ಸರ್ವರ್ ಸಮಸ್ಯೆ: ಎಫ್‌ಐಡಿ ನೋಂದಣಿಗೆ ರೈತರ ಪರದಾಟ

KannadaprabhaNewsNetwork |  
Published : Jul 24, 2026, 01:15 AM IST
ಎಫ್‌ಐಡಿ ಮಾಡಿಸಲು ಶಿರಹಟ್ಟಿಯ ರೈತ ಸಂಪರ್ಕ ಕೇಂದ್ರದೆದುರು ವಿವಿಧ ಗ್ರಾಮಗಳಿಂದ ಆಗಮಿಸಿದ್ದ ರೈತರು. | Kannada Prabha

ಸಾರಾಂಶ

ಎಫ್‌ಐಡಿ ಮಾಡಿಸಿಕೊಳ್ಳಲು ರೈತರು ಗ್ರಾಮ ಒನ್, ಕರ್ನಾಟಕ ಒನ್, ರೈತ ಸಂಪರ್ಕ ಕೇಂದ್ರಗಳು ಹಾಗೂ ಸಂಬಂಧಿತ ಕಚೇರಿಗಳಿಗೆ ಬೆಳಗ್ಗೆಯಿಂದಲೇ ಆಗಮಿಸುತ್ತಿದ್ದಾರೆ. ಆದರೆ ಸರ್ವರ್ ಪದೇ ಪದೇ ಸ್ಥಗಿತಗೊಳ್ಳುತ್ತಿರುವುದರಿಂದ ನೋಂದಣಿ ಪೂರ್ಣಗೊಳ್ಳದೆ ಗಂಟೆಗಟ್ಟಲೆ ಕಾಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ಶಿರಹಟ್ಟಿ: ರಾಜ್ಯ ಸರ್ಕಾರದ ವಿವಿಧ ಕೃಷಿ ಯೋಜನೆಗಳ ಸೌಲಭ್ಯ ಪಡೆಯಲು ಕಡ್ಡಾಯಗೊಳಿಸಿರುವ ಫಾರ್ಮರ್ ಐಡಿ(ಎಫ್‌ಐಡಿ) ನೋಂದಣಿ ಪ್ರಕ್ರಿಯೆ ಸರ್ವರ್ ಸಮಸ್ಯೆಯಿಂದ ನಿಧಾನಗತಿಯಲ್ಲಿ ಸಾಗುತ್ತಿದ್ದು, ರೈತರು ತೀವ್ರ ಪರದಾಡುವಂತಾಗಿದೆ.ಎಫ್‌ಐಡಿ ಮಾಡಿಸಿಕೊಳ್ಳಲು ರೈತರು ಗ್ರಾಮ ಒನ್, ಕರ್ನಾಟಕ ಒನ್, ರೈತ ಸಂಪರ್ಕ ಕೇಂದ್ರಗಳು ಹಾಗೂ ಸಂಬಂಧಿತ ಕಚೇರಿಗಳಿಗೆ ಬೆಳಗ್ಗೆಯಿಂದಲೇ ಆಗಮಿಸುತ್ತಿದ್ದಾರೆ. ಆದರೆ ಸರ್ವರ್ ಪದೇ ಪದೇ ಸ್ಥಗಿತಗೊಳ್ಳುತ್ತಿರುವುದರಿಂದ ನೋಂದಣಿ ಪೂರ್ಣಗೊಳ್ಳದೆ ಗಂಟೆಗಟ್ಟಲೆ ಕಾಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ದೂರದ ಗ್ರಾಮಗಳಿಂದ ಬಂದ ರೈತರು ಸಮಯ ಮತ್ತು ಹಣ ಎರಡನ್ನೂ ವ್ಯಯಿಸಿ ನಿರಾಸೆಯಿಂದ ಹಿಂದಿರುಗುತ್ತಿದ್ದಾರೆ.