ಅರಸೀಕೆರೆ: ಸಾಹಿತ್ಯ ಕ್ಷೇತ್ರದಲ್ಲಿ ಪ್ರಕಟವಾಗುವ ಕೃತಿಗಳನ್ನು ಸಂಪೂರ್ಣವಾಗಿ ಓದುಗನು ಅವಲೋಕಿಸುವುದರ ಮೂಲಕ ಸಾಹಿತ್ಯ ಲೋಕದ ಯಜಮಾನನಾಗಿ ಲೇಖಕರಿಗೆ ಪ್ರೇರಣೆ ನೀಡುತ್ತಾನೆ ಎಂದು ಖ್ಯಾತ ವಕೀಲ ಕೆ.ಎ. ರವಿಶಂಕರ್ ಅಭಿಪ್ರಾಯ ವ್ಯಕ್ತಪಡಿಸಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಜಿಲ್ಲಾ ಪರಿಷತ್ ಅಧ್ಯಕ್ಷ ಡಾ. ಬಾನಂ ಲೋಕೇಶ್, ಪ್ರತಿಯೊಂದು ಸಾಧನೆಯ ಹಿಂದೆ ಅನೇಕ ಸವಾಲುಗಳು, ಕಷ್ಟಗಳು ಹರಿದಾಡುತ್ತವೆ. ಇವುಗಳನ್ನು ಮೀರಿ ಕಲಿಕೆಗೆ ಮುಂದಾದಾಗ ವಿದ್ಯಾರ್ಥಿಗಳು ತಮ್ಮ ಸಾಮರ್ಥ್ಯ ಮತ್ತು ಶ್ರಮದಿಂದ ಯಶಸ್ಸು ಕಾಣಬಹುದು. ಕವಿಗಳು, ಸಂಗೀತಗಾರರು, ವಚನಕಾರರು ಕನ್ನಡವನ್ನು ಸಾರ್ಥಕವಾಗಿ ಬಳಸಿಕೊಂಡು ಸಾಧನೆ ಮಾಡಿದ್ದಾರೆ. ಸಾಧನೆಯ ಜೊತೆಗೆ ಗುರುಗಳ ಮಾರ್ಗದರ್ಶನ ಇದ್ದಾಗ ಮಾತ್ರ ಗುರಿ ಸಾಧಿಸಬಹುದು. ಯುವ ಬರಹಗಾರರು ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಪ್ರವೇಶಿಸಿ ಹೊಸ ಆವಿಷ್ಕಾರಗಳನ್ನು ತರುತ್ತಾರೆ. ವಿದ್ಯಾರ್ಥಿಗಳು ಮಾನವೀಯತೆ ಮತ್ತು ಮೌಲ್ಯಗಳ ಕುರಿತು ನೀತಿಪರ ಕಥೆಗಳುಳ್ಳ ಪುಸ್ತಕಗಳನ್ನು ಓದಬೇಕು ಎಂದು ಹೇಳಿದರು.
ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷೆ ಹಾಗೂ ಲೇಖಕಿ ಪದ್ಮಾಮೂರ್ತಿ ಮಾತನಾಡಿ, ತಮ್ಮ ವಿದ್ಯೆ ಮತ್ತು ಕಲಿಕೆಯನ್ನು ಜೊತೆಗೆ ಬೆಳೆಸಿಕೊಂಡು ಬರವಣಿಗೆಯನ್ನು ಅಭ್ಯಾಸ ಮಾಡುತ್ತಿದ್ದರೆ ಉತ್ತಮ ಲೇಖಕರಾಗಬಹುದು. ಮಾನವೀಯವಾಗಿ ಬದುಕಿ ಸಮಾಜಕ್ಕೆ ಕೊಡುಗೆ ನೀಡುವುದು ಮುಖ್ಯ. ಸಾಹಿತ್ಯದ ಮೂಲಕ ಈ ಕೊಡುಗೆ ಸಾಧ್ಯವಾಗುತ್ತದೆ. ವಾಲ್ಮೀಕಿ, ಪಂಪ, ರನ್ನ, ಪೊನ್ನ, ಜನ್ನ, ಬಸವಣ್ಣರು ಶತಮಾನಗಳ ಹಿಂದೆ ಬದುಕಿದ್ದರೂ ಅವರ ಸಾಹಿತ್ಯ ನಮ್ಮ ಮುಂದೆ ಇಂದು ಜೀವಂತವಾಗಿದೆ. ಕನ್ನಡ ಭಾಷೆ ಮತ್ತು ಸಾಹಿತ್ಯದ ಬೆಳವಣಿಗೆ ನಮ್ಮ ಮುಂದಿನ ಹೊತ್ತಿಗೆ ಕಟ್ಟುಮೂಲವಾಗಿದೆ ಎಂದು ಹೇಳಿದರು.