ಹಾನಗಲ್ಲು ಶೆಟ್ಟಳ್ಳಿಯಲ್ಲಿ ಶ್ರೀ ಸಬ್ಬಮ್ಮ ದೇವರ ವಾರ್ಷಿಕ ಸುಗ್ಗಿ ಆಚರಣೆ

KannadaprabhaNewsNetwork |  
Published : Apr 30, 2025, 12:30 AM IST
ಹಾನಗಲ್ಲು ಶೆಟ್ಟಳ್ಳಿಯಲ್ಲಿ ಶ್ರೀ ಸಬ್ಬಮ್ಮ ದೇವರ ವಾರ್ಷಿಕ ಸುಗ್ಗಿ ಆಚರಣೆ: ಮಂಗಳವಾರ ಉತ್ಸವಕ್ಕೆ ತೆರೆ | Kannada Prabha

ಸಾರಾಂಶ

ಪಟ್ಟಣ ಸಮೀಪದ ಹಾನಗಲ್ಲು ಶೆಟ್ಟಳ್ಳಿಯಲ್ಲಿ ಶ್ರೀ ಸಬ್ಬಮ್ಮ ದೇವರ ವಾರ್ಷಿಕ ಸುಗ್ಗಿ ಉತ್ಸವ ಸಾಂಪ್ರದಾಯಿಕ ಆಚರಣೆಗಳೊಂದಿಗೆ ನಡೆಯಿತು.

ಕನ್ನಡಪ್ರಭವಾರ್ತೆ ಸೋಮವಾರಪೇಟೆ

ಪಟ್ಟಣ ಸಮೀಪದ ಹಾನಗಲ್ಲು ಶೆಟ್ಟಳ್ಳಿಯಲ್ಲಿ ಶ್ರೀ ಸಬ್ಬಮ್ಮ ದೇವರ ವಾರ್ಷಿಕ ಸುಗ್ಗಿ ಉತ್ಸವ ಸಾಂಪ್ರದಾಯಿಕ ಆಚರಣೆಗಳೊಂದಿಗೆ ನೆರವೇರಿತು.

ಗ್ರಾಮದ ನಡುಭಾಗದಲ್ಲಿರುವ ಜೋಡಿ ಕಂಬತಳೆಯಲ್ಲಿ ಶ್ರೀ ಸಬ್ಬಮ್ಮ ದೇವರಿಗೆ ವಿಶೇಷ ಪೂಜೆಗಳು ನೆರವೇರಿದವು. ಸುಗ್ಗಿ ಸಂದರ್ಭದ 12 ದಿನಗಳ ಕಾಲ ಗ್ರಾಮಸ್ಥರು ಕಟ್ಟುನಿಟ್ಟಿನ ಆಚರಣೆಯಲ್ಲಿ ತೊಡಗಿದ್ದರು. ಮಲ್ಲು ಸುಗ್ಗಿಯಲ್ಲಿ ಹಾನಗಲ್ಲು ಶೆಟ್ಟಳ್ಳಿ ಮಾತ್ರವಲ್ಲದೇ ಸುತ್ತಮುತ್ತಲ ಊರಿನಿಂದ ಸಾರ್ವಜನಿಕ ಭಕ್ತಾದಿಗಳು, ಬಂಧುಗಳು ಆಗಮಿಸಿ ಗ್ರಾಮ ದೇವಿಗೆ ಪೂಜೆ ಸಲ್ಲಿಸಿದರು.

29ರಂದು ಮಂಗಳವಾರ(ಇಂದು) ಮಾರಿ ಕಳುಹಿಸುವ ಸಾಂಪ್ರದಾಯಿಕ ಪೂಜೆಯ ಮೂಲಕ ಪ್ರಸಕ್ತ ಸಾಲಿನ ಸುಗ್ಗಿ ಉತ್ಸವಕ್ಕೆ ತೆರೆಬೀಳಲಿದೆ. ಸುಗ್ಗಿ ಅಂಗವಾಗಿ ಗ್ರಾಮದ ಸುಗ್ಗಿಕಟ್ಟೆಯಲ್ಲಿ ಉಯಿಲು ತೂಗುವುದು, ದೇವರ ಮೂರ್ತಿಯ ಮೆರವಣಿಗೆ, ತೆಂಗಿನ ಕಾಯಿಗೆ ಗುಂಡು ಹೊಡೆಯುವುದು, ತೆಂಗಿನ ಕಾಯಿ ಕೀಳುವುದು, ಸುಗ್ಗಿ ಕುಣಿತ ಸೇರಿದಂತೆ ಇತರ ಸಾಂಪ್ರದಾಯಿಕ ಆಚರಣೆಗಳು ನೆರವೇರಿದವು.

