ತಾಲೂಕಿನ ಕರ್ಕಿ ಗ್ರಾಪಂ ವ್ಯಾಪ್ತಿಯಲ್ಲಿ ಬರುವ ಪಾವಿನಕುರ್ವಾ ತೂಗು ಸೇತುವೆ ಸಂಪೂರ್ಣ ಶಿಥಿಲಾವಸ್ಥೆಗೆ ಜಾರಿ ವರ್ಷ ಉರುಳುತ್ತಿದೆ.
ಜನಪ್ರತಿನಿಧಿಗಳ ಭರವಸೆಗಳು ಇದುವರೆಗೂ ಈಡೇರಿಲ್ಲ
ಕನ್ನಡಪ್ರಭ ವಾರ್ತೆ ಹೊನ್ನಾವರತಾಲೂಕಿನ ಕರ್ಕಿ ಗ್ರಾಪಂ ವ್ಯಾಪ್ತಿಯಲ್ಲಿ ಬರುವ ಪಾವಿನಕುರ್ವಾ ತೂಗು ಸೇತುವೆ ಸಂಪೂರ್ಣ ಶಿಥಿಲಾವಸ್ಥೆಗೆ ಜಾರಿ ವರ್ಷ ಉರುಳುತ್ತಿದೆ. ಆದರೆ ಸೇತುವೆಯ ಕೆಲಸದ ಬಗ್ಗೆ ಮಾತ್ರ ಜನಪ್ರತಿನಿಧಿಗಳು ತಲೆ ಕೆಡಿಸಿಕೊಂಡಂತಿಲ್ಲ. ಅಲ್ಲದೆ ಕಳೆದ ವರ್ಷ ಉಸ್ತುವಾರಿ ಸಚಿವರು, ಸತೀಶ್ ಜಾರಕಿಹೊಳಿ ಹಾಗೂ ಆರ್.ವಿ. ದೇಶಪಾಂಡೆ ಇವರೆಲ್ಲ ಈ ಸೇತುವೆಯನ್ನು ಖುದ್ದು ವೀಕ್ಷಣೆ ಮಾಡಿದ್ದಾರೆ. ಆಗ ಕೊಟ್ಟ ಭರವಸೆಗಳು ಇದುವರೆಗೂ ಈಡೇರಿಲ್ಲ.
ಮಳೆಗಾಲವಾದ್ದರಿಂದ ಈ ಸೇತುವೆಯ ಮೇಲೆ ಓಡಾಡುವುದು ತೀರಾ ಕಷ್ಟದಾಯವಾಗಿದೆ. ಜೋರು ಗಾಳಿ ಮಳೆ ಬಂದರೆ ಸೇತುವೆ ಆ ಕ್ಷಣಕ್ಕೆ ಕುಸಿದು ಬೀಳುತ್ತದೆಯೋ ಎಂಬ ಭಯ ಮೂಡುತ್ತದೆ. ಜನರು ಜೀವ ಕೈಯಲ್ಲಿ ಹಿಡಿದು ಓಡಾಡುವ ಸ್ಥಿತಿಗೆ ಬಂದು ತಲುಪಿದೆ.ಪಾವಿನಕುರ್ವಾ ತೂಗು ಸೇತುವೆ ಅಲ್ಲಿನ ಜನರ ಬದುಕಿಗೆ ಅಗತ್ಯ ಮತ್ತು ಅವಲಂಬಿತವಾಗಿರುವಂತದ್ದು. ಮೀನುಗಾರರು, ಶಾಲಾ ಮಕ್ಕಳು, ಸಾರ್ವಜನಿಕರು ದೋಣಿಯನ್ನು ದಾಟಿ ಕರ್ಕಿ ಗ್ರಾಪಂ ಮುಖಾಂತರ ಹೊನ್ನಾವರಕ್ಕೆ ಬರಬೇಕು. ಸೇತುವೆಯನ್ನು ದಾಟದೇ ಹೊನ್ನಾವರಕ್ಕೆ ಬರಬೇಕು ಎಂದಾದರೆ ೧೨ರಿಂದ ೧೪ ಕಿಮೀ ಕ್ರಮಿಸಬೇಕಾಗುತ್ತದೆ. ತೂಗು ಸೇತುವೆ ಯಾವುದೇ ಸಂದರ್ಭದಲ್ಲಿ ಕುಸಿದು ಬೀಳುವ ಸಾಧ್ಯತೆಗಳಿವೆ ಎಂದು ಲೋಕೋಪಯೋಗಿ ಎಂಜಿನಿಯರ್ ಹೇಳಿದ್ದಾರೆ. ಮನವಿ:
