ತ್ರಿವಿದ ದಾಸೋಹದಿಂದ ಸಮಾಜ ಕಟ್ಟಿದ ಅನ್ನದಾನೇಶ್ವರ ಮಠ

KannadaprabhaNewsNetwork |  
Published : Jul 02, 2026, 02:30 AM IST
ಫೋಟೋ 01 ಎಚ್,ಎನ್,ಎಮ್ 01 ಹನುಮಸಾಗರದ ಅನ್ನದಾನೇಶ್ವರ ವಿದ್ಯಾಸಂಸ್ಥೆಯ ನೂತನವಾಗಿ ಉದ್ಘಾಟನಗೊಳ್ಳಲಿರುವ ಶಾಲಾ ಕೊಠಡಿಗಳು ಫೋಟೋ 01 ಎಚ್,ಎನ್,ಎಮ್ 01ಬಿ:  ಹನುಮಸಾಗರದ ಅನ್ನದಾನೇಶ್ವರ ನೂತವಾಗಿ ಉದ್ಘಾಟನಗೊಳ್ಳಲಿರುವ ಶಿಲಾಮಂಟಪ. | Kannada Prabha

ಸಾರಾಂಶ

ಆರಂಭದಿಂದಲೂ ಅನ್ನದಾಸೋಹ, ಅಕ್ಷರದಾಸೋಹ ಮತ್ತು ಜ್ಞಾನದಾಸೋಹ ಎಂಬ ತ್ರಿವಿಧ ಸೇವೆ ನಿರಂತರವಾಗಿ ನಡೆಸಿಕೊಂಡು ಬಂದಿದೆ

ಏಕನಾಥ ಮೆದಿಕೇರಿ ಹನುಮಸಾಗರ

ಸಾವಿರಾರು ವಿದ್ಯಾರ್ಥಿಗಳ ಬದುಕಿಗೆ ಆಶಾಕಿರಣವಾಗಿ ಅನ್ನ- ಅಕ್ಷರದಾನ ಮಾಡಿದ ಹೆಗ್ಗಳಿಕೆಗೆ ಪಾತ್ರವಾದ ಹಾಲಕೇರಿ ಅನ್ನದಾನೇಶ್ವರ ಮಠ ಹಾಗೂ ಅದರ ಶಾಖಾ ಮಠವಾಗಿರುವ ಹನುಮಸಾಗರದ ಶ್ರೀ ಅನ್ನದಾನೇಶ್ವರ ಮಠ ಇಂದು ಕೇವಲ ಧಾರ್ಮಿಕ ಕೇಂದ್ರವಷ್ಟೇ ಅಲ್ಲ, ತ್ರಿವಿದ ದಾಸೋಹದಿಂದ ಸಮಾಜ ಸೇವೆಯ ಹೊಸ ಪರಂಪರೆ ನಿರ್ಮಿಸಿದೆ. ಇದಕ್ಕೆಲ್ಲ ಕಾರಣೀಭೂತರಾದ ಲಿಂ.ಅನ್ನದಾನೇಶ್ವರ ಮಹಾಸ್ವಾಮಿಗಳ ಶಿಲಾಮಂಟಪ ಗುರುವಾರ ಉದ್ಘಾಟನೆಯಾಗಲಿದೆ.

ಆರಂಭದಿಂದಲೂ ಅನ್ನದಾಸೋಹ, ಅಕ್ಷರದಾಸೋಹ ಮತ್ತು ಜ್ಞಾನದಾಸೋಹ ಎಂಬ ತ್ರಿವಿಧ ಸೇವೆ ನಿರಂತರವಾಗಿ ನಡೆಸಿಕೊಂಡು ಬಂದಿದೆ. ಉಚಿತ ಪ್ರಸಾದ ನಿಲಯದ ಮೂಲಕ ಸಾವಿರಾರು ವಿದ್ಯಾರ್ಥಿಗಳಿಗೆ ಅನ್ನ ನೀಡಿ ಅಕ್ಷರ ಕಲಿಸಿದ ಮಠ, ಮತ್ತೊಂದೆಡೆ ಪುರಾಣ ಪ್ರವಚನ, ಧಾರ್ಮಿಕ, ಆಧ್ಯಾತ್ಮಿಕ ಚಿಂತನೆ ಹಾಗೂ ಧರ್ಮೋಪದೇಶ ಮೂಲಕ ಸಮಾಜದಲ್ಲಿ ಜ್ಞಾನ ಮತ್ತು ಸಂಸ್ಕಾರ ಬೆಳೆಸುವ ಕಾರ್ಯ ಇಂದಿಗೂ ಮುಂದುವರಿಸಿದೆ.

