- ಗ್ರಾಮಕ್ಕೆ ಸರ್ಕಾರಿ ಬಸ್ ಬರುತ್ತಿದ್ದಂತೆ ಕುಣಿದು ಕುಪ್ಪಳಿಸಿದ ಗ್ರಾಮಸ್ಥರು
ಕನ್ನಡಪ್ರಭ ವಾರ್ತೆ ದಾವಣಗೆರೆ
40 ವರ್ಷಗಳಿಂದ ಸರ್ಕಾರಿ ಬಸ್ಸೇ ಕಾಣದ ಊರಿಗೆ ಶಾಸಕ ಕೆ.ಎಸ್.ಬಸವಂತಪ್ಪ ಶನಿವಾರ ಸರ್ಕಾರಿ ಬಸ್ ಸೌಲಭ್ಯ ಕಲ್ಪಿಸಿ, ಸಂಚಾರಕ್ಕೆ ಚಾಲನೆ ನೀಡುವ ಮೂಲಕ ವಡೇರಹಳ್ಳಿ, ಕಳವೂರು ಗ್ರಾಮಸ್ಥರ ನಾಲ್ಕು ದಶಕಗಳ ಬೇಡಿಕೆ ಈಡೇರಿಸಿದರು.ಮಾಯಕೊಂಡ ಕ್ಷೇತ್ರದ ವ್ಯಾಪ್ತಿಯ ವಡೇರಹಳ್ಳಿ ಮತ್ತು ಕಳವೂರು ಗ್ರಾಮಗಳಿಗೆ ಇತಿಹಾಸದಲ್ಲಿಯೇ ರಾಜ್ಯ ರಸ್ತೆ ಸಾರಿಗೆ ಬಸ್ ಸೌಲಭ್ಯ ಇರಲಿಲ್ಲ. ಹಲವಾರು ವರ್ಷಗಳಿಂದ ಈ ಗ್ರಾಮಗಳ ಗ್ರಾಮಸ್ಥರಿಂದ ಬಸ್‌ಗಳಿಗಾಗಿ ಬೇಡಿಕೆ ಇತ್ತು. ಹಿಂದಿನ ಅವಧಿಯ ಜನಪ್ರತಿನಿಧಿಗಳು ಗ್ರಾಮಸ್ಥರ ಕೂಗಿಗೆ ಸ್ಪಂದಿಸಿರಲಿಲ್ಲ. ಆದರೆ ಶಾಸಕ ಕೆ.ಎಸ್.ಬಸವಂತಪ್ಪ, ಈ ಗ್ರಾಮಗಳಿಗೆ ಬಸ್ ಸೌಲಭ್ಯ ಕಲ್ಪಿಸಿ, ಶನಿವಾರ ಸ್ವತಃ ಬಸ್ ಚಲಾಯಿಸುವ ಮೂಲಕ ಸಂಚಾರಕ್ಕೆ ಚಾಲನೆ ನೀಡಿದರು. ಬಳಿಕ ಗ್ರಾಮಸ್ಥರೊಂದಿಗೆ ಬಸ್‌ನಲ್ಲಿ ಪ್ರಯಾಣ ಬೆಳೆಸಿದರು.
ಗ್ರಾಮದಲ್ಲಿ ಅಲ್ಪಸಂಖ್ಯಾತರ ಮೊರಾರ್ಜಿ ವಸತಿ ಶಾಲೆ, ಪರಿಶಿಷ್ಟ ಜಾತಿ ಮೊರಾರ್ಜಿ ವಸತಿ ಶಾಲೆ ಮತ್ತು ಪರಿಶಿಷ್ಟ ಪಂಗಡ ಶಾಲೆ ಇವೆ. ಇದರಿಂದಾಗಿ ಅಕ್ಕಪಕ್ಕದ ಗ್ರಾಮಗಳ ಮಕ್ಕಳು ಶಾಲೆಗಳಿಗೆ ಹೋಗಿ ಬರಲು ಸರ್ಕಾರಿ ಬಸ್ ಸೌಲಭ್ಯ ಕೊರತೆ ಇತ್ತು. ದ್ವಿಚಕ್ರ ವಾಹನ, ಆಪೆ ಆಟೋಗಳಿಗೇ ಮೊರೆ ಹೋಗುತ್ತಿದ್ದರು. ಕೆಲವು ಮಕ್ಕಳು ಪ್ರತಿನಿತ್ಯ ಹಣವಿಲ್ಲದೇ ಶಾಲೆಗಳಿಗೆ ನಡೆದುಕೊಂದು ಹೋಗಿ ಬರುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಸರ್ಕಾರಿ ನೌಕರರು, ಕೂಲಿ ಕಾರ್ಮಿಕರು, ಮಹಿಳೆಯರು, ವೃದ್ಧರು ನಗರ ಪ್ರದೇಶಗಳಿಗೆ ಹೋಗಿ ಬರಲು ಸಮಸ್ಯೆ ಆಗಿತ್ತು. ಈಗ ಸರ್ಕಾರಿ ಬಸ್ ಸೌಲಭ್ಯ ಗ್ರಾಮಸ್ಥರಿಗೆ ಅನುಕೂಲವಾಗಿದೆ.
(ಕೋಟ್ಸ್)
- ಗೌರಮ್ಮ, ಕೂಲಿ ಕಾರ್ಮಿಕ ಮಹಿಳೆ. ಸಕಾಲದಲ್ಲಿ ಸರ್ಕಾರಿ ಬಸ್ ಇಲ್ಲದೇ ಶಾಲೆಗಳಿಗೆ ಹೋಗಿ ಬರಲು ಬಹಳ ತೊಂದರೆ ಆಗಿತ್ತು. ಈಗ ಶಾಸಕ ಕೆ.ಎಸ್. ಬಸವಂತಪ್ಪ ಅವರು ಬಸ್ ಸೌಲಭ್ಯ ಕಲ್ಪಿಸಿ, ನಮಗೆ ಹೆಚ್ಚು ಅನುಕೂಲ ಮಾಡಿಕೊಟ್ಟಿದ್ದಾರೆ.
- - -
ಮಾಯಕೊಂಡ ಕ್ಷೇತ್ರದ ವ್ಯಾಪ್ತಿಯ ವಡೇರಹಳ್ಳಿಯಲ್ಲಿ ಶಾಸಕ ಕೆ.ಎಸ್.ಬಸವಂತಪ್ಪ ಸರ್ಕಾರಿ ಬಸ್ ಚಲಾಯಿಸುವ ಮೂಲಕ ಬಸ್ ಸಂಚಾರಕ್ಕೆ ಚಾಲನೆ ನೀಡಿದರು.