ಕನ್ನಡಪ್ರಭ ವಾರ್ತೆ ಪಾಂಡವಪುರ
ಹೆಣ್ಣು ಭ್ರೂಣ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ. ಆಂಬ್ಯುಲೆನ್ಸ್ ಚಾಲಕ ಆನಂದ್ (೩೭), ಹೊರಗುತ್ತಿಗೆ ಡಿ-ಗ್ರೂಪ್ ನೌಕರೆ ಅಶ್ವಿನಿ (೩೨), ಆಕೆಯ ತಾಯಿ ಸತ್ಯಮ್ಮ (೫೪), ಹಿಂದೆ ಪಾಂಡವಪುರ ಖಾಸಗಿ ನರ್ಸಿಂಗ್ ಹೋಂನಲ್ಲಿ ಡಿ-ಗ್ರೂಪ್ ನೌಕರೆಯಾಗಿದ್ದ ಗಿರಿಜಮ್ಮ (೪೮) ಬಂಧಿತರು.
ಪ್ರಕರಣವೇನು?ಆಂಬ್ಯುಲೆನ್ಸ್ ಚಾಲಕನಾಗಿದ್ದ ಆನಂದ್‌ಗೆ ಪಾಂಡವಪುರ ತಾಲೂಕು ಆರೋಗ್ಯ ಇಲಾಖೆಗೆ ಸೇರಿದ ವಸತಿ ಗೃಹವನ್ನು ವಾಸಕ್ಕೆ ನೀಡಲಾಗಿತ್ತು. ಆನಂದ್, ಪತ್ನಿ ಅಶ್ವಿನಿ, ಆಕೆಯ ತಾಯಿ ಸತ್ಯಮ್ಮ ಅಲ್ಲಿ ವಾಸವಿದ್ದರು. ಅಶ್ವಿನಿ ಆರೋಗ್ಯ ಇಲಾಖೆಯಲ್ಲೇ ಹೊರಗುತ್ತಿಗೆ ಆಧಾರದ ಮೇಲೆ ಡಿ-ಗ್ರೂಪ್ ನೌಕರೆಯಾಗಿ ಕಾರ್ಯನಿರ್ವಹಿಸುತ್ತಿದ್ದರು.
ಸ್ಥಳೀಯರಿಂದ ಮಾಹಿತಿ:
ನಂತರ ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ಕೆ.ಮೋಹನ್, ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ.ಬೆಟ್ಟಸ್ವಾಮಿ ಅವರು ಸ್ಥಳಕ್ಕೆ ಧಾವಿಸಿ ಬಂದರು. ವಸತಿ ಗೃಹದಲ್ಲಿ ಪರಿಶೀಲನೆ ನಡೆಸಿದಾಗ ಗರ್ಭಪಾತ ಮಾತ್ರೆಗಳು, ಸಿರೆಂಜ್, ಡ್ರಿಪ್ ಸೇರಿದಂತೆ ಭ್ರೂಣ ಸುಗಮವಾಗಿ ಹೊರಬರುವಂತೆ ನೀಡುವ ಔಷಧಗಳು ಕಂಡುಬಂದಿವೆ. ಆ ನಂತರದಲ್ಲಿ ಪೊಲೀಸರು ದಂಪತಿಯನ್ನು ಸ್ಥಳದಲ್ಲೇ ಬಂಧಿಸಿದರಲ್ಲದೇ, ಈ ಪಾಪಕೃತ್ಯಕ್ಕೆ ನೆರವಾಗಿದ್ದ ಶಶಿಕಲಾ ಮತ್ತು ಗಿರಿಜಾಂಬ ಅವರನ್ನೂ ವಶಕ್ಕೆ ತೆಗೆದುಕೊಂಡು ಕರೆದೊಯ್ದರು.
