ಸ್ವರ್ಣವಲ್ಲಿ ಇತಿಹಾಸದ ಮತ್ತೊಂದು ಸಾಕ್ಷ್ಯ ಬೆಳಕಿಗೆ

KannadaprabhaNewsNetwork |  
Published : Jun 27, 2026, 01:00 AM IST
ಶಾಸನ | Kannada Prabha

ಸಾರಾಂಶ

ಯಾವುದೇ ಸ್ಪಷ್ಟ ಕಾಲದ ಉಲ್ಲೇಖಗಳಿರದ ಈ ಶಾಸನವನ್ನು ಇದುವರೆಗೆ 11ನೇ ಅಥವಾ 12ನೇ ಶತಮಾನದ ಶಾಸನವೆಂದು ಸಾಮಾನ್ಯವಾಗಿ ಪರಿಗಣಿಸಲಾಗಿತ್ತು.

ಕಡತೋಕೆ ಶಾಸನದ ಮರು ಅಧ್ಯಯನ

ಕನ್ನಡಪ್ರಭ ವಾರ್ತೆ ಕಾರವಾರ

ಹೊನ್ನಾವರ ತಾಲೂಕಿನ ಕಡತೋಕೆ ಗ್ರಾಮದ ಸ್ವಯಂಭೂದೇವ ಅಥವಾ ಸ್ವಯಂಭೇಶ್ವರ ದೇವಸ್ಥಾನದಲ್ಲಿರುವ ಪ್ರಾಚೀನ ಶಾಸನದಲ್ಲಿ ಉಲ್ಲೇಖಿಸಲಾಗಿರುವ “ಕಡತೋಕೆಯ ದೇವರ್‌” ಈವರೆಗೆ ತಿಳಿದಿರುವಂತೆ ದೇವಾಲಯದಲ್ಲಿರುವ ಸ್ವಯಂಭೂದೇವರಾಗಿರದೇ ಕಡತೋಕೆಯಲ್ಲಿದ್ದ ಸ್ವರ್ಣವಲ್ಲಿ ಮಠದ ಗುರು ಪರಂಪರೆಯ ಇಪ್ಪತ್ತಾರನೆಯ ಯತಿಗಳಾಗಿದ್ದ ಶ್ರೀ ವಿಶ್ವವಂದ್ಯ ಸರಸ್ವತೀಗಳಾಗಿದ್ದಾರೆ ಎನ್ನುವ ಮಹತ್ವದ ಮಾಹಿತಿಯನ್ನು ಜಿಲ್ಲೆಯ ಇತಿಹಾಸ ಸಂಶೋಧಕ ಶ್ಯಾಮಸುಂದರ ಗೌಡ ಅಂಕೋಲಾ ತಿಳಿಸಿದ್ದಾರೆ.

ಯಾವುದೇ ಸ್ಪಷ್ಟ ಕಾಲದ ಉಲ್ಲೇಖಗಳಿರದ ಈ ಶಾಸನವನ್ನು ಇದುವರೆಗೆ 11ನೇ ಅಥವಾ 12ನೇ ಶತಮಾನದ ಶಾಸನವೆಂದು ಸಾಮಾನ್ಯವಾಗಿ ಪರಿಗಣಿಸಲಾಗಿತ್ತು. ಆದರೆ ಪ್ರಸ್ತುತ ಅಧ್ಯಯನದಲ್ಲಿ ಕಡತೋಕೆಯ ಶಾಸನವನ್ನು ಸಮೀಪದ ಕೆಕ್ಕಾರ ಶಾಸನದೊಂದಿಗೆ ಹೋಲಿಕೆ ನಡೆಸಿ, ಎರಡೂ ಶಾಸನಗಳನ್ನು ಚಂದ್ರನ ಕೇಶವ ಹೆಸರಿನ ಒಬ್ಬನೇ ಲಿಪಿಕಾರ ಬರೆದಿರುವುದನ್ನು ಗುರುತಿಸಲಾಗಿದೆ. ಕೆಕ್ಕಾರ ಶಾಸನವು ಶಕ 1000 (ಕ್ರಿ.ಶ. 1078)ರ ಕಾಲಕ್ಕೆ ಸೇರಿರುವುದರಿಂದ, ಚಂದ್ರನ ಕೇಶವನ ಸಕ್ರಿಯ ಅವಧಿಯನ್ನು ಆಧರಿಸಿ ಕಡತೋಕೆ ಶಾಸನವೂ ಕ್ರಿ.ಶ. 1075 ರಿಂದ 1090ರ ನಡುವಿನ ಅವಧಿಯಲ್ಲಿ ರಚಿತವಾಗಿರಬಹುದೆಂಬ ಹೊಸ ಕಾಲನಿರ್ಣಯವನ್ನು ಸೂಚಿಸಿದ್ದಾರೆ.

ಶಾಸನದಲ್ಲಿ ಧಾರ್ಮಿಕ ಸಂಸ್ಥೆಯೊಂದರ ನಿರ್ವಹಣೆ, ಯಾತ್ರಿಕರ ಆತಿಥ್ಯ ಹಾಗೂ ದೈನಂದಿನ ವ್ಯವಸ್ಥೆಗೆ ಶಾಶ್ವತ ಆರ್ಥಿಕ ಆಧಾರ ಕಲ್ಪಿಸುವುದಕ್ಕಾಗಿ ಜಳಿವಳಿಯ ಭೋಗವೆರ್ಗ್ಗಡೆ ಹಾಗೂ ಇಡುಕವೆರ್ಗ್ಗಡೆ ಎಂಬ ಅಧಿಕಾರಿಗಳು ಭೂಮಿ, ಗದ್ಯಾಣ, ಭತ್ತ ಹಾಗೂ ಇತರ ಆಸ್ತಿಗಳನ್ನು ದಾನವಾಗಿ ನೀಡಿರುವುದನ್ನು ದಾಖಲಿಸಲಾಗಿದೆ ಎಂದು ತಿಳಿಸಿದರು.

