ಬಜೆಟ್‌ನಲ್ಲಿ ಘೋಷಣೆ ಆಗುತ್ತಿವೆ ಹೊರತು ಅನುಷ್ಠಾನ ಆಗುತ್ತಿಲ್ಲ

KannadaprabhaNewsNetwork |  
Published : Mar 17, 2026, 02:15 AM IST
ಬಜೆಟ್‌ ಪ್ರತಿಯೊಂದಿಗೆ ಮೀನಾಕ್ಷಿ ವಂಟಮುರಿ  | Kannada Prabha

ಸಾರಾಂಶ

ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಬಜೆಟ್‌ನಲ್ಲಿ ಬರೀ ಘೋಷಣೆ ಆಗುತ್ತಿವೆ ಹೊರತು ಅನುಷ್ಠಾನವಾಗುತ್ತಿಲ್ಲ. ಪಾಲಿಕೆಯದ್ದು ಬರೀ ಕಾಟಾಚಾರದ, ಬೋಗಸ್‌ ಬಜೆಟ್‌ ಎಂದು ಪ್ರತಿಪಕ್ಷ ಕಾಂಗ್ರೆಸ್‌ ಟೀಕಿಸಿದರೆ, ಆಡಳಿತ ಪಕ್ಷ ಬಿಜೆಪಿ ಸದಸ್ಯರು ಪಾಲಿಕೆ ಬಜೆಟ್‌ನ್ನು ಸಮರ್ಥಿಸಿಕೊಂಡರು.

ಹುಬ್ಬಳ್ಳಿ:

ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಬಜೆಟ್‌ನಲ್ಲಿ ಬರೀ ಘೋಷಣೆ ಆಗುತ್ತಿವೆ ಹೊರತು ಅನುಷ್ಠಾನವಾಗುತ್ತಿಲ್ಲ. ಪಾಲಿಕೆಯದ್ದು ಬರೀ ಕಾಟಾಚಾರದ, ಬೋಗಸ್‌ ಬಜೆಟ್‌ ಎಂದು ಪ್ರತಿಪಕ್ಷ ಕಾಂಗ್ರೆಸ್‌ ಟೀಕಿಸಿದರೆ, ಆಡಳಿತ ಪಕ್ಷ ಬಿಜೆಪಿ ಸದಸ್ಯರು ಪಾಲಿಕೆ ಬಜೆಟ್‌ನ್ನು ಸಮರ್ಥಿಸಿಕೊಂಡರು. ಜತೆ ಜತೆಗೆ ಅದರಲ್ಲಿನ ಕೆಲ ನೂನ್ಯತೆ ಸರಿಪಡಿಸಿಕೊಳ್ಳುವಂತೆ ಸಲಹೆ ಕೂಡ ಕೇಳಿ ಬಂದಿತು.

ಮಠವಷ್ಟೇ ಏಕೆ:ಈ ನಡುವೆ ಬಜೆಟ್‌ನ ಕಿರುಹೊತ್ತಿಗೆಯಲ್ಲಿ ಸಿದ್ಧಾರೂಢ ಮಠ, ಮೂರುಸಾವಿರ ಮಠ, ಮುರುಘಾಮಠದ ಭಾವಚಿತ್ರಗಳನ್ನಷ್ಟೇ ಬಳಸಿರುವುದಕ್ಕೆ ಪ್ರತಿಪಕ್ಷದ ಸದಸ್ಯರಾದ ಸುವರ್ಣ ಕಲ್ಲಕುಂಟ್ಲಾ, ದೊರಾಜ್‌ ಮಣಿಕುಂಟ್ಲಾ ಆಕ್ಷೇಪಿಸಿದರು. ಎಲ್ಲ ಧರ್ಮಗಳನ್ನು ಪ್ರತಿಬಿಂಬಿಸುವಂತಹ ಭಾವಚಿತ್ರಗಳನ್ನು ಬಳಸಬೇಕು ಎಂದರು. ಇದಕ್ಕೆ ಮೇಯರ್‌ ಜ್ಯೋತಿ ಪಾಟೀಲ ಆಯ್ತು ಹಾಗೆ ಮಾಡೋಣ ಎಂದು ಹೇಳಿ ಸಮಾಧಾನ ಪಡಿಸಿದರು.

