ಧಾರವಾಡ:
ಹಸೇನ್-ಹುಸೇನ್‌ರ ತ್ಯಾಗ ನೆನಪಿಸುವ ಭಾವೈಕ್ಯತೆ ಹಾಗೂ ತ್ಯಾಗದ ಪ್ರತೀಕವಾಗಿರುವ ಮೊಹರಂ ಹಬ್ಬವನ್ನು ಶುಕ್ರವಾರ ಧಾರವಾಡದಲ್ಲಿ ಅರ್ಥಪೂರ್ಣವಾಗಿ ಆಚರಿಸಲಾಯಿತು. ಮುಸ್ಲಿಂ ಬಂಧುಗಳ ಜತೆಗೆ ಭಾವೈಕ್ಯತೆ ಬೆಸೆಯಲು ಹಿಂದೂಗಳು ಆಚರಿಸುವ ಹಬ್ಬವಿದು. ಬರೀ ನಗರ ಮಾತ್ರವಲ್ಲದೇ ಜಿಲ್ಲಾದ್ಯಂತ ಹಬ್ಬದ ಆಚರಣೆ ನಡೆಯಿತು.ಮೊಹರಂ ವಿಶೇಷ ಎಂದರೆ ಧಾರವಾಡದಲ್ಲಿ ಇರಾನಿ ಸಮುದಾಯದ ಮೆರವಣಿಗೆ. ಬ್ಲೇಡ್‌ನಿಂದ ಎದೆಗೆ ಹೊಡೆದುಕೊಂಡು ಯಾ ಹುಸೇನ್..ಯಾ ಹುಸೇನ್...ಎನ್ನುತ್ತಾ ದೇಹ ದಂಡಿಸಿ ಆಚರಣೆ ಮಾಡಿದರು. ಜನ್ನತ್ ನಗರದ ಮಸಜ್ಜಿದ್‌ದಿಂದ ಆರಂಭವಾದ ಇರಾನಿ ಮುಸ್ಲಿಮರ ಪಂಜಾಗಳ ಮೆರವಣಿಗೆ ಧಾರವಾಡ ಟೋಲ್ ನಾಕಾ ಮಾರ್ಗವಾಗಿ ಹೊಸ ಯಲ್ಲಾಪುರದ ನುಚ್ಚಂಬ್ಲಿ ಬಾವಿಯವರೆಗೆ ಸಾಗಿತು. ಯಾ ಹಸೇನ್...ಯಾ ಹುಸೇನ್...ಎಂದು ಅವರ ತ್ಯಾಗ ಸ್ಮರಿಸುತ್ತಾ ಶಸ್ತ್ರಗಳಿಂದ ಚುಚ್ಚಿಕೊಂಡು ಇರಾನಿ ಸಮುದಾಯದ ಜನ ತಮ್ಮ ರಕ್ತವನ್ನೇ ಚೆಲ್ಲಿದರು.
ತಾಲೂಕಿನ ಅಮ್ಮಿನಬಾವಿಯಲ್ಲಿ ಶ್ರದ್ಧಾ-ಭಕ್ತಿಗಳಿಂದ ಅಂತಿಮ ದಿನದ ಆಚರಣೆಗಳು ನಡೆದವು. ಗ್ರಾಮದ ಜುಮ್ಮಾ ಮಸೀದಿಯ ಪಕ್ಕದ ಭವನದಲ್ಲಿ ಗುತ್ತೇಸಾಹೇಬ್ (ಇಮಾಮ್ ಹುಸೇನ್) ಮತ್ತು ಖಾಸೀಂದುಲ್ಹಾ ಎಂದು ಕರೆಯುವ ಎರಡು ದೇವರುಗಳನ್ನು ಸ್ಥಾಪಿಸಿದ್ದು, ಬೆಳ್ಳಿಯಿಂದ ಬಹುದೊಡ್ಡ ಪಂಜಾ ಮಾಡಿದ್ದರು. ಡೋಲಿ ಸಮೇತ ಉಭಯ ಪಂಜಾಗಳು ಹಾಯ್ದು ವಿವಿಧ ಜಾನಪದ ವಾದ್ಯ-ಮೇಳಗಳೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಲಾಯಿತು. ಸಂಜೆ ವಿಶೇಷ ಪ್ರಾರ್ಥನೆ ನಂತರ ಮತ್ತೆ ಪಂಜಾಗಳ ಮೆರವಣಿಗೆ ನಡೆದು ಹೊಳೆಗೆ ಹೋಗುವ ಕಾರ್ಯಕ್ರಮ ಜರುಗಿತು. ಅನ್ಯಾಯ ಮತ್ತು ದೌರ್ಜನ್ಯದ ವಿರುದ್ಧ ಬಂಡಾಯವೆದ್ದ ಇಮಾಮ್ ಹುಸೇನ್ ಅವರು ಸತ್ಯ ಹಾಗೂ ನ್ಯಾಯಕ್ಕಾಗಿ ಹೋರಾಡಿ ಹುತಾತ್ಮರಾದ ಸಂದರ್ಭವೇ ಮೊಹರಂ ಆಚರಣೆ ಎಂದು ಗ್ರಾಮದ ಜುಮ್ಮಾ ಮಸೀದಿಯ ಇಸ್ಲಾಂ ಧರ್ಮಗುರು ಜಹೀರ್ ಅಬ್ಬಾಸ್ ಖಾದ್ರಿ ತಿಳಿಸಿದರು.ಹಾಗೆಯೇ, ಉಪ್ಪಿನಬೆಟಗೇರಿಯ ಹದಿಮೂರುಕೇಣಿ ಓಣಿಯ ಬಾರಾಇಮಾಮ ಜಮಾತ ಆವರಣದಲ್ಲಿ ಮೊಹರಂ ಹಬ್ಬದಲ್ಲಿ ಪಾಂಜಾ ಹೊತ್ತ ಯುವಕರು ಬೆಂಕಿಯ ಕಿಚ್ಚದಲ್ಲಿ ಹಾಯ್ದು ಮೊಹರಂ ಹಬ್ಬಕ್ಕೆ ಚಾಲನೆ ನೀಡಿದರು. ಈ ವೇಳೆ ಹಸೇನ್-ಹುಸೇನ್ ಕೀ ದೋಸ್ತರ ದಿನ್..ಬಿ ಪಾತಿಮಾ ಕೀ ದೋಸ್ತರ ದಿನ್....ಬಾರಾ ಇಮಾಮ ಕೀ ದೋಸ್ತರ ದಿನ್ ಎಂಬ ಘೋಷಣೆ ಮೊಳಗಿದವು.