ಕಾರ ಹುಣ್ಣಿಮೆ ಆಚರಣೆಗೆ ಅನ್ನದಾತರ ಸಿದ್ಧತೆ

KannadaprabhaNewsNetwork |  
Published : Jun 10, 2025, 12:08 PM IST
9ಬಿಎಸ್ವಿ02- ಬಸವನಬಾಗೇವಾಡಿಯ ಬಸವೇಶ್ವರ ದೇವಸ್ಥಾನದ ಮುಂಭಾಗ ಕಾರಹುಣ್ಣಿಮೆಯಂಗವಾಗಿ ತಾತ್ಕಾಲಿಕವಾಗಿ ಹಾಕಲಾಗಿರುವ ಅಂಗಡಿಯಲ್ಲಿ ಸೋಮವಾರ ಜಾನುವಾರುಗಳಿಗೆ ಬೇಕಾದ ಸಾಮಗ್ರಿಗಳನ್ನು  ರೈತ ಬಾಂಧವರು ಖರೀದಿಯಲ್ಲಿ ತಲ್ಲೀನರಾಗಿರುವುದು.  | Kannada Prabha

ಸಾರಾಂಶ

ಕನ್ನಡಪ್ರಭ ವಾರ್ತೆ ಬಸವನಬಾಗೇವಾಡಿ ರೈತರ ಸಂಭ್ರಮದ ಹಬ್ಬ ಕಾರ ಹುಣ್ಣಿಮೆಗೆ ರೈತರು ಸಿದ್ಧತೆ ನಡೆಸಿದ್ದಾರೆ. ಈಗಾಗಲೇ ಮುಂಗಾರು ಹಂಗಾಮಿನ ಬಿತ್ತನೆ ಖುಷಿಯಲ್ಲಿರುವ ರೈತರು ಕಾರ ಹುಣ್ಣಮೆಯನ್ನು ಸಾಂಪ್ರದಾಯಿಕವಾಗಿ ಭರ್ಜರಿಯಾಗಿ ಆಚರಣೆ ಮಾಡುವುದು ವಾಡಿಕೆ. ಹಬ್ಬದಲ್ಲಿ ಎತ್ತುಗಳಿಂದ ಕರಿ ಹರಿಯುವುದು ಎಲ್ಲೆಡೆ ಸಂಪ್ರದಾಯ. ಅದಕ್ಕಾಗಿ ಜಾನುವಾರುಗಳನ್ನು ಸಿದ್ಧಗೊಳಿಸುತ್ತಿದ್ದಾರೆ. ಈ ಹಿನ್ನಲೆಯಲ್ಲಿ ಜಾನುವಾರುಗಳ ಅಲಂಕಾರಿಕ ಸಾಮಗ್ರಿಗಳು ಕೂಡ ಮಾರುಕಟ್ಟೆಗೆ ಲಗ್ಗೆ ಇಟ್ಟಿದ್ದು, ರೈತರು ಅಲಂಕಾರಿಕ ವಸ್ತುಗಳನ್ನು ಖರೀದಿಸುತ್ತಿದ್ದಾರೆ.

ಕನ್ನಡಪ್ರಭ ವಾರ್ತೆ ಬಸವನಬಾಗೇವಾಡಿ

ರೈತರ ಸಂಭ್ರಮದ ಹಬ್ಬ ಕಾರ ಹುಣ್ಣಿಮೆಗೆ ರೈತರು ಸಿದ್ಧತೆ ನಡೆಸಿದ್ದಾರೆ. ಈಗಾಗಲೇ ಮುಂಗಾರು ಹಂಗಾಮಿನ ಬಿತ್ತನೆ ಖುಷಿಯಲ್ಲಿರುವ ರೈತರು ಕಾರ ಹುಣ್ಣಮೆಯನ್ನು ಸಾಂಪ್ರದಾಯಿಕವಾಗಿ ಭರ್ಜರಿಯಾಗಿ ಆಚರಣೆ ಮಾಡುವುದು ವಾಡಿಕೆ. ಹಬ್ಬದಲ್ಲಿ ಎತ್ತುಗಳಿಂದ ಕರಿ ಹರಿಯುವುದು ಎಲ್ಲೆಡೆ ಸಂಪ್ರದಾಯ. ಅದಕ್ಕಾಗಿ ಜಾನುವಾರುಗಳನ್ನು ಸಿದ್ಧಗೊಳಿಸುತ್ತಿದ್ದಾರೆ. ಈ ಹಿನ್ನಲೆಯಲ್ಲಿ ಜಾನುವಾರುಗಳ ಅಲಂಕಾರಿಕ ಸಾಮಗ್ರಿಗಳು ಕೂಡ ಮಾರುಕಟ್ಟೆಗೆ ಲಗ್ಗೆ ಇಟ್ಟಿದ್ದು, ರೈತರು ಅಲಂಕಾರಿಕ ವಸ್ತುಗಳನ್ನು ಖರೀದಿಸುತ್ತಿದ್ದಾರೆ.

