‘ಕಬ್ಬಿಗೆ ರಾಜ್ಯ ಸಲಹಾ ಬೆಲೆ ಘೋಷಿಸಿ’

KannadaprabhaNewsNetwork |  
Published : Nov 09, 2025, 02:30 AM IST
ಪ್ರಲ್ಹಾದ ಜೋಶಿ | Kannada Prabha

ಸಾರಾಂಶ

‘ರಾಜ್ಯ ಸಲಹಾ ಬೆಲೆ’ ಘೋಷಿಸಿ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿಯವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದು, ಸಲಹೆ ನೀಡಿದ್ದಾರೆ.

ಕನ್ನಡಪ್ರಭ ವಾರ್ತೆ ನವದೆಹಲಿ

ರಾಜ್ಯದ ಕಬ್ಬು ಬೆಳೆಗಾರರ ಸಮಸ್ಯೆ ಬಗ್ಗೆ ರಾಜ್ಯ ಸರ್ಕಾರ ಕೇಂದ್ರದತ್ತ ಬೆರಳು ತೋರುವುದು ಸರಿಯಲ್ಲ. ಇದು ರೈತರನ್ನು ದಿಕ್ಕು ತಪ್ಪಿಸುವ ಅನ್ಯಾಯದ ಕ್ರಮ. ಇದರ ಬದಲು ರೈತರ ಹಿತರಕ್ಷಣೆಗಾಗಿ ರಾಜ್ಯ ಸರ್ಕಾರ ‘ರಾಜ್ಯ ಸಲಹಾ ಬೆಲೆ’ ಘೋಷಿಸಲಿ. ಉತ್ತರ ಪ್ರದೇಶ, ಉತ್ತರಾಖಂಡ, ಪಂಜಾಬ್ ಮತ್ತು ಹರಿಯಾಣದಂತೆ ಇಲ್ಲೂ ‘ರಾಜ್ಯ ಸಲಹಾ ಬೆಲೆ’ ಘೋಷಿಸಿ ಎಂದು ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಲ್ಹಾದ ಜೋಶಿಯವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದು, ಸಲಹೆ ನೀಡಿದ್ದಾರೆ.

ಕಬ್ಬು ಬೆಳೆಗಾರರ ಪ್ರತಿಭಟನೆ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿರುವ ಜೋಶಿಯವರು, ಸಿಎಂ ಅವರು ಕೇಂದ್ರದತ್ತ ಬೆರಳು ತೋರಿ ಕಬ್ಬು ಬೆಳೆಗಾರರ ಹಿತರಕ್ಷಣೆಯಿಂದ ನುಣುಚಿಕೊಳ್ಳುವುದು ತರವಲ್ಲ. ಪ್ರಧಾನಿ ಮೋದಿ ಸರ್ಕಾರ ಸದಾ ರೈತರ ಕಲ್ಯಾಣಕ್ಕೆ ಬದ್ಧವಾಗಿದ್ದು, ಕಬ್ಬು ಬೆಳೆಗಾರರು ಮತ್ತು ಸಕ್ಕರೆ ಕಾರ್ಖಾನೆಗಳ ಹಿತರಕ್ಷಣೆಗೆ ಹಿಂದೆಂದಿಗಿಂತಲೂ ಹೆಚ್ಚು ಒಳ್ಳೆಯ ಕ್ರಮಗಳನ್ನು ಕೈಗೊಂಡಿದೆ ಎಂದಿದ್ದಾರೆ.

