ಅಂಜಲಿ ಹತ್ಯೆ: ಸಿಐಡಿಯಿಂದ ಸ್ಥಳ ಮಹಜರು

KannadaprabhaNewsNetwork |  
Published : May 25, 2024, 12:52 AM IST
ಸಿಐಡಿ | Kannada Prabha

ಸಾರಾಂಶ

ಆರೋಪಿ ನೋಡುತ್ತಿದ್ದಂತೆ ಅಂಜಲಿ ಸಹೋದರಿ ಯಶೋದಾ ರೊಚ್ಚಿಗೆದ್ದು, ನನ್ನ ಅಕ್ಕ ಏನು ಮಾಡಿದ್ದಳು. ಅವಳನ್ನೇಕೆ ಕೊಂದೆ. ಅವಳನ್ನು ಕೊಂದಿರುವ ನಿನ್ನನ್ನು ಸುಮ್ಮನೆ ಬಿಡಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಹುಬ್ಬಳ್ಳಿ:

ಇಲ್ಲಿನ ವೀರಾಪುರ ಓಣಿಯ ಅಂಜಲಿ ಅಂಬಿಗೇರ ಹತ್ಯೆ ಪ್ರಕರಣದ ಕುರಿತಂತೆ ಸಿಐಡಿ ಪೊಲೀಸ್‌ ತಂಡ ತನಿಖೆಯನ್ನು ಚುರುಕುಗೊಳಿಸಿದ್ದು, ಶುಕ್ರವಾರ ಸ್ಥಳ ಮಹಜರು ಮಾಡಿದೆ. ಹಂತಕ ವಿಶ್ವನಾಥ ಅಲಿಯಾಸ್‌ ಗಿರೀಶ ಸಾವಂತನನ್ನು ಅಂಜಲಿ ಮನೆಗೆ ಕರೆದುಕೊಂಡು ಹೋದ ಸಿಐಡಿ ತಂಡ ಮಹಜರು ನಡೆಸಿತು. ಈ ವೇಳೆ ಸ್ಥಳೀಯರು ಆರೋಪಿಗೆ ಹಿಡಿಶಾಪ ಹಾಕುತ್ತಿದ್ದ ದೃಶ್ಯ ಕಂಡು ಬಂತು.

ಗುರುವಾರ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದ ಸಿಐಡಿ ತಂಡ ಗಿರೀಶನನ್ನು ಎಂಟು ದಿನ ತಮ್ಮ ಕಸ್ಟಡಿಗೆ ಪಡೆದಿತ್ತು. ಗುರುವಾರ ತಡರಾತ್ರಿ ವರೆಗೂ ಆರೋಪಿಯನ್ನು ತೀವ್ರ ವಿಚಾರಣೆಗೊಳಿಸಿತ್ತು. ಶುಕ್ರವಾರ ಮಧ್ಯಾಹ್ನ ಅಂಜಲಿ ಮನೆಗೆ ಬಿಗಿ ಪೊಲೀಸ್‌ ಭದ್ರತೆಯಲ್ಲಿ ಆರೋಪಿಯನ್ನು ಕರೆದುಕೊಂಡು ಹೋದರು. ಅಲ್ಲಿ ಸ್ಥಳ ಮಹಜರು ನಡೆಸಿತು. ಮುಂಜಾಗ್ರತಾ ಕ್ರಮವಾಗಿ ಬಿಗಿ ಪೊಲೀಸ್‌ ಭದ್ರತೆ ಏರ್ಪಡಿಸಲಾಗಿತ್ತು. ಆದರೂ ದಾರಿಯುದ್ಧಕ್ಕೂ ಜನತೆ ನಿಂತು ಆರೋಪಿಗೆ ಹಿಡಿಶಾಪ ಹಾಕುತ್ತಿದ್ದ ದೃಶ್ಯ ಕಂಡು ಬಂತು. ಆರೋಪಿಯನ್ನು ನಿಂದಿಸಿದರು.