ಪ್ರಸಾದ ನಿಲಯದ ಸ್ಥಾಪನೆ:

ಬೆತ್ತದ ಅಜ್ಜ ಎಂದು ಪ್ರಸಿದ್ಧರಾದ ಲಿಂ.ಗುರು ಅನ್ನದಾನ ಮಹಾಸ್ವಾಮಿಗಳ ಆಶಯದಂತೆ ಹಳ್ಳಿಗಳಲ್ಲಿ ಶಿಕ್ಷಣದ ಅಗತ್ಯ ಮನಗಂಡು 1960ರ ಸುಮಾರಿಗೆ ಹನುಮಸಾಗರ ಶಾಖಾ ಮಠದಲ್ಲಿ ಉಚಿತ ಪ್ರಸಾದ ನಿಲಯ ಆರಂಭಿಸಲಾಯಿತು. ಇದಕ್ಕೂ ಮೊದಲು 9ನೇ ಪೀಠಾಧಿಪತಿ ಗಡ್ಡದಜ್ಜನವರು ದಾಸೋಹ ಪರಂಪರೆ ಬೆಳೆಸಿದರೆ ನಂತರ 10ನೇ ಪೀಠಾಧಿಪತಿ ಗುರು ಅನ್ನದಾನೇಶ್ವರ ಮಹಾಸ್ವಾಮಿ ಶಿಕ್ಷಣದ ಸೇವೆಯೊಂದಿಗೆ ಜೋಡಿಸಿ ಉಚಿತ ಪ್ರಸಾದ ನಿಲಯ ರೂಪಿಸಿದರು.

ಮನೆ ಮನೆಗೆ ಭಿಕ್ಷೆ:

ಆ ಕಾಲದ ಪ್ರಸಾದ ನಿಲಯದ ವ್ಯವಸ್ಥೆ ಇಂದಿನ ಪೀಳಿಗೆಗೆ ಅಚ್ಚರಿ ಮೂಡಿಸುವಂತಿತ್ತು. ಬೆಳಗಿನ ಜಾವ ವಿದ್ಯಾರ್ಥಿಗಳು ಬಿದಿರಿನ ಪುಟ್ಟಿ ಹಾಗೂ ಅದರ ಮೇಲೆ ಕೆಂಪು ಬಟ್ಟೆ ಹಾಕಿಕೊಂಡು ಮನೆ ಮನೆಗೆ ತೆರಳಿ ಕಜ್ಜಾಯ (ರೊಟ್ಟಿ, ಪಲ್ಯ) ಸಂಗ್ರಹಿಸುತ್ತಿದ್ದರು. ಪ್ರತಿ ಮನೆಯವರೂ ಇದನ್ನು ಧರ್ಮ ಕಾರ್ಯವೆಂದು ಭಾವಿಸಿ ಇಲ್ಲ ಎನ್ನದೆ ಒಂದು ರೊಟ್ಟಿ, ಪಲ್ಯ ಅಥವಾ ಚಟ್ನಿ ನೀಡಿ ಕಳುಹಿಸುತ್ತಿದ್ದರು. ವಿದ್ಯಾರ್ಥಿಗಳ ಪಾದಕ್ಕೆ ನಮಸ್ಕರಿಸಿ ಗೌರವದಿಂದ ಬೀಳ್ಕೊಡುತ್ತಿದ್ದ ಸಂಪ್ರದಾಯವೂ ಇತ್ತು. ಹೀಗಾಗಿ ವಿದ್ಯಾರ್ಥಿಗಳ ಮಧ್ಯಾಹ್ನದ ಊಟದ ಚಿಂತೆಯೇ ಇರಲಿಲ್ಲ.

