ಕನ್ನಡಪ್ರಭ ವಾರ್ತೆ ಬೆಂಗಳೂರು
ಈ ಪ್ರಕರಣ ಸಂಬಂಧ ಇದುವರೆಗೆ ಆರೋಪಿಗಳಿಂದ 14 ಕೋಟಿ ನಗದು, ಬ್ಯಾಂಕ್‌ನಲ್ಲಿ 10 ಕೋಟಿ ರು. ಠೇವಣಿ ಹಾಗೂ 4 ಕೋಟಿ ಮೌಲ್ಯದ ಚಿನ್ನಾಭರಣ ಹಾಗೂ ವಾಹನಗಳು ಸೇರಿದಂತೆ ಒಟ್ಟು 28 ಕೋಟಿ ರು. ಅನ್ನು ಎಸ್‌ಐಟಿ ಜಪ್ತಿ ಮಾಡಿದಂತಾಗಿದೆ.
ಈಗಿನ ಹಣ ಎಲ್ಲಿಂದ ಜಪ್ತಿ?:ವಾಲ್ಮೀಕಿ ನಿಗಮದಿಂದ ತಮ್ಮ ಸಹಕಾರಿ ಬ್ಯಾಂಕ್‌ಗೆ ಹಣವನ್ನು ವರ್ಗಾಯಿಸಿದ್ದ ಹೈದರಾಬಾದ್ ಗ್ಯಾಂಗ್, ಬಳಿಕ ಆ ಸಹಕಾರಿ ಬ್ಯಾಂಕ್‌ನಿಂದ ಬಾರ್‌ಗಳು, ಚಿನ್ನಾಭರಣ ಮಾರಾಟ ಮಳಿಗೆಗಳು, ಕೆಲ ಐಟಿ ಕಂಪನಿಗಳು ಹಾಗೂ ಹೋಟೆಲ್‌ಗಳ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಿಕೊಂಡು ನಗದು ಮಾಡಿಕೊಂಡಿತ್ತು. ಹೀಗೆ ಹೈದರಾಬಾದ್ ಗ್ಯಾಂಗ್‌ನಿಂದ ವರ್ಗಾವಣೆಯಾಗಿದ್ದ ಹಣದಲ್ಲಿ 10 ಕೋಟಿ ರು.ಗಳನ್ನು 193ಕ್ಕೂ ಹೆಚ್ಚು ವಿವಿಧ ಬ್ಯಾಂಕ್ ಖಾತೆಗಳಿಂದ ಮುಟ್ಟುಗೋಲು ಹಾಕಿಕೊಳ್ಳಲಾಗಿದೆ ಎಂದು ಎಸ್‌ಐಟಿ ಉನ್ನತ ಮೂಲಗಳು ‘ಕನ್ನಡಪ್ರಭ’ಕ್ಕೆ ತಿಳಿಸಿವೆ.
ಅಂತೆಯೇ ಬಾರ್‌ಗಳು, ಹೋಟೆಲ್‌ಗಳು, ಬಾರ್ ಅಂಡ್ ರೆಸ್ಟೋರೆಂಟ್, ಚಿನ್ನಾಭರಣ ಮಳಿಗೆಗಳು ಹಾಗೂ ಕೆಲ ಐಟಿ ಕಂಪನಿಗಳ ಸುಮಾರು 193 ಖಾತೆಗಳಿಗೆ 5, 10 ಹಾಗೂ 20 ಲಕ್ಷ ರು.ಗಳನ್ನು ಹೈದರಾಬಾದ್ ಗ್ಯಾಂಗ್ ವರ್ಗಾಯಿಸಿತ್ತು. ಈ ವರ್ಗಾವಣೆಯಾಗಿದ್ದ ಹಣದಲ್ಲಿ 20 ಕೋಟಿ ರು.ಗೂ ಅಧಿಕ ಹಣವನ್ನು ನಗದು ರೂಪದಲ್ಲಿ ಆರೋಪಿಗಳು ಪಡೆದಿದ್ದರು. ಆದರೆ ತನಿಖೆ ಶುರುವಾದ ಬಳಿಕ ನಗದೀಕರಣಕ್ಕೆ ಆರೋಪಿಗಳಿಗೆ ಸಾಧ್ಯವಾಗಿಲ್ಲ. ಅಷ್ಟರಲ್ಲಿ ಬ್ಯಾಂಕ್‌ಗಳಿಗೆ ಮಾಹಿತಿ ನೀಡಿ 10 ಕೋಟಿ ರು. ಮುಟ್ಟುಗೋಲು ಹಾಕಿದ್ದೇವೆ. ಶೋಧ ಮುಂದುವರೆದಿದ್ದು, ಮುಂದೆ ಮತ್ತಷ್ಟು ಖಾತೆಗಳಲ್ಲಿ ಹಣ ಜಪ್ತಿಯಾಗಲಿದೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.