ಕಬ್ಬಿನ ಬಾಕಿ ಶೂನ್ಯಕ್ಕೆ:

ಹಿಂದೆಲ್ಲಾ ಕಬ್ಬಿನ ಬಾಕಿ ಪಾವತಿಗಾಗಿ ರೈತರು ಹೋರಾಟ ನಡೆಸುತ್ತಿದ್ದರು. ಮೋದಿ ನೇತೃತ್ವದ ಕೇಂದ್ರ ಸರ್ಕಾರ ಇದನ್ನು ನಿವಾರಿಸಿದ್ದು, ಕಬ್ಬು ಬಾಕಿಯನ್ನು ಶೂನ್ಯಕ್ಕೆ ತಂದಿದೆ. 2022-23 ಮತ್ತು 2023-24ರ ಸಕ್ಕರೆ ಹಂಗಾಮಿಗೆ ಕೇಂದ್ರ ಸರ್ಕಾರದಿಂದ ಕಬ್ಬಿನ ಬಾಕಿ ಶೂನ್ಯವಾಗಿದೆ. 2024-25ಕ್ಕೆ ಸುಮಾರು ₹50 ಲಕ್ಷದಷ್ಟು ಮಾತ್ರ ಬಾಕಿಯಿದೆ.

₹16,500 ಕೋಟಿ ಆರ್ಥಿಕ ನೆರವು:

ಕಬ್ಬು ಬೆಳೆಗಾರರಿಗೆ ಸಕಾಲಿಕ ಪಾವತಿಗೆ ಅನುಕೂಲವಾಗಲು ಕೇಂದ್ರ ಸರ್ಕಾರ ಕ್ರಮ ಕೈಗೊಂಡಿದೆ. 2014-15ರಿಂದ 2020-21ರ ಅವಧಿಯಲ್ಲಿ ವಿವಿಧ ಯೋಜನೆಗಳಡಿ ರೈತರ ಕಬ್ಬಿನ ಬಾಕಿ ಪಾವತಿಸಲು ಅನುವಾಗುವಂತೆ ಸಕ್ಕರೆ ಕಾರ್ಖಾನೆಗಳಿಗೆ ಸುಮಾರು ₹16,500 ಕೋಟಿ ಆರ್ಥಿಕ ನೆರವನ್ನು ಒದಗಿಸಿದೆ ಎಂದು ಜೋಶಿ ಹೇಳಿದ್ದಾರೆ.

ಎಫ್‌ಆರ್‌ಪಿ ₹355 ಕ್ವಿಂಟಲ್‌ ದರ:

