ಲೀಡ್.. ಭಾರತೀಯ ಜ್ಞಾನ ಸಂಪತ್ತು ದಾರಿದೀಪವಾಗಲಿ: ಪ್ರೊ.ಎಂ.ಆರ್. ಗಂಗಾಧರ್

KannadaprabhaNewsNetwork | Published : May 25, 2024 1:32 AM

ಸಾರಾಂಶ

ವಿದ್ಯಾರ್ಥಿಗಳು ಪಠ್ಯೇತರ ಚಟುವಟಿಕೆಗಳ ಜೊತೆಗೆ ಶಿಕ್ಷಣಕ್ಕೆ ಹೆಚ್ಚು ಆದ್ಯತೆ ನೀಡಬೇಕು. ಇಂದು ರಾಷ್ಟ್ರೀಯ ಶಿಕ್ಷಣ ನೀತಿ ರಚನೆಯಲ್ಲಿ ಭಾರತ ಹಲವಾರು ಯೋಜನೆ, ಕಾರ್ಯಕ್ರಮಗಳನ್ನು ಜಾರಿಗೊಳಿಸಿದೆ.

ಕನ್ನಡಪ್ರಭ ವಾರ್ತೆ ಮೈಸೂರು

ಭಾರತೀಯ ಜ್ಞಾನ ಸಂಪತ್ತು ಮತ್ತು ಚಿಂತನ ಶೀಲತೆ ಶಿಕ್ಷಣ ವ್ವವಸ್ಥೆಯ ದಾರಿದೀಪವಾಗಲಿ ಎಂದು ಚಾಮರಾಜನಗರ ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಎಂ.ಆರ್. ಗಂಗಾಧರ್ ತಿಳಿಸಿದರು.

ನಗರದ ಮಹಾರಾಜ ಕಾಲೇಜಿನ ಶತಮಾನೋತ್ಸವ ಭವನದಲ್ಲಿ ಪಠ್ಯೇತರ ಚಟುವಟಿಕೆಗಳ ಸಮಿತಿಯು ಶುಕ್ರವಾರ ಆಯೋಜಿಸಿದ್ದ ಕಾಲೇಜು ವಾರ್ಷಿಕೋತ್ಸವವನ್ನು ಉದ್ಘಾಟಿಸಿ ಮಾತನಾಡಿದ ಅವರು, ಉತ್ತಮ ಗುಣಮಟ್ಟದ ಶಿಕ್ಷಣ ಮತ್ತು ಕೌಶಲ ಅಭಿವೃದ್ಧಿಯಿಂದ ರಾಷ್ಟ್ರದ ಬೆಳವಣಿಗೆ ಸಾಧ್ಯ ಎಂದರು.

ವಿದ್ಯಾರ್ಥಿಗಳು ಪಠ್ಯೇತರ ಚಟುವಟಿಕೆಗಳ ಜೊತೆಗೆ ಶಿಕ್ಷಣಕ್ಕೆ ಹೆಚ್ಚು ಆದ್ಯತೆ ನೀಡಬೇಕು. ಇಂದು ರಾಷ್ಟ್ರೀಯ ಶಿಕ್ಷಣ ನೀತಿ ರಚನೆಯಲ್ಲಿ ಭಾರತ ಹಲವಾರು ಯೋಜನೆ, ಕಾರ್ಯಕ್ರಮಗಳನ್ನು ಜಾರಿಗೊಳಿಸಿದೆ. ಇದರ ಸದ್ಬಳಕೆ ಮಾಡಿಕೊಂಡು ಶಿಕ್ಷಣ ಕ್ಷೇತ್ರದಲ್ಲಿ ಮುಂದುವರೆಯುವುದು ವಿದ್ಯಾರ್ಥಿಗಳ ಜವಾಬ್ದಾರಿ ಎಂದು ಅವರು ಹೇಳಿದರು.

