ರವೀಂದ್ರನಾಥ ಅಂಗಡಿಗೆ ನೋಟೀಸ್ ಜಾರಿ । ಕನ್ನಡಪ್ರಭ ಸರಣಿ ಸುದ್ದಿ ಹಿನ್ನೆಲೆ ಅಮಾನತ್ತಾಗಿದ್ದ ಹಿಂದಿನ ಪೌರಾಯುಕ್ತ ಕನ್ನಡಪ್ರಭ ವಾರ್ತೆ ಬೀದರ್
ಕಳೆದ 2023ರ ಏಪ್ರಿಲ್ ತಿಂಗಳಿನಲ್ಲಿ ಬೀದರ್ ನಗರ ಸಭೆಯಲ್ಲಿ ಅಕ್ರಮ ಡಿಜಿಟಲ್ ಖಾತಾ ಅವಾಂತರ ಸುದ್ದಿ ಬೆಳಕಿಗೆ ಬಂದು ನಗರಸಭೆ ಅಂದಿನ ಪೌರಾಯುಕ್ತ ರವೀಂದ್ರನಾಥ ಅಂಗಡಿ ಸೇರಿದಂತೆ ಸುಮಾರು 8 ಜನ ಸಿಬ್ಬಂದಿಯನ್ನು ಪೌರಾಡಳಿತ ಇಲಾಖೆ ಅಮಾನತು ಮಾಡಿದ ಪ್ರಕರಣಕ್ಕೆ ಈಗ ಮತ್ತೇ ಜೀವ ಬಂದಿದೆ.ರಾಜ್ಯದಾದ್ಯಂತ ಸುದ್ದಿ ಮಾಡಿದ್ದ ಬೀದರ್ ನಗರಸಭೆಯ ಪ್ರಕರಣದಲ್ಲಿ ಸದ್ಯ ಕೊಪ್ಪಳ ಜಿಲ್ಲೆಯ ಕಾರಟಗಿ ಪುರಸಭೆಯಲ್ಲಿ ಪರಿಸರ ಅಭಿಯಂತರರಾಗಿರುವ ರವೀಂದ್ರನಾಥ ಅಂಗಡಿ ಅವರಿಗೆ ಪೌರಾಡಳಿತ ಇಲಾಖೆಯ ನಿರ್ದೇಶಕರಿಂದ ಡಿಸೆಂಬರ್ 12ರಂದು ಮತ್ತೋಂದು ನೋಟಿಸ್ ನೀಡಲಾಗಿ 7 ದೋಷಾರೋಪಗಳಿಗೆ ಸೂಕ್ತ ಉತ್ತರ ನೀಡಬೇಕು ಇಲ್ಲದಿದ್ದರೆ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿ ಪೌರಾಡಳಿತ ನಿರ್ದೇಶನಾಲಯದ ಶಿಸ್ತು ಪ್ರಾಧಿಕಾರ ಹಾಗೂ ನಿರ್ದೇಶಕರು ನೋಟೀಸ್ ಜಾರಿಗೊಳಿಸಿದ್ದಾರೆ.1ನೇ ಆರೋಪದಲ್ಲಿ ನಗರ ಸಭೆಯ ವ್ಯಾಪ್ತಿಯಲ್ಲಿ ಸುಮಾರು 18 ಜನರಿಗೆ ಅನಧಿಕೃತ ಖಾತೆ ವರ್ಗಾವಣೆ ಮಾಡಿ ಸುಮಾರು 511 ಅನಧಿಕೃತ ಖಾತಾ ನಕಲನ್ನು ನೀಡಲಾಗಿದೆ. ಸಂಬಂಧಪಟ್ಟ ಕಡತಗಳನ್ನು ಪರಿಶೀಲಿಸಿದಾಗ ಎಲ್ಲ ಕಡತಗಳಲ್ಲಿ ಕೃಷಿಯೇತರ ಜಮೀನು ಎಂದು ಆದೇಶವಾಗಿದ್ದು ಸಕ್ಷಮ ಪ್ರಾಧಿಕಾರದಿಂದ ವಿನ್ಯಾಸ ಅನುಮೋದನೆ ಆಗದೆ ಕಂದಾಯ ನಿರೀಕ್ಷಕರು