ಕಳಪೆ ಸೋಯಾಬಿನ್‌ ಬೀಜ ವಿತರಿಸಿದ ಸರ್ಕಾರ, ರೈತರ ಆಕ್ರೋಶ

KannadaprabhaNewsNetwork |  
Published : Jun 10, 2025, 12:01 PM IST
ರೈತರ ಜಮೀನುಗಳಿಗೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು. | Kannada Prabha

ಸಾರಾಂಶ

ಕೃಷಿ ಇಲಾಖೆಯ ಕೆಲ ರೈತ ಸಂಪರ್ಕ ಕೇಂದ್ರಗಳ ಮೂಲಕವೇ ರೈತರಿಗೆ ವಿತರಿಸಿದ ಸೋಯಾಬಿನ್ ಬಿತ್ತನೆ ಬೀಜದ ಗುಣಮಟ್ಟದ ಕುರಿತು ರೈತರಲ್ಲಿ ಆತಂಕ ಶುರುವಾಗಿದೆ. ಬಿತ್ತನೆ ಮಾಡಿ 10 ದಿನ ಕಳೆದರೂ ಕರ್ಜಗಿ ಹೋಬಳಿಯ ಕೆಲವೆಡೆ ಬೀಜಗಳು ಮೊಳಕೆಯೊಡೆಯದ ಪರಿಣಾಮ ರೈತರು ಚಿಂತೆಗೀಡಾಗಿದ್ದಾರೆ.

ನಾರಾಯಣ ಹೆಗಡೆ

ಹಾವೇರಿ: ಬಿತ್ತನೆ ಮಾಡಿ ಎರಡು ವಾರ ಆಗಾಕ್‌ ಬಂತ್ರಿ, ಇನ್ನೂ ಮೊಳಕೆ ಒಡೆದಿಲ್ರಿ, ಮಳೆ ಚಲೋ ಆಗೈತಿ ಅಂತ ಬಿತ್ತನೆ ಮಾಡಿದ್ರ ಬೀಜ ಕೈಕೊಟ್ಟೈತಿ. ಕಳಪೆ ಬೀಜ ನೀಡಿರೋ ಶಂಕೆ ಐತ್ರಿ, ಇದಕ್ಕೆ ಸರ್ಕಾರ ಏನಾರ ಕ್ರಮ ತಗೊಂಡು ಪರಿಹಾರ ನೀಡಬೇಕ್ರಿ...

ಸೋಯಾಬಿನ್‌ ಬೀಜ ಬಿತ್ತಿ ಇದುವರೆಗೂ ಮೊಳಕೆಯೊಡೆಯದೇ ಆತಂಕದಲ್ಲಿರುವ ತಾಲೂಕಿನ ಕರ್ಜಗಿ ಹೋಬಳಿಯ ನೂರಾರು ರೈತರ ಮಾತಿದು.

