ನಾಳೆ ಬೆಟ್ಟದಪುರದಲ್ಲಿ ಸಿಡಿಲು ಮಲ್ಲಿಕಾರ್ಜುನ ಸ್ವಾಮಿ ಬ್ರಹ್ಮ ರಥೋತ್ಸವ

KannadaprabhaNewsNetwork | Published : Feb 23, 2024 1:47 AM

ಸಾರಾಂಶ

ಪತಿ ಪೂಜೆ ಹಾಗೂ ಮೂಲದೇವರ ಪೂಜೆಯೊಂದಿಗೆ ಕ್ರಮವಾಗಿ ಪ್ರತಿದಿವಸ ಗಜಾರೋಹಣ (ಆನೆ ವಾಹನ) , ಭೂತಾರೋಹಣ (ಭೂತವಾಹನ), ವೃಷಭಾರೋಹಣ(ಬಸವ ವಾಹನ) ಉತ್ಸವಗಳು ನಡೆಯಲಿವೆ.

ಕನ್ನಡಪ್ರಭ ವಾರ್ತೆ ಬೆಟ್ಟದಪುರ

ಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರದ ಇತಿಹಾಸ ಪ್ರಸಿದ್ಧ ಶ್ರೀ ಭ್ರಮರಾಂಭ ಸಮೇತ ಸಿಡಿಲು ಮಲ್ಲಿಕಾರ್ಜುನ ಸ್ವಾಮಿ ಬ್ರಹ್ಮ ರಥೋತ್ಸವ ಫೆ. 24ರ ಶನಿವಾರ ನಡೆಯಲಿದ್ದು, ಗ್ರಾಮದಲ್ಲಿ ಈಗಾಗಲೇ ಹಬ್ಬದ ವಾತಾವರಣ ಕಳೆಗಟ್ಟಿದೆ.

ಮಲ್ಲಯ್ಯನ ಜಾತ್ರೆ ಎಂದೇ ಪ್ರಖ್ಯಾತಿಯಾಗಿರುವ ಇಲ್ಲಿಗೆ ಮೈಸೂರು ಜಿಲ್ಲೆ ಮಾತ್ರವಲ್ಲದೇ, ನೆರೆಯ ಕೊಡಗು ಮತ್ತು ಹಾಸನ ಜಿಲ್ಲೆಗಳಿಂದಲು ಹೆಚ್ಚಾಗಿ ಭಕ್ತಾದಿಗಳು ಆಗಮಿಸಲಿದ್ದು, ಜಾತ್ರೆಯನ್ನು ಯಶಸ್ವಿಗೊಳಿಸಲು ಮುಜರಾಯಿ ಹಾಗೂ ಧಾರ್ಮಿಕ ದತ್ತಿ ಇಲಾಖೆ ಸಜ್ಜಾಗಿದೆ.

ಈಗಾಗಲೇ ದೇವಸ್ಥಾನದಲ್ಲಿ ವಾರ್ಷಿಕ ಜಾತ್ರಾ ಪೂಜಾ ಕೈಂಕರ್ಯಗಳು ಆರಂಭಗೊಂಡಿದ್ದು, ಪುಣ್ಯಾಹ, ಗಣಪತಿ ಪೂಜೆ ಹಾಗೂ ಮೂಲದೇವರ ಪೂಜೆಯೊಂದಿಗೆ ಕ್ರಮವಾಗಿ ಪ್ರತಿದಿವಸ ಗಜಾರೋಹಣ (ಆನೆ ವಾಹನ) , ಭೂತಾರೋಹಣ (ಭೂತವಾಹನ), ವೃಷಭಾರೋಹಣ(ಬಸವ ವಾಹನ) ಉತ್ಸವಗಳು ನಡೆಯಲಿವೆ.

