ಶ್ರೀ ಅಮೃತೇಶ್ವರ ಪ್ರೌಢಶಾಲೆಯಲ್ಲಿ ಎಸ್‌ಎಸ್‌ಎಲ್‌ಸಿ ಮಕ್ಕಳಿಗೆ ಪರೀಕ್ಷೆ ಎದುರಿಸುವುದು ಹೇಗೆ ? ಉಪನ್ಯಾಸ
ಮಕ್ಕಳು ವಾರ್ಷಿಕ ಪರೀಕ್ಷೆಯನ್ನು ಅತ್ಮವಿಶ್ವಾಸದಿಂದ ಸಮರ್ಥವಾಗಿ ಎದುರಿಸಬೇಕು ಎಂದು ವಿಷಯ ಸಂಪನ್ಮೂಲ ಶಿಕ್ಷಕಿ ಪಲ್ಲವಿ ಬಿ. ಆರ್. ಹೇಳಿದ್ದಾರೆ.
ನೇರಲಕೆರೆ ಶ್ರೀ ಅಮೃತೇಶ್ವರ ಪ್ರೌಢಶಾಲೆಯಲ್ಲಿ ಎಸ್‌ಎಸ್‌ಎಲ್‌ಸಿ ಮಕ್ಕಳಿಗೆ ವಾರ್ಷಿಕ ಪರೀಕ್ಷೆ-೧ನ್ನು ಹೇಗೆ ಸಮರ್ಥವಾಗಿ ಮತ್ತು ಆತ್ಮವಿಶ್ವಾಸದಿಂದ ಎದುರಿಸಬೇಕು ಎಂಬ ಬಗ್ಗೆ ನಡೆದ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು. ಮಕ್ಕಳು ಯಾವುದೇ ವಿಷಯದ ಪ್ರಶ್ನೆ ಪತ್ರಿಕೆಯಲ್ಲಿ ತಾಳ್ಮೆಯಿಂದ ಪ್ರಶ್ನೆಗಳನ್ನು ಓದಿಕೊಂಡು ವಿವೇಚನೆಯಿಂದ ಉತ್ತರಿಸಬೇಕು. ಮೊದಲು ಮಕ್ಕಳು ಚೆನ್ನಾಗಿ ಓದಿ, ವಿಷಯವನ್ನು ಮನನ ಮಾಡಿಕೊಂಡಿರಬೇಕು. ಮನನ ಮಾಡಿಕೊಂಡಿದ್ದನ್ನು ಪದೇ ಪದೇ ಆಸಕ್ತಿಯಿಂದ ಬರೆಯುವ ಮೂಲಕ ಓದಿದ ವಿಷಯ ಮರೆಯದ ಹಾಗೆ ನೆನಪಿನಲ್ಲಿಟ್ಟುಕೊಳ್ಳಬಹುದು ಎಂದು ಹೇಳಿದರು. ಓದುವ ವಿಷಯದಲ್ಲಿ ಶ್ರದ್ಧೆ ಇರಬೇಕು. ತರಗತಿ ಕೋಣೆಯಲ್ಲಿ ಶಿಕ್ಷಕರು ಬೋಧಿಸುವ ವಿಷಯಗಳ ಕಲ್ಪನೆಗಳನ್ನು ತದೇಕ ಚಿತ್ತದಿಂದ ಆಲಿಸಿ ಅರ್ಥೈಸಿಕೊಳ್ಳಬೇಕು. ಹಾಗಾದಾಗ ಮಾತ್ರ ಮಕ್ಕಳು ಮುಂಬರುವ ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಪಡೆಯಲು ಸಾಧ್ಯ. ಅಲ್ಲದೆ ಮಕ್ಕಳು ತಮಗೆ ಅತ್ಯಂತ ಕ್ಲಿಷ್ಟವೆನಿಸುವ ವಿಷಯಗಳನ್ನು ಬೆಳಗಿನಜಾವ ಬೇಗ ಎದ್ದು ಅಧ್ಯಯನ ಮಾಡಬೇಕು. ಒಂದು ಗಂಟೆಗಿಂತ ಹೆಚ್ಚು ಅವಧಿ ಒಂದೇ ವಿಷಯವನ್ನು ಸತತವಾಗಿ ಓದಬಾರದು. ಒಂದು