ಪಿಂಕ್‌ ಆಟೋ

ಮೇಯರ್‌ ಹಾಗೂ ತೆರಿಗೆ ಸುಧಾರಣೆ, ಹಣಕಾಸು ಮತ್ತು ಅಪೀಲುಗಳ ಸ್ಥಾಯಿ ಸಮಿತಿ ಅಧ್ಯಕ್ಷಗಿರಿಯೂ ಮಹಿಳೆಯ ಕೈಯಲ್ಲಿದೆ. ಹೀಗಾಗಿ ಈ ಬಜೆಟ್‌ನಲ್ಲಿ ಮಹಿಳೆಗೆ ಆದ್ಯತೆ ನೀಡಲಾಗಿದೆ. ಪ್ರತಿ ವಾರ್ಡ್‌ಗೊಂದು ಪಿಂಕ್‌ ಆಟೋ ಓಡಿಸುವುದಾಗಿ ಪಾಲಿಕೆ ತಿಳಿಸಿದೆ. ಪರಿಸರ ಸ್ನೇಹಿ ಇ- ಆಟೋ ಇದಾಗಲಿದ್ದು, ಇದಕ್ಕಾಗಿ ₹ 4.10 ಕೋಟಿ ಮೀಸಲಿಟ್ಟಿದೆ. ಈ ಮೂಲಕ ಬೆಂಗಳೂರು ನಂತರ ಮಹಿಳೆಯರಿಗಾಗಿ ಪಿಂಕ್‌ ಆಟೋ ಓಡಿಸಲಿರುವ ಮಹಾನಗರ ಪಾಲಿಕೆ ಎಂಬಂತಾಗಿದೆ.

ವಿದ್ಯಾಶ್ರೀ:

ಮಹಾನಗರದಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿನಿಯರಿಗೆ ಪ್ರೋತ್ಸಾಹಿಸಲು ವಿದ್ಯಾಶ್ರೀ ಯೋಜನೆಯಡಿ ₹ 25 ಸಾವಿರ ಬಹುಮಾನ ನೀಡಲಿದೆ. ಇದಕ್ಕೆ ಮೀಸಲಿಟ್ಟಿರುವುದು ₹ 25 ಸಾವಿರ ಅಷ್ಟೇ. ಹೀಗಾಗಿ ಒಬ್ಬ ವಿದ್ಯಾರ್ಥಿನಿಗಷ್ಟೇ ಈ ಬಹುಮಾನ ನೀಡಲಿದೆ. ಆದರೆ, ಎಸ್ಸೆಸ್ಸೆಲ್ಸಿ, ಪಿಯುಸಿ, ಪದವಿ ಯಾವುದರಲ್ಲಿ ಹೆಚ್ಚು ಅಂಕ ಗಳಿಸಿರಬೇಕು ಎಂಬ ಬಗ್ಗೆ ಸ್ಪಷ್ಟತೆ ಇಲ್ಲ. ಇದರೊಂದಿಗೆ ಪೌರಕಾರ್ಮಿಕರ ಮಕ್ಕಳಿಗೆ ಲ್ಯಾಪ್‌ಟ್ಯಾಪ್‌, ಕ್ರೀಡಾಪಟುಗಳಿಗೆ ಸಹಾಯಧನ, ಸೈನಿಕ ಮಕ್ಕಳ ವಿದ್ಯಾಭ್ಯಾಸಕ್ಕೆ ತಲಾ 5 ಲಕ್ಷ ಮೀಸಲಿಟ್ಟಿದೆ.

ವಾರ್ಡ್‌ಗೆ ₹ 1.50 ಕೋಟಿ:

ಪ್ರತಿ ವಾರ್ಡ್‌ಗೆ ಈ ಸಲದ ಬಜೆಟ್‌ನಲ್ಲಿ ₹ 1.50 ಕೋಟಿ ನೀಡುವುದಾಗಿ ಘೋಷಿಸಿದೆ. ಇಷ್ಟೊಂದು ಹಣ ನೀಡಿರುವುದು ಇದೇ ಮೊದಲು. ಆದರೆ ಇದನ್ನು ₹ 2 ಕೋಟಿಗೇರಿಸಿ ಎಂಬ ಬೇಡಿಕೆಯೂ ಕೇಳಿ ಬಂದಿತು.

ನ್ಯೂ ಬಾಟಲ್‌ ಓಲ್ಡ್‌ ವೈನ್‌:

ನ್ಯೂ ಬಾಟಲ್‌ ಓಲ್ಡ್‌ ವೈನ್‌ ಎಂಬಂತೆ ಹಳೆ ಯೋಜನೆಗಳನ್ನೇ ಮತ್ತೆ ಬಜೆಟ್‌ನಲ್ಲಿ ಪ್ರಸ್ತಾಪಿಸಲಾಗಿದೆ. ಅದರಲ್ಲಿ ಜಿಐಎಸ್‌ ಸರ್ವೇ, ಎಲ್‌ಇಡಿ ಬಲ್ಬ್‌, ಪೌರಕಾರ್ಮಿಕರ ಗೃಹಭಾಗ್ಯ, ಘನತ್ಯಾಜ್ಯ ನಿರ್ವಹಣೆ ಮತ್ತು ಪರಿಸರ ಸಂರಕ್ಷಣೆ, ಸ್ವಚ್ಛ ಭಾರತ- 2, ಉದ್ಯಾನವನ ಹಾಗೂ ಕೆರೆಗಳ ಅಭಿವೃದ್ಧಿ, ನಿರಂತರ ನೀರು ಸೇರಿದಂತೆ ಹಲವು ಯೋಜನೆಗಳನ್ನು ಮತ್ತೆ ಪ್ರಸ್ತಾಪಿಸಿದೆ. ಈ ಮೂಲಕ ಹಳೆ ಯೋಜನೆಗಳನ್ನೇ ಮುಂದುವರಿಸಿ ಪೂರ್ಣಗೊಳಿಸುವ ಪ್ರಯತ್ನ ಮಾಡುವುದಾಗಿ ಘೋಷಿಸಿದೆ.