ಬೆಳೆ ಸಮೀಕ್ಷೆ, ಬೆಳೆವಿಮೆ, ಬೆಳೆನಷ್ಟ ಪರಿಹಾರ ಸೇರಿದಂತೆ ವಿವಿಧ ಸರ್ಕಾರಿ ಯೋಜನೆಗಳ ಪ್ರಯೋಜನ ಪಡೆಯಲು ಎಫ್‌ಐಡಿ ಅಗತ್ಯವಾಗಿರುವುದರಿಂದ ರೈತರ ಆತಂಕ ಹೆಚ್ಚಾಗಿದೆ. ಕೊನೆಯ ದಿನಾಂಕ ಸಮೀಪಿಸುತ್ತಿರುವ ಹಿನ್ನೆಲೆ ತಾಂತ್ರಿಕ ಸಮಸ್ಯೆಗಳನ್ನು ತ್ವರಿತವಾಗಿ ಪರಿಹರಿಸಿ, ಸರ್ವರ್ ಸಾಮರ್ಥ್ಯ ಹೆಚ್ಚಿಸುವ ಮೂಲಕ ನೋಂದಣಿ ಪ್ರಕ್ರಿಯೆಯನ್ನು ಸುಗಮಗೊಳಿಸಬೇಕು ಎಂದು ರೈತರು ಸರ್ಕಾರ ಮತ್ತು ಸಂಬಂಧಿತ ಅಧಿಕಾರಿಗಳನ್ನು ಆಗ್ರಹಿಸಿದ್ದಾರೆ.ರೈತರು ಯಾವುದೇ ತೊಂದರೆಯಿಲ್ಲದೆ ಎಫ್‌ಐಡಿ ನೋಂದಣಿ ಮಾಡಿಸಿಕೊಳ್ಳಲು ಹೆಚ್ಚುವರಿ ಸಿಬ್ಬಂದಿಯನ್ನು ನಿಯೋಜಿಸಿ, ತಾಂತ್ರಿಕ ದೋಷಗಳನ್ನು ಶೀಘ್ರ ಸರಿಪಡಿಸಬೇಕು ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ.ರಾಜ್ಯ ಸರ್ಕಾರದಿಂದ ಬೆಳೆ ನಷ್ಟ ಪರಿಹಾರ, ಬೆಳೆವಿಮೆ ಹಾಗೂ ಪ್ರಕೃತಿ ವಿಕೋಪದಿಂದ ಉಂಟಾಗುವ ಹಾನಿಗೆ ಸಂಬಂಧಿಸಿದ ವಿವಿಧ ಸೌಲಭ್ಯಗಳನ್ನು ಪಡೆಯಲು ರೈತರು ಈ ಬಾರಿ ಫಾರ್ಮರ್ ಐಡಿ(ಎಫ್‌ಐಡಿ) ಅನ್ನು ಕಡ್ಡಾಯವಾಗಿ ಮಾಡಿಸಿಕೊಳ್ಳಬೇಕು. ಎಫ್‌ಐಡಿ ಇಲ್ಲದಿದ್ದರೆ ಹಲವು ಸರ್ಕಾರಿ ಯೋಜನೆಗಳ ಸೌಲಭ್ಯ ಪಡೆಯಲು ತೊಂದರೆ ಉಂಟಾಗುವ ಸಾಧ್ಯತೆ ಇರುವುದರಿಂದ ರೈತರು ಬೆಳ್ಳಂಬೆಳಗ್ಗೆ ಗ್ರಾಮೀಣ ಪ್ರದೇಶದಿಂದ ಬಂದು ಸರತಿ ಸಾಲಲ್ಲಿ ನಿಂತು ಎಫ್‌ಐಡಿ ಮಾಡಿಸಲು ಮುಗಿಬೀಳುತ್ತಿದ್ದಾರೆ.