ಸರ್ಕಾರಿ ಶಾಲೆಗಳಲ್ಲಿ ದ್ವಿಭಾಷಾ ಮಾಧ್ಯಮವನ್ನು ಸಂಪೂರ್ಣ ಜಾರಿಗೆ ತರುವ ಮುನ್ನ ಅದರ ಸಾಧಕ, ಬಾಧಕ ಕುರಿತಾಗಿ ಶಿಕ್ಷಣ ತಜ್ಞರು, ಸಾರ್ವಜನಿಕರು ಮತ್ತು ಪಾಲಕರ ಜೊತೆ ಚರ್ಚೆ ನಡೆಸಬೇಕು ಎಂದು ಕರ್ನಾಟಕ ಸಂಘದ ಆಶ್ರಯದಲ್ಲಿ ನಡೆದ ದುಂಡುಮೇಜಿನ ಸಭೆ ರಾಜ್ಯ ಸರ್ಕಾರವನ್ನು ಒತ್ತಾಯಿಸಿದೆ.

ಕರ್ನಾಟಕ ಸಂಘದ ದುಂಡುಮೇಜಿನ ಸಭೆಯಲ್ಲಿ ಆಗ್ರಹ

ಕನ್ನಡಪ್ರಭ ವಾರ್ತೆ ಅಂಕೋಲಾ

ಸರ್ಕಾರಿ ಶಾಲೆಗಳಲ್ಲಿ ದ್ವಿಭಾಷಾ ಮಾಧ್ಯಮವನ್ನು ಸಂಪೂರ್ಣ ಜಾರಿಗೆ ತರುವ ಮುನ್ನ ಅದರ ಸಾಧಕ, ಬಾಧಕ ಕುರಿತಾಗಿ ಶಿಕ್ಷಣ ತಜ್ಞರು, ಸಾರ್ವಜನಿಕರು ಮತ್ತು ಪಾಲಕರ ಜೊತೆ ಚರ್ಚೆ ನಡೆಸಬೇಕು ಎಂದು ಕರ್ನಾಟಕ ಸಂಘದ ಆಶ್ರಯದಲ್ಲಿ ನಡೆದ ದುಂಡುಮೇಜಿನ ಸಭೆ ರಾಜ್ಯ ಸರ್ಕಾರವನ್ನು ಒತ್ತಾಯಿಸಿದೆ.

ಕನ್ನಡ ಭವನದಲ್ಲಿ ದ್ವಿಭಾಷಾ ಮಾಧ್ಯಮ ಮತ್ತು ಕನ್ನಡದ ಭವಿಷ್ಯ ಎಂಬ ವಿಷಯದ ಕುರಿತಾಗಿ ನಡೆದ ಈ ಸಭೆಯಲ್ಲಿ ಶಿಕ್ಷಣ ತಜ್ಞರು, ಸಾಹಿತಿಗಳು, ಸಾಮಾಜಿಕ ಕಾರ್ಯಕರ್ತರು ಪಾಲ್ಗೊಂಡ ಸಭೆಯು ಸರ್ಕಾರ ಪ್ರಾಯೋಗಿಕವಾಗಿ ಜಾರಿಗೆ ತಂದಿರುವ ಈ ದ್ವಿಭಾಷಾ ಮಾಧ್ಯಮ ನೀತಿಯ ಕುರಿತಾಗಿ ವಿಸ್ತ್ರತವಾಗಿ ಚರ್ಚೆ ನಡೆಸಿ ಕೆಲ ನಿರ್ಣಯಗಳನ್ನು ಸ್ವೀಕರಿಸಿತು.

ಸರ್ಕಾರಿ ಶಾಲೆಗಳಲ್ಲಿ ಇಂಗ್ಲಿಷ್ ಒಂದು ಭಾಷೆಯಾಗಿ ಇರಲಿ, ಆದರೆ ಮಾಧ್ಯಮವಾಗಿ ಜಾರಿಯಾದರೆ ಇದರಿಂದ ಕನ್ನಡದ ಅಸ್ಮಿತೆಯ ಮೇಲೆ ದೂರಗಾಮಿ ಪರಿಣಾಮ ಆಗುವ ಸಾಧ್ಯತೆ ಇದೆ. ಹೀಗಾಗಿ ಈ ನೀತಿಯ ಬಗ್ಗೆ ವಿಸ್ತೃತ ಚರ್ಚೆ ಆಗಬೇಕು. ಭಾಷಾ ಮಾಧ್ಯಮ ಆಯ್ಕೆಯ ಹಕ್ಕು ಮಗುವಿಗೆ ಇರಲಿ, ವಿದ್ಯಾರ್ಥಿ- ಪೋಷಕರ ಅಭಿಪ್ರಾಯಕ್ಕೆ ಮನ್ನಣೆ ಇರಲಿ. ರಾಜ್ಯದಲ್ಲಿ ತಕ್ಷಣ ಭಾಷಾ ನೀತಿ ಜಾರಿಗೆ ಬರಲಿ ಎಂದು ಒತ್ತಾಯಿಸಲಾಗಿದೆ.ಅಭಿಪ್ರಾಯ ಆಲಿಸಿ:

