ಆನಗೋಡು ಬಳಿ ಮತ್ತೊಂದು ಚಿರತೆ ಪ್ರತ್ಯಕ್ಷ!

KannadaprabhaNewsNetwork |  
Published : Oct 11, 2026, 02:30 AM IST
10ಕೆಡಿವಿಜಿ1, 2, 3, 4, 5, 6-ದಾವಣಗೆರೆ ತಾ. ಆನಗೋಡು ಗ್ರಾಮದ ಬಳಿ ತೋಟದ ಮನೆಯೊಂದರ ಸಿಸಿ ಕ್ಯಾಮೆರಾದಲ್ಲಿ ಸಂಚರಿಸುತ್ತಿರುವ ಚಿರತೆಯ ದೃಶ್ಯಗಳು ಸೆರೆಯಾಗಿರುವುದು. | Kannada Prabha

ಸಾರಾಂಶ

ಹಗಲು, ರಾತ್ರಿ ಎನ್ನದೇ ಹೊಲ, ತೋಟ, ತೋಟದ ಮನೆಗಳ ಬಳಿ ಒಂಟಿ ಚಿರತೆ ಕಾಣಿಸಿಕೊಂಡ ಹಿನ್ನೆಲೆ ತಾಲೂಕಿನ ಆನಗೋಡು ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು, ರೈತರು ತೀವ್ರ ಆತಂಕಕ್ಕೊಳಗಾಗಿದ್ದಾರೆ.

- ತೋಟದ ಮನೆ ಗೇಟ್ ಹಾರುವ, ಏರಿಯ ಕೆಳಗೆ ಸಾಗುತ್ತಿದ್ದ ಚಿರತೆ ದೃಶ್ಯ ಸೆರೆ । ಜನರಲ್ಲಿ ಹೆಚ್ಚಾಯ್ತು ಆತಂಕ- - -

ಕನ್ನಡಪ್ರಭ ವಾರ್ತೆ ದಾವಣಗೆರೆ

ಹಗಲು, ರಾತ್ರಿ ಎನ್ನದೇ ಹೊಲ, ತೋಟ, ತೋಟದ ಮನೆಗಳ ಬಳಿ ಒಂಟಿ ಚಿರತೆ ಕಾಣಿಸಿಕೊಂಡ ಹಿನ್ನೆಲೆ ತಾಲೂಕಿನ ಆನಗೋಡು ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು, ರೈತರು ತೀವ್ರ ಆತಂಕಕ್ಕೊಳಗಾಗಿದ್ದಾರೆ.

ಕಳೆದ ಕೆಲವು ದಿನಗಳಿಂದ ಆನಗೋಡು ಸುತ್ತಮುತ್ತಲಿನ ಪ್ರದೇಶ, ಹೊಲ, ಗದ್ದೆ, ತೋಟದ ಮನೆಗಳು, ಗ್ರಾಮದ ಸಮೀಪದ ಪ್ರದೇಶದಲ್ಲಿ ಚಿರತೆ ಇರುವ ಬಗ್ಗೆ ಗುಸುಗುಸು ಇತ್ತು. ಆದರೆ, ಅ.8ರಂದು ತಡರಾತ್ರಿ ಚಿರತೆಯು ತೋಟದ ಮನೆಯ ಬೇಲಿ ಬಳಿ ಬಂದು, ಗೇಟ್ ಹಾರಿಕೊಂಡು ಮತ್ತೊಂದು ತೋಟದ ಕಡೆಗೆ ಹೋಗುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಕತ್ತಲ ರಾತ್ರಿಯಲ್ಲಿ ತೋಟದ ಮನೆಯ ಪಕ್ಕದಿಂದ ಆಹಾರ ಅರಸಿ ಬಂದಿದ್ದ ಚಿರತೆಯು ಗೇಟ್ ಬಳಿ ಮುಂದೆ ಹೋಗಿ, ಅಲ್ಲಿ ಬೇಲಿ ಇದ್ದ ಕಾರಣಕ್ಕೆ ಮತ್ತೆ ಗೇಟನ್ನು ಒಂದೇ ಜಿಗಿತಕ್ಕೆ ಹಾರಿ, ಪಕ್ಕದ ತೋಟದತ್ತ ಚಿರತೆ ಸಾಗಿರುವ ದೃಶ್ಯ ಆ ತೋಟದ ಮನೆಯವರಷ್ಟೇ ಅಲ್ಲ, ಆ ಭಾಗದ ಎಲ್ಲ ರೈತರಲ್ಲೂ, ಜನರಲ್ಲೂ ತೀವ್ರ ಭಯವನ್ನುಂಟು ಮಾಡಿದೆ.

