ಕನಕಪುರ: ಬೆಳಗಾವಿಯಲ್ಲಿ ಭೂಮಿ ಉಳಿವಿಗಾಗಿ ಚಳವಳಿ ನಡೆಸುತ್ತಿದ್ದ ರೈತರ ಮೇಲೆ ದೌರ್ಜನ್ಯವೆಸಗಿರುವ ಅಲ್ಲಿಯ ಪೊಲೀಸ್ ವರಿಷ್ಠಾಧಿಕಾರಿ ಭೀಮಾಶಂಕರ ಗುಳೇದ್ ಅವರನ್ನು ಕೂಡಲೇ ಸೇವೆಯಿಂದ ಅಮಾನತುಗೊಳಿಸುವಂತೆ ಪ್ರಗತಿಪರ ಸಂಘಟನೆಗಳ ಒಕ್ಕೂಟದ ಮುಖಂಡ ಕುಮಾರಸ್ವಾಮಿ ಆಗ್ರಹಿಸಿದರು.
ತಾಲೂಕು ಕಚೇರಿ ಮುಂದೆ ಪ್ರತಿಭಟನೆ ನಡೆಸಿ ತಹಶೀಲ್ದಾರ್ ಸ್ಮಿತಾರಾಮು ಅವರಿಗೆ ಮನವಿ ಪತ್ರ ಸಲ್ಲಿಸಿದ ಬಳಿಕ ಮಾತನಾಡಿದ ಅವರು, ಚುನಾವಣೆಗೆ ಬರುವಾಗ ರೈತ ದೇಶದ ಬೆನ್ನೆಲುಬು ಎಂದೆಲ್ಲಾ ಹೊಗಳಿ ಮತ ಪಡೆದ ನಂತರ ರೈತ ತಮ್ಮ ಹಕ್ಕಿಗಾಗಿ ಹೋರಾಟ ನಡೆಸಿದರೆ ಪೊಲೀಸರನ್ನು ಬಳಸಿ ಅವರ ಹಕ್ಕುಗಳಿಗೆ ರಾಜ್ಯ ಸರ್ಕಾರ ತಡೆಯೊಡ್ಡುತ್ತಿರುವುದು ಪ್ರಜಾತಂತ್ರಕ್ಕೆ ಅಗೌರವ. ಕೂಡಲೇ ಮುಖ್ಯಮಂತ್ರಿಗಳು ಉದ್ದಟತನ ತೋರಿದ ಪೊಲೀಸ್ ಅಧಿಕಾರಿಯನ್ನು ಅಮಾನತುಗೊಳಿಸಿ ನೊಂದ ರೈತರ ಕ್ಷಮೆಯಾಚಿಸುವಂತೆ ಒತ್ತಾಯಿಸಿದರು.ಜಿಲ್ಲಾ ರೈತ ಸಂಘದ ಅಧ್ಯಕ್ಷ ಚಿಲೂರು ಮುನಿರಾಜು ಮಾತನಾಡಿ, ರೈತರು ಬೆವರು ಸುರಿಸಿ ಬೆಳೆಯುವ ಬೆಳೆ ತಿಂದು ಬದುಕುತ್ತಿರುವ ಹಾಗೂ ಜನರು ಕಟ್ಟುವ ತೆರಿಗೆ ಹಣದಿಂದ ಐಶಾರಾಮಿ ಜೀವನ ಸಾಗಿಸುತ್ತಿರುವ ಸರ್ಕಾರಿ ಅಧಿಕಾರಿಗಳು ಅನ್ನ ನೀಡುವ ರೈತರ ಮೇಲೆ ದೌರ್ಜನ್ಯವೆಸಗಿರುವುದು ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ರೈತ ಸಂಘದ ಜಿಲ್ಲಾ ಕಾರ್ಯದರ್ಶಿ ನಲ್ಲಹಳ್ಳಿ ಶ್ರೀನಿವಾಸ್, ಅಂತೋಣಿ, ಸ್ವತಂತ್ರ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಭಾಸ್ಕರ್, ತಾಲೂಕು ಅಧ್ಯಕ್ಷ ರಮೇಶ್, ಜೀವನ್ ಟ್ರಸ್ಟ್ ಹೊಸದುರ್ಗ ಪ್ರಶಾಂತ್, ನೇಗಿಲಯೋಗಿ ಟ್ರಸ್ಟ್ ಅಧ್ಯಕ್ಷ ಗಬ್ಬಾಡಿ ಕಾಡೇಗೌಡ, ಹಿಂದೂಪರ ಸಂಘಟನೆಯ ಕೆ.ಆರ್.ಸುರೇಶ್ ಹಾಜರಿದ್ದರು.ಕೆ ಕೆ ಪಿ ಸುದ್ದಿ 03:
ರೈತರ ಮೇಲೆ ದೌರ್ಜನ್ಯ ಎಸಗಿದ ಪೊಲೀಸ್ ಅಧಿಕಾರಿಯನ್ನು ಅಮಾನತುಗೊಳಿಸುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಿದ ಪ್ರಗತಿಪರ ಸಂಘಟನೆಗಳ ಪದಾಧಿಕಾರಿಗಳು ತಹಸೀಲ್ದಾರ್ ಸ್ಮಿತಾ ಅವರಿಗೆ ಮನವಿ ಪತ್ರ ಸಲ್ಲಿಸಿದರು.