ಕಾರ್ಮಿಕರ ಆರೋಗ್ಯ ವಿಚಾರಿಸಿದ ಆಂಜನೇಯ

KannadaprabhaNewsNetwork | Published : Jan 25, 2025 1:03 AM

ಸಾರಾಂಶ

ಕನ್ನಡಪ್ರಭ ವಾರ್ತೆ ವಿಜಯಪುರ ನಗರದ ಜಿಲ್ಲಾಸ್ಪತ್ರೆಯಲ್ಲಿ ಇಟ್ಟಂಗಿ ಭಟ್ಟಿಯೊಂದರ ಮಾಲೀಕರಿಂದ ಹಲ್ಲೆಗೊಳಗಾದ ಕಾರ್ಮಿಕರನ್ನು ಮಾಜಿ ಸಚಿವ ಎಚ್.ಆಂಜನೇಯ ಶುಕ್ರವಾರ ಭೇಟಿಯಾಗಿ ಆರೋಗ್ಯ ವಿಚಾರಿಸಿದರು. ಇದೇ ಸಂದರ್ಭದಲ್ಲಿ ಸಿಎಂ ಸಿದ್ದರಾಮಯ್ಯ ಅವರಿಗೆ ಫೋನ್ ಮಾಡಿದ ಆಂಜನೇಯ, ಕಾರ್ಮಿಕರೊಂದಿಗೆ ಫೋನ್‌ನಲ್ಲಿ ಸಿಎಂ ಅವರಿಂದ ಮಾತನಾಡಿಸಿದರು. ಆಗ ಕಾರ್ಮಿಕರಿಗೆ ಧೈರ್ಯ ತುಂಬಿದ ಸಿದ್ದರಾಮಯ್ಯ, ಎಲ್ಲ ಮಾಹಿತಿಯನ್ನು ಪಡೆದುಕೊಂಡು ಬನ್ನಿ ಎಂದು ಆಂಜನೇಯ ಅವರಿಗೆ ಸೂಚಿಸಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ನಗರದ ಜಿಲ್ಲಾಸ್ಪತ್ರೆಯಲ್ಲಿ ಇಟ್ಟಂಗಿ ಭಟ್ಟಿಯೊಂದರ ಮಾಲೀಕರಿಂದ ಹಲ್ಲೆಗೊಳಗಾದ ಕಾರ್ಮಿಕರನ್ನು ಮಾಜಿ ಸಚಿವ ಎಚ್.ಆಂಜನೇಯ ಶುಕ್ರವಾರ ಭೇಟಿಯಾಗಿ ಆರೋಗ್ಯ ವಿಚಾರಿಸಿದರು. ಇದೇ ಸಂದರ್ಭದಲ್ಲಿ ಸಿಎಂ ಸಿದ್ದರಾಮಯ್ಯ ಅವರಿಗೆ ಫೋನ್ ಮಾಡಿದ ಆಂಜನೇಯ, ಕಾರ್ಮಿಕರೊಂದಿಗೆ ಫೋನ್‌ನಲ್ಲಿ ಸಿಎಂ ಅವರಿಂದ ಮಾತನಾಡಿಸಿದರು. ಆಗ ಕಾರ್ಮಿಕರಿಗೆ ಧೈರ್ಯ ತುಂಬಿದ ಸಿದ್ದರಾಮಯ್ಯ, ಎಲ್ಲ ಮಾಹಿತಿಯನ್ನು ಪಡೆದುಕೊಂಡು ಬನ್ನಿ ಎಂದು ಆಂಜನೇಯ ಅವರಿಗೆ ಸೂಚಿಸಿದರು.

ಕಾರ್ಮಿಕರನ್ನು ಮಾತನಾಡಿಸಿದ ಮಾಜಿ ಸಚಿವ ಆಂಜನೇಯ, ಮೂವರು ಕಾರ್ಮಿಕರಿಗೆ ತಲಾ ₹ ೫೦ ಸಾವಿರ ಆರ್ಥಿಕ ನೆರವು ನೀಡುವುದಾಗಿ ಘೋಷಿಸಿದರು. ಹಾಗೇ ಕಾರ್ಮಿಕರಿಗೆ ಸರ್ಕಾರದಿಂದ ಜಮೀನು ಹಾಗೂ ಅಗತ್ಯ ನೆರವು ಕಲ್ಪಿಸುವ ಬಗ್ಗೆ ಸಿಎಂ ಸಿದ್ದರಾಮಯ್ಯ, ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ್ ಅವರೊಂದಿಗೆ ಚರ್ಚಿಸಿ ಕ್ರಮ ವಹಿಸಲಾಗುವುದು ಎಂದು ಭರವಸೆ ನೀಡಿದರು.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಲೋಣಿ, ಕೈಗಾರಿಕೆ ಸಚಿವರ ಸಾರ್ವಜನಿಜಕ ಸಂಪರ್ಕಾಧಿಕಾರಿ ಡಾ.ಮಹಾಂತೇಶ ಬಿರಾದಾರ, ಜಿಲ್ಲಾ ಕಾಂಗ್ರೆಸ್‌ ಸಮಿತಿ ಉಪಾಧ್ಯಕ್ಷ ಗಂಗಾಧರ ಸಂಬಣ್ಣಿ, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಶಿವಾನಂದ ಮಾಸ್ತಿಹೊಳಿ ಸೇರಿದಂತೆ ಮುಂತಾದವರು ಇದ್ದರು.

ಆರೋಪಿಗಳಿಗೆ ಜೀವಾವಧಿ ಶಿಕ್ಷೆ ನೀಡಿ:

ಇಟ್ಟಂಗಿ ಭಟ್ಟಿ ಕಾರ್ಮಿಕರ ಮೇಲೆ ನಿರ್ದಯವಾಗಿ ವರ್ತಿಸುವ ಆರೋಪಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಬೇಕು ಎಂದು ಮಾಜಿ ಸಚಿವ ಎಚ್.ಆಂಜನೇಯ ಹೇಳಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದೊಂದು ನಾಗರಿಕ ಸಮಾಜ ತಲೆ ತಗ್ಗಿಸುವ ಘಟನೆ, ಆರೋಪಿಗಳನ್ನು ಕೂಡಲೇ ಗಡಿಪಾರು ಮಾಡಬೇಕಿದೆ. ಘಟನೆ ಕುರಿತು ನಿನ್ನೆಯೂ ಮುಖ್ಯಮಂತ್ರಿಗಳ ಜೊತೆ ಮಾತನಾಡಿರುವೆ. ಅಲ್ಲದೇ, ಈ ಗೂಂಡಾ ಪ್ರವೃತ್ತಿಯ ವಿರುದ್ಧ ಕ್ರಮ ವಹಿಸಬೇಕು. ಆರೋಪಿಗಳನ್ನು ಗಡಿಪಾರು ಮಾಡಬೇಕು. ಅಲ್ಲದೇ, ಆರೋಪಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಬೇಕು ಎಂದು ಒತ್ತಾಯಿಸಿದರು.

Share this article