ಕೃಷಿ ಇಲಾಖೆಯ ಕೆಲ ರೈತ ಸಂಪರ್ಕ ಕೇಂದ್ರಗಳ ಮೂಲಕವೇ ರೈತರಿಗೆ ವಿತರಿಸಿದ ಸೋಯಾಬಿನ್ ಬಿತ್ತನೆ ಬೀಜದ ಗುಣಮಟ್ಟದ ಕುರಿತು ರೈತರಲ್ಲಿ ಆತಂಕ ಶುರುವಾಗಿದೆ. ಬಿತ್ತನೆ ಮಾಡಿ 10 ದಿನ ಕಳೆದರೂ ಕರ್ಜಗಿ ಹೋಬಳಿಯ ಕೆಲವೆಡೆ ಬೀಜಗಳು ಮೊಳಕೆಯೊಡೆಯದ ಪರಿಣಾಮ ರೈತರು ಚಿಂತೆಗೀಡಾಗಿದ್ದಾರೆ. ಜಿಲ್ಲೆಯಲ್ಲಿ ಈಗಾಗಲೇ ಶೇ. 58ಕ್ಕಿಂತ ಹೆಚ್ಚಿನ ಪ್ರಮಾಣದ ಬಿತ್ತನೆ ಪೂರ್ಣಗೊಂಡಿದೆ. ಆದರೆ ಕೃಷಿ ಇಲಾಖೆಯ ಆರ್‌ಎಸ್‌ಕೆ ಮೂಲಕವೇ ನೀಡಿದ್ದ ವರುಣ ಕಂಪನಿಯ ಸೋಯಾಬಿನ್ ಬಿತ್ತನೆ ಮಾಡಿ ಹತ್ತು ದಿನವಾದರೂ ಮೊಳಕೆಯೊಡೆದಿಲ್ಲ. ಇದಕ್ಕೆ ಕೃಷಿ ಇಲಾಖೆ ನಿರ್ಲಕ್ಷ್ಯವೇ ಕಾರಣ ಎಂದು ರೈತರು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವರುಣಾ ಹೈಬ್ರಿಡ್ ಸೀಡ್ಸ್: ಹಾವೇರಿ ತಾಲೂಕು ಕರ್ಜಗಿ ಹೋಬಳಿಯಲ್ಲಿ ಬಳ್ಳಾರಿ ಮೂಲದ ವರುಣಾ ಹೈಬ್ರಿಡ್ ಸೀಡ್ಸ್ ಕಂಪನಿಯ ಸೋಯಾಬಿನ್ ಬಿತ್ತನೆ ಬೀಜಗಳು ಹೆಚ್ಚಾಗಿ ಮಾರಾಟವಾಗಿವೆ. ಈ ಭಾಗದ ಸುತ್ತಮುತ್ತಲಿನ ಗ್ರಾಮದ ಹತ್ತಾರು ಗ್ರಾಮಗಳ ರೈತರಿಗೆ ಬೀಜಗಳನ್ನು ವಿತರಿಸಿದ್ದು, ಅಂದಾಜು 600ಕ್ಕೂ ಹೆಚ್ಚಿನ ಬ್ಯಾಗ್‌ಗಳು ಮಾರಾಟವಾಗಿದ್ದು, 450 ಎಕರೆಗೂ ಹೆಚ್ಚು ಭೂಮಿಯಲ್ಲಿ ಸೋಯಾಬಿನ್ ಬಿತ್ತನೆಯಾಗಿದೆ.ಸಾಮಾನ್ಯವಾಗಿ ಸೋಯಾಬಿನ್ ಬಿತ್ತನೆ ಮಾಡಿದ 5- 6 ದಿನದಲ್ಲಿ ಮೊಳಕೆಯೊಡೆಯಬೇಕು. ಆದರೆ 10 ದಿನ ಕಳೆದರೂ ಬೀಜ ಮೊಳಕೆಯೊಡೆದಿಲ್ಲ. ಶೇ. 7ರಿಂದ 8ರಷ್ಟು ಬೀಜ ಮಾತ್ರ ಮೊಳಕೆ ಬಂದಿದ್ದು, ಇದು ರೈತರ ಆಕ್ರೋಶಕ್ಕೆ ಕಾರಣವಾಗಿದೆ. ಇನ್ನು ರೈತರಲ್ಲಿ ಜಾಗೃತಿ ಮೂಡಿಸಬೇಕಾದ ಕೃಷಿ ಇಲಾಖೆಯೇ ಮೋಸಕ್ಕೆ ಒಳಗಾಯಿತೇ? ಎಂಬ ಅನುಮಾನ ಮೂಡುತ್ತಿದೆ. ಇದೀಗ ರೈತರು ಖಾಸಗಿ ಕಂಪನಿ ನಂಬಬೇಕೋ ಅಥವಾ ಕೃಷಿ ಇಲಾಖೆ ನಂಬಬೇಕೋ ಎನ್ನುವ ಜಿಜ್ಞಾಸೆಗೆ ಬಿದ್ದಿದ್ದಾರೆ.ತಾಲೂಕಿನ ಕರ್ಜಗಿ ಹೋಬಳಿ ಸುತ್ತಮುತ್ತ ಬೀಜ ಮೊಳಕೆಯಾಗದ ಪ್ರದೇಶಗಳಿಗೆ ಕೃಷಿ ಇಲಾಖೆಯ ಅಧಿಕಾರಿಗಳು ಹಾಗೂ ವರುಣಾ ಕಂಪನಿಯ ಪ್ರತಿನಿಧಿಗಳು ಭೇಟಿ ನೀಡಿ ಪರಿಶೀಲಿಸುತ್ತಿದ್ದಾರೆ. ಕೃಷಿ ಇಲಾಖೆ ಅಧಿಕಾರಿಗಳು ಈ ಕುರಿತು ಜಂಟಿ ಕೃಷಿ ನಿರ್ದೇಶಕರಿಗೆ ವರದಿ ಸಲ್ಲಿಸಿದ್ದಾರೆ.