ಹಾಗೂ ಕಂದಾಯ ಅಧಿಕಾರಿಗಳಿಂದ ಖಾತೆ ವರ್ಗಾವಣೆ ಮಾಡುವ ಬಗ್ಗೆ ಸ್ಪಷ್ಟ ಅಭಿಪ್ರಾಯವನ್ನು ಪಡೆಯದೆ ನಿಯಮಬಾಹಿರವಾಗಿ ನೇರವಾಗಿ ವರ್ಗಾವಣೆ ಅಭಿವೃದ್ಧಿ ಶುಲ್ಕ ಪಾವತಿಸಿಕೊಂಡು ಎನ್‌ಎ ರಜಿಸ್ಟರನಲ್ಲಿ ನಮೂದಿಸಿ ಷರಾ ಬರೆದು ಕಡತಗಳಿಗೆ ಅನುಮೋದನೆ ನೀಡಲಾಗಿದೆ. ಇದು ಸರ್ಕಾರದ ಆದೇಶದ ಉಲ್ಲಂಘನೆಯಾಗಿದೆ ಎಂದು ತಿಳಿಸಲಾಗಿದೆ.2ನೇ ಆರೋಪದಲ್ಲಿ ಬೀದರ್ ನಗರಸಭೆ ವ್ಯಾಪ್ತಿಯಲ್ಲಿ ಸುಲ್ತಾನಪೂರ ನೆಲಭರ್ತಿ ಜಾಗದಲ್ಲಿ ಒಟ್ಟು 9.71ಲಕ್ಷ ರು. ಮೊತ್ತದ ಕಾಮಗಾರಿ ಗಳಿಗೆ ಕೆಟಿಟಿಪಿ ಕಾಯ್ದೆಯ ಪ್ರಕಾರ ಟೆಂಡರ್ ಕರೆಯದೆ ಐಟಂವಾರು ಒಂದೇ ದಿನದಂದು ಕೊಟೇಷನ್‌ಗೆ ಅಹ್ವಾನಿಸಿ ಪ್ರತ್ಯೇಕ 10 ಕಡತಗಳನ್ನು ಸೃಷ್ಟಿಸಿ ಚೆಕ್ ಮುಖಾಂತರ ಹಣವನ್ನು ಪಾವತಿಸಲಾಗಿದೆ.3ನೇ ಆರೋಪದಲ್ಲಿ ಬ್ಲಿಚಿಂಗ್ ಪೌಡರ್, ಮೆಲಾಥಿನ್ ಪೌಡರ್ ಹಾಗೂ ಮೈಕ್ರೋಬೈಲ್ ಕವರ್ ಖರೀದಿಯ ಮೊತ್ತ 22.74 ಲಕ್ಷ ಗಳಿದ್ದು ಅವುಗಳನ್ನು ಖರೀದಿಸಲೂ ಕೆಟಿಟಿಪಿ ಕಾಯ್ದೆ ಉಲ್ಲಂಘಿಸಿ ಐಟಂವಾರು ಒಂದೇ ದಿನದಂದು ಕೊಟೇಷನ್ ಆಹ್ವಾನಿಸಿ ಪ್ರತ್ಯೇಕ 34 ಕಡತಗಳನ್ನು ಸೃಷ್ಟಿಸಿ ಒಂದೇ ಚೆಕ್ ಮುಖಾಂತರ ಹಣವನ್ನು ಪಾವತಿಸಿ ಸದರಿ ಸಾಮಗ್ರಿಗಳನ್ನು ದಾಸ್ತಾನುವಹಿಯಲ್ಲಿ ನೋಂದಣಿ ಮಾಡದೇ ಕರ್ತವ್ಯಲೋಪವೆಸಗಿದ್ದಾರೆ.4ನೇ ದೋಷಾರೋಪದಲ್ಲಿ ಸಪ್ಲಾಯಿಂಗ್ ಐಂಡ್ ಡ್ರಾಯಿಂಗ್ 3 ಕೋರ್ ಫ್ಲಾಟ್ ಪಿವಿಸಿ ವೈರ್ ಸೇರಿದಂತೆ 18.52 ಲಕ್ಷ ರು.ಗಳ ಇನ್ನಿತರ ಸಾಮಗ್ರಿಗಳನ್ನು ಖರೀದಿಸಲು ಒಂದೇ ಚೆಕ್ ಮೂಲಕ ಹಣ ಪಾವತಿಸಿದ ಆರೋಪವಿದೆ.