ಶಾಸನದ ಆರಂಭಿಕ ಭಾಗದಲ್ಲಿ ಯಮ, ನಿಯಮ, ಸ್ವಾಧ್ಯಾಯ, ಧ್ಯಾನ, ಧಾರಣ, ಮೌನಾನುಷ್ಠಾನ, ಜಪ, ಸಮಾಧಿ ಹಾಗೂ ಶೀಲ ಮೊದಲಾದ ಸದ್ಗುಣಗಳಿಂದ ಸಂಪನ್ನರಾದ ಶ್ರೀಮತ್ ಕಡತೋಕೆಯ ದೇವರು ಎಂದು ಸಂಭೋದಿಸಲಾಗಿದೆ. ಈ ವರ್ಣನೆಯು ದಾನ ಪಡೆದವರು ದೇವಾಲಯದ ದೇವರಿಗಿರದೇ, ಧಾರ್ಮಿಕ ಕ್ಷೇತ್ರದಲ್ಲಿ ಗಣ್ಯ ಸ್ಥಾನ ಹೊಂದಿದ್ದ ಆಚಾರ್ಯ, ಯತಿ ಅಥವಾ ಮಠಾಧೀಶರಾಗಿದ್ದರೆಂಬುದನ್ನು ಸೂಚಿಸುತ್ತದೆ. ಆದ್ದರಿಂದ ಭೋಗವರ್ಗ್ಗಡೆ ಮತ್ತು ಇಡುಕವರ್ಗ್ಗಡೆ ದಾನ ನೀಡಿದ್ದು ಕಡತೋಕೆಯ ಸ್ವಯಂಭೂ ದೇವರಿಗಾಗಿರದೇ ಆ ಸಮಯದಲ್ಲಿ ಕಡತೋಕೆಯಲ್ಲಿದ್ದ ಒಬ್ಬ ಯತಿಗೆ ನೀಡಿದ್ದಾಗಿದೆ ಎನ್ನುವುದು ಸ್ಪಷ್ಟವಾಗುತ್ತದೆ.

ಜ್ಞಾನದೀಪಿಕಾ ಗ್ರಂಥದಲ್ಲಿರುವ ಗುರುಪರಂಪರೆ ಮಾಹಿತಿ ಆಧರಿಸಿ, ಶಾಸನ ರಚನಾ ಕಾಲದಲ್ಲಿ ಕಡತೋಕೆಯಲ್ಲಿ ಮಠ ಅಸ್ತಿತ್ವದಲ್ಲಿದ್ದು, ಅಲ್ಲಿ ಗುರುಪರಂಪರೆಯಲ್ಲಿ ಇಪ್ಪತ್ತಾರನೆಯವರಾದ ಶ್ರೀ ವಿಶ್ವವಂದ್ಯ ಸರಸ್ವತೀಗಳಾಗಿದ್ದರು. ಜಲವಳಿಯ ಭೋಗವೆರ್ಗ್ಗಡೆ ಇಡುಕವೆರ್ಗ್ಗಡೆ ಎಂಬ ಅಧಿಕಾರಿಗಳು ದಾನ ನೀಡಿದ ಕಡತೋಕೆಯ ದೇವರು ಶ್ರೀ ವಿಶ್ವವಂದ್ಯ ಸರಸ್ವತೀಗಳೇ ಆಗಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ.

ಇದುವರೆಗೆ ಗುರು ಪರಂಪರಂಪರೆಯಲ್ಲಿ ಇಪ್ಪತ್ತಾರನೆಯವರಾದ ಶ್ರೀ ವಿಶ್ವವಂದ್ಯ ಸರಸ್ವತೀಗಳ ಕಾಲವನ್ನು 13ನೇ ಶತಮಾನದ ಮಧ್ಯಭಾಗದಿಂದ ಎಂದು ತಿಳಿಯಲಾಗಿತ್ತು. ಈಗ ಈ ಶಾಸನದ ಮರು ಅಧ್ಯಯನದ ಫಲಿತಗಳು ಮತ್ತು ಮಠದಲ್ಲಿರುವ ಉಜ್ಜಯನಿಯ ವಿಕ್ರಮಾಂಕ ಮಹಿಪತಿಯ ದಾನ ಶಾಸನದ ಅಂಶಗಳನ್ನು ಸಮೀಕರಿಸಿ ಶ್ರೀ ವಿಶ್ವವಂದ್ಯ ಸರಸ್ವತೀಗಳ ಕಾಲವನ್ನು 11ನೇ ಶತಮಾನದ ಕೊನೆಯ ದಶಕಗಳು ಮತ್ತು 12ನೇ ಶತಮಾನದ ಆರಂಭಿಕ ದಶಕಗಳು ಎಂದು ಪರಿಷ್ಕರಿಸಿಕೊಳ್ಳಬೇಕಾಗಿದೆ ಎಂದು ಪ್ರಕಟಣೆಯಲ್ಲಿ ಶ್ಯಾಮಸುಂದರ ಗೌಡ ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವೃತ್ತಿ ಪರಿಣತಿ ಹೆಚ್ಚಿಸಲು ತರಬೇತಿ ಅಗತ್ಯ: ಅನುರಾಧ
ಉಡುಪಿ - ಮಹಿಳಾ ಸಹಕಾರಿಗಳಿಗೆ ತರಬೇತಿ ಕಾರ್ಯಾಗಾರ ಸಂಪನ್ನ