ಕೃಷಿ ವೆಚ್ಚ ಮತ್ತು ಬೆಲೆಗಳ ಆಯೋಗದ ಶಿಫಾರಸ್ಸಿನ ಮೇರೆಗೆ ಕೇಂದ್ರ ಸರ್ಕಾರ ಪ್ರತಿ ಸಕ್ಕರೆ ಹಂಗಾಮಿನಲ್ಲಿ (ಅಕ್ಟೋಬರ್-ಸೆಪ್ಟೆಂಬರ್) ಕಬ್ಬಿಗೆ ನ್ಯಾಯಯುತ ಮತ್ತು ಲಾಭದಾಯಕ ಬೆಲೆಯನ್ನು (ಎಫ್‌ಆರ್‌ಪಿ ) ನಿಗದಿಪಡಿಸುತ್ತದೆ. ಕಬ್ಬು ಬೆಳೆಯುವ ಎಲ್ಲಾ ರಾಜ್ಯಗಳಿಗೂ ಅನ್ವಯಿಸಿ 2025-26ರಲ್ಲಿ ಉತ್ಪಾದನಾ ವೆಚ್ಚ ಒಳಗೊಂಡಂತೆ ಎಫ್‌ಆರ್‌ಪಿಯನ್ನು ₹355 ಕ್ವಿಂಟಲ್‌ ದರದಲ್ಲಿ ಅನುಮೋದಿಸಿದೆ. ಇದು ಉತ್ಪಾದನಾ ವೆಚ್ಚಕ್ಕಿಂತ ಶೇ.105.2ರಷ್ಟು ಮಾರ್ಜಿನ್‌ ಆಗಿರುತ್ತದೆ.ಎಫ್‌ಆರ್‌ಪಿ ದರದಲ್ಲಿ ಗಮನಾರ್ಹ ಏರಿಕೆ:ಕಳೆದ ದಶಕದಿಂದ ಎಫ್‌ಆರ್‌ಪಿಯಲ್ಲಿ ಗಮನಾರ್ಹ ಏರಿಕೆ ಕಂಡು ಬಂದಿದೆ. 2013-14ರಲ್ಲಿ ₹210 ಇದ್ದ ಎಫ್‌ಆರ್‌ಪಿ ದರ ಇದೀಗ ₹355ಕ್ಕೇರಿದೆ. ಇದು ಈ ವರ್ಷದಲ್ಲಾದ ಬಲವಾದ ಏರಿಕೆ. ಅಲ್ಲದೇ, ಶೇ.0.1ರಷ್ಟು ಚೇತರಿಕೆಗೆ ರೈತರು ಪ್ರತಿ ಕ್ವಿಂಟಲ್‌ಗೆ ಹೆಚ್ಚುವರಿಯಾಗಿ ₹3.46 ಪಡೆಯುತ್ತಾರೆ. ಕರ್ನಾಟಕದಲ್ಲಿ ಸರಾಸರಿ ಶೇ.10.5ರಷ್ಟು ಚೇತರಿಕೆಯೊಂದಿಗೆ ಪ್ರತಿ ಕ್ವಿಂಟಲ್‌ಗೆ ಎಫ್‌ಆರ್‌ಪಿ ₹363 ಆಗಿದೆ.ಕಬ್ಬು ಖರೀದಿ ಮೌಲ್ಯ ಶೇ.80ರಷ್ಟು ಹೆಚ್ಚಳ: 2013-14ರಿಂದ 2024-25ರ ಅವಧಿಯಲ್ಲಿ ಕಬ್ಬು ಖರೀದಿ ಮೌಲ್ಯ ಶೇ.80ರಷ್ಟು ಹೆಚ್ಚಾಗಿದೆ. ಕಳೆದ ವರ್ಷ ಇದರ ಮೌಲ್ಯ 1,02,687 ಕೋಟಿ ಆಗಿತ್ತು. ಕೇಂದ್ರ ಸರ್ಕಾರ ನಿಗದಿಪಡಿಸಿದ ಎಫ್‌ಆರ್‌ಪಿ ದರದಂತೆ ಸಕ್ಕರೆ ಕಾರ್ಖಾನೆಗಳು 14 ದಿನಗಳಲ್ಲಿ ರೈತರಿಗೆ ಸಕಾಲಿಕವಾಗಿ ಕಬ್ಬಿನ ವೆಚ್ಚ ಪಾವತಿಸುವುದು ಕಡ್ಡಾಯವಾಗಿದೆ. ಈ ನಿಟ್ಟಿನಲ್ಲಿ 1966ರ ಕಬ್ಬು ನಿಯಂತ್ರಣ (ಆದೇಶ) ನಿಬಂಧನೆ ಜಾರಿಗೊಳಿಸುವ ಅಧಿಕಾರವನ್ನು ರಾಜ್ಯ ಸರ್ಕಾರಗಳಿಗೆ ವಹಿಸಲಾಗಿದೆ.