ಸರ್ಕಾರದಿಂದ ಕಳಪೆ ಬೀಜ: ಕೃಷಿ ಇಲಾಖೆಯ ರೈತ ಸಂಪರ್ಕ ಕೇಂದ್ರದಿಂದ ಪೂರೈಸಿದ ಸೋಯಾಬಿನ್ ಬೀಜಗಳು ಸಂಪೂರ್ಣ ಕಳಪೆಯಾಗಿವೆ. ಸಾವಿರಾರು ರು. ಖರ್ಚು ಮಾಡಿ ಬಿತ್ತನೆ ಮಾಡಿದ ರೈತರು ಬೀಜ ಮೊಳಕೆಯೊಡೆಯದ ಪರಿಣಾಮ ಸಂಕಷ್ಟಕ್ಕೆ ಸಿಲುಕಿದ್ದಾರೆ. ಕೃಷಿ ಇಲಾಖೆ ಹಾಗೂ ವರುಣಾ ಕಂಪನಿಯವರು ಪ್ರತಿ ಎಕರೆಗೆ ₹40 ಸಾವಿರ ಪರಿಹಾರ ನೀಡಬೇಕೆಂದು ರೈತರು ಆಗ್ರಹಿಸಿದ್ದಾರೆ.

ಕಂಪನಿಯವರ ಭರವಸೆ: ವರುಣಾ ಹೈಬ್ರಿಡ್ ಸೀಡ್ಸ್ ಕಂಪನಿ ಹಲವು ವರ್ಷಗಳಿಂದ ಬೀಜಗಳನ್ನು ಇಲಾಖೆಗೆ ಪೂರೈಸುತ್ತಿದೆ. ಈ ಬಾರಿ ಕರ್ಜಗಿ ಭಾಗದಲ್ಲಿ ಕೆಲವೆಡೆ ಬೀಜ ಮೊಳಕೆಯಾಗದ ಆರೋಪ ಕೇಳಿ ಬಂದಿದ್ದು, ನಮ್ಮ ತಂಡ ತಪಾಸಣೆ ಮಾಡಿದೆ. ಪರ್ಯಾಯವಾಗಿ ಬೀಜ ಕೊಡುವುದಾಗಿ ಕಂಪನಿಯವರು ಭರವಸೆ ನೀಡಿದ್ದಾರೆ ಎಂದು ಸಹಾಯಕ ಕೃಷಿ ನಿರ್ದೇಶಕ ವೀರಭದ್ರಪ್ಪ ಬಿ.ಎಚ್. ತಿಳಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರೈಲ್ವೆ ಪರೀಕ್ಷೆಯಲ್ಲಿ ಮತ್ತೆ ಕನ್ನಡಕ್ಕೆ ಕೊಕ್
ಓಡಿ ಹೋದ ಹೇಡಿ ಎನಿಸಿಕೊಳ್ಳುವುದಿಲ್ಲ. ಅಲ್ಲೇ ರಾಜಕೀಯ ಅಸ್ತಿತ್ವ ಕಂಡುಕೊಳ್ಳುತ್ತೇನೆ : ನಿಖಿಲ್‌