ಮಹ್ಮದರಫಿ ಕಲೇಗಾರ
ಅಣ್ಣಿಗೇರಿ: ಗುಡುಗು, ಸಿಡಿಲಿನ ಆರ್ಭಟದೊಂದಿಗೆ ಬುಧವಾರ ರಾತ್ರಿಯಿಡೀ ಸುರಿದ ಧಾರಾಕಾರ ಮಳೆಗೆ ಪಟ್ಟಣವು ಅಕ್ಷರಶಃ ನಲುಗಿ ಹೋಗಿದೆ. ಪಟ್ಟಣದ ಹಲವು ಪ್ರದೇಶಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಸಿದೆ. ಹಲವು ಜನರು ರಾತ್ರಿಯಿಡಿ ಭಯದಲ್ಲೇ ಕಾಲ ಕಳೆಯುವಂತಾಯಿತು. ಜಲಾವೃತವಾದ ಬಡಾವಣೆಗಳಿಗೆ ಅಧಿಕಾರಿಗಳು ಬೋಟ್ ಮೂಲಕ ತೆರಳಿ ಪರಿಶೀಲನೆ ನಡೆಸಿದರು.ಮಳೆಯಿಂದಾಗಿ ಅಣ್ಣಿಗೇರಿ ಪಟ್ಟಣದ ಅಮೃತನಗರ, ಸುರಕೋಡ ಬಡಾವಣೆ, ರಾಜರಾಜೇಶ್ವರಿ ಕಾಲನಿ, ಅಂಬಿಕಾನಗರ, ಅಂಬೇಡ್ಕರ್ ನಗರ ಭಾಗಗಳಲ್ಲಿ 30ಕ್ಕೂ ಅಧಿಕ ಮನೆಗಳಿಗೆ ಮಳೆನೀರು ನುಗ್ಗಿದೆ. ಮನೆಗೆ ನುಗ್ಗಿದ ನೀರನ್ನು ಹೊರಹಾಕುವಲ್ಲಿ ನಿವಾಸಿಗಳು ಹರಸಾಹಸ ಪಡುವಂತಾಯಿತು.
8 ಮನೆ ಹಾನಿ, 7 ಕುರಿಗಳ ಸಾವು: ಭಾರಿ ಗುಡುಗು, ಸಿಡಿಲಿನ ಅರ್ಭಟದೊಂದಿಗೆ ಸುರಿದ ಮಳೆಯಿಂದಾಗಿ ಪಟ್ಟಣದ 8 ಮನೆಗಳಿಗೆ ಭಾಗಶಃ ಹಾನಿಯಾಗಿದೆ. ಪಟ್ಟಣದ ಹೊರ ವಲಯದಲ್ಲಿದ್ದ ಕುರಿಗಾಯಿ ಮಲ್ಲಪ್ಪ ಬೆಳ್ಳಿಕೊಪ್ಪ ಅವರಿಗೆ ಸೇರಿದ 7 ಕುರಿಗಳು ಸಿಡಿಲು ಬಡಿದು ಮೃತಪಟ್ಟಿವೆ.ಕೊಚ್ಚಿ ಹೋದ ಸಂಪರ್ಕ ಸೇತುವೆ: ತಾಲೂಕಿನ ಸೈದಾಪುರ ಮತ್ತು ಹೊಸಳ್ಳಿ ಸಂಪರ್ಕಿಸುವ ಹೊರೆಹಳ್ಳದ ಕಿರುಸೇತುವೆ ಸಂಪೂರ್ಣವಾಗಿ ಕೊಚ್ಚಿಹೋಗಿದ್ದರೆ, ಹಳ್ಳಿಕೇರಿ - ಇಬ್ರಾಹಿಂಪುರ ಸಂಪರ್ಕ ರಸ್ತೆ ಭಾಗಶಃ ಹಾನಿಯಾಗಿದೆ. ಅದೇ ರೀತಿ ತಾಲೂಕಿನ ಹಲವು ಗ್ರಾಮಗಳಿಗೆ ಸಂಪರ್ಕಿಸುವ ರಸ್ತೆಗಳು ಮಳೆಯಿಂದಾಗಿ ತೀವ್ರ ಹಾನಿಯಾಗಿದೆ. ಪಟ್ಟಣದ ಬಸ್ ನಿಲ್ದಾಣದಿಂದ ಅಣ್ಣಿಗೇರಿ ಕ್ರಾಸ್‌ನ ವರೆಗಿನ ರಸ್ತೆಯ ಡಾಂಬರ್ ಕಿತ್ತುಹೋಗಿ ರಸ್ತೆಯುದ್ದಕ್ಕೂ ಗುಂಡಿಗಳು ಬಿದ್ದು ವಾಹನ ಸಂಚರಿಸದಂತಹ ಪರಿಸ್ಥಿತಿ ನಿರ್ಮಾಣವಾಗಿದೆ.ಕೆರೆಯಂತಾದ ಬಡಾವಣೆಗಳು: ಪಟ್ಟಣದ ಅಮೃತ ನಗರ, ಸುರಕೋಡ ಸೇರಿದಂತೆ ಹಲವು ಬಡಾವಣೆಗಳು ರಾತ್ರಿ ಕಳೆದು ಬೆಳಗಾಗುತ್ತಿದ್ದಂತೆ ಎಲ್ಲಿ ನೋಡಿದರಲ್ಲಿ ಮಳೆಯ ನೀರು ನಿಂತು ಕೆರೆಯಂತೆ ಮಾರ್ಪಾಟಾಗಿದ್ದವು. ಇದರಿಂದ ನಿವಾಸಿಗಳಿಗೆ ದಿಕ್ಕುತೋಚದಂತಾಯಿತು.
ಬೋಟ್ ಮೂಲಕ ತೆರಳಿ ಪರಿಶೀಲನೆ: ಮಳೆ ನೀರು ನುಗ್ಗಿ ತೊಂದರೆಗೊಳಗಾದ ಬಡಾವಣೆಗಳಿಗೆ ಸ್ವತಃ ತಹಸೀಲ್ದಾರ್ ಮಂಜುನಾಥ ದಾಸಪ್ಪನವರ, ಪುರಸಭೆ ಮುಖ್ಯಾಧಿಕಾರಿ ವೈ.ಜಿ. ಗದ್ದಿಗೌಡರ, ಅಗ್ನಿಶಾಮಕದಳದ ಸಿಬ್ಬಂದಿಯೊಂದಿಗೆ ಬೋಟ್ ಮೂಲಕ ತೆರಳಿ ಪರಿಶೀಲನೆ ನಡೆಸಿದರು. ಮಳೆನೀರು ನುಗ್ಗಿದ ಪ್ರದೇಶಗಳಲ್ಲಿರುವ ನಿವಾಸಿಗಳನ್ನು ಅಗತ್ಯವಿದ್ದರೆ ಬೇರೆಡೆ ಸ್ಥಳಾಂತರಿಸಲು ಬೇಕಾದ ವ್ಯವಸ್ಥೆ ಮಾಡಿಕೊಂಡಿರುವ ತಿಳಿಸಿ ಧೈರ್ಯ ತುಂಬಿದರು. ಈ ವರೆಗೆ ಯಾರನ್ನೂ ಮನೆಯಿಂದ ಬೇರೆಡೆ ಸ್ಥಳಾಂತರಿಸಿಲ್ಲ ಎಂದು ತಹಸೀಲ್ದಾರ್ ಮಂಜುನಾಥ ದಾಸಪ್ಪನವರ ''''ಕನ್ನಡಪ್ರಭ''''ಕ್ಕೆ ಮಾಹಿತಿ ನೀಡಿದರು.