1985ರಲ್ಲಿ ಶಾಲೆ ಸ್ಥಾಪನೆ

1985ರಲ್ಲಿ ಹನುಮಸಾಗರದ ಹಿರಿಯರಾದ ಚಂದಾಲಿಂಗಪ್ಪ ಬಾಚಲಾಪುರ ಹಾಗೂ ಮಲ್ಲೇಶಪ್ಪ ಮಾಸ್ತರ ಮಠದ ಆವರಣದಲ್ಲಿ ಶಾಲೆ ಆರಂಭಿಸುವ ಚಿಂತನೆ ಮಾಡಿದರು. ಅವರಿಗೆ ಶರಣಪ್ಪ ಅಗಸಿಮುಂದಿನ, ಕರಿಸಿದ್ದಪ್ಪ ಅಗಸಿಮುಂದಿನ, ಚನ್ನಬಸಪ್ಪ ಗಡಾದ, ಕರಿಸಿದ್ದಪ್ಪ ಚಿನಿವಾಲರ, ವಾಸಪ್ಪ ಮೋಟಗಿ, ವೀರಪ್ಪ ಮೋಟಗಿ, ಮಹಾಂತಪ್ಪ ಕುಷ್ಟಗಿ, ಶರಣಪ್ಪ ಬ್ಯಾಳಿ, ಮಹಾಂತಪ್ಪ ಬಾಚಲಾಪುರ, ಗುರಪ್ಪ ಕನ್ನೂರ, ಬಸವಂತಪ್ಪ ಸಜ್ಜನ, ಮಹಾಂತಪ್ಪ ಲಂಗಟದ ಸೇರಿದಂತೆ ಅನೇಕರು ಕೈಜೋಡಿಸಿದರು.

ಸಂಸ್ಥಾಪಕ ಅಧ್ಯಕ್ಷರಾಗಿ ಚಂದಾಲಿಂಗಪ್ಪ ಬಾಚಲಾಪುರ, ಉಪಾಧ್ಯಕ್ಷರಾಗಿ ಕರಿಸಿದ್ದಪ್ಪ ಅಗಸಿಮುಂದಿನ ಹಾಗೂ ಕಾರ್ಯದರ್ಶಿಯಾಗಿ ರುದ್ರಪ್ಪ ಮೋಟಗಿ ಸೇವೆ ಸಲ್ಲಿಸಿದರು. ಆರಂಭದಲ್ಲಿ ಸುಧಾ ಪುರೋಹಿತ್, ನೀಲಮ್ಮ ಬಾಚಲಾಪುರ ಹಾಗೂ ಲಕ್ಷ್ಮೀ ಬಾಚಲಾಪುರ ಶಿಕ್ಷಕರಾಗಿ ಕಾರ್ಯ ನಿರ್ವಹಿಸಿದರು.

ಧರ್ಮ ಎಂದರೆ?

ಹಸಿದವರಿಗೆ ಅನ್ನ, ನಿರ್ಗತಿಕರಿಗೆ ಆಶ್ರಯ ಮತ್ತು ಮಕ್ಕಳಿಗೆ ಶಿಕ್ಷಣ ನೀಡುವುದೇ ನಿಜವಾದ ಧರ್ಮ ಎಂಬುದನ್ನು ಹನುಮಸಾಗರದ ಶ್ರೀಅನ್ನದಾನೇಶ್ವರ ಮಠ ಹಲವು ದಶಕಗಳ ಹಿಂದೆಯೇ ಕಾರ್ಯರೂಪಕ್ಕೆ ತಂದಿತ್ತು. ಇಂದು ಈ ಭಾಗದ ನೂರಾರು ಕುಟುಂಬಗಳಲ್ಲಿ ವೈದ್ಯರು, ಶಿಕ್ಷಕರ, ಅಧಿಕಾರಿ, ಉದ್ಯಮಿಗಳು ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರ ಯಶಸ್ಸಿನ ಹಿಂದೆ ಈ ಪ್ರಸಾದ ನಿಲಯದ ಅನ್ನದಾನ ಮತ್ತು ಅಕ್ಷರದಾನದ ಸೇವೆ ಅಡಗಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ದ್ವಿಭಾಷಾ ಮಾಧ್ಯಮ ಜಾರಿ ಮುನ್ನ ಚರ್ಚೆ ಆಗಲಿ
ಅಂಜುಮನ್ ತಾಂತ್ರಿಕ ಕಾಲೇಜಿನಲ್ಲಿ ಪದವಿ ಪ್ರದಾನ