ಹುಬ್ಬಳ್ಳಿ: ಕರಡಿ ದಾಳಿಯಿಂದ ತೀವ್ರವಾಗಿ ಗಾಯಗೊಂಡು ಸಾವು- ಬದುಕಿನ ಮಧ್ಯೆ ಹೋರಾಡುತ್ತಿದ್ದ ರೈತನೋರ್ವನಿಗೆ ಇಲ್ಲಿನ ಬಾಲಾಜಿ ಆಸ್ಪತ್ರೆ ವೈದ್ಯರ ತಂಡವು ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಿ, ಮರುಜನ್ಮ ನೀಡಿದೆ.
ಉತ್ತರ ಕನ್ನಡ ಜಿಲ್ಲೆ ಜೋಯಿಡಾ ತಾಲೂಕಿನ ಡೇರಿಯಾ ಗ್ರಾಮದ ಬಳಿ ಕಳೆದ ಆಗಸ್ಟ್ 18ರಂದು ಶಾಂತ ಹನುಮಂತ ಡೇರೆಕರ್ ಎಂಬ ರೈತ ಕೃಷಿ ಚಟುವಟಿಕೆಯಲ್ಲಿ ನಿರತನಾಗಿದ್ದಾಗ ಮೂರು ಕರಡಿಗಳು ಏಕಕಾಲಕ್ಕೆ ದಾಳಿ ನಡೆಸಿದ್ದವು.ದಾಳಿಯಿಂದ ಅವರ ಮುಖ, ತಲೆ, ಕುತ್ತಿಗೆ, ಎದೆ, ಬೆನ್ನು, ಜನನಾಂಗದ ಪ್ರದೇಶ, ಬಲಗೈ ಮೇಲ್ಭಾಗ ಮತ್ತು ಬಲಗಾಲಿನಲ್ಲಿ ಗಂಭೀರ ಗಾಯಗಳಿದ್ದವು. ದವಡೆಯ ಮೂಳೆ ಮುರಿದಿತ್ತು. ಕುಂಬಾರವಾಡದ ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ಜೋಯಿಡಾದ ತಾಲೂಕು ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ಬಾಲಾಜಿ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದರು.
ಆಸ್ಪತ್ರೆಗೆ ದಾಖಲಾದ ವೇಳೆ ಅವರ ಸ್ಥಿತಿ ತುಂಬಾ ಚಿಂತಾಜನಕವಾಗಿತ್ತು. ಬಾಲಾಜಿ ಆಸ್ಪತ್ರೆಯ ತಜ್ಞ ವೈದ್ಯರ ತಂಡ ಡಾ. ಕ್ರಾಂತಿಕಿರಣ ನೇತೃತ್ವದಲ್ಲಿ ಡಾ. ನೀಲಕಮಲ್ ಹಳ್ಳೂರ, ಡಾ. ರವಿ ನೇಮಗೌಡ, ಡಾ.ವಿನಯ್ ಅರಕಂಚಿ ಅವರು ಸರಿಸುಮಾರು 8 ಗಂಟೆ ಶಸ್ತ್ರ ಚಿಕಿತ್ಸೆ ನಡೆಸುವಲ್ಲಿ ಯಶಸ್ವಿಯಾಯಿತು. 2 ವಾರ ತೀವ್ರ ನಿಗಾ ಘಟಕದಲ್ಲಿರಿಸಿ ಆರೈಕೆ ಮಾಡಿ ಇನ್ನಿತರ ಶಸ್ತ್ರ ಚಿಕಿತ್ಸೆ ನಡೆಸಿ ವ್ಯಕ್ತಿಗೆ ಮರುಜನ್ಮ ನೀಡಿದ್ದಾರೆ.