ಮತ್ತೊಂದು ಕಡೆ ಹಾಡಹಗಲೇ ಚಿರತೆಯು ತೋಟದ ಬದಿಯಲ್ಲಿ ಸಾಗುತ್ತಿರುವ ದೃಶ್ಯವನ್ನು ಕಾರೊಂದರಲ್ಲಿ ಸಾಗುತ್ತಿದ್ದ ವ್ಯಕ್ತಿಗಳು ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದು, ಕಾರಿನ ಸದ್ದು, ಜನರ ಧ್ವನಿ ಕೇಳಿ ಮುಂದೆ ಸಾಗುತ್ತಿದ್ದ ಚಿರತೆ ಏಕಾಏಕಿ ನಿಂತು, ದಿಢೀರನೇ ಬಂದ ಹಾದಿಯಲ್ಲಿ ವಾಪಸ್‌ ಓಡಿ ಹೋಗಿದೆ. ಈ ಕ್ಷಣದ ದೃಶ್ಯಗಳು ಸೆರೆಯಾಗಿದೆ. ಒಟ್ಟಾರೆ, ಆನಗೋಡು ಸುತ್ತಮುತ್ತಲಿನ ರೈತರು, ಗ್ರಾಮಸ್ಥರು ಚಿರತೆಯ ಭಯಕ್ಕೆ ತುತ್ತಾಗಿದ್ದಾರೆ.

ಚಿರತೆಗಳ ಎರಡೂ ವೀಡಿಯೋಗಳು ಈಗ ಸೋಷಿಯಲ್ ಮೀಡಿಯಾದಲ್ಲಿ, ಆನಗೋಡು, ಹೆಬ್ಬಾಳು ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರ ಮೊಬೈಲ್‌ನಲ್ಲಿ ಹರಿದಾಡುತ್ತಿವೆ. ರಾತ್ರಿವೇಳೆ ಹೊಲ, ತೋಟಕ್ಕೆ ನೀರು ಹಾಯಿಸಲು ಹೋಗುವ ರೈತರು, ಹಾಡಹಗಲೇ ಹೊಲಕ್ಕೆ ನೀರುಣಿಸಲು ಹೋಗಬೇಕಾದ ರೈತರು ಸಹ ತೀವ್ರ ಭಯಭೀತರಾಗಿದ್ದಾರೆ. ಕಳೆದ ಕೆಲವು ದಿನದಿಂದ ಚಿರತೆ ಇಲ್ಲಿ ಸಂಚರಿಸುತ್ತಿರುವುದು ಜನರಲ್ಲಿ ಭಯವನ್ನು ತಂದಿಟ್ಟಿದೆ.

ಆನಗೋಡು ಬಳಿ ಚಿರತೆ ದಾಳಿ ನಡೆಸಿತ್ತು:

ಆನಗೋಡು ಸಮೀಪದ ರಾಷ್ಟ್ರೀಯ ಹೆದ್ದಾರಿ-48ರಲ್ಲಿ ಕೆಲವು ದಿನಗಳ ಹಿಂದಷ್ಟೇ ಚಿರತೆಯೊಂದು ಹೆದ್ದಾರಿ ದಾಟುತ್ತಿದ್ದ ವೇಳೆ ವೇಗವಾಗಿ ಚಲಿಸುತ್ತಿದ್ದ ವಾಹನ ಡಿಕ್ಕಿ ಹೊಡೆದಿದ್ದರಿಂದ ಚಿರತೆ ಸರಿಯಾಗಿ ನಿಂತುಕೊಳ್ಳಲಾಗದೇ, ಓಡಿ ಹೋಗಲಾಗದೇ ಹೆದ್ದಾರಿ ಪಕ್ಕದ ಸರ್ವೀಸ್ ರಸ್ತೆಯ ಮೋರಿಯ ಪಕ್ಕದಲ್ಲಿ ನರಳುತ್ತಾ ಬಿದ್ದಿತ್ತು. ದಾರಿಹೋಕರು ಇದನ್ನು ಗಮನಿಸಿ, ಅರಣ್ಯ ಇಲಾಖೆಗೆ ಈ ವಿಷಯ ತಿಳಿಸಿದ್ದರು. ಅಂದು ಓರ್ವ ಅರಣ್ಯ ರಕ್ಷಕನ ವಿರುದ್ಧವೇ ಚಿರತೆ ದಾಳಿ ಮಾಡಿದರೂ ಅದನ್ನು ಯಶಸ್ವಿಯಾಗಿ ಸೆರೆಹಿಡಿದು, ಚಿಕಿತ್ಸೆ ನೀಡಿ, ಕಕ್ಷಣೆ ಮಾಡಲಾಗಿತ್ತು.

ಇದೀಗ ಅದೇ ಆನಗೋಡು ಭಾಗದಲ್ಲಿ ಮತ್ತೊಂದು ದಷ್ಟಪುಷ್ಟ ಚಿರತೆ ಪತ್ತೆಯಾಗಿದ್ದು, ಎರಡೂ ವೀಡಿಯೋಗಳಲ್ಲಿ ಇರುವುದು ಒಂದೇ ಚಿರತೆಯಾ ಅಥವಾ ಎರಡೂ ಬೇರೆ ಬೇರೆ ಚಿರತೆಗಳಾ ಎಂಬ ಪ್ರಶ್ನೆಗಳನ್ನೂ ಹುಟ್ಟುಹಾಕಿದೆ. ಸದ್ಯಕ್ಕೆ ಆನಗೋಡು ಗ್ರಾಮವಷ್ಟೇ ಅಲ್ಲ, ಸುತ್ತಮುತ್ತಲಿನ ಗ್ರಾಮಸ್ಥರೂ ಈಗ ಹೊಲ, ಗದ್ದೆಗಳು, ತೋಟಗಳಿಗೆ ಹೋಗಲು ಹಿಂದೇಟು ಹಾಕುವಂತಹ ಸ್ಥಿತಿ ಇದೆ. ದನ, ಕರು, ಎಮ್ಮೆಗಳನ್ನು ಮೇಯಿಸಲು ಹೋಗುವವರೂ ಭಯದಲ್ಲೇ ಪಡುತ್ತಿದ್ದಾರೆ. ಅರಣ್ಯ ಇಲಾಖೆಯ ಅಧಿಕಾರಿಗಳು ಚಿರತೆ ಸೆರೆ ಹಿಡಿದು, ಗ್ರಾಮಸ್ಥರನ್ನು ಚಿರತೆ ಭೀತಿಯಿಂದ ಪಾರು ಮಾಡಬೇಕೆಂಬ ಕೂಗು ಕೇಳಿ ಬರುತ್ತಿದೆ.

- - -

-10ಕೆಡಿವಿಜಿ1, 2, 3, 4, 5, 6:

ದಾವಣಗೆರೆ ತಾಲೂಕು ಆನಗೋಡು ಬಳಿ ತೋಟದ ಮನೆಯೊಂದರ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿರುವ ಚಿರತೆ ಸಂಚಾರದ ದೃಶ್ಯ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನಾಳೆ ಫ್ರೀಡಂ ಪಾರ್ಕ್‌, ವಿಧಾನಸೌಧ ಬಳಿ ರೈತರ ಪ್ರತಿಭಟನೆ
ಮಂತ್ರಾಲಯ ಮಠಕ್ಕೆ ತಲೆನೋವಾದ ಆನ್ಲೈನ್ ವಂಚಕರು