- ಶಿವಗಂಗಾ ಬಸವರಾಜ ಕೃಪೆಗೆ ಚನ್ನಗಿರಿ ತಾಲೂಕು ಅಧಿಕಾರಿಗಳ ಕಸರತ್ತು?
- ಸರ್ಕಾರಿ ವಾಹನಗಳಲ್ಲೇ ಶಿವಮೊಗ್ಗ ವಿಮಾನ ನಿಲ್ದಾಣಕ್ಕೂ ಅಧಿಕಾರಿಗಳ ದೌಡು
- ದಾಖಲೆ ಪತ್ರ, ಸೌಲಭ್ಯಗಳಿಗೆ ಕಚೇರಿಗಳಲ್ಲಿ ಅಧಿಕಾರಿಗಳಿಗಾಗಿ ಕಾದು ಸುಸ್ತಾದ ಜನಸಾಮಾನ್ಯರು
ಕನ್ನಡಪ್ರಭ ವಾರ್ತೆ, ದಾವಣಗೆರೆ
ಚನ್ನಗಿರಿ ಶಾಸಕ ಶಿವಗಂಗಾ ವಿ.ಬಸವರಾಜ ತಿರುಪತಿ ತಿಮ್ಮಪ್ಪನ ಪರಮಭಕ್ತ. ಅದರಂತೆ ಪ್ರತಿವರ್ಷ ತಿಮ್ಮಪ್ಪನ ದರ್ಶನಕ್ಕೆ, ಅವಕಾಶ ಸಿಕ್ಕಾಗಲೆಲ್ಲಾ ಹೋಗಿ ದರ್ಶನ ಮಾಡಿ ಬರುತ್ತಾರೆ. ಶಾಸಕರ ಮೇಲೆ ತಿಮ್ಮಪ್ಪನ ಕೃಪೆ ಇರಲಿ, ತಮ್ಮ ಮೇಲೆ ತಮ್ಮ ಕ್ಷೇತ್ರದ ಶಾಸಕರ ಕೃಪೆ ಇರಬೇಕೆಂಬ ಕಾರಣಕ್ಕೆ ಚನ್ನಗಿರಿ ಪಟ್ಟಣದಲ್ಲಿ ಜೂ.27ರಂದು ಗುರುವಾರ ಬೆಳಗ್ಗೆಯೇ ನಾಡಪ್ರಭುವಿನ ಜನ್ಮದಿನ ಆಚರಿಸಿ, ಅದೇ ಅವಸರದಲ್ಲಿ 2 ದಿನಗಳ ಕಾಲ ಕರ್ತವ್ಯಕ್ಕೆ ರಜೆ ಹಾಕಿ, ತಿರುಪತಿಗೆ ತೆರಳಲು, ಶಿವಮೊಗ್ಗ ವಿಮಾನ ನಿಲ್ದಾಣ ತಲುಪಿದ್ದರು ಎಂಬ ಮಾತು ಕ್ಷೇತ್ರಾದ್ಯಂತ ಹರಿದಾಡುತ್ತಿದೆ.
ಚನ್ನಗಿರಿ ತಹಸೀಲ್ದಾರ್, ತಾಪಂ ಇಒ, ಪಶು ಸಂಗೋಪನಾ ಇಲಾಖೆ, ಲೋಕೋಪಯೋಗಿ ಇಲಾಖೆ, ಗ್ರಾಮೀಣ ನೀರು ಪೂರೈಕೆ ಮತ್ತು ನೈರ್ಮಲ್ಯ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಸಮಾಜ ಕಲ್ಯಾಣ, ತಾಲೂಕುಮಟ್ಟದ ವೈದ್ಯಾಧಿಕಾರಿಗಳು, ವಲಯ ಅರಣ್ಯಾಧಿಕಾರಿ, ಬೆಸ್ಕಾಂ ಚನ್ನಗಿರಿ- ಸಂತೇಬೆನ್ನೂರು ಕಚೇರಿ ಹೀಗೆ ವಿವಿಧ ಇಲಾಖೆ ಅಧಿಕಾರಿಗಳ ಪೈಕಿ ಅನೇಕರು ತಿರುಪತಿಗೆ ಹೋಗಿ ಬಂದಿದ್ದಾರೆ. ಒಮ್ಮಿಂದೊಮ್ಮೆಗೆ ಅಧಿಕಾರಿಗಳಿಗೆ ತಿರುಪತಿ ತಿಮ್ಮಪ್ಪನ ಮೇಲೆ ಭಕ್ತಿ ಉಕ್ಕಿ ಹರಿದಿದ್ದಾ ಅಥವಾ ಶಾಸಕರ ಮೇಲಿನ ಅಭಿಮಾನ, ಕೃಪೆ ಗಳಿಸುವ ಸರ್ಕಸ್ಸಾ ಎಂಬ ವ್ಯಂಗ್ಯದ ಮಾತು ಈಗ ಚನ್ನಗಿರಿ ತಾಲೂಕಿನಲ್ಲಿ ಕೇಳಿಬರುತ್ತಿವೆ.