ಸ್ಥಳೀಯ ಬಸವೇಶ್ವರ ದೇವಸ್ಥಾನ ಮುಂಭಾಗ ಶೆಡ್‌ನಲ್ಲಿ ಸಾಮಗ್ರಿಗಳ ಮಾರಾಟ ನಡೆಯುತ್ತಿದ್ದು, ಪಟ್ಟಣದಲ್ಲಿ ಸೋಮವಾರ ಸಂತೆ ದಿನವಿರುವುದರಿಂದ ರೈತರು ತಮ್ಮ ಜಾನುವಾರುಗಳಿಗೆ ಬೇಕಾದ ವಸ್ತುಗಳ ಖರೀದಿಯಲ್ಲಿ ನಿರತರಾಗಿರುವುದು ಕಂಡುಬಂತು.

ಕೆಲ ರೈತ ಬಾಂಧವರು ತಮ್ಮ ಜೀವನಾಡಿ ಜಾನುವಾರುಗಳ ಹಬ್ಬ ಕಾರಹುಣ್ಣಿಮೆಯನ್ನು ಆಚರಿಸಲು ಭರದ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ರಹುಣ್ಣಿಮೆಯಂದು ಕರಿ ಹರಿಯುವಾಗ ಬಿಳಿ ಎತ್ತು ಮುಂದೆ ಬಂದರೆ ಹಿಂಗಾರಿ ಜೋಳ ಫಲವತ್ತಾಗಿ ಬರುವುದು. ಕರಿ ಎತ್ತು ಬಂದರೆ ಮುಂಗಾರಿ ಜೋಳ ಫಲವತ್ತಾಗಿ ಬರುವುದು ಎಂಬುದು ರೈತರ ನಂಬಿಕೆ. ಹೀಗಾಗಿ, ಹಬ್ಬವನ್ನು ಭರ್ಜರಿಯಾಗಿ ಆಚರಿಸಲು ಮುಂದಾಗಿರುವ ರೈತರು ಮಾರುಕಟ್ಟೆಗೆ ಆಗಮಿಸಿ ತಮ್ಮಿಷ್ಟ ಜೋಡಣೆಗಳನ್ನು ಕೊಳ್ಳುತ್ತಿದ್ದಾರೆ. ವಿವಿಧ ಹಗ್ಗಗಳಾದ ರೇಶ್ಮಿ ಹಗ್ಗ, ನೂಲು ಹಗ್ಗ , ಗರವರಿ ಹಗ್ಗ ₹ 250 ರಿಂದ ಹಿಡಿದು 300 ರವರೆಗೆ ತಲಾ ಒಂದು ಕೆಜಿಗೆ ದರದಂತೆ, ಹಣೆಕಟ್ಟು ಒಂದು ಜೋಡಿಗೆ ₹ 200 ರಿಂದ 400, ಲಡ್ಡ್ ₹ 60 ರಿಂದ 100, ಡಿಸೈನ್ ಬಾರಕೋಲ ₹ 200, ಗೊಂಡೆ ದೊಡ್ಡದ್ದು ₹ ೫೦೦, ಸಣ್ಣದು ₹ ೩೦೦, ಮೂಗುದಾರ ₹ 10 ರಿಂದ 50 ವರೆಗೆ, ಜತ್ತಗಿ ₹ 200 ರಿಂದ 300, ಕೋಡುಗಳ ಹಿತ್ತಾಳೆಯ ಕೊಂಬಣಸು ₹ 1000, ಸ್ಟೀಲ್ ಕೊಂಬಣಸು ₹ 500, ಸಾದಾ ಕೊಂಬಣಸು ₹ 350 ಸೇರಿದಂತೆ ವಿವಿಧ ಜಾನುವಾರುಗಳ ಅಲಂಕಾರಿ ವಸ್ತುಗಳು ಭರ್ಜರಿಯಾಗಿ ಮಾರಾಟವಾಗುತ್ತಿವೆ.