ಸೃಜನಾತ್ಮಕವಾಗಿ ಮತ್ತು ಬಹುಶಿಸ್ತೀಯ ರೀತಿಯಲ್ಲಿ ಚಿಂತನೆ ನಡೆಸುವುದು ಅತ್ಯಂತ ಅವಶ್ಯಕ. ಬದಲಾಗುತ್ತಿರುವ ವಿಷಯ ವ್ಯಾಪಿಯಲ್ಲಿ ಹೊಸದನ್ನು ಮೈಗೂಡಿಸಿಕೊಳ್ಳಬೇಕು. ಭಾರತದ ಶಿಕ್ಷಣ ನೀತಿಯು ಅನೇಕ ಸೌಲಭ್ಯಗಳನ್ನು ಒಳಗೊಂಡಿದೆ. ವಿದ್ಯಾರ್ಥಿಗಳ ಜೀವನದಲ್ಲಿ ಕಲಿಕೆಯ ಜೊತೆಗೆ ಕೌಶಲಗಳ ಅಭಿವೃದ್ದಿಯೂ ಬಹುಮುಖ್ಯ ಪಾತ್ರ ವಹಿಸುತ್ತದೆ ಎಂದು ಅವರು ತಿಳಿಸಿದರು.

ಶಿಕ್ಷಣ ವ್ಯವಸ್ಥೆಯ ಮೂಲಭೂತ ಸುಧಾರಣೆಗಳ ಕೇಂದ್ರದಲ್ಲಿ ಅಧ್ಯಾಪಕ ಅಗತ್ಯವಾಗಿ ಇರಲೇಬೇಕು. ಭವಿಷ್ಯದ ಉತ್ತಮ ಪ್ರಜೆಗಳನ್ನು ರೂಪಿಸುವವರು ಅವರೇ. ಗುಣಾತ್ಮಕ ಶಿಕ್ಷಣ ಕಲ್ಪಿಸಿಕೊಟ್ಟು, ಜೀವನದ ಮಾರ್ಗದರ್ಶಕರಾಗಿ ನಿಲ್ಲುತ್ತಾರೆ. ಇಂದಿನ ಕಲಿಕೆಯ ಕ್ರಮ, ಶಿಕ್ಷಣ ವ್ಯವಸ್ಥೆ ಇನ್ನೂ ಪ್ರಾಯೋಗಿಕವಾಗಿ, ಸಮಗ್ರವಾಗಿ ಮತ್ತು ಸರ್ವವ್ಯಾಪಿಯಾಗಿ ಬದಲಾಗುತ್ತಾ ಹೋಗಬೇಕು ಎಂದರು.

ಕಾಲೇಜಿನ ಹಿರಿಯ ವಿದ್ಯಾರ್ಥಿ, ಜೀ ಕನ್ನಡ ವಾಹಿನಿ ಮುಖ್ಯಸ್ಥ ರಾಘವೇಂದ್ರ ಹುಣಸೂರು ಮಾತನಾಡಿ, ಉತ್ತಮ ದಾರಿ ಮತ್ತು ಗುರಿಯೊಂದಿಗೆ ಆತ್ಮವಿಶ್ವಾಸದಿಂದ ನಡೆಯುವಾತ ಯಶಸು ಪಡೆಯಲು ಸಾಧ್ಯ. ನೂರಾರು ಕನಸಗಳನ್ನೊತ್ತ ಯುವ ಸಮೂಹವೇ ಇಲ್ಲಿದೆ. ಮೊದಲು ಸಾಗುವ ದಾರಿಯನ್ನು ನಿಗದಿಪಡಿಸಿಕೊಳ್ಳಿ. ಯಶಸ್ಸು ತಾನಾಗಿಯೇ ಲಭಿಸುವುದು ಎಂದು ಹೇಳಿದರು.