ಈ ನಡುವೆ ಆರೋಪಿ ನೋಡುತ್ತಿದ್ದಂತೆ ಅಂಜಲಿ ಸಹೋದರಿ ಯಶೋದಾ ರೊಚ್ಚಿಗೆದ್ದು, ನನ್ನ ಅಕ್ಕ ಏನು ಮಾಡಿದ್ದಳು. ಅವಳನ್ನೇಕೆ ಕೊಂದೆ. ಅವಳನ್ನು ಕೊಂದಿರುವ ನಿನ್ನನ್ನು ಸುಮ್ಮನೆ ಬಿಡಲ್ಲ ಎಂದು ಕಿಡಿಕಾರಿದಳು. ಮಹಜರು ಮುಗಿದ ಮೇಲೆ ಆರೋಪಿಯನ್ನು ಸಿಐಡಿ ಪೊಲೀಸ್‌ ತಂಡ ಗೌಪ್ಯ ಸ್ಥಳಕ್ಕೆ ಕರೆದುಕೊಂಡು ಹೋಯಿತು.

ಮೈಸೂರಿಗೂ ಪಯಣ:

ಈ ನಡುವೆ ಈತ ಕೊಲೆ ಮಾಡಿದ ಬಳಿಕ ಮೈಸೂರಿಗೆ ತೆರಳಿದ್ದ. ಜತೆಗೆ ಅಲ್ಲಿಂದ ಮರಳಿ ಬರುವಾಗ ರೈಲಿನಲ್ಲಿ ದಾವಣಗೆರೆ ಬಳಿ ಮಹಿಳೆಯೊಬ್ಬಳ ಮೇಲೂ ಹಲ್ಲೆ ನಡೆಸಿದ್ದ. ಅವರು ದಾವಣಗೆರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಆರೋಪಿಯನ್ನು ಮೈಸೂರಿಗೆ ಹಾಗೂ ದಾವಣಗೆರೆಗೆ ಕರೆದುಕೊಂಡು ಹೋಗಲಿದೆ ಸಿಐಡಿ ತಂಡ. ದಾವಣಗೆರೆಯಲ್ಲಿ ಹಲ್ಲೆಗೊಳಗಾದ ಮಹಿಳೆಯಿಂದಲೂ ಮಾಹಿತಿ ಕಲೆಹಾಕಲಿದೆ ಎಂದು ಮೂಲಗಳು ತಿಳಿಸಿವೆ.ಚಾಕು ಸಿಕ್ಕಿಲ್ಲ...

ಈ ನಡುವೆ ಅಂಜಲಿ ಹತ್ಯೆ ಮಾಡಿದ ಆರೋಪಿ ಚಾಕುವನ್ನು ಎಲ್ಲೋ ಬಿಸಾಕಾಗಿದ್ದಾನೆ ಎಂದು ಹೇಳಲಾಗಿದೆ. ಆದರೆ ಎಲ್ಲಿ ಬಿಸಾಕಿದ್ದಾನೆ ಎಂಬುದು ಗೊತ್ತಾಗಿಲ್ಲ. ಆ ಚಾಕು ಈವರೆಗೂ ಸಿಐಡಿ ತಂಡಕ್ಕೆ ಸಿಕ್ಕಿಲ್ಲ ಎಂದು ಹೇಳಲಾಗಿದೆ. ಅದರ ಹುಡುಕಾಟವನ್ನು ತಂಡ ಮಾಡುತ್ತಿದೆ.

