ಕನ್ನಡಪ್ರಭ ವಾರ್ತೆ ಕಾರಟಗಿ
ಜ್ವಲಂತ ಸಮಸ್ಯೆ ಕಂದಾಯ ಗ್ರಾಮಗಳ ರಚೆನೆಗೆ ಈ ಬಾರಿ ರಾಜ್ಯ ಸರ್ಕಾರ ಮುಂದಾಗಿದೆ. ಈಗೆಲ್ಲ ಸರ್ವೇ ಕಾರ್ಯ ಮುಗಿದಿದ್ದು, ಶೀಘ್ರದಲ್ಲೇ ಬಾಕಿ ಇರುವ ಕಂದಾಯ ಗ್ರಾಮಗಳ ಘೋಷಣೆ ಮಾಡಲಾಗುವುದು. ಜನರ ಸಮಸ್ಯೆಗಳಿಗೆ ಅಧಿಕಾರಿಗಳು ಸ್ಪಂದಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಹೇಳಿದರು.ತಾಲೂಕಿನ ಗುಂಡೂರು ಗ್ರಾಪಂ ವ್ಯಾಪ್ತಿಯ ಗುಂಡೂರು ಕ್ಯಾಂಪ್, ಸಿಂಗನಾಳ, ಲಕ್ಷ್ಮೀಕ್ಯಾಂಪ್, ಕಾಮಗುಂಡಮ್ಮ ಕ್ಯಾಂಪ್ ಹಾಗೂ ಗುಂಡೂರಿನಲ್ಲಿ ಕೊಪ್ಪಳ ಜಿಪಂ ಹಾಗೂ ಕಾರಟಗಿ ತಾಪಂನಿಂದ ಹಮ್ಮಿಕೊಂಡಿದ್ದ ಅಭಯ ಹಸ್ತ ಕಾರ್ಯಕ್ರಮದಲ್ಲಿ ಸಾರ್ವಜನಿಕರ ಅಹವಾಲು ಸ್ವೀಕರಿಸಿ ಮಾತನಾಡಿದರು.
ಕ್ಷೇತ್ರದಲ್ಲಿನ ಕ್ಯಾಂಪ್‌ಗಳನ್ನು ಕಂದಾಯ ಗ್ರಾಮವಾಗಿ ರೂಪಿಸುವುದು ಸೇರಿ ನಾನಾ ಅಭಿವೃದ್ಧಿ ಕಾರ್ಯ ಮಾಡಿದ್ದೇನೆ. ಸರ್ಕಾರದ ಮಟ್ಟದಲ್ಲಿ ಬಾಕಿ ಇರುವ ಕಡತಗಳನ್ನು ಶೀಘ್ರವೇ ಅನುಮೋದನೆ ಕೊಡಿಸಿ ಮತ್ತಷ್ಟು ಅಭಿವೃದ್ಧಿ ಕೈಗೊಳ್ಳವುದಾಗಿ ಸಚಿವರು ಹೇಳಿದರು.ಈಗಾಗಲೇ ಕೋಟ್ಯಾಂತರ ರು. ಅನುದಾನ ಬಿಡುಗಡೆ ಆಗಿದ್ದು, ಈ ಅಭಿವೃದ್ಧಿ ಕಾಮಗಾರಿಗಳಿಗೆ ಡಿ. ೨೮ರ ಬಳಿಕ ಭೂಮಿ ಪೂಜೆ ಕಾರ್ಯ ಮಾಡುತ್ತೇನೆ. ಕ್ಷೇತ್ರದ ಜನರ ಸಮಸ್ಯೆಯನ್ನು ನೇರವಾಗಿ ತಿಳಿಯುವ ಅಭಯ ಹಸ್ತ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಕ್ಷೇತ್ರ ವ್ಯಾಪ್ತಿಯ ವಿವಿಧ ಗ್ರಾಪಂಗಳಲ್ಲಿ ಈಗಾಗಲೇ ಅಭಯ ಹಸ್ತ ಕಾರ್ಯಕ್ರಮ ನಡೆಸಿದ್ದು, ವಿವಿಧ ಅಭಿವೃದ್ಧಿ ಕಾರ್ಯಗಳಾಗಿರುವುದು ಖುಷಿ ತಂದಿದೆ ಎಂದರು.
ಕನಕಗಿರಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ೩೩ ಗ್ರಾಪಂ ಇವೆ. ಈಗಾಗಲೇ ೨೮ ಗ್ರಾಪಂಗೆ ಭೇಟಿ ನೀಡಿ, ಕಾರ್ಯಕ್ರಮ ನಡೆಸಿದ್ದೇನೆ. ಇನ್ನೂ ೫ ಗ್ರಾಪಂಗೆ ಭೇಟಿ ನೀಡಿ, ಜನರ ಸಮಸ್ಯೆ ಆಲಿಸಬೇಕಿದೆ ಎಂದರು.ಗುಂಡೂರು ಗ್ರಾಪಂ ವ್ಯಾಪ್ತಿಯ ರಸ್ತೆ ನಿರ್ಮಾಣ, ಪ.ಜಾ ಕಾಮಗಾರಿ, ಸಮುದಾಯ ಭವನ ನಿರ್ಮಾಣ, ತಾಯಮ್ಮ ಗುಡಿ ಕಾಮಗಾರಿ, ರಸ್ತೆ ಅಭಿವೃದ್ಧಿ ಮಾಡಲಾಗುವುದು ಎಂದರು.ಸಮಸ್ಯೆಗಳ ದೂರು:ನಂತರ ಗ್ರಾಮಸ್ಥರು ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ನೀಗಿಲ್ಲ, ಕಟ್ಟಡ ಕಟ್ಟಲು ಗ್ರಾಪಂಯಿಂದ ಫಾರಂ ೯/೧೧ ಸಿಗುತ್ತಿಲ್ಲ, ನೀರಾವರಿ ಇಲಾಖೆ ಹೆಸರಲ್ಲಿಯೇ ಇನ್ನೂ ಪಹಣಿಗಳಿವೆ, ಪಂಪ್‌ಸೆಟ್‌ಗಳಿಗೆ ೫ ಗಂಟೆ ವಿದ್ಯುತ್ ದೊರೆಯುತ್ತಿಲ್ಲ, ಉಪ ಕಾಲುವೆ ಹೂಳು ತುಂಬಿ ಹೊಲಗಳಿಗೆ ನೀರು ದೊರೆಯುತ್ತಿಲ್ಲ, ನೀರಾವರಿ ಇಲಾಖೆ ಅಧಿಕಾರಿಗಳು ರೈತರೊಮದಿಗೆ ಬೇಜವಾಬ್ದಾರಿಂದ ನಡೆದುಕೊಳ್ಳುತ್ತಾರೆ ಎಂದು ದೂರಿದರು.
