ಕನ್ನಡಪ್ರಭ ವಾರ್ತೆ ಯಲ್ಲಾಪುರ
ಯಲ್ಲಾಪುರದಿಂದ ಬೆಳಗ್ಗೆ ಕಳಚೆ ಸಹಕಾರಿ ಸಂಘದವರೆಗೂ ಬಸ್ಸು ಹೋಗುವುದಲ್ಲದೇ ಕೆಲವರು ಯಲ್ಲಾಪುರಕ್ಕೆ ಬರುವವರಿಗೂ ಸಂಚಾರ ಮಾಡಲಾಗದೇ ಸುಮಾರು ೩ ಗಂಟೆಗಳ ಕಾಲ ಸಂಚಾರಕ್ಕೆ ಅಡಚಣೆ ಉಂಟಾಗಿದೆ. ತಕ್ಷಣ ಸ್ಥಳೀಯರು, ಗ್ರಾಪಂ, ಕಂದಾಯ ಅಧಿಕಾರಿಗಳು ಮತ್ತು ಲೋಕೋಪಯೋಗಿ ಇಲಾಖೆಗಳ ಸಹಕಾರದಲ್ಲಿ ಜೆಸಿಬಿ ಮೂಲಕ ಬಂಡೆಗಳನ್ನು ತೆಗೆದು ರಸ್ತೆ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಇಂದು ಕಳಚೆಗೆ ಹೋಗಬೇಕಾಗಿದ್ದ ಬಸ್ಸು ಈರಾಪುರ ಮತ್ತು ಹೆಬ್ಬಾರಕುಂಬ್ರಿವರೆಗೆ ಬಂದು ವಾಪಸ್ ಹೋಗಿದೆ.
೨೦೨೧ರ ಜೂನ್ ೨೩ರಿಂದ ೨೫ರ ಅವಧಿಯಲ್ಲಿ ಕಳಚೆಯ ಗುಡ್ಡ ಕುಸಿದು ಭಾರೀ ಅನಾಹುತ ಉಂಟು ಮಾಡಿದ್ದಲ್ಲದೇ ಸಾವು-ನೋವು ಕೂಡ ಉಂಟಾಗಿತ್ತು. ಕೆಲವರು ಈಗಾಗಲೇ ಯಲ್ಲಾಪುರ ಪಟ್ಟಣಕ್ಕೆ ವಲಸೆ ಬಂದು ವಾಸ್ತವ್ಯ ಮಾಡುತ್ತಿದ್ದಾರೆ. ಅಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಯಲ್ಲಾಪುರ ಶಾಸಕ ಶಿವರಾಮ ಹೆಬ್ಬಾರ ಕರೆತರುವಲ್ಲಿ ಯಶಸ್ವಿಯಾಗಿದ್ದರು. ತನ್ಮೂಲಕ ಕೋಟ್ಯಂತರ ರೂ. ವೆಚ್ಚ ಮಾಡಿ ರಸ್ತೆ ನಿರ್ಮಾಣವಾದರೂ ಅಲ್ಲಿನ ಜನರಿಗೆ ಯಾವುದೇ ಪರಿಹಾರ, ಬದಲಿ ವ್ಯವಸ್ಥೆ ಸರ್ಕಾರದಿಂದ ಈವರೆಗೂ ನೀಡದಿರುವುದು ಅಲ್ಲಿನ ನಾಗರಿಕರ ದುರ್ದೈವ ಎನ್ನಬೇಕಲ್ಲವೇ? ಈ ಕುರಿತು ಸ್ಥಳಿಯರು ಅನೇಕ ರೀತಿಯ ಹೋರಾಟ, ಪ್ರಯತ್ನವನ್ನು ಮಾಡಿಯೂ ಸರ್ಕಾರದಿಂದ ಯಾವುದೇ ಪುನರ್ವಸತಿ ಅಥವಾ ಪರಿಹಾರ ದೊರೆಯದೇ ಭರವಸೆಯಲ್ಲಿಯೇ ಜನರ ಮೂಗಿಗೆ ತುಪ್ಪ ಹಚ್ಚಲಾಗುತ್ತಿದೆ.ಈ ವರ್ಷ ಯಲ್ಲಾಪುರದಲ್ಲಿ ಹಿಂದಿನಂತೆ ಮಳೆಯ ಪ್ರಮಾಣ ಕಡಿಮೆಯಿದ್ದರೂ ಇತ್ತೀಚಿನ ದಿನಗಳಲ್ಲಿ ಎಲ್ಲೆಡೆ ಗುಡ್ಡ ಕುಸಿಯುತ್ತಿದೆ. ಇದಕ್ಕೆ ಜಿಲ್ಲೆಯ ಧಾರಣಾ ಸಾಮರ್ಥ್ಯ ಇಲ್ಲದಿರುವುದು ಕಾರಣ ಎಂದು ವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ. ಸ್ಥಳೀಯರು ಹೇಳುವಂತೆ ಜೆಸಿಬಿ ಮೂಲಕ ಎಲ್ಲೆಡೆ ಗುಡ್ಡ ಕೊರೆಯುವುದೇ ಗುಡ್ಡ ಕುಸಿತಕ್ಕೆ ಕಾರಣ ಎನ್ನುವುದನ್ನು ಅಲ್ಲಗಳೆಯುವಂತಿಲ್ಲ.