ಫೆ. 23ರ ಶುಕ್ರವಾರ ಸಂಜೆ 7ಕ್ಕೆ ಅಶ್ವಾರೋಹಣ (ಕುದುರೆ ವಾಹನ) ಉತ್ಸವ ಗ್ರಾಮದ ಮುಖ್ಯಬೀದಿಗಳಲ್ಲಿ ನಡೆಯಲಿದ್ದು, ನಂತರ ರಾತ್ರಿ 10ಕ್ಕೆ ಅಲಂಕೃತ ಮಂಟಪದಲ್ಲಿ ಭ್ರಮರಾಂಭ ಹಾಗೂ ಮಲ್ಲಿಕಾರ್ಜುನ ಸ್ವಾಮಿಗೆ ಗಿರಿಜಾ ಕಲ್ಯಾಣ ನೆರವೇರಿಸಲಾಗುವುದು. ಮೈಸೂರಿನ ಮಲ್ಲಣ್ಣ ಶೆಟ್ಟರ ಕುಟುಂಬದವರು ಗಿರಿಜಾ ಕಲ್ಯಾಣ ಕಾರ್ಯಕ್ರಮವನ್ನು ನಡೆಸಿಕೊಡುವರು.

ಫೆ. 24 ಶನಿವಾರ ಬೆಳಗ್ಗೆ 10:45 ರಿಂದ 11:15 ರ ಶುಭ ಮೇಷ ಲಗ್ನದಲ್ಲಿ ಬೆಳ್ಳಿ ಬಸವ, ವಿಘ್ನೇಶ್ವರ ಹಾಗೂ ಭ್ರಮರಾಂಭ ಸಮೇತ ಮಲ್ಲಿಕಾರ್ಜುನ ಸ್ವಾಮಿಯ ಉತ್ಸವ ಮೂರ್ತಿಗಳನ್ನು ಮೂರು ರಥಗಳಲ್ಲಿ ಪ್ರತಿಷ್ಠಾಪಿಸಿದ ಬಳಿಕ ಸಾವಿರಾರು ಭಕ್ತರ ಸಮ್ಮುಖದಲ್ಲಿ ಜರುಗಲಿವೆ. ಸಂಜೆ 5ರ ನಂತರ ಶಾಂತೋತ್ಸವ (ಹಂಸ ವಾಹನದ ಮೇಲೆ) ನೆರವೇರಿಸಲಾಗುವುದು.

ಫೆ.26 ರ ಸೋಮವಾರ ರಾತ್ರಿ ಗ್ರಾಮದ ತಾವರೆಕೆರೆಯಲ್ಲಿ ತೆಪ್ಪೋತ್ಸವ ಮಾಡುವ ಮೂಲಕ ಜಾತ್ರೆಗೆ ತೆರೆ ಬೀಳಲಿದೆ. ಎಲ್ಲ ಉತ್ಸವದ ಕಾರ್ಯ ನಿರ್ವಹಣೆಯನ್ನು ಗ್ರಾಮದ ಉಪ್ಪಾರ ಸಮುದಾಯದವರು ನಡೆಸಿಕೊಡುತ್ತಾರೆ ಉತ್ಸವಗಳ ಉಸ್ತುವಾರಿಯನ್ನು ಬೆಟ್ಟದಪುರದ ಉಪ್ಪಾರ ಸಮಾಜದವರು ನೆರವೇರಿಸಲಿದ್ದಾರೆ ಎಂದು ಕಂದಾಯ ನಿರೀಕ್ಷಕ ಅಜ್ಮಲ್ ಶರೀಫ್ ತಿಳಿಸಿದ್ದಾರೆ.

ಗ್ರಾಮದ ಮಧ್ಯ ಭಾಗದಲ್ಲಿರುವ ದೇವಾಲಯವನ್ನು ಬಣ್ಣಗಳಿಂದ ಅಲಂಕರಿಸಿದ್ದು, ಪ್ರಮುಖ ರಸ್ತೆಗಳು ಹಾಗೂ ವೃತ್ತಗಳಿಗೆ ವಿದ್ಯುತ್ ದೀಪಾಲಂಕಾರ ಮಾಡಲಾಗಿದೆ. ರಾತ್ರಿ ವೇಳೆ ಬೆಟ್ಟ ಹತ್ತುವ ಭಕ್ತರಿಗೆ ಅನುಕೂಲವಾಗುವಂತೆ ವಿದ್ಯುತ್ ಕಂಬಗಳ ದೀಪಗಳನ್ನು ದುರಸ್ತಿ ಮಾಡಿಸಲಾಗಿದೆ ಎಂದು ಉಪ ತಹಸೀಲ್ದಾರ್ ಶಶಿಧರ್ ಮಾಹಿತಿ ನೀಡಿದರು.