ಎಥೆನಾಲ್‌ಗೆ ಕಬ್ಬು ಬಳಸಲು ಉತ್ತೇಜನ: ಹೆಚ್ಚುವರಿ ಕಬ್ಬನ್ನು ಎಥೆನಾಲ್‌ಗೆ ಬಳಸಿಕೊಳ್ಳಲು ಕೇಂದ್ರ ಸರ್ಕಾರ ಸಕ್ಕರೆ ಕಾರ್ಖಾನೆಗಳನ್ನು ಪ್ರೋತ್ಸಾಹಿಸುತ್ತಿದೆ. 2013ರವರೆಗೆ ಒಎಂಸಿಗಳಿಗೆ ಕೇವಲ 38 ಕೋಟಿ ಲೀಟರ್ ಎಥೆನಾಲ್ ಪೂರೈಕೆಯಾಗಿತ್ತು. ಆಗ ಮಿಶ್ರಣ ಮಟ್ಟ ಕೇವಲ ಶೇ.1.53ರಷ್ಟಿತ್ತು. ಇದೀಗ ಶೇ.20ರಷ್ಟು ಮಿಶ್ರಣದೊಂದಿಗೆ ಸುಮಾರು 1,001 ಕೋಟಿ ಲೀಟರ್‌ಗೆ ಏರಿದೆ.ರಾಜ್ಯದಲ್ಲಿ ಎಥೆನಾಲ್‌ ಡಿಸ್ಟಿಲರಿ ಸ್ಥಾಪನೆಗೆ ನೆರವು: ಕರ್ನಾಟಕದಲ್ಲಿ ಎಥೆನಾಲ್ ಡಿಸ್ಟಿಲರಿಗಳನ್ನು ಸ್ಥಾಪಿಸಲು ಕೇಂದ್ರ ಸರ್ಕಾರ ʼಎಥೆನಾಲ್ ಬಡ್ಡಿ ಸಬ್ವೆನ್ಷನ್ʼ ಯೋಜನೆಯಡಿ ₹435.42 ಕೋಟಿ ಆರ್ಥಿಕ ನೆರವು ನೀಡಿದೆ. ಕರ್ನಾಟಕದ ಡಿಸ್ಟಿಲರಿಗಳಿಗೆ ಎಥೆನಾಲ್ ಹಂಚಿಕೆ ಇಎಸ್‌ವೈ 2022-23ರಲ್ಲಿ 85 ಕೋಟಿ ಲೀಟರ್‌ಗಳಿಂದ ಇಎಸ್‌ವೈ 2025-26ರಲ್ಲಿ 133 ಕೋಟಿ ಲೀಟರ್‌ಗೆ ಹೆಚ್ಚಾಗಿದೆ. ಇದು ಸಕ್ಕರೆ ಕಾರ್ಖಾನೆಗಳಿಗೆ ಪರ್ಯಾಯ ಆದಾಯದ ಹರಿವನ್ನು ಒದಗಿಸಿದೆ.15 ಲಕ್ಷ ಮೆಟ್ರಿಕ್ ಟನ್ ಸಕ್ಕರೆ ರಫ್ತಿಗೆ ಅವಕಾಶ: ಹೆಚ್ಚುವರಿ ಸಕ್ಕರೆ ರಫ್ತಿಗೆ ಕೇಂದ್ರ ಸರ್ಕಾರ ಅವಕಾಶ ಕಲ್ಪಿಸಿದೆ. 10 ಲಕ್ಷ ಮೆಟ್ರಿಕ್‌ ಟನ್‌ನಿಂದ 15 ಲಕ್ಷ ಮೆಟ್ರಿಕ್‌ ಟನ್‌ ರಫ್ತಿಗೆ ಅವಕಾಶ ನೀಡಲು ನಿರ್ಧರಿಸಿದೆ. ಅಲ್ಲದೇ, ಮೊಲಾಸಸ್ ಮೇಲಿನ ಶೇ.50ರಷ್ಟು ರಫ್ತು ಸುಂಕವನ್ನು ತೆಗೆದು ಹಾಕಿ ನೆರವು ಕಲ್ಪಿಸಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹೈಕೋರ್ಟ್‌ ಹೊಸ ಕಟ್ಟಡಕ್ಕೆ 30 ಎಕ್ರೆಕೋರಿಕೆ:ರಾಜ್ಯ ಸರ್ಕಾರಕ್ಕೆ ನೋಟಿಸ್‌
ಬಿಎಂಐಸಿ ಮರುಪರಿಶೀಲಿಸಿ: ರಾಜ್ಯಕ್ಕೆ ಕೋರ್ಟ್‌ ಸೂಚನೆ