ಕನ್ನಡಪ್ರಭ ವಾರ್ತೆ ಕೋಲಾರ
ಕಳೆದ ಕೆಲವು ದಿನಗಳಿಂದ ಈ ಭಾಗದಲ್ಲಿ ಜಾನುವಾರು ಕಳ್ಳತನ ಪ್ರಕರಣಗಳು ಹೆಚ್ಚಾಗುತ್ತಿದ್ದು, ಗ್ರಾಮಸ್ಥರು ಮತ್ತು ರೈತರು ತೀವ್ರ ಆತಂಕದಲ್ಲಿದ್ದರು. ಈ ನಡುವೆ ಎಚ್.ಕ್ರಾಸ್ ಕಡೆಯ ಹಳ್ಳಿಯೊಂದರಿಂದ ಎಮ್ಮೆಯನ್ನು ಕದ್ದು, ಚನ್ನಸಂದ್ರ ಗ್ರಾಮ ಬಳಿ ಅನುಮಾನಾಸ್ಪದವಾಗಿ ಎಮ್ಮೆಯನ್ನು ಕರೆದುಕೊಂಡು ಹೋಗುತ್ತಿದ್ದ ಇಬ್ಬರು ಯುವಕರ ಚಲನವಲನಗಳ ಮೇಲೆ ಅನುಮಾನಗೊಂಡ ಸ್ಥಳೀಯರು ಅವರನ್ನು ತಡೆದು ವಿಚಾರಿಸಿದ್ದಾರೆ.
ಈ ವೇಳೆ ಅವರು ಎಮ್ಮೆ ಕಳ್ಳತನ ಮಾಡುತ್ತಿರುವುದು ಖಚಿತವಾಗುತ್ತಿದ್ದಂತೆಯೇ, ತಕ್ಷಣ ಕಾರ್ಯಪ್ರವೃತ್ತರಾದ ಗ್ರಾಮಸ್ಥರು ಇಬ್ಬರೂ ಆರೋಪಿಗಳನ್ನು ಹಿಡಿದು ಗ್ರಾಮದ ಕಂಬವೊಂದಕ್ಕೆ ಕಟ್ಟಿಹಾಕಿದ್ದಾರೆ. ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಮಸ್ಥರು ಜಮಾಯಿಸಿದ್ದು, ಜಾನುವಾರು ಕಳ್ಳರ ಹಾವಳಿಗೆ ಕಡಿವಾಣ ಹಾಕುವಂತೆ ಒತ್ತಾಯಿಸಿದ್ದಾರೆ.ಘಟನೆಯ ಕುರಿತು ವೇಮಗಲ್ ಪೊಲೀಸ್ ಠಾಣೆಗೆ ಮಾಹಿತಿ ನೀಡಲಾಗಿದ್ದು, ಸ್ಥಳಕ್ಕೆ ಆಗಮಿಸಿದ ಪೊಲೀಸರು ಆರೋಪಿಗಳನ್ನು ವಶಕ್ಕೆ ಪಡೆದು ಮುಂದಿನ ತನಿಖೆ ಕೈಗೊಂಡಿದ್ದಾರೆ. ಈ ಸಂಬಂಧ ವೇಮಗಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.