ಆರೆಸ್ಸೆಸ್ ಶತಾಬ್ದಿ ವರ್ಷಾಚರಣೆ: ಭಟ್ಕಳದಲ್ಲಿ ಇಂದು ಪಥಸಂಚಲನ

KannadaprabhaNewsNetwork |  
Published : Oct 12, 2025, 01:01 AM IST
ಪೊಟೋ ಪೈಲ್ : 11ಬಿಕೆಲ್1 | Kannada Prabha

ಸಾರಾಂಶ

ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಶತಾಬ್ದಿ ವರ್ಷ ಹಾಗೂ ವಿಜಯ ದಶಮಿ ಪ್ರಯುಕ್ತ ಪಟ್ಟಣದಲ್ಲಿ ಭಾನುವಾರ ಸಂಜೆ ಸಾವಿರಾರು ಗಣವೇಷಧಾರಿ ಸ್ವಯಂಸೇವಕರಿಂದ ಪಥಸಂಚಲನ ನಡೆಯಲಿದೆ.

ಕೇಸರಿಮಯವಾದ ಭಟ್ಕಳ ವೃತ್ತ: ಸುಧೀಂದ್ರ ಕಾಲೇಜು ಮೈದಾನದಲ್ಲಿ ಕಾರ್ಯಕ್ರಮಕನ್ನಡಪ್ರಭ ವಾರ್ತೆ ಭಟ್ಕಳ

ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಶತಾಬ್ದಿ ವರ್ಷ ಹಾಗೂ ವಿಜಯ ದಶಮಿ ಪ್ರಯುಕ್ತ ಪಟ್ಟಣದಲ್ಲಿ ಭಾನುವಾರ ಸಂಜೆ ಸಾವಿರಾರು ಗಣವೇಷಧಾರಿ ಸ್ವಯಂಸೇವಕರಿಂದ ಪಥಸಂಚಲನ ನಡೆಯಲಿದೆ.

ಈ ಕಾರ್ಯಕ್ರಮಕ್ಕೆ ಭಟ್ಕಳ ಪಟ್ಟಣ ಸಜ್ಜುಗೊಂಡಿದ್ದು, ಪಥ ಸಂಚಲನ ನಡೆಯುವ ಪಟ್ಟಣದ ಮುಖ್ಯ ವೃತ್ತ ಸೇರಿದಂತೆ ಸಾಗರ ರಸ್ತೆ, ಮುಖ್ಯ ರಸ್ತೆ ಸೇರಿದಂತೆ ವಿವಿಧ ಕಡೆ ಸಂಪೂರ್ಣ ಕೇಸರಿಮಯವಾಗಿದ್ದು, ಎಲ್ಲೆಲ್ಲೂ ಕೇಸರಿ ಪತಾಕೆ, ಬಂಟಿಂಗ್ಸ್‌, ಧ್ವಜಗಳು ರಾರಾಜಿಸುತ್ತಿದೆ.

ಕಳೆದ ಎರಡು ದಿನಗಳಿಂದ ನೂರಾರು ಕಾರ್ಯಕರ್ತರು ಕೇಸರಿ ಬಾವುಟ, ಬಂಟಿಂಗ್ಸ್‌ ಕಟ್ಟಲು ಹಗಲಿರುಳು ತೊಡಗಿಸಿಕೊಂಡು ಕಾರ್ಯಕ್ರಮದ ಯಶಸ್ಸಿಗೆ ಶ್ರಮಿಸುತ್ತಿದ್ದಾರೆ. ಪಥಸಂಚಲನದ ಬಗ್ಗೆ ಈಗಾಗಲೇ ಆರೆಸ್ಸೆಸ್ ಪ್ರಮುಖರು, ಕಾರ್ಯಕರ್ತರು ಹಳ್ಳಿಹಳ್ಳಿಗಳಲ್ಲಿ ಸಭೆ ನಡೆಸಿ ಜಾಗೃತಿಗೊಳಿಸಿದ್ದಾರೆ. ತಾಲೂಕಿನ ಹದಿನಾರು ಗ್ರಾಮ ಪಂಚಾಯಿತಿ ವ್ಯಾಪ್ತಿಯಿಂದಲೂ ಕಾರ್ಯಕರ್ತರು ಗಣವೇಷಧಾರಿಗಳಾಗಿ ಪಥಸಂಚಲನದಲ್ಲಿ ಪಾಲ್ಗೊಳ್ಳಲಿದ್ದಾರೆಂಬ ಮಾಹಿತಿ ಲಭ್ಯವಾಗಿದೆ.

