ಆತ್ಮಭೂಷಣ್
ಮಂಗಳೂರು-ಬೆಂಗಳೂರು ನಡುವೆ ಪ್ರತಿದಿನ ಮೂರು ರೈಲುಗಳು ಸಂಚರಿಸುತ್ತಿವೆ. ಪಂಚಗಂಗಾ ಎಕ್ಸ್‌ಪ್ರೆಸ್, ಬೆಂಗಳೂರು-ಕಾರವಾರ ಎಕ್ಸ್‌ಪ್ರೆಸ್ ಹಾಗೂ ಬೆಂಗಳೂರು-ಕಣ್ಣೂರು ಎಕ್ಸ್‌ಪ್ರೆಸ್ ರೈಲು ಓಡಾಟ ನಡೆಸುತ್ತಿದೆ. ಹಾಸನದಲ್ಲಿ ರೈಲ್ವೆ ಕಾಮಗಾರಿಗಾಗಿ ಡಿ.14ರಿಂದ 22ರ ವರೆಗೆ ಮೆಗಾ ಬ್ಲಾಕ್ ನಡೆಸಲಾಗಿದೆ. ಇದರಿಂದಾಗಿ ಕರಾವಳಿ ಹಾಗೂ ರಾಜಧಾನಿ ಬೆಂಗಳೂರು ಸಂಪರ್ಕಿಸುವ ರೈಲು ಸಂಚಾರ ಸ್ಥಗಿತಗೊಳಿಸಲಾಗಿದೆ. ಅದರಲ್ಲೂ ದಿನವೂ ತುಂಬಿತುಳುಕುತ್ತಿದ್ದ ಮಂಗಳೂರು-ಬೆಂಗಳೂರು, ಕಣ್ಣೂರು ಹಾಗೂ ಪಂಚಗಂಗಾ ಎಕ್ಸ್‌ಪ್ರೆಸ್ ರೈಲುಗಳು ಒಂಭತ್ತು ದಿನಗಳ ಕಾಲ ಓಡಾಟ ಸ್ಥಗಿಗೊಳಿಸಬೇಕಾಗಿದೆ. ಇದು ಮುಂಗಡ ಟಿಕೆಟ್ ಕಾಯ್ದಿರಿಸಿದ ಪ್ರಯಾಣಿಕರಿಗೆ ಪ್ರತಿಕೂಲ ಪರಿಣಾಮ ಬೀರುವಂತಾಗಿದೆ. ವರ್ಷಾಂತ್ಯವಾದ್ದರಿಂದ ಖಾಸಗಿ ಬಸ್ಸುಗಳ ದರ ದುಬಾರಿಯಾಗಿದ್ದು, ಪ್ರಯಾಣಿಕರ ಕಿಸೆಗೆ ಕತ್ತರಿ ಬೀಳಲಿದೆ.
ಮುಂಗಡ ಬುಕ್ಕಿಂಗ್‌ನವರಿಗೆ ಸಮಸ್ಯೆ:ಹಾಸನ ಕಾಮಗಾರಿ ಸಲುವಾಗಿ ರೈಲು ಸಂಚಾರ ಮೊಟಕುಗೊಳಿಸಿರುವುದಕ್ಕೆ ಪ್ರಯಾಣಿಕರ ಆಕ್ಷೇಪವಿಲ್ಲ. ಬದಲು ಕನಿಷ್ಠ ಒಂದು ತಿಂಗಳ ಸಮಯಾವಕಾಶ ನೀಡದೆ ಒಂದು ವಾರದ ಸೀಮಿತ ಅವಧಿಯಲ್ಲಿ ರೈಲು ಸಂಚಾರ ರದ್ದುಗೊಳಿಸಿರುವ ಪ್ರಕಟಣೆ ಹೊರಡಿಸಿರುವುದು ಸರಿಯಲ್ಲ ಎನ್ನುತ್ತಿದ್ದಾರೆ. ಈ ರೈಲುಗಳಲ್ಲಿ ಮಂಗಳೂರು-ಬೆಂಗಳೂರು ನಡುವೆ ಪ್ರತಿನಿತ್ಯ ಸಾವಿರಾರು ಮಂದಿ ಪ್ರಯಾಣಿಸುತ್ತಿರುತ್ತಾರೆ. ಸುಮಾರು ಮೂರು ತಿಂಗಳಿಗೂ ಮೊದಲೇ ಮುಂಗಡ ಟಿಕೆಟ್ ಕಾಯ್ದಿರಿಸುತ್ತಾರೆ. ಈಗ ದಿಢೀರನೆ ರದ್ದುಗೊಳಿಸಿರುವುದರಿಂದ ವಿವಿಧ ಕಡೆಗಳಿಗೆ ತೆರಳುವವರು ಅನಿವಾರ್ಯವಾಗಿ ಪರ್ಯಾಯ ಸಂಚಾರ ವ್ಯವಸ್ಥೆಯ ಮೊರೆ ಹೋಗಬೇಕಾಗಿದೆ.
