ರೆಡ್‌ಕ್ರಾಸ್ ಕೊಡಗು ಘಟಕದ ವಾರ್ಷಿಕ ಮಹಾಸಭೆ

KannadaprabhaNewsNetwork | Published : Jun 30, 2025 12:34 AM

ಸಮಾಜಸೇವೆ, ಪರೋಪಕಾರ ವಿಚಾರದಲ್ಲಿ ಕೊಡಗಿನವರ ಛಲ ದೇಶಕ್ಕೇ ಮಾದರಿಯಾಗಿದೆ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಆರ್‌. ಐಶ್ವರ್ಯ ಹೇಳಿದರು.

ಕನ್ನಡಪ್ರಭ ವಾರ್ತೆ ಮಡಿಕೇರಿ

ಸಮಾಜಸೇವೆ, ಪರೋಪಕಾರ ವಿಚಾರದಲ್ಲಿ ಕೊಡಗಿನವರ ಛಲ ದೇಶಕ್ಕೇ ಮಾದರಿಯಾಗಿದೆ. ಯಾವುದೇ ಸವಾಲು ಎದುರಾದರೂ ಸ್ಥೈರ್ಯಗೆಡದೇ ಆ ಸವಾಲನ್ನು ಎದುರಿಸಲಿದ್ದಾರೆ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಆರ್.ಐಶ್ವರ್ಯ ಅವರು ಶ್ಲಾಘಿಸಿದ್ದಾರೆ.

ನಗರದ ರೆಡ್‌ಕ್ರಾಸ್ ಭವನದಲ್ಲಿ ಆಯೋಜಿತ ಭಾರತೀಯ ರೆಡ್‌ಕ್ರಾಸ್‌ನ ಕೊಡಗು ಶಾಖೆಯ 2024-25 ನೇ ಸಾಲಿನ ವಾರ್ಷಿಕ ಮಹಾಸಭೆಯನ್ನು ಉದ್ಘಾಟಿಸಿ ಮಾತನಾಡಿದ ಐಶ್ವರ್ಯ, ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಉತ್ತಮವಾದ ಸೇವೆ ನೀಡುವ ಮೂಲಕ ಆ ವ್ಯಕ್ತಿಯ ಏಳಿಗೆಗೆ ರೆಡ್‌ಕ್ರಾಸ್ ಸಂಸ್ಥೆ ಬದ್ಧವಾಗಿದೆ. ಅನೇಕ ಸೇವಾ ಯೋಜನೆಗಳ ಮೂಲಕ ಕೊಡಗು ರೆಡ್‌ಕ್ರಾಸ್ ಗಮನ ಸೆಳೆದಿದೆ. ಸ್ವಾರ್ಥ ಬಿಟ್ಟು ಸಮಾಜ ಸೇವಾ ಮನೋಭಾವದಿಂದ ಉತ್ತಮ ಕಾರ್ಯದ ಮೂಲಕ ಸಮಾಜಕ್ಕೆ ಒಳಿತಾಗುವ ನಿಟ್ಟಿನಲ್ಲಿ ರೆಡ್‌ಕ್ರಾಸ್ ಸದಸ್ಯರ ಕಾರ್ಯವೈಖರಿ ಆದರ್ಶವಾದದ್ದು ಎಂದು ಅವರು ಹೆಮ್ಮೆಯಿಂದ ನುಡಿದರು.

ರೆಡ್‌ಕ್ರಾಸ್ ಕರ್ನಾಟಕದ ನಿರ್ದೇಶಕ ಮಹಂತೇಶ್ ಸಭೆಯ ವೀಕ್ಷಕರಾಗಿ ಪಾಲ್ಗೊಂಡು ಮಾತನಾಡಿ, ಅತ್ಯುತ್ತಮ ಕಾರ್ಯಯೋಜನೆಗಾಗಿ ರಾಜ್ಯಪಾಲರಿಂದ ಅತ್ಯುತ್ತಮ ಘಟಕ ಎಂಬ ಪ್ರಶಸ್ತಿ ಪಡೆದ ಕೊಡಗು ಘಟಕದ ಸದಸ್ಯರ ಸೇವೆ ಅನನ್ಯವಾಗಿದೆ ಎಂದರಲ್ಲದೇ ರಕ್ತದಾನ ಶಿಬಿರ, ಪ್ರಥಮ ಚಿಕಿತ್ಸಾ ತರಬೇತಿ ಶಿಬಿರ, ಪರಿಸರ ಸಂಬಂಧಿತ ಕಾರ್ಯಕ್ರಮಗಳಿಗೆ ರೆಡ್‌ಕ್ರಾಸ್ ಆದ್ಯತೆ ನೀಡುವಂತೆ ಕರೆ ನೀಡಿದರು.

ಮಾನವೀಯ ಸೇವೆಯಲ್ಲಿಯೇ ನಿಜವಾದ ಸಂತೋಷ ಅಡಗಿದ್ದು, ಇಂತಹ ಮನತೃಪ್ತಿದಾಯಕ ಸಂತೋಷವನ್ನು ಯಾರಿಂದಲೂ ಖರೀದಿಸಲಾಗುವುದಿಲ್ಲ ಎಂಬ ದಲೈಲಾಮರ ಸಂದೇಶ ಸಾರ್ವಕಾಲಿಕವಾಗಿದೆ. ಈ ಸಂದೇಶ ರೆಡ್‌ಕ್ರಾಸ್ ಸದಸ್ಯರಿಗೆ ಪ್ರೇರಣಾದಾಯಕವಾಗಿರಬೇಕೆಂದು ಮಹಂತೇಶ್ ಕರೆ ನೀಡಿದರು.

ರೆಡ್‌ಕ್ರಾಸ್ ಸಭಾಪತಿ ಬಿ.ಕೆ.ರವೀಂದ್ರ ರೈ ವಾರ್ಷಿಕ ವರದಿ ಮಂಡಿಸಿದರು. ಲೆಕ್ಕಪತ್ರವನ್ನು ಮುರಳೀಧರ್ ಮಂಡಿಸಿದರು. ರೆಡ್‌ಕ್ರಾಸ್ ಜಿಲ್ಲಾ ಉಪಾಧ್ಯಕ್ಷ ಅನಿಲ್ ಹೆಚ್.ಟಿ ಕಾರ್ಯಕ್ರಮ ನಿರೂಪಿಸಿದರು. ಜಿಲ್ಲೆಯ ವಿವಿಧ ಭಾಗಗಳಿಂದ ಸದಸ್ಯರು ವಾರ್ಷಿಕ ಮಹಾಸಭೆಯಲ್ಲಿ ಪಾಲ್ಗೊಂಡಿದ್ದರು.