ಈ ಕುರಿತು ಬಾಲಾಜಿ ಆಸ್ಪತ್ರೆ ಚೇರಮನ್ ಡಾ. ಕ್ರಾಂತಿಕಿರಣ ಮಾತನಾಡಿ, ಇತರ ಪ್ರಾಣಿಗಳಿಗಿಂತ ಕರಡಿ ದಾಳಿ ಅತ್ಯಂತ ತೀವ್ರತರವಾಗಿರುತ್ತದೆ. ಕರಡಿಯು ತನ್ನ 4 ಇಂಚುಗಳಷ್ಟು ಉದ್ದದ ಉಗುರುಗಳಿಂದ ಒಮ್ಮೆ ಮುಖಕ್ಕೆ ಪರಚಿತು ಎಂದರೆ ಮೆದುಳು, ದವಡೆ ಕಿತ್ತು ಬರುತ್ತವೆ ಎಂಬ ಮಾತಿದೆ. ಅದರಂತೆ ರೈತ ಶಾಂತ ಡೇರೆಕರ್ ಅವರಿಗೂ ಹಲವೆಡೆ ತೀವ್ರ ಗಾಯಗಳಾಗಿದ್ದವು. ಕರಡಿ ಬಾಯಿಯಲ್ಲಿನ ಹಾನಿಕಾರಕ ಬ್ಯಾಕ್ಟೀರಿಯಾದಿಂದ ಗಾಯಗಳು ಸೋಂಕಿಗೆ ತುತ್ತಾಗುವ ಅಪಾಯವಿತ್ತು. ಅವೆಲ್ಲವನ್ನು ತೊಡೆದು ಹಾಕಿ ಅವರ ಮುಖಕ್ಕೆ ಮೃದು ಚರ್ಮ ಮತ್ತು ಟಿಶ್ಯೂ (ಮೃದು ಅಂಗಾಂಶ) ಅಳವಡಿಸಲು ಆತನ ತೊಡೆಯ ಚರ್ಮ ಬಳಕೆ ಮಾಡಿಕೊಂಡಿದ್ದು, ಯಶಸ್ವಿ ಪ್ಲಾಸ್ಟಿಕ್ ಸರ್ಜರಿ ಕೂಡ ಮಾಡಲಾಗಿದೆ ಎಂದು ತಿಳಿಸಿದರು.45 ದಿನಗಳ ಕಾಲ ಆಸ್ಪತ್ರೆಯಲ್ಲಿ ಆರೈಕೆಯಲ್ಲಿ ಸಂಪೂರ್ಣ ಚೇತರಿಸಿಕೊಂಡ ಅವರನ್ನು ಇತ್ತೀಚಿಗಷ್ಟೇ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ. ಮರು ವೈದ್ಯಕೀಯ ತಪಾಸಣೆ ಮುಂದುವರೆಸಲಾಗಿದೆ. ರೈತನ ಶಸ್ತ್ರಚಿಕಿತ್ಸೆಗೆ ₹14 ಲಕ್ಷಕ್ಕೂ ಅಧಿಕ ಹಣ ಖರ್ಚಾಗಿದ್ದು, ಇದನ್ನು ಅರಣ್ಯ ಇಲಾಖೆ ಅಧಿಕಾರಿಗಳೇ ನೋಡಿಕೊಂಡಿದ್ದಾರೆ. ಶಸ್ತ್ರಚಿಕಿತ್ಸೆ ಬಳಿಕ 3 ದಿನ ಅರಣ್ಯ ಇಲಾಖೆ ಅಧಿಕಾರಿಗಳು ಆಸ್ಪತ್ರೆಯಲ್ಲಿ ಇದ್ದು ಯೋಗಕ್ಷೇಮ ವಿಚಾರಿಸಿಕೊಂಡಿದ್ದಾರೆ. ಗಾಯಾಳುವಿಗೆ ಮುಂದಿನ ಉಪಜೀವನಕ್ಕೆ ಅಗತ್ಯವಾದ ಹಣಕಾಸಿನ ನೆರವು ನೀಡುವ ಭರವಸೆ ನೀಡಿದ್ದಾರೆ ಎಂದು ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ವೈದ್ಯರಾದ ಡಾ. ರವಿ ನೇಮಗೌಡ, ಡಾ. ವಿನಯ್ ಅರಕಂಚಿ, ಗಾಯಾಳು ರೈತ ಶಾಂತ ಹನುಮಂತ ಡೇರೆಕರ್ ಸೇರಿದಂತೆ ಹಲವರಿದ್ದರು.