ಅಂತಿಮ ವರ್ಷದ ಬಿ.ಇ.ಎಂ.ಟೆಕ್. ಎಂ.ಎಸ್ಸಿ. ಕೃಷಿ ಎಂ.ಎಸ್ಸಿ. ಎಂಬಿಎ ಹಾಗೂ ಎಂಸಿಎ ವಿದ್ಯಾರ್ಥಿಗಳು ತಾವು ಅಭಿವೃದ್ಧಿಪಡಿಸಿದ ಅತ್ಯಾಧುನಿಕ ತಂತ್ರಜ್ಞಾನದ ಮಾದರಿಗಳನ್ನು ಹಾಗೂ ಪೋಸ್ಟರ್‌ಗಳನ್ನು ಪ್ರಸ್ತುತ ಪಡಿಸಲಿದ್ದಾರೆ. ಸುಮಾರು 1200ಕ್ಕೂ ಹೆಚ್ಚು ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಭಾಗವಹಿಸುವ ನಿರೀಕ್ಷೆಯಿದೆ.
ಕನ್ನಡಪ್ರಭ ವಾರ್ತೆ ನಾಗಮಂಗಲ
ತಾಲೂಕಿನ ಆದಿಚುಂಚನಗಿರಿ ವಿಶ್ವವಿದ್ಯಾಲಯದ ಬಿಜಿಎಸ್ ತಾಂತ್ರಿಕ ಮಹಾ ವಿದ್ಯಾಲಯದಲ್ಲಿ ಜು.17 ಮತ್ತು 18 ರಂದು 49ನೇ ಸರಣಿ ವಿದ್ಯಾರ್ಥಿ ಯೋಜನಾ ಕಾರ್ಯಕ್ರಮದ ವಾರ್ಷಿಕ ರಾಜ್ಯ ಮಟ್ಟದ ಪೋಸ್ಟರ್ ಮತ್ತು ಯೋಜನೆಗಳ ಪ್ರದರ್ಶನ ಆಯೋಜಿಸಲಾಗಿದೆ ಎಂದು ಆದಿಚುಂಚನಗಿರಿ ವಿಶ್ವವಿದ್ಯಾಲಯದ ಕುಲಪತಿ ಡಾ.ಎಸ್.ಎನ್.ಶ್ರೀಧರ ತಿಳಿಸಿದರು.
ತಾಲೂಕಿನ ಬಿ.ಜಿ.ನಗರದ ಆದಿಚುಂಚನಗಿರಿ ವಿಶ್ವವಿದ್ಯಾಲಯದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಂಗಳೂರಿನ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿ ಮತ್ತು ಆದಿಚುಂಚನಗಿರಿ ವಿಶ್ವವಿದ್ಯಾಲಯದ ಸಹಭಾಗಿತ್ವದಲ್ಲಿ ಕಾರ್ಯಕ್ರಮದಲ್ಲಿ ರಾಜ್ಯದ 140 ಶಿಕ್ಷಣ ಸಂಸ್ಥೆಗಳಿಂದ ಆಯ್ದ 425ಕ್ಕೂ ಹೆಚ್ಚು ಪ್ರತಿಭಾನ್ವಿತ ವಿದ್ಯಾರ್ಥಿಗಳಿಂದ ಯೋಜನೆಗಳನ್ನು ಪ್ರದರ್ಶಿಸಲಾಗುವುದು ಎಂದರು.
ಅಂತಿಮ ವರ್ಷದ ಬಿ.ಇ.ಎಂ.ಟೆಕ್. ಎಂ.ಎಸ್ಸಿ. ಕೃಷಿ ಎಂ.ಎಸ್ಸಿ. ಎಂಬಿಎ ಹಾಗೂ ಎಂಸಿಎ ವಿದ್ಯಾರ್ಥಿಗಳು ತಾವು ಅಭಿವೃದ್ಧಿಪಡಿಸಿದ ಅತ್ಯಾಧುನಿಕ ತಂತ್ರಜ್ಞಾನದ ಮಾದರಿಗಳನ್ನು ಹಾಗೂ ಪೋಸ್ಟರ್‌ಗಳನ್ನು ಪ್ರಸ್ತುತ ಪಡಿಸಲಿದ್ದಾರೆ. ಸುಮಾರು 1200ಕ್ಕೂ ಹೆಚ್ಚು ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಭಾಗವಹಿಸುವ ನಿರೀಕ್ಷೆಯಿದೆ ಎಂದರು.
