ವಿಸರ್ಜನಾ ಮೆರವಣಿಗೆಯುದ್ದಕ್ಕೂ ಬಾನಂಗಳದಲ್ಲಿ ಸಿಡಿಸಿದ್ದ ಪಟಾಕಿಗಳ ಚಿತ್ತಾರ ಜನರ ಗಮನ ಸೆಳೆಯಿತು.
ಕನಕಗಿರಿ: ಮೊಹರಂ ಕೊನೆ ದಿನವಾದ ಶುಕ್ರವಾರ ಪಟ್ಟಣದ ಗಜಲಕ್ಷ್ಮೀ ದೇಗುಲದ ಮುಂಭಾಗದಲ್ಲಿ ಎಲ್ಲ ಅಲಾಯಿ ದೇವರುಗಳ ಸಮಾಗಮದ ನಂತರ ವಿಸರ್ಜನೆಗೆ ತೆರಳಿದವು.
ಸುಳೇಕಲ್ ಓಣಿಯ ಹೊನ್ನೂರುಭಾಷ, ಕಾಸಿಂಭಾಷ, ಲಾಲಸಾಬ್ ದೇವರುಗಳು ಭಕ್ತರೊಂದಿಗೆ ಅಲಾಯಿ ಆಡದಿವು. ನಂತರ ರಾಜಬೀದಿಯ ಮಾರ್ಗವಾಗಿ ಮೆಲುಗಡೆ ಅಗಸಿಯ ಬಳಿ ಇರುವ ಹಟೇಲಭಾಷ, ಹುಸೇನಭಾಷಾ ಸೇರಿದಂತೆ ನಾನಾ ಮಸೀದಿಗಳಿಗೆ ಭೇಟಿ ಮಾಡಿ ಮೆರವಣಿಗೆಗೆ ಆಹ್ವಾನಿಸಿದವು. ಎಲ್ಲ ಅಲಾಯಿ ದೇವರುಗಳು ಗಜಲಕ್ಷ್ಮೀ ದೇಗುಲದ ಮುಂಭಾಗದಲ್ಲಿ ಸೇರಿ ತಾಯಿ ಬಿಬಿ ಫಾತೀಮಾಳಿಗೆ ಸಾಷ್ಟಾಂಗ ಪ್ರಣಾಮ ಸಲ್ಲಿಸಿದವು. ಹೀಗೆ ಜಮಾವಣೆಗೊಂಡಿದ್ದ ಅಲಾಯಿ ದೇವರುಗಳು ಪರಸ್ಪರ ಆಲಂಗಿಸಿಕೊಳ್ಳುವಾಗ ನೆರದಿದ್ದ ಜನಸ್ತೋಮ ಹೂಮಳೆ ಸುರಿಸಿ ಭಕ್ತಿಪೂರ್ವಕವಾಗಿ ಬೀಳ್ಕೊಟ್ಟರು.
ವಿಸರ್ಜನಾ ಮೆರವಣಿಗೆಯುದ್ದಕ್ಕೂ ಬಾನಂಗಳದಲ್ಲಿ ಸಿಡಿಸಿದ್ದ ಪಟಾಕಿಗಳ ಚಿತ್ತಾರ ಜನರ ಗಮನ ಸೆಳೆಯಿತು.
ಹಲಗೆ,ತಾಷಾ ನಾದಕ್ಕೆ ಯುವಕರು ಹೆಜ್ಜೆ ಹಾಕಿ ಸಂಭ್ರಮಿಸಿದರೇ ಇನ್ನೂ ಕೆಲ ಯುವಕರ ತಂಡದ ಧ್ವಜ ಹಿಡಿದು ಕುಣಿದು ಕುಪ್ಪಳಿಸಿದರು. ಮೊಹರಂ ಸಂಭ್ರಮಕ್ಕೆ ಸಾಕ್ಷಿಯಾಗುವ ಅಲಾಯಿ ದೇವರುಗಳ ಸಮಾಗಮದ ವೀಕ್ಷಣೆಗಾಗಿ ಸಾವಿರಾರು ಜನರು ಆಗಮಿಸಿದ್ದರು. ರಾಜಬೀದಿಯ ಅಂಗಡಿ, ಮನೆಗಳ ಮೇಲೆ ನೂರಾರು ಜನ ನಿಂತು ಅಲಾಯಿ ದೇವರುಗಳ ವಿಸರ್ಜನಾ ಸಮಾಗಮ ಕಣ್ತುಂಬಿಕೊಂಡರು.
ಕನಕಾಚಲಪತಿ ದರ್ಶನ ಪಡೆದ ಅಲಾಯಿ ದೇವರು
ಮುಜರಾಯಿ ಇಲಾಖೆ ವ್ಯಾಪ್ತಿಯ ಶ್ರೀ ಕನಕಾಚಲಪತಿ ದೇವಸ್ಥಾನಕ್ಕೆ ಜುಮ್ಮ ಮಸೀದಿ ಅಲಾಯಿ ದೇವರು ಮೊಹರಂ ನಿಮಿತ್ತ ದೇಗುಲದ ಹೊರ ಭಾಗದಲ್ಲಿಯೇ ನಿಂತುಕೊಂಡು ಸ್ವಾಮಿಯ ದರ್ಶನ ಪಡೆಯಿತು. ಓದಿಕೆಯ ನಂತರ ಅಲಾಯಿ ದೇವರು ವಿಸರ್ಜನಾ ಮೆರವಣಿಗೆಯ ಕಡೆಗೆ ಹೊರಟಿತು. ಸಂಪ್ರದಾಯದಂತೆ ಜುಮ್ಮಪ್ಪ ಅಲಾಯಿ ಕನಕಾಚಲಪತಿ ದೇವಸ್ಥಾನಕ್ಕೆ ಭೇಟಿ ನೀಡಿ ನಂತರ ಭಕ್ತರ ಮನೆಗಳಿಗೆ ಭೇಟಿ ನೀಡಿ ಇಷ್ಟಾರ್ಥಗಳನ್ನು ಈಡೇರಿಸುತ್ತಾನೆ ಎಂದು ಭಕ್ತ ಹೊನ್ನೂರುಸಾಬ ಉಪ್ಪು ತಿಳಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.