- - -
ಶ್ರೀಮಂತ ತಾಲೂಕಿನಲ್ಲಿ ನೂರಾರು ಸಮಸ್ಯೆ
ಸಾಹೇಬರನ್ನು ಕರೆ ತರಲು ಚನ್ನಗಿರಿಯ ಸರ್ಕಾರಿ ವಾಹನಗಳ ಚಾಲಕರು ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಹೋಗಿ, ಕಾದು ಕರೆತಂದಿದ್ದೂ ಆಗಿದೆ. ತಾಲೂಕಿನಲ್ಲಿ ನೂರಾರು ಸಮಸ್ಯೆ ತಾಂಡವವಾಡುತ್ತಿದೆ. ಆದರೆ, ದೇವರ ಮೇಲಿನ ಭಕ್ತಿ, ಶಾಸಕರ ಕೃಪಾಕಟಾಕ್ಷಕ್ಕೆ ವಿಮಾನವನ್ನೇರಿ ತಿರುಪತಿಗೆ ಹೋಗಿ ಬರುವ ಅಧಿಕಾರಿಗಳಿಗೆ ತಾವು ಕಾರ್ಯ ನಿರ್ವಹಿಸುವ ತಾಲೂಕಿನ ಹಳ್ಳಿಯೊಂದರಲ್ಲಿ ವರ್ಷಗಳಿಂದ ಕಾಡುವ ಸಮಸ್ಯೆ ಹೋಗಿ, ಪರಿಶೀಲಿಸುವ ಬದ್ಧತೆ ಇಲ್ಲ. ಇಂತಹವರಿಂದ ಜನರು ಏನನ್ನು ನಿರೀಕ್ಷಿಸಲು ಸಾಧ್ಯವೆಂಬ ಪ್ರಶ್ನೆ ಜನ ಸಾಮಾನ್ಯರಿಂದ ಕೇಳಿಬರುತ್ತಿದೆ.
"ಸರ್ಕಾರಿ ಕೆಲಸ ದೇವರ ಕೆಲಸ " ಎಂಬುದಾಗಿ ಗ್ರಾಪಂ ಕಚೇರಿಯಿಂದ ವಿಧಾನಸೌಧವರೆಗೆ ಮಾತು ಕೇಳುತ್ತವೆ, ಫಲಕ ಕಂಡಿರುತ್ತವೆ. ಆದರೆ, ಚನ್ನಗಿರಿ ತಾಲೂಕು ಅಧಿಕಾರಿಗಳ ದಂಡು (ತಿರುಪತಿಗೆ ಹೋಗದವರನ್ನು ಹೊರತುಪಡಿಸಿ) ಇದೇ ದೇವರ ಮೇಲಿನ ಭಯಭಕ್ತಿ, ಶಾಸಕರ ಕೃಪಾಕಟಾಕ್ಷಕ್ಕಾಗಿ ತಮ್ಮ ಕೆಲಸಕ್ಕೆ ಎರಡು ದಿನ ರಜೆ ಹಾಕಿ, ತಮ್ಮದೇ ಹಣ ಹಾಕಿಕೊಂಡು ಹೋಗಿ ಬರುತ್ತಾರೆ. ಆದರೆ, ಸರ್ಕಾರಿ ವಾಹನ, ಸರ್ಕಾರಿ ಕಚೇರಿ, ಸರ್ಕಾರಿ ಸಂಬಳ ಹೀಗೆ ಎಲ್ಲ ಸೌಲಭ್ಯ ನೀಡಿದರೂ, ತೆರಿಗೆ ಮೂಲಕ ಇದೆಲ್ಲದರ ದಾತರಾದ ಜನರ ಸಮಸ್ಯೆಗೆ ಸರ್ಕಾರಿ ಕೆಲಸದ, ಕರ್ತವ್ಯದ ಅವಧಿಯಲ್ಲೇ ಇಂತಹ ಬದ್ಧತೆ ಯಾಕೆ ತೋರಲ್ಲವೆಂಬ ಜನರ ಪ್ರಶ್ನೆಗೆ ಅಧಿಕಾರಿಗಳೇ ಉತ್ತರಿಸಬೇಕಿದೆ.- - - ಕೋಟ್ * ನಮ್ಮ ಹಕ್ಕಿನ ರಜೆ ತಿರುಪತಿಗೆ ಹೋಗಿದ್ದು ನಿಜ. ನಾವು ಆಸ್ತಿಕರೆ. ದೈವಭಕ್ತರೆ. ನಮ್ಮ ಹಕ್ಕಿನ ರಜೆ ಹಾಕಿ, ಹೋಗಿ ಬಂದಿದ್ದೇವೆ. ಶಿವಮೊಗ್ಗದಿಂದ ವಿಮಾನದಲ್ಲಿ ಹೋಗಿ, ತಿರುಪತಿ ಶ್ರೀ ತಿಮ್ಮಪ್ಪನ ದರ್ಶನ ಪಡೆದು, ಶಿವಮೊಗ್ಗಕ್ಕೆ ವಾಪಸ್ಸಾದೆವು. ನಾವು ದೇವರ ದರ್ಶನಕ್ಕೆ ಹೋಗಿದ್ದೇ ಹೊರತು, ಬೇರೇನೂ ಅಲ್ಲ ಎಂದು ಹೆಸರನ್ನು ಹೇಳಲಿಚ್ಛಿಸದ ಅಧಿಕಾರಿಯೊಬ್ಬರು ಕನ್ನಡಪ್ರಭಕ್ಕೆ ಪ್ರತಿಕ್ರಿಯಿಸಿದ್ದಾರೆ.
- - - -28ಕೆಡಿವಿಜಿ17, 18:ಚನ್ನಗಿರಿ ಪಟ್ಟಣದ ವಿವಿಧ ತಾಲೂಕು ಕಚೇರಿಗಳಲ್ಲಿ ತಾಲೂಕುಮಟ್ಟದ ಅಧಿಕಾರಿಗಳ ಕುರ್ಚಿಗಳು ಶಾಸಕರ ಜನ್ಮದಿನದ ಅಂಗವಾಗಿ ಅಧಿಕಾರಿಗಳು ತಿರುಪತಿಗೆ ತೆರಳಿದ್ದರಿಂದ ಸರ್ಕಾರಿ ಕಚೇರಿಗಳು ಭಣಗುಟ್ಟಿದವು.