ಕೊಟ್ಟೂರು ಪಟ್ಟಣದ ಶ್ರೀ ಮರುಳಸಿದ್ದೇಶ್ವರ ಸಭಾಭವನದಲ್ಲಿ ಶುಕ್ರವಾರ ತಾಲೂಕು ವೀರಶೈವ ಲಿಂಗಾಯತ ಪಂಚಮಸಾಲಿ ಸಂಘದಿಂದ ಪ್ರತಿಭಾ ಪುರಸ್ಕಾರ ಹಾಗೂ ಸನ್ಮಾನ ಕಾರ್ಯಕ್ರಮ ನಡೆಯಿತು.
ಕೊಟ್ಟೂರು: ರಾಜ್ಯದಲ್ಲಿ ಬಹುಸಂಖ್ಯೆಯಲ್ಲಿರುವ ವೀರಶೈವ ಲಿಂಗಾಯತ ಪಂಚಮಸಾಲಿ ಸಮುದಾಯಕ್ಕೆ ಇಡೀ ರಾಜ್ಯ ಆಳಬಹುದಾದಷ್ಟು ಶಕ್ತಿ ಹಾಗೂ ಬಲವಿದೆ ಎಂದು ಸಂಪನ್ಮೂಲ ವ್ಯಕ್ತಿ ಹಾಗೂ ಪಂಚಮಸಾಲಿ ಮುಖ್ಯಸ್ಥೆ ಹೊಸಪೇಟೆಯ ಸವಿತಾ ರಮೇಶ ಹೇಳಿದರು.
ಪಟ್ಟಣದ ಶ್ರೀ ಮರುಳಸಿದ್ದೇಶ್ವರ ಸಭಾಭವನದಲ್ಲಿ ತಾಲೂಕು ವೀರಶೈವ ಲಿಂಗಾಯತ ಪಂಚಮಸಾಲಿ ಸಂಘ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ ಹಾಗೂ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಶುಕ್ರವಾರ ಮಾತನಾಡಿದರು. ಪಂಚಮಸಾಲಿ ಸಮುದಾಯದ ಮುಖಂಡರು ವೈಮನಸ್ಸು ಬಿಟ್ಟು ಒಗ್ಗಟ್ಟಾಗಿ ನಡೆಯುವುದು ಅವಶ್ಯವಿದೆ. ಬ್ರಿಟಿಷ್ ಆಡಳಿತ ವಿರುದ್ಧ ಸಮರ ಸಾರಿ ಅವರನ್ನು ನಿದ್ದೆಗೆಡಿಸಿದ್ದ ಏಕೈಕ ಮಹಿಳೆ ಕಿತ್ತೂರು ರಾಣಿ ಚೆನ್ನಮ್ಮಾಜಿ ಅವರು ಪಂಚಮಸಾಲಿ ಸಮುದಾಯದವರು ಎಂಬ ಹೆಮ್ಮೆ ನಮಗಿದೆ. ರಾಜ್ಯದಲ್ಲಿ ಪಂಚಮಸಾಲಿ ಸಂಘಟನೆಯಿಂದ ಸಮುದಾಯ ಗಟ್ಟಿಗೊಳ್ಳುತ್ತಿದೆ ಎಂದು ಹೇಳಿದರು.
ಶಿಕ್ಷಣಕ್ಕಾಗಿ ಬೇರೆಡೆ ಹೋಗುವ ಸಮುದಾಯದ ವಿದ್ಯಾರ್ಥಿಗಳಿಗೆ ವಸತಿ ನಿಲಯ ವ್ಯವಸ್ಥೆ ಕಲ್ಪಿಸಿಕೊಡುತ್ತೇನೆ. ಮಕ್ಕಳನ್ನು ಸಮರ್ಥವಾಗಿ ಬೆಳೆಸುವುದು ತಂದೆ ಹಾಗೂ ತಾಯಿ ಇಬ್ಬರ ಜವಾಬ್ದಾರಿಯಾಗಿದೆ. ಪ್ರತಿಭಾವಂತ ವಿದ್ಯಾರ್ಥಿಗಳು ಶಿಕ್ಷಣದಲ್ಲಿ ಹಿಂದುಳಿದ ಸಹಪಾಠಿಗಳನ್ನು ಸೇರಿಸಿಕೊಳ್ಳಬೇಕು ಎಂದು ಹೇಳಿದರು.