ವಿದ್ಯಾರ್ಥಿಗಳಲ್ಲಿ ಸಂಶೋಧನಾ ಮನೋಭಾವ ಮೂಡಿಸುವುದು ಈ ಯೋಜನೆ ಮುಖ್ಯ ಉದ್ದೇಶವಾಗಿದೆ. ತಾಂತ್ರಿಕ ವಿದ್ಯಾರ್ಥಿಗಳಲ್ಲಿ ನಾವೀನ್ಯತೆ ಸೃಜನಶೀಲತೆ ಮತ್ತು ಸಂಶೋಧನಾ ಮನೋಭಾವ ಬೆಳೆಸುವುದು. ಈ ಯೋಜನೆಯಡಿ ರಾಜ್ಯದ ವಿವಿಧ ವಿಶ್ವವಿದ್ಯಾಲಯಗಳಲ್ಲಿ ಮತ್ತು ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ಅಂತಿಮ ವರ್ಷದ ವಿದ್ಯಾರ್ಥಿಗಳ ಆಯ್ದ ಯೋಜನೆಗಳಿಗೆ ತಾಂತ್ರಿಕ ಮಾರ್ಗದರ್ಶನ ಮತ್ತು ಆರ್ಥಿಕ ನೆರವು ನೀಡಲಾಗುತ್ತದೆ ಎಂದರು.
1978 ರಿಂದ ಇಲ್ಲಿಯವರೆಗೆ 18,500ಕ್ಕೂ ಹೆಚ್ಚು ವಿದ್ಯಾರ್ಥಿಗಳ ಯೋಜನೆಗಳಿಗೆ ಮಂಡಳಿಯು ಬೆಂಬಲ ನೀಡಿದೆ. ಈ ಪ್ರದರ್ಶನವು ವಿದ್ಯಾರ್ಥಿಗಳಲ್ಲಿ ಪ್ರಾಯೋಗಿಕ ಕಲಿಕೆ ಸಂಶೋಧನಾ ಮನೋಭಾವ ನವೋದ್ಯಮ ಮತ್ತು ತಂತ್ರಜ್ಞಾನ ಅಭಿವೃದ್ಧಿಯ ಬಗ್ಗೆ ಆಸಕ್ತಿ ಮೂಡಿಸಲು ಸಹಕಾರಿಯಾಗಿದೆ ಎಂದರು.
ತಜ್ಞರಿಂದ ಮೌಲ್ಯಮಾಪನ:
ಕಾರ್ಯಕ್ರಮದಲ್ಲಿ ಪ್ರದರ್ಶಿಸಲಾಗುವ ಯೋಜನೆಗಳನ್ನು ವಿಜ್ಞಾನಿಗಳು, ತಂತ್ರಜ್ಞಾನ ತಜ್ಞರು, ಕೈಗಾರಿಕಾ ಪಂಡಿತರು ಹಾಗೂ ವಿವಿಧ ಕ್ಷೇತ್ರಗಳ ಸಂಪನ್ಮೂಲ ವ್ಯಕ್ತಿಗಳು ಮೌಲ್ಯಮಾಪನ ಮಾಡಲಿದ್ದಾರೆ. ಅತ್ಯುತ್ತಮ 60 ಯೋಜನೆಗಳಿಗೆ ಬಹುಮಾನ ನೀಡಲಾಗುವುದೆಂದು ತಿಳಿಸಿದರು.
ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ಡಾ.ಶ್ರೀನಿರ್ಮಲಾನಂದನಾಥ ಸ್ವಾಮೀಜಿಯವರ ಸಾನಿಧ್ಯದಲ್ಲಿ ಈ ಕಾರ್ಯಕ್ರಮ ನಡೆಯುತ್ತಿದ್ದು, ಭೈರವೈಕ್ಯ ಡಾ.ಬಾಲಗಂಗಾಧರನಾಥಶ್ರೀಗಳು ಸ್ಥಾಪಿಸಿರುವ ಅನ್ನ ಅಕ್ಷರ ಆರೋಗ್ಯ ಅಧ್ಯಾತ್ಮ ಆಶ್ರಯ ಪರಿಸರ ಸಂಸ್ಕೃತಿ ಕೌಶಲ್ಯ ಮತ್ತು ಸೇವೆ ಎಂಬ 9 ಸೇವಾ ಸ್ಥಂಭಗಳ ಆಧಾರದ ಮೇಲೆ ಈ ಸಂಸ್ಥೆ ಕಾರ್ಯನಿರ್ವಹಿಸುತ್ತಿದೆ. ಅವರ ದೂರದೃಷ್ಟಿಯಿಂದ ಸ್ಥಾಪಿತವಾದ ಶಿಕ್ಷಣ ಸಂಸ್ಥೆಗಳು, ಆರೋಗ್ಯ ಕೇಂದ್ರಗಳು ಹಾಗೂ ಸಮಾಜಮುಖಿ ಯೋಜನೆಗಳು ಲಕ್ಷಾಂತರ ಜನರ ಬದುಕಿಗೆ ಬೆಳಕಾಗಿವೆ. ಮಠದ ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥಶ್ರೀಗಳ ಮಾರ್ಗದರ್ಶನದಲ್ಲಿ ಆದಿಚುಂಚನಗಿರಿ ಸಂಸ್ಥೆಗಳು ರಾಷ್ಟ್ರ ಮಟ್ಟದಲ್ಲಿ ಅತ್ಯುತ್ತಮ ಸಾಧನೆಗಳನ್ನು ಮಾಡುತ್ತಿದ್ದು ಸಮಾಜ ಪರಿವರ್ತನೆಯ ದಿಸೆಯಲ್ಲಿ ನಿರಂತರವಾಗಿ ಕಾರ್ಯನಿರ್ವಹಿಸುತ್ತಿವೆ ಎಂದರು.
ಎಸಿಯು ಮತ್ತು ಬಿಜಿಎಸ್ ಐಟಿ ಸಾಧನೆ:
2018ರಲ್ಲಿ ಸ್ಥಾಪನೆಯಾದ ಆದಿಚುಂಚನಗಿರಿ ವಿಶ್ವವಿದ್ಯಾಲಯವು ಶಿಕ್ಷಣ ಸಂಶೋಧನೆ ನವೋದ್ಯಮ ಆರೋಗ್ಯ ಸೇವೆ ಹಾಗೂ ಸಮಾಜಮುಖಿ ಅಭಿವೃದ್ಧಿಗೆ ಸಮರ್ಪಿತವಾಗಿದೆ. ಇತ್ತೀಚೆಗೆ ಈ ವಿಶ್ವವಿದ್ಯಾಲಯಕ್ಕೆ ರಾಷ್ಟ್ರೀಯ ಮೌಲ್ಯಮಾಪನ ಮತ್ತು ಮಾನ್ಯತಾ ಮಂಡಳಿಯಿಂದ ಎ+ಶ್ರೇಣಿಯ ಮಾನ್ಯತೆ ದೊರೆತಿದೆ. ವಿಶ್ವವಿದ್ಯಾಲಯದ ಅಂಗ ಸಂಸ್ಥೆಯಾದ ಬಿಜಿಎಸ್ ತಾಂತ್ರಿಕ ಮಹಾವಿದ್ಯಾಲಯವು ಇಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಅತ್ಯುತ್ತಮ ಶಿಕ್ಷಣ ನೀಡುತ್ತಿದೆ ಎಂದರು.
ಇಲ್ಲಿ ಕೃತಕ ಬುದ್ಧಿಮತ್ತೆ ಮತ್ತು ಯಂತ್ರ ಅಧ್ಯಯನ (ಎಐ ಮತ್ತು ಎಂಎಲ್) ರೊಬೋಟಿಕ್ಸ್ ಕಂಪ್ಯೂಟರ್ ಸೈನ್ಸ್ ಎಲೆಕ್ಟ್ರಾನಿಕ್ಸ್ ಮತ್ತು ಸಂವಹನ ಸೇರಿದಂತೆ ವಿವಿಧ ಕೋರ್ಸ್‌ಗಳಿವೆ. ಇನ್ಸ್‌ಟಿಟ್ಯೂಷನ್ಸ್ ಇನ್ನೋವೇಶನ್ ಕೌನ್ಸಿಲ್ (ಐಐಸಿ) ಐಪಿಆರ್ ಸೆಲ್ ಮತ್ತು ಕೈಗಾರಿಕಾ ತರಬೇತಿ ಕೇಂದ್ರಗಳ ಮೂಲಕ ವಿದ್ಯಾರ್ಥಿಗಳಿಗೆ ಉತ್ತಮ ಪ್ರಾಯೋಗಿಕ ಜ್ಞಾನವನ್ನು ಒದಗಿಸಲಾಗುತ್ತಿದೆ ಎಂದರು.