ಹಂತಕರ ಪರ ವಕಾಲತ್ತು ವಹಿಸದ ವಕೀಲರು:

ನೇಹಾ ಹಿರೇಮಠ ಹಾಗೂ ಅಂಜಲಿ ಅಂಬಿಗೇರ ಹತ್ಯೆ ಆರೋಪಿಗಳ ಪರ ವಕಾಲತ್ತು ವಹಿಸಲು ಯಾವ ವಕೀಲರು ಮುಂದಾಗುತ್ತಿಲ್ಲ. ಇದು ಆರೋಪಿಗಳಿಗೆ ಸಂಕಟ ಎದುರಾಗಿದೆ. ಇಲ್ಲಿನ ವಕೀಲರ ನಡೆಗೆ ಸಾರ್ವಜನಿಕ ವಲಯದಲ್ಲೂ ಮೆಚ್ಚುಗೆ ವ್ಯಕ್ತವಾಗುತ್ತಿದೆ.ಏ. 18ರಂದು ಕಾಲೇಜ್‌ ಕ್ಯಾಂಪಸ್‌ನಲ್ಲಿ ನೇಹಾ ಹಿರೇಮಠ, ಮೇ 15ರಂದು ಅಂಜಲಿ ಅಂಬಿಗೇರ ಹತ್ಯೆಯಾಗಿದೆ. ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದರು. ಬಳಿಕ ಎರಡು ಪ್ರಕರಣಗಳನ್ನು ಸಿಐಡಿಗೆ ವಹಿಸಿತ್ತು. ನೇಹಾ ಪ್ರಕರಣದ ತನಿಖೆ ಅಂತಿಮ ಹಂತಕ್ಕೆ ತಲುಪಿದ್ದು, ಚಾರ್ಜ್‌ಶೀಟ್‌ ಸಲ್ಲಿಸುವುದು ಬಾಕಿಯುಳಿದಿದೆ. ಇನ್ನು ಅಂಜಲಿ ಹತ್ಯೆ ಪ್ರಕರಣದ ತನಿಖೆ ಚುರುಕುಗೊಂಡಿದೆ.ಎರಡು ಪ್ರಕರಣಗಳಲ್ಲಿ ಆರೋಪಿಗಳ ಪರವಾಗಿ ವಕಾಲತ್ತು ವಹಿಸಲು ವಕೀಲರು ಮುಂದೆ ಬರುತ್ತಿಲ್ಲ. ನೇಹಾ ಹತ್ಯೆ ಪ್ರಕರಣದಲ್ಲಂತೂ ಅವರ ಮನೆಗೆ ಹೋಗಿದ್ದ ಕೆಲ ವಕೀಲರ ನಿಯೋಗ ಆರೋಪಿ ಪರವಾಗಿ ವಕಾಲತ್ತು ವಹಿಸುವುದಿಲ್ಲ ತಿಳಿಸಿತ್ತು. ಇದೀಗ ಅಂಜಲಿ ಹತ್ಯೆ ಕೇಸ್‌ಲ್ಲೂ ವಕೀಲರು ವಕಾಲತ್ತು ವಹಿಸಲು ಮುಂದಾಗುತ್ತಿಲ್ಲ. ವಕೀಲರ ಈ ನಡೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.

ನೇಹಾ ಹಿರೇಮಠ ಹತ್ಯೆ ಆರೋಪಿ ಫಯಾಜ್‌ ನ್ಯಾಯಾಂಗ ಬಂಧನದಲ್ಲಿದ್ದರೆ, ಅಂಜಲಿ ಹಂತಕ ಗಿರೀಶ ಸಾವಂತ್‌ ಸಿಐಡಿ ಕಸ್ಟಡಿಯಲ್ಲಿದ್ದಾನೆ. ಹೀಗಾಗಿ ಇವರಿಬ್ಬರ ಪರವಾಗಿ ಯಾರೊಬ್ಬರು ಜಾಮೀನು ಹಾಕಿಲ್ಲ. ಇಬ್ಬರಿಗೂ ಜೈಲೇ ಗತಿ ಎಂಬಂತಾಗಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸುದ್ದಿ ಓದದಿದ್ದರೆ ಡಿಜಿಟಲ್‌ ಅರೆಸ್ಟ್‌ ಆಗ್ತಿರಿ!
ರೈತರ ಯೂರಿಯಾ ಕದ್ದು ತಮಿಳ್ನಾಡಿಗೆ ಸಾಗಣೆ ದಂಧೆ ಪತ್ತೆ