ಕಾರಹುಣ್ಣಿಮೆಯ ವರ್ಷ ಆರಂಭದಲ್ಲಿ ಬರುವ ಉತ್ತಮ ಮಳೆಯಾಗಿರುವುದರಿಂದಾಗಿ ಈಗಾಗಲೇ ಬಿತ್ತನೆ ಕಾರ್ಯ ಎಲ್ಲೆಡೆ ನಡೆಯುತ್ತಿದೆ. ಈಗ ಮಳೆ ವಿರಾಮ ನೀಡಿದ್ದು, ಬಿತ್ತನೆ ಕಾರ್ಯ ಭರದಿಂದ ನಡೆಯುತ್ತಿದೆ. ಬಿತ್ತನೆಯಾದ ನಂತರ ಮಳೆಯಾಗಬಹುದು ಎಂದು ನಿರೀಕ್ಷೆಯಿದೆ. ಈ ಸಲ ಉತ್ತಮ ಮಳೆಯಾಗಿ ಬೆಳೆ ಉತ್ತಮವಾಗಿ ಬರಲೆಂದು ಭಗವಂತನಲ್ಲಿ ಪ್ರಾರ್ಥಿಸುವುದಾಗಿ ಖರೀದಿಯಲ್ಲಿ ತೊಡಗಿದ್ದ ನಂದಿಹಾಳ ಪಿಯು ಗ್ರಾಮದ ರಾಮಣ್ಣ ಔರಸಂಗ, ನಾಗರಾಳ ಗ್ರಾಮದ ರೇವಣಸಿದ್ದ ಪೂಜಾರಿ ಹೇಳಿದರು.

ಇನ್ನು, ಅಲಂಕಾರಿಕ ವಸ್ತುಗಳ ಮಾರಾಟಗಾರ ಕೊಲ್ಹಾರದ ದಾವಲಸಾಬ ಅತ್ತಾರ ಪ್ರತಿಕ್ರಿಯೆ ನೀಡಿದ್ದು, ಮುಂಗಾರು ಆರಂಭದಲ್ಲಿಯೇ ಉತ್ತಮವಾಗಿದೆ. ರೈತರು ಬಿತ್ತನೆಯಲ್ಲಿ ತೊಡಗಿರುವುದರಿಂದ ವ್ಯಾಪಾರ ಅಷ್ಟಾಗಿಲ್ಲ. ಹೊನ್ನುಗ್ಗಿಯ ಮಂಗಳವಾರ ಹೆಚ್ಚು ವ್ಯಾಪಾರ ನಿರೀಕ್ಷೆಯಿದೆ. ನಾವು ಬಸವನಬಾಗೇವಾಡಿ ಸೇರಿದಂತೆ ಪ್ರಮುಖ ಸಂತೆಗಳಲ್ಲಿ ಜಾನುವಾರುಗಳಿಗೆ ಬೇಕಾದ ಸಾಮಗ್ರಿಗಳನ್ನು ವರ್ಷಪೂರ್ತಿ ಮಾರಾಟ ಮಾಡುತ್ತಿದ್ದೇವೆ ಎಂದಿದ್ದಾರೆ.

PREV

Recommended Stories

ಸರ್ಕಾರಿ ಶಾಲೆ ಕುಡಿವ ನೀರಿಗೆ ವಿಷ ಬೆರೆಸಿದ್ದಕ್ಕೆ ಸಿಎಂ ಗರಂ
ಡಾ.ರಾಜ್‌ಕುಮಾರ್‌ರ ನೆಚ್ಚಿನ ಸಹೋದರಿ ನಾಗಮ್ಮ ನಿಧನ