ಸ್ಮಾರ್ಟ್‌ಸಿಟಿ ಯೋಜನೆ ಇಲ್ಲ:

ಸ್ಮಾರ್ಟ್‌ಸಿಟಿ ಯೋಜನೆಯಡಿ ₹ 1000 ಕೋಟಿಗೂ ಅಧಿಕ ವೆಚ್ಚದ 63 ಕಾಮಗಾರಿಗಳನ್ನು ಪೂರ್ಣಗೊಳಿಸಲಾಗಿದೆ. ಕೇಂದ್ರ ಸರ್ಕಾರದಡಿಯಲ್ಲಿದ್ದ ಸ್ಮಾರ್ಟ್‌ಸಿಟಿ ಪ್ರೊಜೆಕ್ಟ್‌ ಪೂರ್ಣಗೊಂಡು ಕಚೇರಿ ಮುಚ್ಚಿದೆ. ಅದರ ನಿರ್ವಹಣೆ ಸರಿಯಾಗಿ ಆಗುತ್ತಿಲ್ಲ. ಬಜೆಟ್‌ನಲ್ಲಿ ಕಾರ್ಯನಿರ್ವಹಣೆಗೆ ₹ 3 ಕೋಟಿ ಎಂದು ಹೇಳಿದೆ ಅಷ್ಟೇ. ಆದರೆ ಸ್ಮಾರ್ಟ್‌ಸಿಟಿ ಯೋಜನೆಗಳಡಿ ಕೈಗೊಂಡ ಕಾಮಗಾರಿ ನಿರ್ವಹಣೆ ಅಥವಾ ಅರ್ಧಂಮರ್ಧ ಆಗಿರುವ ಯೋಜನೆಗಳನ್ನು ಪೂರ್ಣಗೊಳಿಸುವ ಬಗ್ಗೆ ಪ್ರಸ್ತಾವವೇ ಇಲ್ಲ.

ಮರೆತ ರಾಜಕಾಲುವೆ:

ರಾಜಕಾಲುವೆಯಿಂದ ಪ್ರತಿ ವರ್ಷ ಮಳೆಗಾಲದಲ್ಲಿ ಜನತೆ ಅನುಭವಿಸುವ ಕಷ್ಟ ಅಷ್ಟಿಷ್ಟಲ್ಲ. ಸದಸ್ಯರು ತಮ್ಮ ವಾರ್ಡ್‌ ಅನುದಾನದಲ್ಲಿ ಅಲ್ಲಲ್ಲಿ ದುರಸ್ತಿ ಮಾಡಿಸಿಕೊಳ್ಳುವುದುಂಟು. ಆದರೆ, ಬಜೆಟ್‌ನಲ್ಲಿ ರಾಜಕಾಲುವೆ ಅಭಿವೃದ್ಧಿಯಾಗಲಿ ಅಥವಾ ದುರಸ್ತಿ ಬಗ್ಗೆಯಾಗಲಿ ಪ್ರಸ್ತಾಪವೇ ಇಲ್ಲದಿರುವುದು ವಿಪರ್ಯಾಸ.

4ನೇ ಮಹಿಳೆ:

ಪಾಲಿಕೆ ಅಸ್ತಿತ್ವಕ್ಕೆ ಬಂದು 64 ವರ್ಷದಲ್ಲಿ ಈ ವರೆಗೆ ನಾಲ್ಕು ಜನ ಮಹಿಳಾ ಸದಸ್ಯೆಯರಷ್ಟೇ ಬಜೆಟ್‌ ಮಂಡಿಸಿದ್ದಾರೆ. 1986-87ರಲ್ಲಿ ನಾಗರತ್ನ ಗುಂಜಾಳ, 2007-08ರಲ್ಲಿ ಶಾಂತವ್ವ ಬೂದಿಹಾಳ, 2011-12ರಲ್ಲಿ ಪೂರ್ಣ ಪಾಟೀಲ ಬಜೆಟ್‌ ಮಂಡಿಸಿದ್ದರು. ಇದೀಗ ಮೀನಾಕ್ಷಿ ವಂಟಮುರಿ ನಾಲ್ಕನೆಯ ಮಹಿಳಾ ಸದಸ್ಯೆಯಾಗಿದ್ದಾರೆ. ಉಳಿದಂತೆ ಎಲ್ಲ ಬಜೆಟ್‌ಗಳನ್ನು ಪುರುಷ ಸದಸ್ಯರೇ ಮಂಡಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹುಬ್ಬಳ್ಳಿ, ಧಾರವಾಡ ಮಹಾನಗರ ಅಭಿವೃದ್ಧಿಗೆ ಸಪ್ತಸೂತ್ರ
ಹಾನಗಲ್ಲಿನ 14 ಕೇಂದ್ರಗಳಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಸಿದ್ಧತೆ