ರೈತರು ತಮ್ಮ ಆಧಾರ್ ಸಂಖ್ಯೆ, ಆರ್‌ಟಿಸಿ(ಪಹಣಿ), ಬ್ಯಾಂಕ್ ಖಾತೆ ವಿವರ ಮತ್ತು ಮೊಬೈಲ್ ಸಂಖ್ಯೆಯೊಂದಿಗೆ ಸಮೀಪದ ರೈತ ಸಂಪರ್ಕ ಕೇಂದ್ರ, ಗ್ರಾಮ ಒನ್, ಕರ್ನಾಟಕ ಒನ್ ಅಥವಾ ಸಂಬಂಧಿತ ಕೃಷಿ ಇಲಾಖೆ ಕಚೇರಿಗೆ ಭೇಟಿ ನೀಡಿ ಎಫ್‌ಐಡಿ ನೋಂದಣಿ ಮಾಡಿಸಿಕೊಳ್ಳಬೇಕು. ನೋಂದಣಿಯ ನಂತರವೇ ಬೆಳೆ ಸಮೀಕ್ಷೆ, ಬೆಳೆ ವಿಮೆ, ಬೆಳೆ ನಷ್ಟ ಪರಿಹಾರ ಸೇರಿದಂತೆ ವಿವಿಧ ಕೃಷಿ ಯೋಜನೆಗಳ ಪ್ರಯೋಜನಗಳನ್ನು ಸುಲಭವಾಗಿ ಪಡೆಯಬಹುದು ಎಂದು ಸರ್ಕಾರ ಮತ್ತು ಅಧಿಕಾರಿಗಳು ಹೇಳಿದ್ದರಿಂದ ನಿತ್ಯ ಕೃಷಿ ಕೆಲಸ ಕಾರ್ಯಬಿಟ್ಟು ಬರುತ್ತಿದ್ದೇವೆ ಎಂದು ರೈತ ಮಹಿಳೆಯರಾದ ನೀಲವ್ವ ಹಾದಿಮನಿ, ಲಕ್ಷ್ಮವ್ವ ಬೆಂತೂರ ಹೇಳುತ್ತಾರೆ.ರೈತರಿಗೆ ಎಫ್‌ಐಡಿ ನೋಂದಣಿ ಕುರಿತು ಯಾವುದೇ ಗೊಂದಲ ಅಥವಾ ಆತಂಕ ಬೇಡ. ಎಫ್‌ಐಡಿ ನೋಂದಣಿ ನಿರಂತರವಾಗಿ ನಡೆಯುವ ಪ್ರಕ್ರಿಯೆಯಾಗಿದ್ದು, ಎಲ್ಲ ರೈತರೂ ತಮ್ಮ ಅನುಕೂಲಕ್ಕೆ ತಕ್ಕಂತೆ ನೋಂದಣಿ ಮಾಡಿಸಿಕೊಳ್ಳಬಹುದು ಎಂದು ಕೃಷಿ ಇಲಾಖೆ ಅಧಿಕಾರಿಗಳು ಹಲವು ಬಾರಿ ರೈತರಿಗೆ ತಿಳಿಸಿದ್ದರೂ ಸಮಯಕ್ಕೆ ಸರಿಯಾಗಿ ಎಫ್‌ಐಡಿ ಆಗದಿದ್ದರೆ ಸರ್ಕಾರಿ ಸೌಲಭ್ಯಗಳಿಂದ ವಂಚಿತರಾಗುವ ಭೀತಿಯಲ್ಲಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನೀಟ್ ಪರೀಕ್ಷೆ ಪ್ರಶ್ನೆಪತ್ರಿಕೆ ಸೋರಿಕೆ, ಹೊಸಪೇಟೆಯಲ್ಲಿ ತಮಟೆ ಚಳವಳಿ
ಬರ ನಿರ್ವಹಣೆ ಸಮರ್ಪಕವಾಗಿ ಮಾಡಿ: ಕೆ. ನೇಮರಾಜನಾಯ್ಕ