ಪಟ್ಟಣದಲ್ಲಿ ಆರೆಸ್ಸೆಸ್ ಪಥ ಸಂಚಲನದ ಹಿನ್ನೆಲೆ ಬಂದೋಬಸ್ತ್‌ಗಾಗಿ ಭಾರೀ ಸಂಖ್ಯೆಯಲ್ಲಿ ಪೊಲೀಸರು ಆಗಮಿಸಿದ್ದಾರೆ. ಆಯಕಟ್ಟಿನ ಸ್ಥಳದಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ. ಈಗಾಗಲೇ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎರಡು ಮೂರು ಬಾರಿ ಭಟ್ಕಳಕ್ಕೆ ಆಗಮಿಸಿ ಪರಿಶೀಲಿಸಿದ್ದಾರೆ.

ಜಿಲ್ಲೆಯ ವಿವಿಧ ಕಡೆಯಿಂದ ಪೊಲೀಸ್ ಅಧಿಕಾರಿಗಳು ಬಂದೋಬಸ್ತ್‌ಗೆ ಬಂದಿದ್ದಾರೆ. ಪಥ ಸಂಚಲನಕ್ಕೆ ಆಗಮಿಸುವ ಗಣವೇಷಧಾರಿಗಳಿಗೆ ಈಗಾಗಲೇ ಸಂಘಟಕರು ಸೂಚನೆ ಬಿಡುಗಡೆ ಮಾಡಿದ್ದು ಅವರವರು ತಮ್ಮ ತಮ್ಮ ಸ್ಥಾನಗಳನ್ನು ೩.೩೦ ಗಂಟೆಯೊಳಗೆ ಸೇರಿಕೊಳ್ಳಬೇಕು ಎಂದು ತಿಳಿಸಲಾಗಿದೆ.

ತಾಲೂಕಿನ ಬೈಲೂರು, ಮುರುಡೇಶ್ವರ, ಕಾಯ್ಕಿಣಿ, ಉತ್ತರ ಕೊಪ್ಪ, ಬೇಂಗ್ರೆ, ಶಿರಾಲಿ, ಜಾಲಿ, ತೆಂಗಿನಗುಂಡಿ, ಹೆಬಳೆ, ಗಾಂಧಿ ನಗರ, ಮಾರುಕೇರಿ, ಹಾಡುವಳ್ಳಿಗಳಿಂದ ಬರುವ ಗಣವೇಷಧಾರಿಗಳು ನಗರದ ಶ್ರೀ ಗುರು ಸುಧೀಂದ್ರ ಕಾಲೇಜು ಮೈದಾನದಲ್ಲಿ ಸೇರಬೇಕು. ಹುರುಳಿಸಾಲ, ಕಂಡೇಕೊಡ್ಲು, ಹನುಮಾನ ನಗರ, ಸೊನಾರಕೇರಿ, ಆಸರಕೇರಿ, ಚೌಥನಿ, ಭಟ್ಕಳ ನಗರ, ಮಣ್ಕುಳಿ, ಬಂದರ, ಬೆಳ್ನಿ, ತಲಗೋಡು, ಕರಿಕಲ್, ಮುಟ್ಟಳ್ಳಿ, ಮುಂಡಳ್ಳಿ, ಪುರವರ್ಗ, ಯಲ್ವಡಿಕವೂರು, ಬೆಳ್ಕೆ, ಗೊರಟೆ, ಕೊಣಾರ, ಸರ್ಪನಕಟ್ಟೆ ಕಡೆಯಿಂದ ಬರುವ ಗಣವೇಷಧಾರಿಗಳು ಶ್ರೀ ಚೆನ್ನಪಟ್ಟಣ ಹನುಮಂತ ದೇವಸ್ಥಾನದ ಆವರಣದಲ್ಲಿ ಸೇರಬೇಕು ಎಂದು ತಿಳಿಸಲಾಗಿದೆ. ಬೃಹತ್ ಪಥಸಂಚಲನದ ಬಳಿಕ ಗುರುಸುಧೀಂದ್ರ ಕಾಲೇಜಿನಲ್ಲಿ ಸಭಾ ಕಾರ್ಯಕ್ರಮ ನಡೆಯಲಿದೆ.

PREV

Recommended Stories

ಋತು ರಜೆ ಕೊಡದಿದ್ದರೆ ಕ್ರಮ : ಲಾಡ್‌
ಪ್ರೇಮಿ ಜೊತೆ ಓಡಿ ಹೋದ ಮಗಳ ತಿಥಿ ಮಾಡಿದ ಅಪ್ಪ