ಧಾರವಾಡ:

ಇಲ್ಲಿಯ ಉತ್ತರ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯನ್ನು ಮುನ್ನಡೆಸಲು ಹೊಸ ತಂಡ ರಚನೆಯಾಗಿದ್ದು, ನೂತನ ಅಧ್ಯಕ್ಷರಾಗಿ ನಿರ್ಮಾಪಕ ಮಂಜುನಾಥ ಹಗೇದಾರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಈ ಕುರಿತು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ನೂತನ ಉಪಾಧ್ಯಕ್ಷ ಪ್ರಭು ಹಂಚಿನಾಳ, ಪ್ರಧಾನ ಕಾರ್ಯದರ್ಶಿಯಾಗಿ ರಾಹುಲ್‌ ದತ್ತಪ್ರಸಾದ, ಕಾರ್ಯಾಧ್ಯಕ್ಷರಾಗಿ ಡಾ. ಕಲ್ಮೇಶ ಹಾವೇರಿಪೇಟ, ಸಹ ಕಾರ್ಯದರ್ಶಿಯಾಗಿ ಅಷ್ಪಾಕ್‌ ಸಯ್ಯದ, ಸಂಘಟನಾ ಕಾರ್ಯದರ್ಶಿಯಾಗಿ ಪ್ರವೀಣಾ ಕುಲಕರ್ಣಿ ಹಾಗೂ ಖಜಾಂಚಿಯಾಗಿ ಕಿರಣ ಸಿದ್ದಾಪುರ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ. ಜತೆಗೆ ಆಡಳಿತ ಮಂಡಳಿ ಸದಸ್ಯರಾಗಿ ನಜೀರಸಾಬ್‌ ದೇಸಾಯಿ ಹಾಗೂ ರುದ್ರೇಶ ಹಳವದ ಸಹ ನಮ್ಮ ತಂಡದಲ್ಲಿದ್ದಾರೆ ಎಂದರು.

ಪ್ರಧಾನ ಕಾರ್ಯದರ್ಶಿ ರಾಹುಲ್‌ ದತ್ತಪ್ರಸಾದ ಮಾತನಾಡಿ, ಮಂಡಳಿಯು 2014ರಲ್ಲಿ ಸ್ಥಾಪನೆಯಾಗಿದ್ದು, ಈ ಭಾಗದ ನಿರ್ಮಾಪಕರು, ನಿರ್ದೇಶಕರು, ಕಲಾವಿದರು ಹಾಗೂ ತಾಂತ್ರಿಕ ವರ್ಗದವರಿಗೆ ಪ್ರೋತ್ಸಾಹ ಮತ್ತು ಮಾರ್ಗದರ್ಶನ ನೀಡುತ್ತಿದೆ. ಬರೀ ಉತ್ತರ ಕರ್ನಾಟಕ ಅಲ್ಲದೇ ರಾಜ್ಯಾದ್ಯಂತ 450ಕ್ಕೂ ಹೆಚ್ಚು ನಿರ್ಮಾಪಕ ಸದಸ್ಯರನ್ನು ಹೊಂದಿರುವ ಹೆಮ್ಮೆ ಇದೆ. ಮಂಡಳಿಯಲ್ಲಿ ನೋಂದಾಯಿತ ಬ್ಯಾನರ್‌ ಅಡಿ 47ಕ್ಕೂ ಹೆಚ್ಚು ಕನ್ನಡ ಸಿನಿಮಾಗಳು ಸೆನ್ಸಾರ್‌ ಆಗಿ ಬಿಡುಗಡೆಯಾಗಿವೆ ಎಂಬ ಮಾಹಿತಿ ನೀಡಿದರು.

ಮಂಡಳಿ ಅಧ್ಯಕ್ಷ ಮಂಜುನಾಥ ಹಗೇದಾರ ಮಾತನಾಡಿ, ಹೊಸ ಉತ್ಸಾಹದೊಂದಿಗೆ ನಮ್ಮ ತಂಡವು ಆ. 22 ಹಾಗೂ 23ರಂದು ಧಾರವಾಡದಲ್ಲಿ ಉತ್ತರ ಕರ್ನಾಟಕ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಆಯೋಜಿಸುತ್ತಿದೆ. ಚಲನಚಿತ್ರ, ಸಾಕ್ಷ್ಯಚಿತ್ರ, ಕಿರುಚಿತ್ರ ಹಾಗೂ ವಿಡಿಯೋ ಆಲ್ಬಮ್‌ ಹಾಡು ವಿಭಾಗಗಳ ಪ್ರದರ್ಶನ ಮತ್ತು ಪ್ರಶಸ್ತಿ ಪ್ರದಾನ ಆಯೋಜಿಸುತ್ತಿದೆ. ಈ ಉತ್ಸವದಲ್ಲಿ 2025 ಹಾಗೂ 2026ರಲ್ಲಿ ನಿರ್ಮಾಣಗೊಂಡು ಬಿಡುಗಡೆಯಾದ ಅಥವಾ ಪ್ರದರ್ಶನಕ್ಕೆ ಸಿದ್ಧವಾಗಿರುವ ಚಲನಚಿತ್ರ, ಕಿರುಚಿತ್ರ, ಸಾಕ್ಷ್ಯಚಿತ್ರಗಳು ಉತ್ಸವದಲ್ಲಿ ಭಾಗವಹಿಸಲು ಅವಕಾಶವಿದೆ. ಈ ಕುರಿತು ಹೆಚ್ಚಿನ ಮಾಹಿತಿಗೆ 98451 28653 ಸಂಪರ್ಕಿಸಲು ಅವರು ತಿಳಿಸಿದರು.


ಸುದ್ದಿಗೋಷ್ಠಿಯಲ್ಲಿ ಡಾ. ಕಲ್ಮೇಶ ಹಾವೇರಿಪೇಟ, ಎಂ.ಎಂ. ಮುಮ್ಮಿಗಟ್ಟಿ ಇದ್ದರು.