ಒಂದು ರೈಲು ಇದ್ದರೂ ನಿಷ್ಪ್ರಯೋಜನ
ನಂಬರು 16585/ 16586 ಬೆಂಗಳೂರು-ಮುರುಡೇಶ್ವರ ಎಕ್ಸ್‌ಪ್ರೆಸ್ ರೈಲು(ವಯಾ ಅರಸೀಕೆರೆ) ಮಾತ್ರ ಒಂಭತ್ತು ದಿನಗಳ ಕಾಲ ಸಂಚರಿಸಲಿದೆ. ಹಾಸನದಲ್ಲಿ ಹಗಲು ರಾತ್ರಿ ಕಾಮಗಾರಿ ನಡೆಯುತ್ತಿರುವುದರಿಂದ ಇತರೆ ರೈಲುಗಳ ಸಂಚಾರಕ್ಕೆ ಅವಕಾಶ ನೀಡಿಲ್ಲ. ಈ ರೈಲು ಬೆಂಗಳೂರಿನಿಂದ ರಾತ್ರಿ 8.30ಕ್ಕೆ ಹೊರಟು ಮರುದಿನ ಬೆಳಗ್ಗೆ 8.30 ಮಂಗಳೂರು, ಮಧ್ಯಾಹ್ನ 1 ಗಂಟೆ ಮುರುಡೇಶ್ವರ. ಸಂಜೆ ಮುರುಡೇಶ್ವರದಿಂದ ಹೊರಟು ರಾತ್ರಿ 8.30ಕ್ಕೆ ಮಂಗಳೂರಿನಿಂದ ಬೆಂಗಳೂರಿಗೆ ತೆರಳುತ್ತದೆ. ಮರುದಿನ 8.30ಕ್ಕೆ ಬೆಂಗಳೂರು ತಲುಪುತ್ತದೆ ಎಂದು ವೇಳಾಪಟ್ಟಿ ನೀಡಲಾಗಿದೆ. ವಾಸ್ತವದಲ್ಲಿ ಈ ರೈಲು ಬೆಂಗಳೂರು ಕೆಎಸ್ಆರ್ ರೈಲು ನಿಲ್ದಾಣ(ಮೆಜೆಸ್ಟಿಕ್) ಅಥವಾ ಯಶವಂತಪುರದಿಂದ ಹೊರಡುತ್ತಿಲ್ಲ. ಅದರ ಬದಲು ಬೈಯಪ್ಪನಹಳ್ಳಿಯಿಂದ ವಯಾ ಚಿಕ್ಕಬಾಣಾವರ ಮೂಲಕ ಬೆಂಗಳೂರು ಹೊರವಲಯದಿಂದಾಗಿ ತುಮಕೂರು, ಅರಸೀಕೆರೆ ಮೂಲಕ ಸಂಚರಿಸುತ್ತದೆ. ಹೀಗಾದಲ್ಲಿ ಇದು ಬೆಂಗಳೂರು ಅಥವಾ ಮಂಗಳೂರಿನ ಪ್ರಯಾಣಿಕರಿಗೆ ಉಪಯೋಗವಾಗದು. ಇದೇ ಕಾರಣಕ್ಕೆ ನಮ್ಮ ಪರಿಚಯಸ್ಥರಿಗೆ ಬೆಂಗಳೂರಿನಿಂದ ಮಂಗಳೂರಿಗೆ ಬರಲು ಸಾಧ್ಯವಾಗಿಲ್ಲ ಎನ್ನುತ್ತಾರೆ ರೈಲ್ವೆ ಹೋರಾಟಗಾರ ಜಿ.ಕೆ.ಭಟ್.ಹಾಸನದಲ್ಲಿ ರೈಲ್ವೆ ಕಾಮಗಾರಿಗೆ ವಿರೋಧವಿಲ್ಲ, ಆದರೆ ಪ್ರಯಾಣಿಕರಿಗೆ ಅನಾನುಕೂಲವಾಗದಂತೆ ಕನಿಷ್ಠ ಒಂದು ತಿಂಗಳು ಮೊದಲೇ ಕಾಮಗಾರಿಗೆ ರೈಲು ಸಂಚಾರ ಸ್ಥಗಿತಗೊಳಿಸುವ ಬಗ್ಗೆ ಮಾಹಿತಿ ನೀಡಬೇಕಿತ್ತು. ಕೇವಲ ಒಂದು ರೈಲು ಸಂಚಾರಕ್ಕೆ ಅವಕಾಶ ನೀಡಿ ಉಳಿದ ಮೂರು ರೈಲುಗಳನ್ನು ರದ್ದುಗೊಳಿಸದೆ ತಾತ್ಕಾಲಿಕ ಸಂಚಾರಕ್ಕೆ ಅವಕಾಶ ನೀಡಬೇಕಾಗಿತ್ತು.
-ಹನುಮಂತ ಕಾಮತ್, ಅಧ್ಯಕ್ಷರು, ಪಶ್ಚಿಮ ಕರಾವಳಿ ರೈಲ್ವೆ ಯಾತ್ರಿ ಅಭಿವೃದ್ಧಿ ಸಮಿತಿ, ಮಂಗಳೂರುದಿನದ 24 ಗಂಟೆಯೂ ಹಾಸನದಲ್ಲಿ ರೈಲ್ವೆ ಕಾಮಗಾರಿ ನಡೆಯುತ್ತಿದೆ. ಈ ಕಾಮಗಾರಿ ಡಿ.22ರಂದು ಮುಕ್ತಾಯಗೊಂಡು ಅಂದೇ ರಾತ್ರಿಯಿಂದ ರಾಜಧಾನಿ-ಮಂಗಳೂರು ನಡುವೆ ರೈಲು ಸಂಚಾರ ಪುನಾರಂಭವಾಗಲಿದೆ. ಸದ್ಯದ ಮಟ್ಟಿಗೆ ಒಂದೇ ರೈಲು ಸಂಚಾರ ಉಳಿಸಿಕೊಳ್ಳಲಾಗಿದೆ. ಪ್ರಯಾಣಿಕರು ಅನಿವಾರ್ಯವಾಗಿ ಸಹಕರಿಸಬೇಕಾಗಿದೆ.-ವಿಜಯಾ, ಎಡಿಆರ್‌ಎಂ, ಮೈಸೂರು ವಿಭಾಗ