ಈ ಧಾರ್ಮಿಕ ಕ್ಷೇತ್ರದ ಸ್ವಚ್ಛತೆ ಕಾಪಾಡಲು ಅನಗತ್ಯ ವಸ್ತುಗಳನ್ನು ಬಿಸಾಡಬಾರದು ಎಂದು ಬೆಟ್ಟದ ಅರ್ಚಕ ಕೃಷ್ಣಪ್ರಸಾದ್ ಮನವಿ ಮಾಡಿದ್ದಾರೆ.

ನಮ್ಮ ಗ್ರಾಮವು ಶ್ರೀಶೈಲದ ಮಲ್ಲಿಕಾರ್ಜುನನ ಬೆಟ್ಟದಷ್ಟೇ ಮಹತ್ವ ಹೊಂದಿದ್ದು, ಚಂಗಾಳ್ವ ಅರಸರ ಕಾಲದಲ್ಲಿ ಬೆಟ್ಟದ ಮೇಲಿರುವ ಸಂಕ್ರಾಂತಿ ಮಾಳ ಮೈದಾನದಲ್ಲಿ ಜಾತ್ರೆ ಮಾಡಲಾಗುತ್ತಿತ್ತು ಎಂಬ ಪ್ರತೀತಿ ಇದೆ, ಕ್ರಮೇಣ ಗ್ರಾಮದ ತೇರಿನ ಬೀದಿಗೆ ರಥೋತ್ಸವ ಸೀಮಿತವಾಯಿತು. ಆದರೂ ಇಂದಿಗೂ ಭಕ್ತರು 3,600 ಮೆಟ್ಟಿಲುಗಳನ್ನು ಏರಿ ವಿಜಯಗಿರಿ ಬೆಟ್ಟದ ಮೇಲೆ ನೆಲೆಸಿರುವ ದೇವರ ದರ್ಶನ ಮಾಡುವರು.

ಬೆಮ್ಮತ್ತಿ ಸುರೇಶ್ ಮತ್ತು ಅನಿತಾ ತೋಟಪ್ಪಶೆಟ್ಟಿ ಸ್ನೇಹ ಬಳಗದ ವತಿಯಿಂದ ಅನ್ನಸಂತರ್ಪಣೆ ಏರ್ಪಡಿಸಿದೆ.

ರಥದ ಹತ್ತಿರ ತಾಲೂಕಿನ ಶ್ರೇಯಸ್ಸಿಗಾಗಿ, ರೈತರ ಒಳಿತಿಗಾಗಿ ಮೊದಲ ಪೂಜೆಯನ್ನು ತಹಸೀಲ್ದಾರ್ ಕುಂಞ ಅಹಮದ್ ನೆರವೇರಿಸುವರು. ಸಚಿವ ಕೆ. ವೆಂಕಟೇಶ್ ಅವರು ವಿಶೇಷ ಪೂಜೆ ನೆರವೇರಿಸುವರು.

ಬೆಟ್ಟದಪುರದ ಚನ್ನಬಸವ ದೇಶಕೇಂದ್ರ ಸ್ವಾಮೀಜಿಗಳ ಶ್ರೀಮಠದಲ್ಲಿ ಭಕ್ತಾದಿಗಳಿಗೆ ಅನ್ನದಾಸೋಹ ಹಾಗೂ ವಸತಿ ವ್ಯವಸ್ಥೆ ಮಾಡಲಾಗುವುದೆಂದು ಮಲ್ಲಿಕಾರ್ಜುನ ಸ್ವಾಮಿ ತಿಳಿಸಿದ್ದಾರೆ.

Share this article