- ಬೀರೂರು ಸಮೀಪದ ಯರೇಹಳ್ಳಿ ಸಹಿಪ್ರಾ ಶಾಲೆ ಶಾಲಾ ವಾರ್ಷಿಕೋತ್ಸವ ಸಮಾರಂಭ
ವಿದ್ಯಾರ್ಥಿಗಳಲ್ಲಿ ಸಂಕುಚಿತ ಮನೋಭಾವ ಹೋಗಲಾಡಿಸಲು ಶಾಲಾ ವಾರ್ಷಿಕೋತ್ಸವ ಉತ್ತಮವಾದ ವೇದಿಕೆಯಾಗಿದೆ ಎಂದು ಬಿಜೆಪಿ ಮುಖಂಡ ಜಿಗಣೇಹಳ್ಳಿ ನೀಲಕಂಠಪ್ಪ ಹೇಳಿದರು.
ಯರೇಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಾರ್ಷಿಕೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ಪೋಷಕರು ಖಾಸಗಿ ಶಾಲೆಗಳ ವ್ಯಾಮೋಹ ಬಿಟ್ಟು, ಸರ್ಕಾರಿ ಶಾಲೆಗಳಲ್ಲಿಯೂ ಉತ್ತಮ ಶಿಕ್ಷಕರಿದ್ದು, ಮಕ್ಕಳಿಗೆ ಉತ್ತಮ ಶಿಕ್ಷಣ ಸಿಗುತ್ತದೆ. ಇದನ್ನು ಪ್ರತಿಯೊಬ್ಬರು ಅರಿತುಕೊಳ್ಳುವ ಮೂಲಕ ಸರ್ಕಾರಿ ಶಾಲೆಗಳ ಉಳಿವಿಗೆ ಶ್ರಮಿಸಬೇಕು. ಜೊತೆಗೆ ಸರ್ಕಾರಿ ಶಾಲೆಯಲ್ಲಿ ಓದಿದ ಅನೇಕ ಗಣ್ಯರು ಇಂದು ಉನ್ನತ ಸ್ಥಾನಗಳಲ್ಲಿ ಬೆಳಗುತ್ತಿದ್ದಾರೆ. ಇದಕ್ಕೆ ಸ್ಪೂರ್ತಿ ಎಂಬಂತೆ ಕಡೂರು ತಾಲೂಕಿನ ಚಿಕ್ಕಪಟ್ಟಣಗೆರೆ ಗ್ರಾಮದ ಸುಪ್ರೀಂ ಕೋರ್ಟ್ ನ್ಯಾಯಾಧೀಶರಾಗಿ ನಿವೃತ್ತಿ ಹೊಂದಿರುವ ದತ್ತು ರವರು ಇಂದು ನಮಗೆ ಕೈಗನ್ನಡಿಯಂತಿದ್ದಾರೆ ಎಂದರು.ಶಿಕ್ಷಣ ಮುಂದಿನ ಉನ್ನತ ವರ್ಗಕ್ಕೆ ವಿದ್ಯಾರ್ಥಿಗಳನ್ನು ಸಿದ್ಧಪಡಿಸುವುದಲ್ಲ. ಅದು ಅವರ ಜೀವನ ಸಿದ್ಧಪಡಿಸುವ ಪ್ರಕ್ರಿಯೆ . ಶಿಕ್ಷಕರು ಮತ್ತು ಪೋಷಕರು ವಿದ್ಯಾರ್ಥಿಗಳ ವ್ಯಕ್ತಿತ್ವ ರಚನೆಗೆ ಒತ್ತು ನೀಡಬೇಕು. ಜೊತೆಗೆ ಶಾಲೆ ಬೆಳವಣಿಗೆಗೆ ಪೋಷಕರು ಸಂಪೂರ್ಣ ಸಹಕಾರ ನೀಡಬೇಕು ಎಂದರು.
ಜಿಲ್ಲಾ ಶಿಕ್ಷಕರ ಸಂಘದ ಸಂಘಟನಾ ಕಾರ್ಯದರ್ಶಿ ಮೈಲಾರಪ್ಪ ಮಾತನಾಡಿ, ಎಲ್ಲಿ ಗ್ರಾಮಸ್ಥರು ಮತ್ತು ಶಿಕ್ಷಕರ ಒಡನಾಟ ಉತ್ತಮವಾಗಿರುತ್ತದೆಯೋ ಅಂತಹ ಸ್ಥಳದಲ್ಲಿ ಶಾಲೆಗಳ ಶಿಕ್ಷಣ ಗುಣಮಟ್ಟ ಉತ್ತಮಕ್ಕೆ ಕಾರಣೀಭೂತವಾಗಿರುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಮೆಸ್ಕಾಂ ಎಇಇ ಪುಟ್ಟಸ್ವಾಮಿ. ಶಿಕ್ಷಕ ಮರುಳಸಿದ್ದಪ್ಪ, ಎಸ್‌ಡಿಎಂಸಿ, ಅಧ್ಯಕ್ಷ ಹನುಮಂತಪ್ಪ, ರಘು ಸೇರಿ ಗ್ರಾಮಸ್ಥರು ಹಾಗೂ ವಿದ್ಯಾರ್ಥಿಗಳು ಇದ್ದರು.
೨೮ ಬೀರೂರು ೧