- ಜಿಲ್ಲಾಡಳಿತ ನೇತೃತ್ವದಲ್ಲಿ ಕನಕದಾಸ ಜಯಂತಿ । ಧಾನ್ಯಗಳಿಗೆ ಧ್ವನಿ ನೀಡಿದವರು ಕನಕದಾಸರು: ಶಾಸಕ ಶ್ಲಾಘನೆ
- - -ಕನ್ನಡಪ್ರಭ ವಾರ್ತೆ ದಾವಣಗೆರೆ
ದಾರ್ಶನಿಕರ ಜಯಂತಿಯನ್ನು ಒಂದೇ ವೇದಿಕೆಯಲ್ಲಿ ಆಚರಿಸಿ, ಎಲ್ಲ ಸಮುದಾಯದವರು ಒಟ್ಟಿಗೆ ಸೇರಿ ಆಚರಣೆ ಮಾಡಿದಾಗ ಸಮಾನತೆ ಸಾಧ್ಯ ಎಂದು ಮಾಯಕೊಂಡ ಶಾಸಕ ಕೆ.ಎಸ್. ಬಸವಂತಪ್ಪ ಹೇಳಿದರು.ನಗರದ ಜಿಲ್ಲಾಡಳಿತ ಭವನದಲ್ಲಿ ಶನಿವಾರ ಜಿಲ್ಲಾಡಳಿತ ವತಿಯಿಂದ ಆಯೋಜಿಸಲಾಗಿದ್ದ ದಾಸಶ್ರೇಷ್ಠ ಶ್ರೀ ಕನಕದಾಸ ಜಯಂತಿಯಲ್ಲಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಅವರು ಮಾತನಾಡಿದರು. ಜಾತಿ ಮತ್ತು ಧರ್ಮಗಳ ಕಂದಾಚರಣೆ ಸಮಾಜದಿಂದ ತೊಲಗಿಸಲು ಆಳವಾದ ಅನುಭವದ ಮೂಲಕ ಸಮಾಜ ಕಟ್ಟುವಿಕೆಯ ಕೆಲಸ ಮಾಡಿದವರು ಕನಕದಾಸರು. ಅವರು ಬರೆದಿರುವ ಪ್ರತಿಯೊಂದು ಕೃತಿಗಳು ಪ್ರಸ್ತುತ ಸಮಾಜಕ್ಕೆ ಪೂರಕವಾಗಿವೆ ಎಂದರು.
ಧಾನ್ಯಗಳಿಗೆ ಧ್ವನಿ ನೀಡಿದವರು ಕನಕದಾಸರು. ರಾಮಧಾನ್ಯ ಚರಿತೆ ಮೂಲಕ ಧಾನ್ಯಗಳಿಗೆ ಧ್ವನಿಯಾಗಿ ಸಮಾಜದ ಮೇಲು-ಕೀಳಿನ ಪರಿಸ್ಥಿತಿಯನ್ನು ತಿಳಿಸಿದವರು. ನಾನು ಎಂಬ ಅಹಂಕಾರ ಇಲ್ಲದಿದ್ದರೆ ನಾವು ಸಹ ಸ್ವರ್ಗಕ್ಕೆ ಹೊಗಬಹುದು ಎಂಬುದನ್ನು ಸಮಾಜಕ್ಕೆ ತಿಳಿಸಿದರು. ಅಲ್ಲದೇ. ಬಾಗಿಲನ್ನು ತೆರೆದು ಸೇವೆಯನ್ನು ಕೊಡು ಹರಿಯೆ ಎನ್ನುವ ಮೂಲಕ ಕನಕನ ಕಿಂಡಿ ಉದ್ಭವಿಸಿದ ಹಾಗೂ ಕೇಶವನ ಪ್ರತಿಷ್ಟಾಪನೆ, ಮದ್ಯವನ್ನು ಜೇನುತುಪ್ಪವಾಗಿಸಿದ ಇತರೆ ಪವಾಡಗಳ ಮೂಲಕ ಕನಕದಾಸರು ಇಂದಿಗೂ ಪ್ರಸ್ತುತರಾಗಿದ್ದಾರೆ ಎಂದರು.ಇಂದು ಇತಿಹಾಸ ಮತ್ತು ಪುರಾಣದ ಮಹಾಪುರುಷರನ್ನು ದೇವರನ್ನಾಗಿಸುವ ಪರಿಪಾಠವಿದೆ. ಇದು ಬದಲಾಗಬೇಕು. ಮನುಷ್ಯ ದೇವರಾದರೆ ಸಮಸ್ಯೆ ಹೆಚ್ಚುತ್ತದೆ. ಇದು ಬದಲಾಗಬೇಕು. ಸಮಾಜದ ಶಕ್ತಿಯಾಗಿ ನಮ್ಮ ನೆರಳಾಗಿರುವ ಪುರಾಣ ಮತ್ತು ಇತಿಹಾಸದ ಮಾನವತಾವದಿಗಳನ್ನು ಅನುಸರಿಸಬೇಕು ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಕನಕದಾಸರ ಕಿರುಪುಸ್ತಕ ಬಿಡುಗಡೆ ಮಾಡಲಾಯಿತು. ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಪರಮೇಶ್ವರ ಹೆಗಡೆ, ಅಪರ ಜಿಲ್ಲಾಧಿಕಾರಿ ಶೀಲವಂತ ಶಿವಕುಮಾರ, ಅಬಕಾರಿ ಇಲಾಖೆಯ ಅಧಿಕಾರಿ ಚಿದಾನಂದ, ಡಿಡಿಪಿಐ ಕೊಟ್ರೇಶ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ರವಿಚಂದ್ರ, ಎಚ್.ಬಿ ಗೋಣೆಪ್ಪ, ಗುರುನಾಥ, ಪರಶುರಾಮ, ಎಸ್.ಎಸ್.ಗಿರೀಶ್, ಬೀರಪ್ಪ, ಕುರುಬ ಸಮಾಜದ ಮುಖಂಡರು ಭಾಗವಹಿಸಿದ್ದರು.- - - -8ಕೆಡಿವಿಜಿ31:
ದಾವಣಗೆರೆಯಲ್ಲಿ ಜಿಲ್ಲಾಡಳಿತದಿಂದ ನಡೆದ ಕನಕದಾಸ ಜಯಂತಿಯಲ್ಲಿ ಶಾಸಕ ಕೆ.ಎಸ್.ಬಸವಂತಪ್ಪ ಅವರು ಭಾವಚಿತ್ರಕ್ಕೆ ಪುಷ್ಪಾರ್ಚಾನೆ ಸಲ್ಲಿಸಿ, ನಮಿಸಿದರು. ವಿವಿಧ ಗಣ್ಯರು ಪಾಲ್ಗೊಂಡಿದ್ದರು.