ಸರ್ವೋದಯ ವಿದ್ಯಾಸಂಸ್ಥೆಯ ಆಟದ ಮೈದಾನದಲ್ಲಿ ಒಕ್ಕಲಿಗರ ಮಹಿಳಾ ಸಂಘದ ವತಿಯಿಂದ ೮ನೇ ವರ್ಷದ ವಾರ್ಷಿಕ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿ ಮಹಿಳೆಯರ ಸಾಧನೆ ಹಾಗೂ ಸಂಘಟಿತ ಶಕ್ತಿಯ ಮಹತ್ವದ ಅರಿವು ಇತ್ತೀಚೆಗೆ ಹೆಚ್ಚಾಗುತ್ತಿದೆ. ಮಹಿಳೆಯರು ಅಂತರಿಕ್ಷಯಾನ, ಸೈನಿಕ, ಶಿಕ್ಷಣ, ರಾಜಕೀಯ, ಕ್ರೀಡೆ, ಉದ್ಯಮ, ಸಾಹಿತ್ಯ, ವಿಮಾನ, ಮೆಟ್ರೋ ಚಾಲನೆ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲೂ ಪುರುಷರಷ್ಟೇ ಸಮಾನವಾಗಿ ಸಾಧನೆ ಮಾಡುತ್ತಿದ್ದಾರೆ ಎಂದು ಶ್ಲಾಘನೆ ವ್ಯಕ್ತಪಡಿಸಿದರು.
ಕನ್ನಡಪ್ರಭ ವಾರ್ತೆ ಬೇಲೂರು
ಗಂಡ, ಮನೆ, ಮಕ್ಕಳು ಎಂಬ ಸಂಸಾರದ ಜಂಜಾಟದಲ್ಲಿರುವ ಮಹಿಳೆಯರಿಗೆ ಸಂಘಸಂಸ್ಥೆಗಳು ನಡೆಸುವ ಕ್ರೀಡಾಕೂಟಗಳು ದೈಹಿಕ ಹಾಗೂ ಮಾನಸಿಕವಾಗಿ ಸದೃಢಗೊಳ್ಳಲು ಸಹಕಾರಿಯಾಗಿದೆ ಎಂದು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಿ ಬಿ ಶಿವರಾಜ್ ಹೇಳಿದರು.ಪಟ್ಟಣದ ಸರ್ವೋದಯ ವಿದ್ಯಾಸಂಸ್ಥೆಯ ಆಟದ ಮೈದಾನದಲ್ಲಿ ಒಕ್ಕಲಿಗರ ಮಹಿಳಾ ಸಂಘದ ವತಿಯಿಂದ ೮ನೇ ವರ್ಷದ ವಾರ್ಷಿಕ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿ ಮಹಿಳೆಯರ ಸಾಧನೆ ಹಾಗೂ ಸಂಘಟಿತ ಶಕ್ತಿಯ ಮಹತ್ವದ ಅರಿವು ಇತ್ತೀಚೆಗೆ ಹೆಚ್ಚಾಗುತ್ತಿದೆ. ಮಹಿಳೆಯರು ಅಂತರಿಕ್ಷಯಾನ, ಸೈನಿಕ, ಶಿಕ್ಷಣ, ರಾಜಕೀಯ, ಕ್ರೀಡೆ, ಉದ್ಯಮ, ಸಾಹಿತ್ಯ, ವಿಮಾನ, ಮೆಟ್ರೋ ಚಾಲನೆ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲೂ ಪುರುಷರಷ್ಟೇ ಸಮಾನವಾಗಿ ಸಾಧನೆ ಮಾಡುತ್ತಿದ್ದಾರೆ ಎಂದು ಶ್ಲಾಘನೆ ವ್ಯಕ್ತಪಡಿಸಿದರು.ಮಹಿಳೆಯರು ತಮ್ಮ ಪ್ರತಿಭೆ ಮತ್ತು ಆತ್ಮವಿಶ್ವಾಸದಿಂದ ಸಮಾಜದ ಎಲ್ಲಾ ಕ್ಷೇತ್ರಗಳಲ್ಲೂ ಗುರುತಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಕುಟುಂಬದ ಜವಾಬ್ದಾರಿಗಳೊಂದಿಗೆ ಸಮಾಜಮುಖಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಮುಂಚೂಣಿಗೆ ಬರುತ್ತಿದ್ದಾರೆ.