ಡಂಬಳ: ಶುಕ್ರವಾರ ಮೊಹರಂ ಹಬ್ಬವನ್ನು ಭಾವೈಕ್ಯತೆಯಿಂದ ಹಿಂದೂ- ಮುಸ್ಲಿಮರು ಆಚರಿಸಿದರು. ವಿವಿಧೆಡೆ ಸ್ಥಾಪಿಸಿದ ಅಲಾಯಿ ದೇವರನ್ನು ಜನರು ಭಕ್ತಿ ಭಾವದಿಂದ ಆರಾಧಿಸಿದರು. ಕೆಲ ಗ್ರಾಮಗಳಲ್ಲಿ ಮುಸ್ಲಿಮರು ಇಲ್ಲದೆ ಇದ್ದರೂ ಹಿಂದೂಗಳೇ ಮುಂದಾಳತ್ವ ವಹಿಸಿದ್ದರು.
ಡಂಬಳ ಗ್ರಾಮದ ಮುಖ್ಯ ಪೇಟೆಯಲ್ಲಿ ಮುಂಜಾನೆ ಅಲಾಯಿ ದೇವರು ಭೇಟಿ ನೀಡುವ ವೇಳೆ ಎರಡು ಗುಂಗಾಡಿ ಹುಳುಗಳು ಬಂದು ಅಲಾಯಿ ದೇವರ ಸುತ್ತ ಪ್ರದಕ್ಷಿಣೆ ಹಾಕುವ ಮೂಲಕ ಮಾಯವಾಗುತ್ತಿದ್ದು, ಡಂಬಳ ಕೋಟೆಯಿಂದ ಈ ಗುಂಗಾಡಿ ಹುಳುಗಳು ಬರುತ್ತವೆ ಎಂದು ಜನರಲ್ಲಿ ನಂಬಿಕೆ ಇದೆ. ಇಂದಿಗೂ ಆ ಗುಂಗಾಡಿ ಹುಳುಗಳು ಕಾಣಿಸಿಕೊಳ್ಳುತ್ತಿದ್ದು, ಇವುಗಳನ್ನು ನೋಡಿದ ಜನರು ನಮಸ್ಕರಿಸಿ ಸಂತಸದಿಂದ ಚಪ್ಪಾಳೆ ತಟ್ಟುವ ಮೂಲಕ ಹರ್ಷ ವ್ಯಕ್ತಪಡಿಸಿದರು.
ಭಾನುವಾರ ಸಂಜೆ ಅಲಾಯಿ ದೇವರ ಮೆರವಣಿಗೆ ಜರುಗಿತು. ಜನರು ಹೂವಿನ ಹಾರ ಹಾಕಿ, ಸಕ್ಕರೆ ನೈವೇದ್ಯ ಸಮರ್ಪಿಸಿ ಭಕ್ತಿ ಮೆರೆದರು. ಅಲಾಯಿ ದೇವರು ಸ್ಥಾಪನೆಯಾದ ದಿನದಿಂದ ಜನರು ಮಸೀದಿಗೆ ಆಗಮಿಸಿ ಹರಕೆ ತೀರಿಸಿದರು.ಹೆಜ್ಜೆ ಮೇಳ: ಡಂಬಳ ಗ್ರಾಮದಲ್ಲಿ ಅಲಾಯಿ ದೇವರ ಮುಂದೆ ಮುಂಜಾನೆ ಹಿರೇವಡ್ಡಟ್ಟಿ ಗ್ರಾಮದ ರೇಣುಕಾ ದೇವಿ ಯುವಕರ ಸಂಘದಿಂದ ಹೆಜ್ಜೆ ಮೇಳ ನಡೆಯಿತು. ಅಳ್ಳೊಳ್ಳಿಗಳಿಂದ ವಿಶೇಷ ದಿರಿಸುಗಳ ಮೂಲಕ ಭಕ್ತಿ ಸಮರ್ಪಿಸಿದರು. ಅಲಾಯಿ ದೇವರ ವಿಜರ್ಸನೆ ದಿನ ಗ್ರಾಮದ ಯುವಕರ ತಂಡದಿಂದ ಹಸೇನ ಹುಸೇನರ ಜೀವನ ಆಧರಿತ ಹಾಡುಗಳನ್ನು ಹಾಡುತ್ತಾ ಹಲಗೆ ಮೇಳಕ್ಕೆ ಯವಕರು ಹೆಜ್ಜೆ ಹಾಕಿದರು.
ರೋಣ: ಪಟ್ಟಣ ಸೇರಿದಂತೆ ತಾಲೂಕಿನಾದ್ಯಂತ ಶುಕ್ರವಾರ ಮೊಹರಂ ಹಬ್ಬವನ್ನು ಅತ್ಯಂತ ಶ್ರದ್ಧಾ ಭಕ್ತಿ ಹಾಗೂ ಸೌಹಾರ್ದತೆಯಿಂದ ಆಚರಿಸಲಾಯಿತು.ಗ್ರಾಮಗಳಲ್ಲಿ ಮೊಹರಂ ಹಬ್ಬದ ಕೊನೆಯ ದಿನವಾದ ಶುಕ್ರವಾರ ಸಂಜೆ ಕಣ್ಮನ ಸೆಳೆಯುವ ಪಂಜಾ(ಅಲಾಯಿ ದೇವರು) ಮೆರವಣಿಗೆ ಜರುಗಿತು.ಪಟ್ಟಣದ ಹೊರಪೇಟಿ, ಮುಲ್ಲನಬಾವಿ, ಪೋತದಾರ ರಾಜನಕಟ್ಟೆ ಸೇರಿದಂತೆ ವಿವಿದ ಓಣಿಗಳಲ್ಲಿ ಪ್ರತಿಷ್ಠಾಪಿಸಿದ್ದ ದೇವರ ಪಂಜಾಗಳಿಗೆ ವಿಶೇಷ ಪೂಜೆ, ನೈವೇದ್ಯ ಹಾಗೂ ಧೂಪಾರ್ಪಣೆ ನೆರವೇರಿಸಲಾಯಿತು. ಸಕ್ಕರೆ ಪ್ರಸಾದ ಸಮರ್ಪಿಸಿ ಹರಕೆ ತೀರಿಸಿದರು.
ತಡರಾತ್ರಿವರೆಗೂ ಪಂಜಾ ಮೆರವಣಿಗೆ ಜರುಗಿ ಬಳಿಕ ಪಂಜಾಗಳನ್ನು ಪವಿತ್ರ ಬಾವಿ, ಹಳ್ಳ, ಹೊಂಡ ಹಾಗೂ ಕೆರೆಗಳಲ್ಲಿ ಭಕ್ತಿಭಾವದಿಂದ ವಿಸರ್ಜನೆ(ತಂಪಾಗಿಸುವುದು) ಮಾಡುವ ಮೂಲಕ ಮೊಹರಂ ಹಬ್ಬಕ್ಕೆ ವಿದಾಯ ಹೇಳಲಾಯಿತು.