ಸುಗ್ಗಿ ಕಟ್ಟೆಗೆ ಆಗಮಿಸಿ ದೇವರ ಪೂಜಾ ಕಾರ್ಯದಲ್ಲಿ ಭಾಗಿಯಾಗಿ ಮಾತನಾಡಿದ ಶಾಸಕ ಡಾ. ಮಂತರ್ ಗೌಡ ಅವರು, ಪೂರ್ವಿಕರು ನೆಲಜಲ, ಪರಿಸರ ಸಂರಕ್ಷಣೆಯೊಂದಿಗೆ ಭವ್ಯ ಸಂಸ್ಕೃತಿ, ಪದ್ಧತಿ, ಪರಂಪರೆಯನ್ನು ಉಳಿಸಿಕೊಟ್ಟಿದ್ದಾರೆ. ಇವುಗಳನ್ನು ಉಳಿಸಿ-ಬೆಳೆಸಿ ಮುಂದಿನ ತಲೆಮಾರಿಗೂ ವರ್ಗಾಯಿಸುವುದು ನಮ್ಮೆಲ್ಲರ ಕರ್ತವ್ಯವಾಗಬೇಕು ಎಂದು ಅಭಿಪ್ರಾಯಿಸಿದರು.

ಹಿಂದಿನಿಂದಲೂ ಸಾಂಪ್ರದಾಯಿಕ ಆಚರಣೆಗಳನ್ನು ಚಾಚೂತಪ್ಪದೇ ನಡೆಸಿಕೊಂಡು ಬರಲಾಗುತ್ತಿದೆ. ಕಳೆದ 12 ದಿನಗಳ ಹಿಂದೆ ಬೀರೇದೇವರಿಗೆ ವೀಳ್ಯ ಚೆಲ್ಲುವ ಮೂಲಕ ಪ್ರಸಕ್ತ ಸಾಲಿನ ಸುಗ್ಗಿ ಉತ್ಸವಕ್ಕೆ ಚಾಲನೆ ನೀಡಿದ್ದು, ಊಲು ಏರಿಸುವುದು, ಶುಕ್ರವಾರ ದೇವರಿಗೆ ಎಡೆ ಸಮರ್ಪಣೆ, ಶನಿವಾರ ಹಗಲು ಸುಗ್ಗಿ, ಭಾನುವಾರ ಹೆದ್ದೇವರ ಬನದಲ್ಲಿ ಪೂಜೆ, ಸೋಮವಾರ ಮಲ್ಲುಸುಗ್ಗಿಯನ್ನು ಸಂಭ್ರಮದಿಂದ ನಡೆಸಲಾಗಿದೆ ಎಂದು ಗ್ರಾಮ ಸಮಿತಿ ಅಧ್ಯಕ್ಷ ಎಲ್.ಬಿ. ಉಲ್ಲಾಸ್ ತಿಳಿಸಿದರು.

ಸಮಿತಿ ಉಪಾಧ್ಯಕ್ಷ ಡಿ.ಟಿ. ಆನಂದ, ಕಾರ್ಯದರ್ಶಿ ಕವನ್, ಖಜಾಂಚಿ ಎಂ.ಟಿ. ಉಮೇಶ್, ಪದಾಧಿಕಾರಿಗಳಾದ ಗಿರೀಶ್, ಎ.ಜೆ. ಸುರೇಶ್, ಅಭಿಲಾಷ್, ಪ್ರಧಾನ್, ಶೋಭರಾಜ್, ಪ್ರಸನ್ನ, ದಿನೇಶ್ ಸೇರಿದಂತೆ ಗ್ರಾಮದ ಮುಖ್ಯಸ್ಥರು, ಗ್ರಾಮಸ್ಥರು ಪೂಜೆಯಲ್ಲಿ ಭಾಗಿಯಾಗಿದ್ದರು.

PREV

Recommended Stories

15 ವರ್ಷ ಮೇಲ್ಪಟ್ಟ ಸರ್ಕಾರಿ ವಾಹನ ಗುಜರಿಗೆ: ಆದೇಶ
ಹಾಸಿಗೆ, ದಿಂಬಿಗಾಗಿ ಮತ್ತೆ ಕೋರ್ಟಲ್ಲಿ ಅಂಗಲಾಚಿದ ಕೊಲೆ ಆರೋಪಿ ದರ್ಶನ್‌