ಕಾರ್ಯಕ್ರಮದ ಸಂಯೋಜಕ, ಕರ್ನಾಟಕ ಸಂಘದ ಉಪಾಧ್ಯಕ್ಷ ಶ್ರೀಧರ ನಾಯಕ ಪ್ರಾಸ್ತಾವಿಕ ಮಾತನಾಡಿ, ರಾಜ್ಯದಲ್ಲಿ ಕನ್ನಡವೇ ಆಡಳಿತ ಭಾಷೆಯಾಗಿದೆ. ಹೀಗಿರುವಾಗ ದ್ವಿಭಾಷಾ ಮಾಧ್ಯಮ ಜಾರಿಯಿಂದ ಕನ್ನಡ ಮಾಧ್ಯಮ ಶಾಲೆಗಳು ಮರೆಯಾಗಿ, ಆಡಳಿತದಲ್ಲಿ ಕನ್ನಡದ ಪರಿಚಯವೇ ಇಲ್ಲದ ಆಡಳಿತಗಾರರ ಪೀಳಿಗೆ ನಿರ್ಮಾಣವಾಗುವ ಭೀತಿ ಇದೆ ಎಂದರು.

ಹಿರಿಯ ಸಾಹಿತಿ ಶಾಂತಾರಾಮ ನಾಯಕ ಮಾತನಾಡಿ, ರಾಜ್ಯದಲ್ಲಿ ಜನಪ್ರತಿನಿಧಿಗಳಿಗೆ ಆಂಗ್ಲ ಶಾಲೆಗಳ ಆರಂಭ ಒಂದು ಲಾಭದಾಯಕ ದಂಧೆಯಾಗಿದೆ. ಇಂತಹ ನೀತಿ ಜಾರಿಯ ಮುನ್ನ ಸರ್ಕಾರ ಶಿಕ್ಷಣ ತಜ್ಞರು, ಪಾಲಕರ ಅಭಿಪ್ರಾಯಕ್ಕೂ ಮನ್ನಣೆ ನೀಡಬೇಕು ಎಂದರು.

ಕಸಾಪ ಅಧ್ಯಕ್ಷ ಗೋಪಾಲಕೃಷ್ಣ ನಾಯಕ ಮಾತನಾಡಿ, ಈ ನೀತಿಯ ಬಗ್ಗೆ ಸರ್ಕಾರದಿಂದ ಇನ್ನಷ್ಟು ಸ್ಪಷ್ಟತೆ ಅಗತ್ಯ ಎಂದರು.

ನಿವೃತ್ತ ಪ್ರಾಧ್ಯಾಪಕ ರಾಮಾ ನಾಯಕ, ವಿ.ಜಿ. ಗಣೇಶ, ನಿವೃತ್ತ ಪ್ರಾಚಾರ್ಯ ಡಾ. ಆರ್.ಜಿ. ಗುಂದಿ, ಪ್ರಮುಖರಾದ ದೇವರಾಯ ನಾಯಕ, ಜಿ.ಎಚ್. ನಾಯಕ, ವಿಠ್ಠಲ ಗಾಂವಕರ್, ಪ್ರಭಾಕರ ಬಂಟ, ಶ್ರೀ ದೇವಿ ನಾಯಕ, ರಾಮಮೂರ್ತಿ ನಾಯಕ, ಮಂಜುನಾಥ ಇಟಗಿ, ಮಹಾಂತೇಶ ರೇವಡಿ, ಜಯಶೀಲ ಆಗೇರ್, ವಾಸುದೇವ ನಾಯಕ, ಸೃಜನ ನಾಯಕ ಚರ್ಚೆಯಲ್ಲಿ ಪಾಲ್ಗೊಂಡು ತಮ್ಮ ಅಭಿಪ್ರಾಯ ಮಂಡಿಸಿದರು.

ನಿವೃತ್ತ ಶಿಕ್ಷಕ ಬಾಲಚಂದ್ರ ನಾಯಕ ಸಭೆಯ ಅಭಿಪ್ರಾಯ ಕ್ರೋಢೀಕರಿಸಿದರು.

ಕರ್ನಾಟಕ ಸಂಘದ ಅಧ್ಯಕ್ಷ ವಿಠ್ಠಲದಾಸ ಕಾಮತ್ ಮಾತನಾಡಿ ಸಭೆಯ ನಿರ್ಣಯಗಳನ್ನು ಮುಖ್ಯಮಂತ್ರಿಗಳಿಗೆ, ಶಿಕ್ಷಣ ಸಚಿವರಿಗೆ, ವಿರೋಧಿ ಪಕ್ಷದ ನಾಯಕರಿಗೆ ಕಳಿಸಿ ಈ ದ್ವಿಭಾಷಾ ಮಾಧ್ಯಮದ ಕುರಿತಾಗಿ ಮತ್ತೊಮ್ಮೆ ಚರ್ಚೆಗೆ ಕರ್ನಾಟಕ ಸಂಘ ಒತ್ತಾಯಿಸಲಿದೆ ಎಂದರು.

ರಾಜೇಶ ನಾಯಕ ಕಾರ್ಯಕ್ರಮ ನಿರ್ವಹಿಸಿದರು. ಕಾರ್ಯದರ್ಶಿ ಮಹೇಶ ನಾಯಕ ಹಿಚ್ಕಡ ವಂದಿಸಿದರು.