ಗರ್ಭಪಾತ ಮಾಡಿಸಿಕೊಳ್ಳುವುದಕ್ಕೆ ಬಂದಿದ್ದ ಗರ್ಭಿಣಿಗೆ ಈಗಾಗಲೇ ಎರಡು ಹೆಣ್ಣು ಮಕ್ಕಳಿದ್ದಾರೆ. ಗಂಡು ಮಗುವಿನ ಬಯಕೆಯಲ್ಲಿದ್ದ ಕುಟುಂಬದವರು ಮತ್ತೆ ಹೆಣ್ಣು ಮಗು ಹುಟ್ಟುವ ವಿಷಯವನ್ನು ಬೇರೆಲ್ಲೋ ಸ್ಕ್ಯಾನಿಂಗ್ ಮಾಡಿಸಿ ತಿಳಿದುಕೊಂಡು ಗರ್ಭಪಾತಕ್ಕೆ ಇಲ್ಲಿಗೆ ಬಂದಿದ್ದರು ಎಂದು ತಿಳಿದು ಬಂದಿದೆ. ಗರ್ಭಪಾತದ (ಅನ್ವಾಂಟೆಡ್ ಕಿಟ್) ಮಾತ್ರೆ ನೀಡಿ ಅರ್ಧಂಬರ್ಧ ಅಬಾರ್ಷನ್ ಆಗಿದ್ದ ಗರ್ಭಿಣಿಯನ್ನು ತಾಲೂಕು ಆಸ್ಪತ್ರೆಗೆ ದಾಖಲಿಸಿ ಸುಗಮವಾಗಿ ಅಬಾರ್ಷನ್ ಆಗುವಂತೆ ಮಾಡಲಾಯಿತು ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಕೆ.ಮೋಹನ್ ‘ಕನ್ನಡಪ್ರಭ’ ಪತ್ರಿಕೆಗೆ ತಿಳಿಸಿದರು.
ಹೆಣ್ಣು ಭ್ರೂಣಹತ್ಯೆ ನಡೆಯುತ್ತಿದ್ದ ವಸತಿ ಗೃಹಕ್ಕೆ ಜಿಲ್ಲಾಧಿಕಾರಿ ಡಾ.ಕುಮಾರ, ಜಿಲ್ಲಾ ಪೊಲೀಸ್ ಅಧೀಕ್ಷಕ ಎನ್.ಯತೀಶ್ ಸೇರಿದಂತೆ ಸ್ಥಳೀಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬಳಿಕ ಆರೋಗ್ಯ ಇಲಾಖೆ ಅಧಿಕಾರಿಗಳೊಂದಿಗೆ ತಾಲೂಕು ಆಸ್ಪತ್ರೆಯಲ್ಲಿ ಸಭೆ ನಡೆಸಿ ಪ್ರಕರಣದ ಬಗ್ಗೆ ಮಾಹಿತಿ ಪಡೆದುಕೊಂಡರು.
ಹೆಣ್ಣು ಭ್ರೂಣ ಹತ್ಯೆ ವಿಚಾರ ತಿಳಿದ ಕೂಡಲೇ ಮಧ್ಯರಾತ್ರಿಯೇ ಪಾಂಡವಪುರಕ್ಕೆ ಭೇಟಿ ನೀಡಿದೆ. ಹೊರಗುತ್ತಿಗೆ ನೌಕರರು ಈ ಕೃತ್ಯವೆಸಗಿರುವುದು ಕಂಡುಬಂದಿದೆ. ನಾಲ್ವರ ವಿರುದ್ಧ ಪ್ರಕರಣ ದಾಖಲಿಸಿದ್ದು, ಅವರನ್ನು ಪೊಲೀಸರು ಬಂಧಿಸಿದ್ದಾರೆ. ಅಬಾರ್ಷನ್ ಆಗಿರುವ ಮಹಿಳೆಯನ್ನು ರಿವರ್ಸ್ ಆಪರೇಷನ್ ಮಾಡುವ ಅಗತ್ಯವಿದೆ. ಎಲ್ಲಿ ಸ್ಕ್ಯಾನಿಂಗ್ ಮಾಡಲಾಯಿತು, ಅಬಾರ್ಷನ್‌ಗೆ ಇಲ್ಲಿಗೆ ಕಳುಹಿಸಿದ್ದು ಯಾರು ಎಂಬ ಬಗ್ಗೆ ತನಿಖೆ ನಡೆಸುವುದರಿಂದ ಹೆಣ್ಣು ಭ್ರೂಣ ಹತ್ಯೆ ಹಿಂದಿರುವವರು ಯಾರೆಂಬುದು ಗೊತ್ತಾಗುತ್ತದೆ. ಆಕೆ ಮತ್ತು ಕುಟುಂಬದವರ ವಿರುದ್ಧವೂ ಕ್ರಮಕ್ಕೆ ತಿಳಿಸಿದ್ದೇವೆ. ಪೊಲೀಸರ ತನಿಖೆಗೆ ಸಹಕಾರ ನೀಡುತ್ತೇವೆ.
- ಡಾ.ಬೆಟ್ಟಸ್ವಾಮಿ, ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