ವೀರಶೈವ ಪತ್ತಿನ ಸಹಕಾರ ಸಂಘದ ನಿರ್ದೇಶಕ ಬಿ. ಪಂಪಾಪತಿ ಮಾತನಾಡಿ, ಸಮುದಾಯದವರ ಸಹಕಾರದಿಂದ ಪತ್ತಿನ ಸಹಕಾರ ಸಂಘ ಈಗ ಆರ್ಥಿಕವಾಗಿ ಸದೃಢವಾಗಿದೆ. ಸಮುದಾಯದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಪ್ರೇರೇಪಿಸುವುದು ನಮ್ಮ ಮುಖ್ಯ ಉದ್ದೇಶವಾಗಿದೆ ಎಂದರು.
ಸಹಕಾರ ಸಂಘದ ಅಧ್ಯಕ್ಷ ಕೆ. ವಿವೇಕಾನಂದ ಮಾತನಾಡಿ, ಜೀವ ನೀಡಿ ಸಲುಹಿದ ತಂದೆ-ತಾಯಿಯನ್ನು ಯಾರು ಮರೆಯುತ್ತಾರೆಯೋ ಅಂಥವರು ಜೀವನದಲ್ಲಿ ಮುಂದೆ ಬರಲು ಸಾಧ್ಯವಿಲ್ಲ. ಮಕ್ಕಳು ತಮ್ಮ ತಂದೆ-ತಾಯಿಯನ್ನು ಎಂದಿಗೂ ಮರೆಯಬಾರದು ಎಂದು ಸಲಹೆ ನೀಡಿದರು.
ಪಂಚಮಸಾಲಿ ಸಂಘದ ತಾಲೂಕು ಅಧ್ಯಕ್ಷ ಚಾಪಿ ಚಂದ್ರಪ್ಪ ಮಾತನಾಡಿ, ಸಂಘದಿಂದ ಪ್ರತಿ ವರ್ಷ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗೌರವಿಸುವುದು ಇತರ ವಿದ್ಯಾರ್ಥಿಗಳು ಹೆಚ್ಚಿನ ಅಂಕ ತೆಗೆಯಲು ಸ್ಫೂರ್ತಿಯಾಗಲಿ ಎಂಬ ಉದ್ದೇಶದಿಂದ ಎಂದರು.
ಪಂಚಸಾಲಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಕಂದಗಲ್ಲು ಮರುಳಸಿದ್ದಪ್ಪ, ಮುಖಂಡ ಎಂ. ಶಿವಣ್ಣ ಮಾತನಾಡಿದರು. ಸಂಘದ ತಾಲೂಕು ಕಾರ್ಯದರ್ಶಿ ಎಚ್. ಅಶೋಕ, ಮುಖಂಡರಾದ ತುಪ್ಪದ ವೀರೇಶ, ಗಾಯತ್ರಿ ಅಶೋಕ, ಎಸ್. ರಾಜಶೇಖರ ಇದ್ದರು.
ತಾಲೂಕಿನ ಪಂಚಮಸಾಲಿ ಸಮುದಾಯದ ಎಸ್‌ಎಸ್‌ಎಲ್‌ಸಿಯಲ್ಲಿ ಹೆಚ್ಚು ಅಂಕ ಪಡೆದ ೪೨, ಪಿಯುನ ೨೬ ವಿದ್ಯಾರ್ಥಿಗಳನ್ನು ಹಾಗೂ ಪಂಚಮಸಾಲಿ ನಿವೃತ್ತ ನೌಕರರನ್ನು ಸನ್ಮಾನಿಸಲಾಯಿತು. ಶಿಕ್ಷಕ ಕೋಡಿಹಳ್ಳಿ ಪ್ರಕಾಶ, ಎಂ. ಶಿವಕುಮಾರ ಕಾರ್ಯಕ್ರಮ ನಿರ್ವಹಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.