ಮುಂಡರಗಿ: ತಾಲೂಕಿನ ಗಂಗಾಪುರ ವಿಜಯನಗರ ಸಕ್ಕರೆ ಕಾರ್ಖಾನೆಯವರ ಕಬ್ಬು ಅರೆಯುವ ಪ್ರಕ್ರಿಯೆ ಕುರಿತು ಚರ್ಚಿಸಲು ಡಿಸಿಯವರು ಅ. 14ರಂದು ಸಂಜೆ 4 ಗಂಟೆಗೆ ಸಭೆ ಕರೆದಿದ್ದಾರೆ. ಆದರೆ ಕಾರ್ಖಾನೆಯವರು ಅ. 13ರಂದೇ ಕಬ್ಬು ಅರೆಯುವ ಪ್ರಕ್ರಿಯೆ ಪ್ರಾರಂಭಿಸಲು ನಿರ್ಧರಿಸಿದ್ದು, ಕಾರ್ಖಾನೆಯ ಏಕಪಕ್ಷೀಯ ನಿರ್ಧಾರ ಖಂಡಿಸಿ ಅ. 13ರಂದು ಸಕ್ಕರೆ ಕಾರ್ಖಾನೆ ಎದುರು ಪ್ರತಿಭಟನೆ ನಡೆಸಲಾಗುವುದು ಎಂದು ರಾಜ್ಯ ಕಬ್ಬುಬೆಳೆಗಾರ ಸಂಘದ ಕಾರ್ಯಾಧ್ಯಕ್ಷ ವೀರನಗೌಡ ಪಾಟೀಲ ತಿಳಿಸಿದರು.
ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಡಿಸಿ ಅ. 14ರಂದು ಸಭೆ ಕರೆದಿದ್ದರೂ ತರಾತುರಿಯಲ್ಲಿ ಪ್ರಾರಂಭಿಸುವ ಉದ್ದೇಶವೇನು ಎಂದು ಪ್ರಶ್ನಿಸಿದ ವೀರನಗೌಡ, ಕೇಂದ್ರ ಸರ್ಕಾರದ ಎಫ್‌ಆರ್‌ಪಿ ದರದ ಪ್ರಕಾರ ₹3329 ನಿಗದಿಪಡಿಸಿದ್ದು, ಅದರಲ್ಲಿ ಕಟಾವು ಹಾಗೂ ಸ್ಥಳಾಂತರದ ಖರ್ಚನ್ನು ಹೊರತುಪಡಿಸಿ ₹2629 ನೀಡಬೇಕು. ಕಳೆದ ಬಾರಿ ₹2565 ನೀಡಲಾಗಿತ್ತು. ಇದೀಗ ₹2565 ನೀಡುವುದಾಗಿ ರೈತರಿಗೆ ತಿಳಿಸಿ ಕಾರ್ಖಾನೆ ಪ್ರಾರಂಭಿಸಲು ಮುಂದಾಗಿದ್ದಾರೆ.ಪ್ರಸ್ತುತ ವರ್ಷ ಕಟಾವು ಹಾಗೂ ಸ್ಥಳಾಂತರದ ಖರ್ಚನ್ನು ಹೊರತುಪಡಿಸಿ ಪ್ರತಿ ಟನ್‌ಗೆ ₹2629 ಹಾಗೂ ₹500 ಹೆಚ್ಚುವರಿಯಾಗಿ ನೀಡಬೇಕು. ಒಂದು ವೇಳೆ ಕಾರ್ಖಾನೆಯವರು ನೀಡಲು ಒಪ್ಪದಿದ್ದಲ್ಲಿ ಯಾವುದೇ ಕಾರಣಕ್ಕೂ ಕಾರ್ಖಾನೆ ಪ್ರಾರಂಭಿಸಲು ಬಿಡುವುದಿಲ್ಲ. ಕಾರ್ಖಾನೆಯವರು ಎಫ್‌ಆರ್‌ಪಿ ದರದಲ್ಲಿ ಕಟಿಂಗ್‌ಗೆ ಹಣ ಪಡೆದಿದ್ದರೂ ರೈತರ ಹೊಲಗಳಿಗೆ ಕಬ್ಬು ಕಟಾವಿಗೆ ಹೋದಾಗ ಟನ್‌ಗೆ ₹400ರಿಂದ ₹500 ಹೆಚ್ಚುವರಿಯಾಗಿ ಪಡೆಯುತ್ತಿರುವುದು ನಿಲ್ಲಬೇಕು ಎನ್ನುವುದೂ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಯ ಕುರಿತು ಪ್ರತಿಭಟನೆಯಲ್ಲಿ ಒತ್ತಾಯಿಸಲಾಗುತ್ತಿದ್ದು, ಕಬ್ಬು ಬೆಳೆಗಾರ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ರವಿಕುಮಾರ ಕೊಳಲ, ಕಾರ್ಯದರ್ಶಿ ಹುಸೇನಸಾಬ್ ಕುರಿ,ಈರಪ್ಪ ಮಡಿವಾಳರ, ಪ್ರವೀಣ ಹಂಚಿನಾಳ, ಸಂತೋಷ ಹಲವಾಗಲಿ, ಮಹೇಶ್ವರಗೌಡ ಪಾಟೀಲ, ರಂಜಿತ್ ಮದ್ಯಪಾಟಿ, ಈರಣ್ಣ ಕವಲೂರ, ನಾಗರಾಜ ಕರಿತಮ್ಮನ್ನವರ, ಮಂಜು ತಂಟ್ರಿ, ಸಿದ್ದಪ್ಪ ಹಲವಾಗಲಿ, ನಿಂಗಪ್ಪ ಬಂಗಿ, ಕೊಟೆಪ್ಪ ಚೌಡಕಿ ಸೇರಿ ಅನೇಕರು ಉಪಸ್ಥಿತರಿದ್ದರು.ಉದ್ದಿನ ಕಾಳು ಖರೀದಿಗೆ ಬೆಂಬಲ ಬೆಲೆ ನಿಗದಿಗದಗ: 2025- 26ನೇ ಸಾಲಿನ ಬೆಂಬಲ ಬೆಲೆ ಯೋಜನೆಯಡಿ ರೈತರಿಂದ ಎಫ್ಎಕ್ಯು ಗುಣಮಟ್ಟದ ಉದ್ದಿನಕಾಳು ಖರೀದಿಸಲು ಬೆಂಬಲ ಬೆಲೆ ನಿಗದಿಪಡಿಸಲಾಗಿದೆ. ನೋಂದಣಿ ಪ್ರಕ್ರಿಯೆಯಲ್ಲಿ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಲು ಕ್ರಮ ಕೈಗೊಳ್ಳಬೇಕೆಂದು ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ತಿಳಿಸಿದರು.ಜಿಲ್ಲಾಧಿಕಾರಿಗಳ ಸಭಾಭವನದಲ್ಲಿ 2025- 26ನೇ ಸಾಲಿನ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿಯಲ್ಲಿ ಉದ್ದಿನಕಾಳು ಹುಟ್ಟುವಳಿ ಖರೀದಿಸುವ ಕುರಿತು ಜರುಗಿದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜಿಲ್ಲೆಯ ಪ್ರತಿ ರೈತರಿಂದ ಪ್ರತಿ ಎಕರೆಗೆ 5 ಕ್ವಿಂಟಲ್‌ನಂತೆ ಗರಿಷ್ಠ 30 ಕ್ವಿಂಟಲ್ ಎಫ್ಎಕ್ಯು ಗುಣಮಟ್ಟದ ಉದ್ದಿನಕಾಳು ಖರೀದಿಸಲಾಗುವುದು ಎಂದರು.ಕೃಷಿ ಮಾರಾಟ ಇಲಾಖೆಯ ಸಹಾಯಕ ನಿರ್ದೇಶಕಿ ಸುಧಾ ಬಂಡಿ ಮಾತನಾಡಿ, ಎಫ್ಎಕ್ಯು ಗುಣಮಟ್ಟದ ಉದ್ದಿನಕಾಳು ಉತ್ಪನ್ನವನ್ನು ಪ್ರತಿ ಕ್ವಿಂಟಲ್‌ಗೆ ₹7800ರಂತೆ ನಿಗದಿಪಡಿಸಲಾಗಿದೆ ಎಂದರು.
ಉದ್ದಿನಕಾಳು ಖರೀದಿ ಕೇಂದ್ರಗಳ ವಿವರ: ಗದಗ ತಾಲೂಕಿನಲ್ಲಿ ಟಿಎಪಿಸಿಎಂಎಸ್ ಗದಗ, ಶಿರಹಟ್ಟಿ ತಾಲೂಕಿನಲ್ಲಿ ಟಿಎಪಿಸಿಎಂಎಸ್ ಶಿರಹಟ್ಟಿ, ಲಕ್ಷ್ಮೇಶ್ವರ ತಾಲೂಕಿನಲ್ಲಿ ಟಿಎಪಿಸಿಎಂಎಸ್ ಲಕ್ಷ್ಮೇಶ್ವರ, ಮುಂಡರಗಿ ತಾಲೂಕಿನಲ್ಲಿ ಟಿಎಪಿಸಿಎಂಎಸ್ ಮುಂಡರಗಿ, ನರಗುಂದ ತಾಲೂಕಿನಲ್ಲಿ ಟಿಎಪಿಸಿಎಂಎಸ್ ನರಗುಂದ, ರೋಣ ತಾಲೂಕಿನಲ್ಲಿ ಟಿಎಪಿಸಿಎಂಎಸ್ , ರೋಣ, ಗಜೇಂದ್ರಗಡ ತಾಲೂಕಿನಲ್ಲಿ ಟಿಎಪಿಸಿಎಂಎಸ್ ಗಜೇಂದ್ರಗಡ.