ಸತತ ೮ ವರ್ಷಗಳಿಂದ ತಾಲೂಕು ಒಕ್ಕಲಿಗರ ಮಹಿಳಾ ಸಂಘವು ಸಾಮಾಜಿಕ ಕಳಕಳಿಯೊಂದಿಗೆ ಆರೋಗ್ಯ ಶಿಬಿರಗಳು, ಜಾಗೃತಿ ಕಾರ್ಯಕ್ರಮಗಳು, ಮಹಿಳಾ ಸಬಲೀಕರಣ ಕಾರ್ಯಾಗಾರಗಳು, ಸಾಮೂಹಿಕ ಸತ್ಯನಾರಾಯಣ ಪೂಜೆ, ಗೃಹ ಉಪಯೋಗಿ ವಸ್ತು ಪ್ರದರ್ಶನ, ವಿದ್ಯಾರ್ಥಿಗಳಿಗೆ ಸಹಾಯಧನ ಸೇರಿದಂತೆ ಕ್ರೀಡಾಕೂಟದಂತಹ ಕಾರ್ಯಕ್ರಮ ನಡೆಸುತ್ತಿದ್ದು ಮುಂದಿನ ದಿನಗಳಲ್ಲಿ ಮಹಿಳೆಯರಿಗೆ ಕಾನೂನು ಅರಿವು ನೀಡುವಂತಹ ಕಾರ್ಯಕ್ರಮ ರೂಪಿಸಲಿ ಎಂದು ಹಾರೈಸಿದರು.ಒಕ್ಕಲಿಗರ ಮಹಿಳಾ ಸಂಘದ ಅಧ್ಯಕ್ಷೆ ಭಾರತೀಗೌಡ ಮಾತನಾಡಿ, ಸಂಘವು ಕಳೆದ ೮ ವರ್ಷಗಳಿಂದ ಮಹಿಳೆಯರ ಸಬಲೀಕರಣ ಹಾಗೂ ಸಮಾಜಮುಖಿ ಚಟುವಟಿಕೆಗಳನ್ನು ಮುಖ್ಯ ಉದ್ದೇಶವಾಗಿಸಿಕೊಂಡು ಕಾರ್ಯನಿರ್ವಹಿಸುತ್ತಿದೆ. ಮಹಿಳೆಯರು ಆತ್ಮವಿಶ್ವಾಸ ಹಾಗೂ ಒಗ್ಗಟ್ಟಿನಿಂದ ಮುಂದೆ ಬಂದಾಗ ಯಾವುದೇ ಗುರಿಯನ್ನೂ ಸಾಧಿಸಬಹುದು ಎಂದು ಹೇಳಿದರು.ಸಂಘವು ಮುಂದಿನ ದಿನಗಳಲ್ಲಿ ಇನ್ನಷ್ಟು ಸಾಮಾಜಿಕ ಸೇವಾ ಕಾರ್ಯಕ್ರಮಗಳು, ಆರೋಗ್ಯ ತಪಾಸಣಾ ಶಿಬಿರಗಳು, ಸ್ವಯಂ ಉದ್ಯೋಗ ತರಬೇತಿ ಕಾರ್ಯಾಗಾರಗಳು ಹಾಗೂ ಯುವತಿಯರಿಗೆ ಮಾರ್ಗದರ್ಶನ ಶಿಬಿರಗಳನ್ನು ಹಮ್ಮಿಕೊಳ್ಳುವ ಉದ್ದೇಶ ಹೊಂದಿದೆ. ಸಂಘದ ಎಲ್ಲಾ ಸದಸ್ಯರ ಸಹಕಾರದಿಂದ ನಮ್ಮ ಸಂಘ ಇನ್ನಷ್ಟು ಬಲಿಷ್ಠವಾಗಿ ಬೆಳೆಯಲಿದೆ ಎಂದರು.ಈ ಕ್ರೀಡಾಕೂಟದಲ್ಲಿ ಎಲ್ಲಾ ವಯಸ್ಸಿನ ಮಹಿಳೆಯರು ಭಾಗವಹಿಸಿ, ಕಬಡ್ಡಿ, ಕುರ್ಚಿ ಓಟ, ಲೆಮನ್ ಅಂಡ್ ಸ್ಪೂನ್ ಸ್ಪರ್ಧೆ ಸೇರಿದಂತೆ ಹಲವಾರು ಕ್ರೀಡೆಗಳಲ್ಲಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದರು. ಈ ಸಂದರ್ಭದಲ್ಲಿ ಸರ್ವೋದಯ ವಿದ್ಯಾಸಂಸ್ಥೆ ಪ್ರಾಂಶುಪಾಲ ಪ್ರಕಾಶ್, ದೈಹಿಕ ಶಿಕ್ಷಕ ಮೆಹಬೂಬ್ ಖಾನ್ ಹಾಗು ಸಂಘದ ಪದಾಧಿಕಾರಿಗಳು, ಸದಸ್ಯರು ಇದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.