-ಬಾಕ್ಸ್-
ಮೂರು ವರ್ಷಗಳ ಹಿಂದೆ ವಾಲ್ಮೀಕಿ ನಿಗಮದ ಮಾದರಿಯಲ್ಲೇ ಛತ್ತೀಸ್‌ಗಢ ರಾಜ್ಯದ ಕೃಷಿ ಮಂಡಳಿಯಲ್ಲಿ 14 ಕೋಟಿ ರು ಹಣವನ್ನು ಹೈದರಾಬಾದ್ ಗ್ಯಾಂಗ್ ಲಪಟಾಟಿಸಿತ್ತು. ಅಲ್ಲಿ ಯಶಸ್ಸು ಕಂಡ ಬಳಿಕ ರಾಜ್ಯದ ವಾಲ್ಮೀಕಿ ನಿಗಮದಲ್ಲಿ ದೊಡ್ಡ ಮೊತ್ತವನ್ನು ಆರೋಪಿಗಳು ದೋಚಿದ್ದರು ಎಂದು ಮೂಲಗಳು ಹೇಳಿವೆ.
---
ಇದುವರೆಗೆ ವಾಲ್ಮೀಕಿ ನಿಗಮದಿಂದ ಅಕ್ರಮವಾಗಿ ವರ್ಗಾವಣೆಯಾಗಿದ್ದ 94 ಕೋಟಿ ರು. ಹಣದ ಪೈಕಿ ಹೈದರಾಬಾದ್ ಗ್ಯಾಂಗ್‌ನಿಂದ 28 ಕೋಟಿ ರು. ಜಪ್ತಿಯಾಗಿದೆ. ಇನ್ನುಳಿದ ಹಣದ ಕುರಿತು ತನಿಖೆ ಮುಂದುವರೆಸಲಾಗಿದೆ. ಇನ್ನೊಂದೆಡೆ ಇದೇ ಪ್ರಕರಣದ ಪ್ರಮುಖ ಆರೋಪಿ ಹೈದರಾಬಾದ್‌ನ ಫಸ್ಟ್ ಫೈನಾನ್ಸ್ ಸಹಕಾರಿ ಬ್ಯಾಂಕ್‌ನ ಅಧ್ಯಕ್ಷ ಸತ್ಯನಾರಾಯಣ್ ಸೇರಿದ ಬ್ಯಾಂಕ್ ಖಾತೆಗಳಿಂದ 45 ಕೋಟಿ ರು. ಹಣವನ್ನು ಪೂರ್ವಾನುಮತಿ ಇಲ್ಲದೆ ಬಳಸದಂತೆ ನಿರ್ಬಂಧಿಸಲಾಗಿದೆ. ನಿಗಮದ ಹಗರಣದ ತನಿಖೆ ಮುಗಿದ ಬಳಿಕ ಆ ನಿರ್ಬಂಧ ತೆರವುಗೊಳಿಸಲಾಗುತ್ತದೆ ಎಂದು ಮೂಲಗಳು ಹೇಳಿವೆ.
ವಾಲ್ಮೀಕಿ ಹಗರಣ: ಮತ್ತೊಬ್ಬನ ಬಂಧನ
ಬೆಂಗಳೂರು: ವಾಲ್ಮೀಕಿ ನಿಗಮ ಹಗರಣ ಸಂಬಂಧ ಮತ್ತೊಬ್ಬ ಆರೋಪಿಯನ್ನು ಹೈದರಾಬಾದ್‌ನಲ್ಲಿ ಎಸ್‌ಐಟಿ ಬಂಧಿಸಿದೆ. ಹೈದರಾಬಾದ್‌ನ ಮಧ್ಯವರ್ತಿ ಶ್ರೀನಿವಾಸ್ ಬಂಧಿತನಾಗಿದ್ದು, ಹಣ ವರ್ಗಾವಣೆಯಲ್ಲಿ ಆತನ ಪ್ರಮುಖ ಪಾತ್ರವಹಿಸಿದ್ದ.ಈಗ ಬಂಧಿತರ ಸಂಖ್ಯೆ 11ಕ್ಕೆ ಏರಿಕೆಯಾಗಿದ್ದು, ಹೈದರಾಬಾದ್ ಗ್ಯಾಂಗ್‌ನ ಮತ್ತೊಬ್ಬ ಪ್ರಮುಖ ಆರೋಪಿ ಕಾರ್ತಿ ಶ್ರೀನಿವಾಸ್ ಪತ್ತೆಗೆ ಎಸ್‌ಐಟಿ ಬೇಟೆ ಮುಂದುವರೆಸಿದೆ.
ಇದೇ ವೇಳೆ ನಾಲ್ಕು ದಿನಗಳ ಹಿಂದೆ ಬಂಧಿಸಲಾಗಿದ್ದ ಸಾಯಿತೇಜ ಹಾಗೂ ತೇಜ ತಮ್ಮಯ್ಯನನ್ನು ವಿಚಾರಣೆಗೆ ಎಸ್‌ಐಟಿ ವಶಕ್ಕೆ ಪಡೆದಿದೆ.