ಈ ಹಿನ್ನೆಲೆ ಕರ್ಕಿ ಗ್ರಾಪಂ ಸದಸ್ಯರು ಮತ್ತು ಸಾರ್ವಜನಿಕರು ಮುರ್ವೇಶ್ವರದಲ್ಲಿ ನಡೆದ ಉಸ್ತುವಾರಿ ಸಚಿವರ ಜನಸ್ಪಂದನಾ ಸಭೆಯಲ್ಲಿ ತಮ್ಮ ಸಮಸ್ಯೆ ಹೇಳಿಕೊಂಡು ಸೇತುವೆ ನಿರ್ಮಿಸಿಕೊಡುವಂತೆ ಊರಿನ ಪ್ರಮುಖರು, ಪಂಚಾಯತ್ ಸದಸ್ಯರುಗಳು ಸೇರಿ ಮನವಿಯನ್ನು ಸಲ್ಲಿಸಿದರು. ಸೇತುವೆ ಬೀಳುವ ಹಂತದಲ್ಲಿದೆ ಎಂಬುದು ನಮ್ಮ ಆತಂಕಕ್ಕೆ ಕಾರಣವಾಗಿದೆ ಎಂದು ಸಚಿವರ ಎದುರು ಸಾರ್ವಜನಿಕರು ತಮ್ಮ ಅಳಲನ್ನು ತೊಡಿಕೊಂಡಿದ್ದರು. ಇದೇ ಸಂದರ್ಭ ಮನವಿ ಸ್ವೀಕರಿಸಿದ್ದ ಉಸ್ತುವಾರಿ ಸಚಿವ ಮಂಕಾಳ ವೈದ್ಯರು ಅಗತ್ಯ ಕ್ರಮ ತೆಗೆದುಕೊಳ್ಳುವ ಭರವಸೆ ನೀಡಿದ್ದರು.ಪಾವಿನಕುರ್ವಾದ ಜನರಿಗೆ ಅಗತ್ಯವಾಗಿ ಬೇಕಾದ ಸೇತುವೆಯನ್ನು ನಿರ್ಮಿಸಲು ಸರ್ಕಾರ ಯಾಕೋ ಮನಸ್ಸನ್ನು ಮಾಡುತ್ತಿಲ್ಲ. ಆದರೆ ಪಾವಿನಕುರ್ವಾದಲ್ಲಿ ರೆಸಾರ್ಟ್ ತಲೆ ಎತ್ತುತ್ತಿವೆ. ಇಲ್ಲಿಗೆ ಜನರು ಬರಬೇಕು, ಇಲ್ಲಿ ಪ್ರವಾಸೋದ್ಯಮ ಹೆಚ್ಚು ಪ್ರಚಲಿತಕ್ಕೆ ಬರಬೇಕು ಎಂದಾದಲ್ಲಿ ಸೇತುವೆಯಂತಹ ಸುಧಾರಣೆಯನ್ನು ಕಾಣಬೇಕಿದೆ.
ಪಾವಿನಕುರ್ವಾದ ಜನರು ತಮ್ಮ ಅಗತ್ಯತೆ ಪೂರೈಸಿಕೊಡಿ ಎಂದು ಬೇಡಿಕೆಯನ್ನ ಸಲ್ಲಿಸುತ್ತಲೇ ಬಂದಿದ್ದಾರೆ. ಆದರೆ ಕೆಲಸ ಮಾತ್ರ ಇದುವರೆಗೂ ಆಗದಿರುವುದು ನಿಜಕ್ಕೂ ದುರಂತವೇ ಸರಿ.