ಮತ್ತೊಂದು ಕಾರ್ಖಾನೆ; ಹೆಚ್ಚಿದ ಆತಂಕ, ಆಕ್ರೋಶ

KannadaprabhaNewsNetwork |  
Published : Feb 13, 2025, 12:46 AM IST
12ಕೆಪಿಎಲ್27 ಸೋಷಿಯಲ್ ಮೀಡಿಯಾದಲ್ಲಿ ಆಕ್ರೋಶ 12ಕೆಪಿಎಲ್28 ಹೇಮಲತಾ ನಾಯಕ  | Kannada Prabha

ಸಾರಾಂಶ

ಜಿಲ್ಲಾ ಕೇಂದ್ರಕ್ಕೆ ಹೊಂದಿಕೊಂಡೇ ಬೃಹತ್ ಉಕ್ಕು ಕಾರ್ಖಾನೆ ಸ್ಥಾಪನೆಗೆ ರಾಜ್ಯ ಸರ್ಕಾರ ಅಸ್ತು ಎನ್ನುತ್ತಿದ್ದಂತೆ ಜಿಲ್ಲಾದ್ಯಂತ ಆಕ್ರೋಶ, ಆತಂಕ ವ್ಯಕ್ತವಾಗಿದೆ.

ಇನ್ಮುಂದೆ ನಮ್ಮೂರಿಗೆ ಕಾರ್ಖಾನೆಗಳು ಬೇಡ: ಸಾಮಾಜಿಕ ಜಾಲತಾಣದಲ್ಲಿ ಅಭಿಯಾನ ಪ್ರಾರಂಭ

ಸೋಮರಡ್ಡಿ ಅಳವಂಡಿ

ಕನ್ನಡಪ್ರಭ ವಾರ್ತೆ ಕೊಪ್ಪಳ

ಜಿಲ್ಲಾ ಕೇಂದ್ರಕ್ಕೆ ಹೊಂದಿಕೊಂಡೇ ಬೃಹತ್ ಉಕ್ಕು ಕಾರ್ಖಾನೆ ಸ್ಥಾಪನೆಗೆ ರಾಜ್ಯ ಸರ್ಕಾರ ಅಸ್ತು ಎನ್ನುತ್ತಿದ್ದಂತೆ ಜಿಲ್ಲಾದ್ಯಂತ ಆಕ್ರೋಶ, ಆತಂಕ ವ್ಯಕ್ತವಾಗಿದೆ.

ಈಗಾಗಲೇ ಕೊಪ್ಪಳ ತಾಲೂಕಿನಲ್ಲಿ ಸುಮಾರು 50ಕ್ಕೂ ಹೆಚ್ಚು ಕಾರ್ಖಾನೆಗಳಿದ್ದು, ಈಗ ಇದಕ್ಕೆ ಹೊಸ ಸೇರ್ಪಡೆಯಾಗಿ ಮತ್ತೊಂದು ಬೃಹತ್ ಉಕ್ಕು ಕಾರ್ಖಾನೆ ಸ್ಥಾಪಿಸಲು ಬಿಎಸ್ಪಿಎಲ್ ಕಂಪನಿಗೆ ರಾಜ್ಯ ಸರ್ಕಾರ ಬಂಡವಾಳ ಹೂಡಿಕೆದಾರರ ಸಮಾವೇಶದಲ್ಲಿ ಅನುಮತಿ ನೀಡಿರುವುದು ಆತಂಕಕ್ಕೆ ಕಾರಣವಾಗಿದೆ.

ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಭಾರಿ ಚರ್ಚೆಯಾಗುತ್ತಿದ್ದು, ಇನ್ಮುಂದೆ ನಮ್ಮೂರಿಗೆ ಕಾರ್ಖಾನೆಗಳು ಬೇಡ ಎನ್ನುವ ಅಭಿಯಾನ ಪ್ರಾರಂಭಿಸಲಾಗಿದೆ.

ಈಗಿರುವ ಕಾರ್ಖಾನೆಗಳಿಂದಲೇ ಆಗುತ್ತಿರುವ ದುಷ್ಪರಿಣಾಮವನ್ನು ಸಹಿಸಿಕೊಂಡು ಇರಲು ಆಗುತ್ತಿಲ್ಲ. ಆರೋಗ್ಯ ಸಮಸ್ಯೆ, ಕೃಷಿ ಬೆಳೆ ಉತ್ಪಾದನೆಯಲ್ಲಿ ಕುಸಿತವಾಗಿರುವುದು ಸೇರಿದಂತೆ ಜಾನುವಾರುಗಳು ಗೊಡ್ಡಾಗುತ್ತಿವೆ. ಅದರಲ್ಲೂ ಕಾರ್ಖಾನೆ ವ್ಯಾಪ್ತಿಯಲ್ಲಿನ ಜನರ ಪಾಡು ಹೇಳತೀರದಾಗಿದೆ. ಹೀಗಿರುವಾಗ ಮತ್ತೊಂದು ಕಾರ್ಖಾನೆ ಬೇಡವೇ ಬೇಡ ಎನ್ನುವ ಕೂಗು ಜೋರಾಗಿಯೇ ಎದ್ದಿದೆ.

