ದೇವಿಯ ಉತ್ಸವ ಮೂರ್ತಿಯ ಸುತ್ತು ಸೇವೆ । ಬ್ರಹ್ಮರಥದಲ್ಲಿ ಅಲಂಕೃತ ದೇವಿಯ ಉತ್ಸವ ಮೂರ್ತಿ ವಿರಾಜಮಾನ । ವಿವಿಧ ಸೇವೆ, ಪೂಜೆ
ತಾಲೂಕಿನ ಹೊರನಾಡಿನ ಆದಿಶಕ್ತ್ಯಾತ್ಮಕ ಶ್ರೀ ಅನ್ನಪೂರ್ಣೇಶ್ವರಿ ಅಮ್ಮನ ಜಾತ್ರಾ ಮಹೋತ್ಸವ ಅಂಗವಾಗಿ ಭಾನುವಾರ ಮಹಾ ರಥೋತ್ಸವ ವಿಜೃಂಭಣೆಯಿಂದ ನೆರವೇರಿತು.
ಭಾನುವಾರ ಬೆಳಿಗ್ಗೆ ಪೂಜೆಯ ನಂತರ ಉತ್ಸವ ಮೂರ್ತಿಯ ಸುತ್ತು ಸೇವೆ ನಡೆದ ಬಳಿಕ ಸ್ತುತಿ ಪಾಠಕರು ಸ್ತುತಿ ಘೋಷಗಳನ್ನು ಪಟಿಸುತ್ತ, ಛತ್ರಿ ಛಾಮರ ಮಂಗಳವಾದ್ಯಗಳೊಂದಿಗೆ ಹೂವಿನ ಅಲಂಕಾರದೊಂದಿಗೆ ಸಿಂಗರಿಸಿ ಶ್ರೀ ದೇವರ ಉತ್ಸವ ಮೂರ್ತಿಯನ್ನು ಹೊತ್ತುಕೊಂಡು ಸುಂದರವಾಗಿ ಅಲಂಕರಿಸಿದ ಬ್ರಹ್ಮರಥದ ಬಳಿ ದೇವರನ್ನು ತರಲಾಯಿತು. ರಥದ ಬಳಿ ಬಂದ ಜಗನ್ಮಾತೆ ಅನ್ನಪೂರ್ಣೇಶ್ವರಿಯನ್ನು ಭವ್ಯ ರಥದಲ್ಲಿ ಕುಳ್ಳಿರಿಸಿ ಪೂಜೆಯನ್ನು ಮಾಡಲಾಯಿತು.ಶ್ರೀ ಕ್ಷೇತ್ರ ಹೊರನಾಡಿನ ಧರ್ಮಕರ್ತ ಡಾ.ಜಿ.ಭೀಮೇಶ್ವರ ಜೋಷಿ ಮಾತನಾಡಿ, ವರ್ಷವಿಡಿ ಗರ್ಭಗುಡಿಯಲ್ಲಿರುವ ದೇವಿಯು ಬರುವಂತ ಭಕ್ತರಿಗೆ ದರ್ಶನ ಕೊಡುತ್ತಾಳೆ. ರಥೋತ್ಸವದ ವಿಶೇಷ ದಿನದಲ್ಲಿ ಜಗನ್ಮಾತೆಯು ಹೊರಬಂದು ದಿವ್ಯ ರಥದಲ್ಲಿ ಕುಳಿತು ಭಕ್ತರಿಗೆ ದರ್ಶನ ನೀಡುವುದೇ ರಥೋತ್ಸವದ ವಿಶೇಷವಾಗಿದೆ ಎಂದು ತಿಳಿಸಿದರು.
ರಥೋತ್ಸವಗಳಿಗೂ ಮಾನವ ಜೀವನದ ರಥಕ್ಕೂ ಒಂದಕ್ಕೊಂದು ಸಂಭಂಧವಿದೆ. ಜೀವನ, ಬದುಕು ಎಂಬ ರಥದಲ್ಲಿ ಸಂಸಾರದ ಒಳಗಿರುವ ಎಲ್ಲರೂ ಏಕ ಮನಸ್ಸಿನಿಂದ ರಥವನು ಎಳೆದಾಗ ಹೇಗೆ ನಿರ್ದಿಷ್ಟ ಗುರಿ ತಲುಪಲು ಸಾಧ್ಯವೋ ಹಾಗೆಯೇ ದೇವರ ರಥವನ್ನು ನಿಶ್ಕಲ್ಮಷದಿಂದ ಭಕ್ತಿಭಾವದಿಂದ ಎಳೆದಲ್ಲಿ ಒಳಗಿನ ಪರಮಾತ್ಮನನ್ನು ಕಾಣಲು ಸಾಧ್ಯ ಎಂದರು.
ರಾಜಲಕ್ಷೀ ಬಿ. ಜೋಷಿ ಮತ್ತು ಕುಟುಂಬ ವರ್ಗದವರು ಮಹಿಳೆಯರಿಗೆ ಬಳೆ ಮತ್ತು ರವಿಕೆ ಕಣವನ್ನು ವಿತರಿಸಿದರು.
ಈ ಸಂದರ್ಭದಲ್ಲಿ ಅಂಕರಕಣ ಗಣಪತಿ ದೇವಾಲಯದ ಧರ್ಮಕರ್ತ ರಾಮನಾರಾಯಣ ಜೋಷಿ, ರಾಜಗೋಪಾಲ ಜೋಷಿ, ಗಿರೀಜಾ ಶಂಕರ್ ಜೋಷಿ ಕುಟುಂಬ ಪಾಲ್ಗೊಂಡು ರಥೋತ್ಸವವನ್ನು ಯಶಸ್ವಿಗೊಳಿಸಿದರು.