ಗಂಟೆ ಓದಿನ ನಂತರ ಹತ್ತು ನಿಮಿಷಗಳ ವಿಶ್ರಾಂತಿ ಪಡೆದು, ಆ ಅವಧಿಯಲ್ಲಿ ಈ ಹಿಂದೆ ಓದಿದ ಕಲ್ಪನೆ ಮನನ ಮಾಡಿಕೊಳ್ಳಬೇಕು. ಆನಂತರ ಬೇರೊಂದು ವಿಷಯದ ಕಲಿಕೆಯೆಡೆಗೆ ಮನಸ್ಸನ್ನು ಅಣಿಗೊಳಿಸಬೇಕು. ಈ ಎಲ್ಲ ವಿಚಾರಗಳನ್ನು ಮಕ್ಕಳು ಪಾಲಿಸಿದಲ್ಲಿ ಉತ್ತಮ ಅಂಕ ಪಡೆಯುವುದು ಅಷ್ಟೇನೂ ಕ್ಲಿಷ್ಟಕರವಲ್ಲ ಎಂದು ಹೇಳಿದರು. ಶ್ರೀ ಅಮೃತೇಶ್ವರ ಪ್ರೌಢಶಾಲೆ ಮುಖ್ಯ ಶಿಕ್ಷಕ ಹಾಲೇಶ್ ಕೆ. ಟಿ. ಮಾತನಾಡಿ ಶಿಕ್ಷಕಿ ಪಲ್ಲವಿ ಬಿ.ಆರ್. ನನ್ನ ಹಿರಿಯ ವಿದ್ಯಾರ್ಥಿನಿ. ತಾವು ಓದಿದ ಶಾಲೆಯಲ್ಲೆ ಇಂದು ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ತನು-ಮನ-ಧನ ಪೂರ್ವಕವಾಗಿ ತನ್ನನ್ನು ತಾವು ಸಂಪೂರ್ಣವಾಗಿ ಕರ್ತವ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಅವರ ಅರ್ಪಣಾಭಾವ ಇತರರಿಗೆ ಪ್ರೇರಣೆಯಾಗಿದೆ ಎಂದು ಹೇಳಿದರು.ನಮ್ಮ ಶಾಲೆ ಎಸ್‌ಎಸ್‌ಎಲ್‌ಸಿ ಮಕ್ಕಳಿಗೆ ಶಿಕ್ಷಕಿ ಪಲ್ಲವಿ ನೀಡಿದ ಕಿವಿಮಾತುಗಳನ್ನು ಮಕ್ಕಳು ಚೆನ್ನಾಗಿ ನೆನಪಿನಲ್ಲಿಟ್ಟುಕೊಂಡು, ಮುಂಬರುವ ಪರೀಕ್ಷೆಯಲ್ಲಿ ಉತ್ತಮವಾಗಿ ಬರೆದು, ಒಳ್ಳೆಯ ಅಂಕಗಳನ್ನು ಪಡೆದು, ತಮ್ಮ ಭವ್ಯ ಭವಿಷ್ಯ ರೂಪಿಸಿಕೊಳ್ಳಬೇಕು. ಮಕ್ಕಳು ಚೆನ್ನಾಗಿ ಓದಿ ಭವಿಷ್ಯ ಕಟ್ಟಿಕೊಳ್ಳುವ ಜೊತೆಗೆ ಸತ್ಪ್ರಜೆಗಳಾಗಿ, ತಾವು ಓದಿದ ಶಾಲೆ ಮತ್ತು ಗ್ರಾಮಗಳಿಗೆ ಎನಾದರೂ ಉಪಯೋಗವಾಗುವ ಕಾರ್ಯ ಮಾಡಬೇಕು. ಎಂದು ಹೇಳಿದರು.ಈ ಸಂದರ್ಬದಲ್ಲಿ ಶಿಕ್ಷಕಿ ಪಲ್ಲವಿ ಬಿ.ಆರ್.ಅವರನ್ನು ಸನ್ಮಾನಿಸಲಾಯಿತು, ಹತ್ತನೇ ತರಗತಿ ಮತ್ತು ಹಾಸ್ಟೆಲ್ ಮಕ್ಕಳು ಹಾಜರಿದ್ದರು.-