ವಿಸ್ತರಣೆಯೂ ಬೇಡ:

ಹೊಸ ಕಾರ್ಖಾನೆಯ ಸ್ಥಾಪನೆಗೂ ವಿರೋಧ ವ್ಯಕ್ತವಾಗುವುದರ ಜೊತೆಗೆ ಈಗಾಗಲೇ ಇರುವ ಕಾರ್ಖಾನೆಗಳಿಗೂ ಯಾವುದೇ ವಿಸ್ತರಣೆ (ಸಾಮರ್ಥ್ಯ ಹೆಚ್ಚಳಕ್ಕೆ)ಗೂ ಅವಕಾಶ ನೀಡಬಾರದು ಎನ್ನುವ ಆಗ್ರಹ ಕೇಳಿ ಬರುತ್ತಿದೆ.

ಚಿಕ್ಕದಾಗಿ ಪ್ರಾರಂಭವಾದ ಕಾರ್ಖಾನೆಗಳು ಕಾನೂನು ಬಾಹಿರವಾಗಿ ವಿಸ್ತರಣೆ ಮಾಡಿಕೊಳ್ಳುತ್ತಿವೆ. ಸಾರ್ವಜನಿಕ ಅಹವಾಲು ಸ್ವೀಕಾರ ಮಾಡುವ ವೇಳೆಯಲ್ಲಿ ಗೋಲ್ ಮಾಲ್ ಮಾಡಿ, ವಿಸ್ತರಣೆ ಮಾಡಿಕೊಳ್ಳುತ್ತಿವೆ. ಹೀಗಾಗಿ, ಇದೆಲ್ಲಕ್ಕೂ ಬ್ರೇಕ್ ಬೀಳುವಂತಾಗಬೇಕು ಎನ್ನುವ ಕೂಗು ಬಲವಾಗಿಯೇ ಕೇಳಿ ಬರುತ್ತಿದೆ.

ಕೊಪ್ಪಳ ಸುರಕ್ಷಿತವಲ್ಲ:

ನಿವೃತ್ತಿಯ ನಂತರ ಕೊಪ್ಪಳದಲ್ಲಿಯೇ ಮನೆ ಮಾಡಿಕೊಂಡು, ಬದುಕು ಸಾಗಿಸಲು ಕೊಪ್ಪಳ ಸುರಕ್ಷಿತವಲ್ಲ ಎನ್ನುವ ಕಮೆಂಟ್‌ಗಳು ಸಹ ಬಂದಿವೆ. ಇದಲ್ಲದೆ ಅನೇಕ ರೀತಿಯ ವ್ಯಂಗ್ಯಭರಿತ ಆಕ್ರೋಶಗಳು ಸಾಮಾಜಿಕ ಜಾಲತಾಣದಲ್ಲಿ ವ್ಯಕ್ತವಾಗುತ್ತಿವೆ.

ಜನಾಂದೋಲನ:

ಇದರ ಜೊತೆಗೆ ಕಾರ್ಖಾನೆಗಳ ವಿರುದ್ಧ ಜನಾಂದೋಲನ ಎನ್ನುವ ವ್ಯಾಟ್ಸ್‌ಆ್ಯಪ್ ಗ್ರೂಪ್ ಸಹ ಮಾಡಿಕೊಳ್ಳಲಾಗಿದ್ದು, ಅದರ ಮೂಲಕ ಕಾರ್ಖಾನೆಗಳು ಬೇಡವೇ ಬೇಡ ಎಂದು ಅಭಿಯಾನ ಪ್ರಾರಂಭಿಸಿದ್ದಾರೆ. ಹೋರಾಟ ಸಮಿತಿಯನ್ನು ಸಿದ್ಧ ಮಾಡಿ, ಶೀಘ್ರದಲ್ಲಿಯೇ ಸಭೆ ಕರೆಯಲು ಚರ್ಚೆ ಮಾಡಲಾಗುತ್ತಿದೆ. ಈ ಜನಾಂದೋಲನಕ್ಕೆ ಭಾರಿ ಬೆಂಬಲ ವ್ಯಕ್ತವಾಗುತ್ತಿದೆ. ಹಳ್ಳಿ, ಹಳ್ಳಿಯಲ್ಲಿಯೂ ಸಹ ಬೆಂಬಲ ಸೂಚಿಸುತ್ತಿದ್ದಾರೆ. ಈ ಕುರಿತು ನಿರಂತರ ಹೋರಾಟ ಮಾಡುವ ಅಗತ್ಯವನ್ನು ಸಹ ಪ್ರಸ್ತಾಪ ಮಾಡಲಾಗಿದೆ.ಕಾರ್ಖಾನೆ ಸ್ಥಾಪನೆಗೆ ಬಿಡಲ್ಲ:

ಕೊಪ್ಪಳದಲ್ಲಿ ಈಗಾಗಲೇ ಇರುವ ಕಾರ್ಖಾನೆಗಳಿಂದ ಆಗುತ್ತಿರುವ ಸಮಸ್ಯೆಯಿಂದ ಜನರು ರೋಸಿ ಹೋಗಿದ್ದಾರೆ. ಹೀಗಿರುವಾಗ ಮತ್ತೊಂದು ಬೃಹತ್ ಕಾರ್ಖಾನೆ ಸ್ಥಾಪಿಸಲು ಸರ್ಕಾರ ಅನುಮತಿ ನೀಡಿರುವುದನ್ನು ನಾನು ಖಂಡಿಸುತ್ತೇನೆ ಮತ್ತು ಇದನ್ನು ತಡೆಹಿಡಿಸುವಂತೆ ಸಿಎಂ ಸಿದ್ದರಾಮಯ್ಯ ಅವರಿಗೆ ಪತ್ರ ಬರೆಯುವುದಾಗಿ ವಿಧಾನಪರಿಷತ್ ಸದಸ್ಯೆ ಹೇಮಲತಾ ನಾಯಕ ಹೇಳಿದ್ದಾರೆ.

ಕನ್ನಡಪ್ರಭದೊಂದಿಗೆ ಮಾತನಾಡಿದ ಅವರು, ಈಗಾಗಲೇ ಇರುವ ಕಾರ್ಖಾನೆಗಳಿಂದಲೇ ಭಾರಿ ಹಾನಿಯಾಗುತ್ತಿದೆ. ಜನರ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರಿದೆ. ಈಗ ಕೊಪ್ಪಳ ನಗರಕ್ಕೆ ಹೊಂದಿಕೊಂಡೇ ಬೃಹತ್ ಉಕ್ಕು ಕಾರ್ಖಾನೆ ಸ್ಥಾಪಿಸುವುದಕ್ಕೆ ನಾವು ಬಿಡುವುದಿಲ್ಲ. ಇದರ ವಿರುದ್ಧ ದೊಡ್ಡ ಹೋರಾಟ ಮಾಡುತ್ತೇವೆ ಎಂದು ಕಿಡಿಕಾರಿದ್ದಾರೆ.

ಕೋರ್ಟ್‌ ಮೊರೆ:

ಸಾಮಾನ್ಯವಾಗಿ ಜನವಸತಿ ಪ್ರದೇಶ ವ್ಯಾಪ್ತಿಯಲ್ಲಿ ಉಕ್ಕು ಕಾರ್ಖಾನೆಯನ್ನು ಸ್ಥಾಪಿಸುವುದಕ್ಕೆ ಅವಕಾಶವೇ ಇಲ್ಲ. ಈಗ ಬೃಹತ್ ಕಾರ್ಖಾನೆಗಾಗಿ ಸ್ವಾಧೀನ ಮಾಡಿಕೊಂಡಿರುವ ಭೂಮಿ ಕೊಪ್ಪಳ ನಗರಾಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಯಲ್ಲಿಯೇ ಇದೆ. ಜಿಲ್ಲಾಡಳಿತ ಭವನದಿಂದ ಕೂಗಳತೆ ದೂರದಲ್ಲಿಯೇ ಇದೆ. ಹೀಗಾಗಿ, ಇದಕ್ಕೆ ಕಾನೂನಿನಲ್ಲಿ ಅವಕಾಶವೇ ಇಲ್ಲ. ಇದನ್ನು ಪ್ರಶ್ನೆ ಮಾಡಿ ರಾಷ್ಟ್ರೀಯ ಹಸಿರು ಪೀಠ ಮೊರೆ ಹೋಗಲು ಸಹ ಚಿಂತನೆ ನಡೆದಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬೆಂಗಳೂರಲ್ಲಿ ಬಸವಣ್ಣ ಜೀವ ವೈವಿಧ್ಯ ಉದ್ಯಾನವನ
ಕೆಎಂಎಫ್‌ನಲ್ಲಿ ಉದ್ಯೋಗದ ನೆಪದಲ್ಲಿ50 ಲಕ್ಷ ವಂಚನೆ:ಇಬ್ಬರ ವಿರುದ್ಧ ಕೇಸ್‌