ಹೊಸಪೇಟೆ: ಹಂಪಿ ಪರಿಸರದಲ್ಲಿ ಸಂಶೋಧಕರಿಗೆ ಹೊಸ ಅಪ್ರಕಟಿತ ಶಾಸನಗಳು ದೊರೆಯುತ್ತಿವೆ. ಈಗ ವಿಜಯನಗರದ ಸಂಗಮ ವಂಶದ ದೊರೆ ಎರಡನೇ ಪ್ರೌಢದೇವರಾಯನ ಕಾಲಕ್ಕೆ ಸೇರಿದ್ದ ಶಾಸನವೊಂದು ಪತ್ತೆಯಾಗಿದೆ. ಈ ಶಾಸನ ಇತಿಹಾಸಪ್ರಿಯರಲ್ಲಿ ಇನ್ನಷ್ಟು ಕುತೂಹಲ ಮೂಡಿಸಿದೆ.
ಈ ಶಾಸನವು ಮಹಾರಾಜಾಧಿರಾಜ ಪರಮೇಶ್ವರ ಗಜ ಬೇಟೆಕಾರ ಶ್ರೀ ವೀರ ಪ್ರತಾಪದೇವರಾಯ ಮಹಾರಾಯರ ಸಾಮಂತ/ಕಾವಲುಗಾರ ಬಾಗಿಲ ಕಾಮರಸಣ್ಣರು ಅಗುಳವನ್ನು ಮಾಡಿಸಿದ್ದು ಉಲ್ಲೇಖಿಸುತ್ತದೆ. ಈಗಾಗಲೇ ಇರುವಂತಹ ಕಂದಕವನ್ನು ಅಗಲೀಕರಿಸಿದ್ದು ಕಂಡು ಬರುತ್ತದೆ.
ಈಗಲೂ ಅಗುಳ/ಕಂದಕವನ್ನು ಅಲ್ಲಿ ನೋಡಬಹುದು. ಎರಡನೇ ಪ್ರೌಢದೇವರಾಯನು ವಿಜಯನಗರ ಅರಸರ ಸಂಗಮ ವಂಶದ ದೊರೆ. ಕ್ರಿ.ಶ. 1424 ರಿಂದಕ್ರಿ.ಶ. 1446ರವರೆಗೆ ಆಳ್ವಿಕೆ ಮಾಡಿದ್ದಾನೆ. ಇದುವರೆಗೂ ಹಂಪಿ ಪರಿಸರದಲ್ಲಿ ಅಗುಳದ ಉಲ್ಲೇಖವಿರುವ ಪ್ರಥಮ ಶಾಸನ ಇದಾಗಿದೆ ಎಂದು ಹೇಳಲಾಗುತ್ತಿದೆ.ವಿಜಯನಗರ ಸಾಮ್ರಾಜ್ಯ ಸುಸಜ್ಜಿತ ಕೋಟೆ ಹೊಂದಿತ್ತು. ಈ ಕೋಟೆ ಸುತ್ತ ಕಂದಕ ನಿರ್ಮಾಣ ಮಾಡಲಾಗಿತ್ತು. ಶತ್ರು ಸೈನ್ಯ ಕೋಟೆಗೆ ಲಗ್ಗೆ ಹಾಕಿದರೆ, ಈ ಕಂದಕದಲ್ಲಿ ವಿಷ ಜಂತುಗಳನ್ನು ಬಿಟ್ಟು ಶತ್ರು ಸೈನ್ಯ ಸಂಹರಿಸಲಾಗುತ್ತಿತ್ತು. ವಿಜಯನಗರ ಸಾಮ್ರಾಜ್ಯದ ಅರಸರು ಕೋಟೆ ರಕ್ಷಣೆಗೆ ಮಹತ್ವ ನೀಡಿದ್ದರು. ಯುದ್ಧದ ರಣತಂತ್ರಗಳನ್ನು ಬಲ್ಲವರಾಗಿದ್ದರು. ಯುದ್ಧ ಪರಿಣತರು ಆಗಿದ್ದರು ಎಂಬುದನ್ನು ಈ ಶಾಸನ ಪುಷ್ಟೀಕರಿಸುತ್ತದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಈ ಕೇತ್ರ ಕಾರ್ಯದಲ್ಲಿ ಸಹಾಯ ನೀಡಿದ ಪುರಾತತ್ವ ಇಲಾಖೆಯ ಸಿಬ್ಬಂದಿ ವೆಂಕಟೇಶ ಹಾಗೂ ಶಾಸನದ ಬಗ್ಗೆ ಮಾಹಿತಿ ನೀಡಿದ ಡಾ.ಜಗದೀಶ ಅಗಸಿಬಾಗಿಲ ಅವರನ್ನು ಉಪ ನಿರ್ದೇಶಕ ಡಾ.ಆರ್.ಶೇಜೇಶ್ವರ ಶ್ಲಾಘಿಸಿದ್ದಾರೆ.