ಯೋಜನೆಯ ಪ್ರದರ್ಶನಗಳಲ್ಲಿ ಮುಖ್ಯ ವಿಷಯಗಳು:
ಕರ್ನಾಟಕ ಡಿಜಿಟಲ್ ಹೆರಿಟೇಜ್ ಯೋಜನೆಯಡಿಯಲ್ಲಿ ರಾಜ್ಯ-ಸಂರಕ್ಷಿತ ಪರಂಪರೆಯ ಸ್ಮಾರಕಗಳ 3ಡಿ ಲೇಸರ್ ಸ್ಕೇರಿಂಗ್ ಅನ್ನು ಕೈಗೊಳ್ಳುವುದು. ಮಳೆ ನೀರು ಕೊಯ್ಲು ಉತ್ತೇಜಿಸುವುದು, ಕಲ್ಯಾಣಿಗಳು, ಕಟ್ಟೆ ಮತ್ತು ಗೋಕಟ್ಟೆಯಂತಹ ಸಾಂಪ್ರದಾಯಿಕ ನೀರಿನ ವ್ಯವಸ್ಥೆಗಳ ಪುನರುಜ್ಜೀವನ. ರಾಜ್ಯದಲ್ಲಿ ನವೀಕರಿಸಬಹುದಾದ ಇಂಧನ ಮತ್ತು ಜೈವಿಕ ಇಂಧನ ಕಾರ್ಯಕ್ರಮಗಳ ಅನುಷ್ಠಾನಕ್ಕೆ ತಾಂತ್ರಿಕ ಬೆಂಬಲವನ್ನು ಒದಗಿಸುವುದು. ವಿಜ್ಞಾನ ಶಿಕ್ಷಣವನ್ನು ಹೆಚ್ಚಿಸಲು ಗ್ರಾಮೀಣ ಸರ್ಕಾರಿ ಪ್ರೌಢಶಾಲೆಗಳಲ್ಲಿ ಇ-ಕಲಿಕಾ ಕೇಂದ್ರಗಳನ್ನು ಸ್ಥಾಪಿಸುವುದು. ಬೌದಿಕ ಆಸ್ತಿ ಹಕ್ಕುಗಳ (ಐಪಿಆರ್) ಜಾಗೃತಿಯನ್ನು ಉತ್ತೇಜಿಸಲು ಮತ್ತು ಪೇಟೆಂಟ್ ಸಲ್ಲಿಕೆಗೆ ಅನುಕೂಲವಾಗುವಂತೆ ಎಂಜಿನಿಯರಿಂಗ್ ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳಲ್ಲಿ ಪೇಟೆಂಟ್ ಮಾಹಿತಿ ಕೇಂದ್ರಗಳನ್ನು ಸ್ಥಾಪಿಸುವುದು ಸೇರಿದಂತೆ ಹತ್ತಕ್ಕೂ ಹೆಚ್ಚು ವಿಷಯಗಳ ಬಗ್ಗೆ ಸಭೆಗಳನ್ನು ಆಯೋಜಿಸಲಾಗಿದೆ. ವಿದ್ಯಾರ್ಥಿ ಯೋಜನಾ ಕಾರ್ಯಕ್ರಮಳಲ್ಲಿ ನಾವೀನ್ಯತೆ ಮತ್ತು ತಂತ್ರಜ್ಞಾನ ಆಧಾರಿತ ಅಭಿವೃದ್ಧಿಯ ಮಹತ್ವವನ್ನು ಗುರುತಿಸಿ, ವಿದ್ಯಾರ್ಥಿಗಳಲ್ಲಿ ನಾವೀನ್ಯತೆ, ಸೃಜನಶೀಲತೆ ಮತ್ತು ಸಮಸ್ಯೆ ಪರಿಹರಿಸುವ ಕೌಶಲ್ಯಗಳನ್ನು ಪೋಷಿಸುವ ಗುರಿಯನ್ನು ಈ ಕಾರ್ಯಕ್ರಮ ಹೊಂದಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಬಿಜಿಎಸ್ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲೆ ಡಾ.ಬಿ.ಎನ್.ಶೋಭ, ಐಐಸಿ ನಿರ್ದೇಶಕ ಡಾ.ಕೆ.ಬಿ.ಗಿರೀಶ್, ಡಾ.ಮಂಜುನಾಥ್, ಆದಿಚುಂಚನಗಿರಿ ಆಸ್ಪತ್ರೆ ಸಾರ್ವಜನಿಕ ಸಂಪರ್ಕಾಧಿಕಾರಿ ಧಮೇಂದ್ರ ಇದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.