ಶಿಕ್ಷಣದೊಂದಿಗೆ ಮನರಂಜನಾ ಚಟುವಟಿಕೆಗಳಲ್ಲೂ ಭಾಗವಹಿಸಿ. ನಾನು ನಿಮ್ಮಂತೆ ವೇದಿಕೆ ಮುಂದಿನ ಸ್ಥಳದಲ್ಲಿ ಕುಳಿತು ಕಾರ್ಯಕ್ರಮಗಳನ್ನು ನೋಡಿ ಎತ್ತರಕ್ಕೆ ಬೆಳೆಯಬೇಕೆಂಬ ಹುಚ್ಚು ಕನಸು ಕಂಡವನು. ಕನಸು ಕಾಣುವುದು ಸುಲಭ, ಆದರೆ ಅದನ್ನು ನನಸಾಗಿಸುವುದು ಬಹುಮುಖ್ಯ. ಹುಚ್ಚು ಕನಸುಗಳಿಂದ ನಿಮ್ಮ ವ್ಯಕ್ತಿತ್ವವೇ ಬದಲಾಗಬಹುದು ಎಂದರು.

ಜೀವನದ ಪ್ರತಿ ಕ್ಷಣವನ್ನು ಆನಂದದಿಂದ ಅನುಭವಿಸಿ. ಏಕೆಂದರೆ ಬದುಕು ಎನ್ನುವುದು ಪ್ರತಿನಿತ್ಯ ಹೊಸ ಆದ್ಯಾಯಗಳನ್ನೇ ನಮ್ಮ ಕಣ್ಣ ಮುಂದೆ ತೆರೆದಿಡುತ್ತದೆ. ಗೆಲುವು ಮುಖ್ಯ ಅಲ್ಲ. ನಡೆದು ಬಂದ ದಾರಿ ಅತೀ ಮುಖ್ಯ. ಕಾಲೇಜು ಜೀವನದ ಪ್ರತಿ ಘಟನೆಗಳನ್ನು ನೆನಪಿಸುತ್ತದೆ. ಇಲ್ಲಿ ಸಿಗುವಂತಹ ಸೌಕರ್ಯಗಳನ್ನು ಉತ್ತಮವಾಗಿ ಉಪಯೋಗಿಸಿಕೊಂಡು ಬದುಕು ರೂಪಿಸಿಕೊಳ್ಳಿ ಎಂದು ಅವರು ಸಲಹೆ ನೀಡಿದರು.

ಮಹಾರಾಜ ಕಾಲೇಜಿನ ಪಾಂಶುಪಾಲ ಪ್ರೊ. ಎಚ್. ಸೋಮಶೇಖರಪ್ಪ, ಆಡಳಿತಾಧಿಕಾರಿ ಆಡಳಿತಾಧಿಕಾರಿ ಪ್ರೊ.ವಿ. ಷಣ್ಮುಗಂ, ಪಠ್ಯೇತರ ಚಟುವಟಿಕೆಗಳ ಸಮಿತಿಯ ಸಂಚಾಲಕ ಪ್ರೊ.ಸಿ.ಈ. ಲೋಕೇಶ್ ಇದ್ದರು.

----

ಕೋಟ್...

ವಿದ್ಯಾರ್ಥಿಗಳ ಜೀವನದ ಅಭಿವೃದ್ದಿಗೆ ಮೈಲಿಗಲ್ಲು. ಇಲ್ಲಿ ಶ್ರದ್ದೆ, ವಿನಯದಿಂದ ಕಲಿತದ್ದು ಮುಂದಿನ ದಿನಗಳಲ್ಲಿ ಉಪಯೋಗಕ್ಕೆ ಬರಲಿದೆ. ಶಿಕ್ಷಕರು ಮತ್ತು ತಂದೆ ತಾಯಿಯ ಆಸೆ, ಕನಸುಗಳನ್ನು ಈಡೇರಿಸುವ ಜವಾಬ್ದಾರಿ ವಿದ್ಯಾರ್ಥಿಗಳಾದ ನಿಮ್ಮ ಕೈಯಲ್ಲಿದೆ.

- ಪ್ರೊ.ಎಚ್. ಸೋಮಶೇಖರಪ್ಪ, ಪ್ರಾಂಶುಪಾಲ, ಮಹಾರಾಜ ಕಾಲೇಜು

Share this article