5ನೇ ಆರೋಪದಲ್ಲಿ ಕಚೇರಿ ಕೆಲಸ ಕಾರ್ಯಗಳಿಗಾಗಿ ಟೇಬಲ್, ಕುರ್ಚಿ, ಸಿಸಿ ಕ್ಯಾಮರಾ, ವಿದ್ಯುತ್ ದಾರಿ ದೀಪಗಳನ್ನು 22.21 ಲಕ್ಷ ರು. ಮೊತ್ತದಲ್ಲಿ ನಿಯಮಬಾಹೀರವಾಗಿ ಖರೀದಿಸಿರುವದನ್ನು ಉಲ್ಲಂಘಿಸಲಾಗಿದೆ.6ನೇ ಆರೋಪದಲ್ಲಿ ಡಾ. ಅಂಬೇಡ್ಕರ್ ವೃತ್ತದ ಬಳಿ 50 ಮಳಿಗೆ, ರೈಲ್ವೆ ನಿಲ್ದಾಣದ ಬಳಿ 17 ಮಳಿಗೆ ಹಾಗೂ ಐಡಿಎಸ್‌ಎಂಟಿ ಯೋಜನೆಯಡಿ 2006ರಲ್ಲಿ ನಿರ್ಮಿಸಿದ 62 ಮಳಿಗೆಗಳಿಗೆ ಎಲ್ಲ ಸೇರಿ ಒಟ್ಟು 129 ವಾಣಿಜ್ಯ ಮಳಿಗೆಗಳಿದ್ದು ಸದರಿ ಮಳಿಗೆಯಲ್ಲಿರುವ ಬಾಡಿಗೆದಾರರಿಗೆ ಕಾನೂನುಬಾಹಿರವಾಗಿ 12 ವರ್ಷಗಳ ಬಾಡಿಗೆ ನವೀಕರಣ ಮಾಡಿರುತ್ತಾರೆ ಎಂಬ ಆರೋಪವಿದೆ.ದೋಷಾರೋಪ 7ರಲ್ಲಿ ನಗರಸಭೆ ಅಧೀನದಲ್ಲಿ ಬರುವ ವಾಣಿಜ್ಯ ಮಳಿಗೆಗಳ ಪ್ರತಿ ತಿಂಗಳ ಬಾಡಿಗೆಯ ವಸೂಲಾತಿ ಮೊತ್ತದ ವಿವರವನ್ನು ಸಂಬಂಧಪಟ್ಟ ವಾಣಿಜ್ಯ ಮಳಿಗೆಗಳ ರಜಿಸ್ಟರ್‌ನಲ್ಲಿ ನಮೂದಿಸಬೇಕಾಗಿದ್ದು ಈ ಬಗ್ಗೆ ಪರಿಶೀಲಿಸದೆ ನಿರ್ಲಕ್ಷತನ ವಹಿಸಿ ಸರ್ಕಾರದ ಮಾರ್ಗಸೂಚಿ ಉಲ್ಲಂಘಿಸಿ ಇತರೆ ಕಾರಣಗಳಾಗಿ ಉಪಯೋಗಿಸಿದ್ದಾರೆ ಎಂದು ಹೇಳಲಾಗಿದೆ.ಈ ಎಲ್ಲ ಆರೋಪಗಳನ್ನು ಸಮರ್ಥಿಸಿ ಹಿಂದಿನ ಪೌರಾಯುಕ್ತರಾದ ಪ್ರಭುದ್ದ ಕಾಂಬಳೆ, ಪರಿಸರ ಅಭಿಯಂತರ ರವಿಂದ್ರ ಕಾಂಬಳೆ, ಕಚೇರಿ ವ್ಯವಸ್ಥಾಪಕ ನಾಗಣ್ಣ ಎಂ ಪರೀಟ್, ಪ್ರಥಮ ದರ್ಜೆ ಸಹಾಯಕ ನಯೀಮ್, ದ್ವಿತೀಯ ದರ್ಜೆ ಸಹಾಯಕರಾದ ರಮೇಶ ಕರಕಾಳೆ, ನೀಲಕಂಠ ಸ್ವಾಮಿ ಹಾಗೂ ನೀರು ಸರಬರಾಜು ಸಹಾಯಕ ರವೀಂದ್ರ ಹಳ್ಳಿಖೇಡೆ ಅವರು ಸಾಕ್ಷಿ ನೀಡಿದ್ದಾರೆ ಎಂದು ಪೌರಾಡಳಿತ ನಿರ್ದೇಶನಾಲಯದ ಶಿಸ್ತು ಪ್ರಾಧಿಕಾರ ಹಾಗೂ ನಿರ್ದೇಶಕರು ಹೊರಡಿಸಿದ ನೋಟೀಸ್‌ನಲ್ಲಿ ತಿಳಿಸಿದ್ದಾರೆ.ನೋಟೀಸ್ ಸ್ವೀಕರಿಸಿದ 10 ದಿನದೊಳಗಾಗಿ ಉತ್ತರ ನೀಡಬೇಕೆಂದು ಪೌರಾಡಳಿತ ಇಲಾಖೆಯ ನಿರ್ದೇಶಕರು ತಿಳಿಸಿದ್ದು ಡಿ. 27ರಂದು ರವೀಂದ್ರನಾಥ ಅಂಗಡಿ ನೋಟೀಸ್ ಪಡೆದಿದ್ದು ಇದಕ್ಕೆ ಯಾವ ರೀತಿಯ ಸಮಜಾಯಿಷಿ ನೀಡುತ್ತಾರೆ ಪೌರಾಡಳಿತ ಇಲಾಖೆ ಯಾವ ಕ್ರಮ ಕೈಗೊಳ್ಳುತ್ತದೆ ಎಂಬುವದನ್ನು ಕಾದು ನೋಡಬೇಕಿದೆ.