯ ಲಾಭಕ್ಕೆ ಬಳಸಿಕೊಳ್ಳುತ್ತಿದ್ದಾರೆ ಎಂದು ಸಂಸದ ಗೋವಿಂದ ಕಾರಜೋಳ ಗಂಭೀರ ಆರೋಪ ಮಾಡಿದರು. ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ (ಎಸ್ಐಆರ್) ವಿಷಯದಲ್ಲೂ ಜನರಲ್ಲಿ ಗೊಂದಲ ಮೂಡಿಸುತ್ತಿದ್ದಾರೆ. ಕಾಂಗ್ರೆಸ್ ಆಡಳಿತದ ಅವಧಿಯಲ್ಲಿಯೂ ಮತದಾರರ ಪಟ್ಟಿ ಪರಿಷ್ಕರಣೆ ನಡೆದಿತ್ತು. ಈಗ ಚುನಾವಣಾ ಆಯೋಗದ ವಿರುದ್ಧ ಆರೋಪ ಮಾಡುತ್ತಿರುವುದು ಸರಿಯಲ್ಲ ಎಂದು ಟೀಕಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.