ಕ್ಯಾಂಪ್ ಮತ್ತು ಗ್ರಾಮದಲ್ಲಿ ಹೊಸ ನೀರಿನ ಟ್ಯಾಂಕ್ ನಿರ್ಮಾಣ, ಬೀದಿ ಬದಿ ವಿದ್ಯುತ್ ಕಂಬಗಳ ಬದಲಾವಣೆ ಸೇರಿ ಇತರೆ ಬೇಡಿಕೆ ಈಡೇರಿಸುವಂತೆ ಮನವಿ ಮಾಡಿದರು.ಸಭೆಯಲ್ಲಿ ಗ್ರಾಪಂ ಅಧ್ಯಕ್ಷೆ ಮಂಗಳಮ್ಮ ಯಲ್ಲಪ್ಪ, ಜಿಪಂ ಮಾಜಿ ಅಧ್ಯಕ್ಷ ವಿಶ್ವನಾಥ ರೆಡ್ಡಿ, ಮಾಜಿ ಉಪಾಧ್ಯಕ್ಷ ಬಸವರಾಜಪ್ಪ, ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ದೊಡ್ಡಪ್ಪ ದೇಸಾಯಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶರಣೇಗೌಡ, ಮುಖಂಡರಾದ ಬಸವರಾಜ ನೀರಗಂಟಿ, ಯಮನಪ್ಪ ಈಡಿಗೇರ್, ಹೋಟೇಲ್ ಬಸವರಾಜ, ತಹಸೀಲ್ದಾರ್ ಕುಮಾರಸ್ವಾಮಿ, ತಾಪಂ ಇಒ ಲಕ್ಷ್ಮೀದೇವಿ ಸೇರಿ ಇತರರಿದ್ದರು.
ಕಪ್ಪು ಪಟ್ಟಿಗೆ ಸೇರಿಸಿ:ಗುಂಡೂರು ಕ್ಯಾಂಪ್‌ನಲ್ಲಿ ಕೇಂದ್ರ ಸರ್ಕಾರದ ಜೆಜೆಎಂ ಕಾಮಗಾರಿ ಪೂರ್ಣ ಆದರೂ ನೀರು ಬರುತ್ತಿಲ್ಲ ಎಂದು ಗ್ರಾಮಸ್ಥರು ಸಭೆಯಲ್ಲಿ ವಿವರಿಸಿದರು. ಆಗ ಸಚಿವರು ಸಂಬಂಧಿಸಿದ ಆರ್ ಡಬ್ಲ್ಯೂ ಎಸ್ ಎಂಜಿನಿಯರ್ ವಿಜಯ ಕುಮಾರ್ ಅವರನ್ನು ಪ್ರಶ್ನಿಸಿ ಏನೂ ಸಮಸ್ಯೆ ಎಂದರು. ಇದಕ್ಕೆ ಅಧಿಕಾರಿ ಕಳೆದ ಬಿಜೆಪಿ ಸರ್ಕಾರದ ಅವಧಿಯಲ್ಲಿ ಅಮರಗುಂಡಪ್ಪ ಮೇಟಿ ಎನ್ನುವ ಗುತ್ತಿಗೆದಾರರು ಕೆಲಸ ಮಾಡಿದ್ದಾರೆ. ಶೀಘ್ರ ಪೂರ್ಣಗೊಳಿಸುವ ಭರವಸೆ ನೀಡಿದ್ದರು. ಆದರೂ ಆಗಿಲ್ಲ ಎನ್ನುವುದನ್ನು ಸಚಿವರ ಗಮನಕ್ಕೆ ತಂದರು. ಇದಕ್ಕೆ ತೀವ್ರ ಗರಂ ಆದ ಸಚಿವರು, ಅವರನ್ನು ಕೂಡಲೇ ಕಪ್ಪು ಪಟ್ಟಿಗೆ ಸೇರಿಸಿ ಎಂದ ಸೂಚಿಸಿದರು. ತಕ್ಷಣವೇ ಜಿಪಂ ಸಿಇಒ ರಾಹುಲ್ ರತ್ನಂ ಪಾಂಡೇಯ ಅವರಿಗೆ ಕರೆಮಾಡಿ ಕಪ್ಪು ಪಟ್ಟಿಗೆ ಸೇರಿಸುವಂತೆ ಸೂಚಿಸಿದರು. ನಂತರ ಸಿಇಒ ಈಗಾಗಲೇ ಬ್ಲಾಕ್ ಲಿಸ್ಟ್ ಮಾಡಿರುವುದಾಗಿ ಹೇಳಿದರು.